Pamban Bridge: ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಲೋಕಾರ್ಪನೆಗೆ ರೆಡಿ; ಇದರ ವಿಶೇಷ ಏನು ಗೊತ್ತಾ?
Pamban Bridge: ಹೊಸ ಪಂಬನ್ ರೈಲ್ವೆ ಸೇತುವೆ 2.1 ಕಿ.ಮೀ. ಉದ್ದವನ್ನು ಹೊಂದಿದೆ. 2019ರ ಫೆಬ್ರವರಿಯಲ್ಲಿ ಇದರ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, 2024ರ ನವೆಂಬರ್ ನಲ್ಲಿ ಪೂರ್ಣಗೊಂಡಿತು. ಈ ಹೊಸ ಸೇತುವೆಯು 110 ವರ್ಷಗಳಷ್ಟು ಹಳೆಯದಾದ ರಚನೆಯನ್ನು ಬದಲಾಯಿಸಿದೆ .


ರಾಮೇಶ್ವರಂ: ತಮಿಳುನಾಡಿನ ರಾಮೇಶ್ವರಂ ಈಗ ವಿಶ್ವದ ಗಮನ ಸೆಳೆದಿದೆ. ಯಾಕೆಂದರೆ ಇಲ್ಲಿ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ(Pamban Bridge) ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ಲಂಬ ಲಿಫ್ಟ್ ಸೇತುವೆಯನ್ನು ಪಂಬನ್‌ನಲ್ಲಿ ರಾಮ ನವಮಿಯ ದಿನವಾದ ಏಪ್ರಿಲ್ 6 ರಂದು ಉದ್ಘಾಟಿಸಲಿದ್ದಾರೆ. ಇದು ದೇಶದ ಸಾರಿಗೆ ಮತ್ತು ಸಮುದ್ರ ಮೂಲ ಸೌಕರ್ಯದಲ್ಲಿ ಒಂದು ಹೊಸ ಮೈಲುಗಲ್ಲು. ಹೊಸ ಪಂಬನ್ ರೈಲ್ವೆ ಸೇತುವೆ 2.1 ಕಿ.ಮೀ. ಉದ್ದವನ್ನು ಹೊಂದಿದೆ. 2019ರ ಫೆಬ್ರವರಿಯಲ್ಲಿ ಇದರ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, 2024ರ ನವೆಂಬರ್ ನಲ್ಲಿ ಪೂರ್ಣಗೊಂಡಿತು. ಈ ಹೊಸ ಸೇತುವೆಯು 110 ವರ್ಷಗಳಷ್ಟು ಹಳೆಯದಾದ ರಚನೆಯನ್ನು ಬದಲಾಯಿಸಿದೆ . ಹೀಗಾಗಿ ಇದು ಅದ್ಬುತ ಎಂಜಿನಿಯರಿಂಗ್ ಕೆಲಸವಾಗಿ ಗುರುತಿಸಿಕೊಂಡಿದೆ. ರಾಮೇಶ್ವರಂ ದ್ವೀಪ ಮತ್ತು ಭಾರತದ ಮುಖ್ಯ ಭೂಭಾಗಕ್ಕೆ ಶೀಘ್ರದಲ್ಲಿ ಸುರಕ್ಷಿತವಾಗಿ ಈ ಸೇತುವೆ ಸಂಪರ್ಕವನ್ನು ಕಲ್ಪಿಸುತ್ತದೆ.
ಸೇತುವೆಯ ಇತಿಹಾಸ
ಪಂಬನ್ ರೈಲು ಸೇತುವೆಯನ್ನು 1870ರಲ್ಲಿ ಬ್ರಿಟಿಷ್ ಸರ್ಕಾರ ನಿರ್ಮಿಸಲು ಯೋಜನೆ ಹಾಕಿಕೊಂಡಿತ್ತು. ಇದರ ಮುಖ್ಯ ಉದ್ದೇಶ ಶ್ರೀಲಂಕಾಕ್ಕೆ ವ್ಯಾಪಾರ ವ್ಯವಹಾರಗಳನ್ನು ವಿಸ್ತರಿಸುವುದಾಗಿತ್ತು. ಸುಮಾರು 2.2 ಕಿ.ಮೀ.ಗಳಷ್ಟು ವಿಸ್ತಾರವಿದ್ದ ಈ ಸೇತುವೆ ಅಧಿಕೃತವಾಗಿ 1914ರಲ್ಲಿ ಬಳಸಲು ಪ್ರಾರಂಭಿಸಲಾಯಿತು. ಹಳೇ ಬ್ರಿಡ್ಜ್ 2021ರವರೆಗೆ ಕಾರ್ಯನಿರ್ವಹಿಸಿತ್ತು.

ಹಳೆ ಸೇತುವೆಯ ನವೀಕರಣ
ದಶಕಗಳಿಂದ ತುಕ್ಕು ಹಿಡಿದಿದ್ದ 110 ವರ್ಷ ಹಳೆಯ ಪಂಬನ್ ಸೇತುವೆಯನ್ನು ನವೀಕರಣ ಮಾಡಲಾಗಿದೆ. ಸರಿಸುಮಾರು 2.1 ಕಿ.ಮೀ. ದೂರವಿರುವ ಈ ಸೇತುವೆಯು ರಾಮೇಶ್ವರಂ ದ್ವೀಪ ಮತ್ತು ಭಾರತದ ಮುಖ್ಯ ಭೂಭಾಗದ ನಡುವಿನ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಇದು ಈ ಎರಡು ಪ್ರದೇಶಗಳ ನಡುವಿನ ಸಾರಿಗೆ ಮತ್ತು ವ್ಯಾಪಾರಕ್ಕೆ ಹೊಸ ಭರವಸೆಯಾಗಿದೆ. ಸೇತುವೆಯ ಈ ನವೀಕರಣದಿಂದ ಸುಗಮ ಮತ್ತು ವೇಗವಾದ ರೈಲು ಮತ್ತು ಕಡಲ ಕಾರ್ಯಾಚರಣೆ ಸಾಧ್ಯವಾಗುವುದು.
ಲಂಬ ಲಿಫ್ಟ್ ತಂತ್ರಜ್ಞಾನ
ಹೊಸ ಪಂಬನ್ ಸೇತುವೆಯ ವೈಶಿಷ್ಟ್ಯವೆಂದರೆ ಅದರ ಲಂಬ ಲಿಫ್ಟ್ ಕಾರ್ಯವಿಧಾನ. ಇದನ್ನು 17 ಮೀಟರ್ ವರೆಗೆ ಎತ್ತಬಹುದು. ಇದರಿಂದ ಕಡಲಲ್ಲಿ ದೊಡ್ಡ ಹಡಗುಗಳು ಸಲೀಸಾಗಿ ಕೆಳಗೆ ಹಾದುಹೋಗಬಹುದು. ಹಳೆಯ ಸೇತುವೆಯಲ್ಲಿ ಇದು ತೆರೆಯಲು 35 ರಿಂದ 40 ನಿಮಿಷಗಳು ಬೇಕಾಗಿತ್ತು. ಆದರೆ ಹೊಸ ಸೇತುವೆಯಲ್ಲಿರುವ ಹೊಸ ಲಿಫ್ಟ್ ವ್ಯವಸ್ಥೆಯು ಕೇವಲ 5 ನಿಮಿಷ 30 ಸೆಕೆಂಡುಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ರೈಲು ಮತ್ತು ಹಡಗು ಸಂಚಾರ ವಿಳಂಬ ಕಡಿಮೆಯಾಗುತ್ತದೆ.

ದೀರ್ಘಾಯುಷ್ಯ ಖಚಿತ
ಪಂಬನ್ ವಿಶ್ವದ ಅತ್ಯಂತ ತುಕ್ಕು ಹಿಡಿಯುವ ಪ್ರದೇಶಗಳಲ್ಲಿ ಒಂದಾಗಿದೆ. ಹೀಗಾಗಿ ಇಲ್ಲಿ ದೀರ್ಘ ಕಾಲ ಬಾಳಿಕೆ ಬರುವ ಸೇತುವೆ ನಿರ್ಮಾಣ ಕಾರ್ಯ ಬಹಳ ಸವಾಲಿನದ್ದಾಗಿದೆ. ಹೊಸ ಪಂಬನ್ ಸೇತುವೆ ನಿರ್ಮಾಣ ಕಾರ್ಯದಲ್ಲಿ ಕಠಿಣ ಸಮುದ್ರ ಪರಿಸರ, ಬಲವಾದ ಗಾಳಿಯನ್ನು ತಡೆದುಕೊಳ್ಳಲು ಸುಧಾರಿತ ವಸ್ತುಗಳನ್ನು ಬಳಸಲಾಗಿದೆ. ಇದರಿಂದ ಸೇತುವೆ ಹೆಚ್ಚು ಕಾಲ ಬಾಳಿಕೆ ಬರಲಿದೆ.
ರೈಲು ಮತ್ತು ಸಮುದ್ರ ಸಂಚಾರಕ್ಕೆ ಪ್ರೋತ್ಸಾಹ
531 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ಪಂಬನ್ ಸೇತುವೆಯನ್ನು ಎರಡು ಉದ್ದೇಶಗಳಿಗಾಗಿ ನಿರ್ಮಿಸಲಾಗಿದೆ. ಯಾವುದೇ ಅಡೆತಡೆ ಇಲ್ಲದೆ ರೈಲು ಮತ್ತು ಸಮುದ್ರ ಸಂಚಾರಕ್ಕೆ ಇದು ಅನುವು ಮಾಡಿಕೊಡುತ್ತದೆ. ಸೇತುವೆಯ ಲಂಬ ಲಿಫ್ಟ್ ವಿಭಾಗವು 660 ಮೆಟ್ರಿಕ್ ಟನ್‌ಗಳಷ್ಟು ತೂಕವಿದ್ದು ಗಂಟೆಗೆ 75 ಕಿ.ಮೀ ವೇಗದಲ್ಲಿ ಚಲಿಸುವ ರೈಲಿಗೆ ಸಹಕಾರಿಯಾಗಿದೆ.
ಇದನ್ನೂ ಓದಿ: Supreme court: ಬಂಗಾಳದ 25,753 ಶಿಕ್ಷಕರನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್- ದೀದಿ ಸರ್ಕಾರಕ್ಕೆ ತೀವ್ರ ಮುಖಭಂಗ
ಸುರಕ್ಷತೆಗೆ ಆದ್ಯತೆ
ಸುರಕ್ಷಿತ ಪ್ರಯಾಣವನ್ನು ಈ ಸೇತುವೆಯು ಖಚಿತಪಡಿಸುತ್ತದೆ. ಗಾಳಿಯ ವೇಗ ಗಂಟೆಗೆ 58 ಕಿ.ಮೀ. ಮೀರಿದರೆ ಸೇತುವೆ ರೈಲು ಚಲನೆಯನ್ನು ನಿಲ್ಲಿಸುತ್ತದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಪ್ರಯಾಣಿಕರನ್ನು ರಕ್ಷಿಸುತ್ತದೆ. ಈ ಸ್ಮಾರ್ಟ್ ಸುರಕ್ಷತಾ ವೈಶಿಷ್ಟ್ಯವು ಸೇತುವೆ ಮೇಲಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ. ಸೇವೆಯಲ್ಲಿನ ತೊಂದರೆಗಳನ್ನು ಕಡಿಮೆ ಮಾಡುತ್ತದೆ.