ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jitan Ram Manjhi: ಕೇಂದ್ರ ಸಚಿವ ಜಿತಿನ್‌ ರಾಮ್‌ ಮಾಂಝಿ ಮೊಮ್ಮಗಳನ್ನು ಗುಂಡಿಟ್ಟು ಹತ್ಯೆಗೈದ ಪತಿ; ಕಾರಣವೇನು?

Sushma Devi: ಕೇಂದ್ರ ಸಚಿವ ಜಿತಿನ್‌ ರಾಮ್‌ ಮಾಂಝಿ ಅವರ ಮೊಮ್ಮಗಳು, 32 ವರ್ಷದ ಸುಷ್ಮಾ ದೇವಿ ಅವರನ್ನು ಪತಿಯೇ ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬುಧವಾರ (ಏ. 9) ನಡೆದಿದೆ. ಬಿಹಾರ ಗಯಾದ ಅತ್ರಿ ಬ್ಲಾಕ್‌ನ ಟೆಟುವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸಚಿವ ಜಿತಿನ್‌ ರಾಮ್‌ ಮಾಂಝಿ ಮೊಮ್ಮಗಳನ್ನು ಗುಂಡಿಟ್ಟು ಹತ್ಯೆ ಮಾಡಿದ ಪತಿ

ಸುಷ್ಮಾ ದೇವಿ.

Profile Ramesh B Apr 9, 2025 8:55 PM

ಪಾಟ್ನಾ: ಕೇಂದ್ರ ಸಚಿವ ಜಿತಿನ್‌ ರಾಮ್‌ ಮಾಂಝಿ (Jitan Ram Manjhi) ಅವರ ಮೊಮ್ಮಗಳು, 32 ವರ್ಷದ ಸುಷ್ಮಾ ದೇವಿ (Sushma Devi) ಅವರನ್ನು ಪತಿಯೇ ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬುಧವಾರ (ಏ. 9) ನಡೆದಿದೆ. ಬಿಹಾರ ಗಯಾದ ಅತ್ರಿ ಬ್ಲಾಕ್‌ನ ಟೆಟುವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಷ್ಮಾ ದೇವಿ ತಮ್ಮ ಮಕ್ಕಳು ಮತ್ತು ಸಹೋದರಿ ಪೂನಂ ಕುಮಾರಿ (Poonam Kumari) ಅವರೊಂದಿಗೆ ಮನೆಯಲ್ಲಿದ್ದಾಗ ಪತಿ ರಮೇಶ್‌ (Ramesh) ಗುಂಡು ಹಾರಿಸಿ ಹತ್ಯೆ ಮಾಡಿದ್ದಾಗಿ ವರದಿಯೊಂದು ತಿಳಿಸಿದೆ.

ಗಯಾ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಜಿತಿನ್‌ ರಾಮ್‌ ಮಾಂಝಿ ಸದ್ಯ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಬಿಹಾರದ ಆಡಳಿತಾರೂಢ ಎನ್‌ಡಿಎಯ ಮಿತ್ರ ಪಕ್ಷ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಸ್ಥಾಪಕರೂ ಹೌದು.

ಈ ಸುದ್ದಿಯನ್ನೂ ಓದಿ: Tahawwur Rana: ತಹವ್ವುರ್‌ ರಾಣಾ ಭಾರತಕ್ಕೆ ಬಂದ ಬಳಿಕ ನಡೆಯುವ ಪ್ರಕ್ರಿಯೆ ಹೇಗಿರುತ್ತೆ ಗೊತ್ತೆ? ಇಲ್ಲಿದೆ ಡಿಟೇಲ್ಸ್‌!

ಸುಷ್ಮಾ ದೇವಿ ಅವರ ಸಹೋದರಿ ಪೂನಂ ಘಟನೆ ಬಗ್ಗೆ ಮಾಹಿತಿ ನೀಡಿ, ʼʼಕೆಲಸ ಮುಗಿಸಿ ಮನೆಗೆ ಬಂದಾಗ ಮಧ್ಯಾಹ್ನ 12ರ ಸುಮಾರಿಗೆ ಸುಷ್ಮಾ ಮತ್ತು ರಮೇಶ್‌ ಮಧ್ಯೆ ವಾಗ್ದಾದ ನಡೆಯಿತು. ಬಳಿಕ ಜಗಳ ತಾರಕಕ್ಕೇರಿ ರಮೇಶ್‌ ಪಿಸ್ತೂಲನ್ನು ಹೊರ ತೆಗೆದು ಸುಷ್ಮಾಳತ್ತ ಗುಂಡು ಹಾರಿಸಿದ್ದಾನೆ. ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆʼʼ ಎಂದು ತಿಳಿಸಿದ್ದಾರೆ.

ಘಟನೆ ವೇಳೆ ಪೂನಮ್‌ ಮತ್ತು ಸುಷ್ಮಾ ಅವರ ಮಕ್ಕಳೂ ಸ್ಥಳದಲ್ಲಿದ್ದರು. ಅವರು ಇನ್ನೊಂದು ಕೋಣೆಯಲ್ಲಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಷ್ಮಾ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ʼʼರಮೇಶ್‌ ಪಾಟ್ನಾ ಮೂಲದವನು. ಆತನನ್ನು ಗಲ್ಲಿಗೇರಿಸಬೇಕುʼʼ ಎಂದು ಪೂನಂ ಹೇಳಿದ್ದಾರೆ.

ಸುಷ್ಮಾ ಅವರು ಬಿಹಾರ ಮಹಾದಲಿತ ವಿಕಾಸ್‌ ಮಿಷನ್‌ ಅಡಿಯಲ್ಲಿ ರಾಜ್ಯ ಸರ್ಕಾರ ಮತ್ತು ಸಮಾಜದ ನಡುವೆ ಅಭಿವೃದ್ಧಿ ಯೋಜನೆಗಳಿಗೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ವಿಕಾಸ್‌ ಮಿತ್ರರಾಗಿ ಕೆಲಸ ಮಾಡುತ್ತಿದ್ದರು. ರಮೇಶ್‌ ಪಾಟ್ನಾದಲ್ಲಿ ಟ್ರಕ್‌ ಚಾಲಕನಾಗಿದ್ದ.

ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ ಗಯಾ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ (SSP) ಆನಂದ್‌ ಕುಮಾರ್‌ ತಿಳಿಸಿದ್ದಾರೆ. ʼʼನ್ಯಾಯ ವಿಜ್ಞಾನ ತಂಡ ಮತ್ತು ತಾಂತ್ರಿಕ ತಜ್ಞರನ್ನು ಅಪರಾಧ ನಡೆದ ಸ್ಥಳಕ್ಕೆ ಸಾಕ್ಷ್ಯ ಸಂಗ್ರಹಿಸಲು ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆʼʼ ಎಂದು ಅವರು ಹೇಳಿದ್ದಾರೆ. ಮೂಲಗಳ ಪ್ರಕಾರ, ಸುಷ್ಮಾ ಮತ್ತು ರಮೇಶ್‌ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದು, 14 ವರ್ಷಗಳ ಹಿಂದೆ ವಿವಾಹವಾಗಿದ್ದರು.

ರಮೇಶ್‌ಗೆ ಸುಷ್ಮಾ ಬಗ್ಗೆ ಅನುಮಾನವಿತ್ತು ಮತ್ತು ಆಕೆಯ ಮೇಲೆ ಕೋಪಗೊಂಡಿದ್ದನು. ಇದು ದುರಂತಕ್ಕೆ ಕಾರಣವಾಯಿತು. ಆದಾಗ್ಯೂ ಘಟನೆಯ ಹಿಂದಿನ ಕಾರಣವನ್ನು ಪೊಲೀಸರು ಇನ್ನೂ ಸ್ಪಷ್ಟಪಡಿಸಿಲ್ಲ. ಸುಷ್ಮಾ ಅವರು ಮಾಂಝಿ ಅವರ ಸೋದರಳಿಯ ಸತ್ಯೇಂದ್ರ ಕುಮಾರ್ ಪನ್ನಾ ಅವರ ಸೋದರ ಸಂಬಂಧಿ ಕೃತಿತ್ ಮಾಂಝಿ ಅವರ ಪುತ್ರಿ ಎಂದು ಪೊಲೀಸರು ತಿಳಿಸಿದ್ದಾರೆ.