N Ravikumar: ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿ: ಎನ್.ರವಿಕುಮಾರ್ ಆರೋಪ
ಹಿಂದುಳಿದ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಹೆಚ್ಚಾಗಬೇಕೆಂಬ ಉದ್ದೇಶದಿಂದ ಹೊಸ ವಿಶ್ವವಿದ್ಯಾಲಯ ತೆರೆಯಲಾಗಿತ್ತು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬ ಗಾದೆಮಾತಿನಂತೆ ಸರ್ಕಾರದ ಬಳಿ ವೇತನ ಕೊಡಲು ಹಣ ಇಲ್ಲ ಎಂದು ವಿದ್ಯಾರ್ಥಿಗಳಿಗೆ ಬರೆ ಹಾಕುವುದು ಯಾವ ನ್ಯಾಯ ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಪ್ರಶ್ನಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ (State Congress Government) ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ (N Ravikumar) ಆರೋಪಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಈಗ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂ. ಹೆಚ್ಚಿಸುವುದಾಗಿ ಸರ್ಕಾರ ಹೇಳುತ್ತಿದೆ. ಯಾವಾಗ ಮಾಡುತ್ತಾರೋ ಗೊತ್ತಿಲ್ಲ. ಕೇಂದ್ರದಿಂದ 5 ಕೆಜಿ ಅಕ್ಕಿ ಸಿಗುತ್ತಿದೆ. ಆದರೆ ರಾಜ್ಯ ಸರ್ಕಾರದ 5 ಕೆಜಿ ಪಡಿತರ ಅಕ್ಕಿ ಸಂಬಂಧ ಫಲಾನುಭವಿಯ ಖಾತೆಗೆ ಹಣ ವರ್ಗಾಯಿಸಿಲ್ಲ ಎಂದು ಮಾಹಿತಿ ಇರುವುದಾಗಿ ಅವರು ತಿಳಿಸಿದರು.
ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಶಿಕ್ಷಕರಾಗಿ ದುಡಿಯುವವರಿಗೆ ಐದಾರು ತಿಂಗಳಿಂದ ವೇತನ ಕೊಡುತ್ತಿಲ್ಲ. ಮೆಟ್ರೋ ದರ ಹೆಚ್ಚಿಸಿದ್ದು, ಹಾಲು, ವಿದ್ಯುತ್ ದರ ಏರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಎರಡನೇ ಅವಧಿಯ ಆಡಳಿತ ಸಂಪೂರ್ಣವಾಗಿ ನೆಲಕಚ್ಚಿ ಹೋಗಿದೆ. ಗ್ಯಾರಂಟಿ ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ. ಈ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ದೂರಿದರು.
ವಿವಿ ಬಂದ್ ಮಾಡುವ ನಿರ್ಧಾರ ಮೂರ್ಖತನದ ಪರಮಾವಧಿ
ಕಾಂಗ್ರೆಸ್ ಸರ್ಕಾರವು ಹಿಂದುಳಿದ ಜಿಲ್ಲೆಗಳ ಹೊಸ ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುತ್ತಿದೆ. ಕೊಪ್ಪಳ, ಹಾವೇರಿ, ಚಾಮರಾಜನಗರ, ಬೀದರ್- ಈ ಥರದ ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬರೆ ಹಾಕುವ ಈ ಸರ್ಕಾರದ ನಿರ್ಧಾರ ಮೂರ್ಖತನದ ಪರಮಾವಧಿ ಎಂದು ಎನ್.ರವಿಕುಮಾರ್ ಟೀಕಿಸಿದರು.
ಹಿಂದುಳಿದ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಹೆಚ್ಚಾಗಬೇಕೆಂಬ ಉದ್ದೇಶದಿಂದ ಹೊಸ ವಿಶ್ವವಿದ್ಯಾಲಯ ತೆರೆಯಲಾಗಿತ್ತು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬ ಗಾದೆಮಾತಿನಂತೆ ಸರ್ಕಾರದ ಬಳಿ ವೇತನ ಕೊಡಲು ಹಣ ಇಲ್ಲ ಎಂದು ವಿದ್ಯಾರ್ಥಿಗಳಿಗೆ ಬರೆ ಹಾಕುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಸರ್ಕಾರ ತನ್ನ ನಿರ್ಧಾರವನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಕೇಂದ್ರ 22.50 ರೂ.ಗೆ ಅಕ್ಕಿ ಕೊಟ್ಟರೂ ರಾಜ್ಯ ಸರ್ಕಾರ ಖರೀದಿಸುತ್ತಿಲ್ಲ: ಪ್ರಲ್ಹಾದ್ ಜೋಶಿ ಆರೋಪ
2016-17ರಲ್ಲಿ ಉನ್ನತ ಶಿಕ್ಷಣಕ್ಕೆ ಬಜೆಟ್‍ನ ಶೇ.6 ಹಣವನ್ನು ಕೊಡಲಾಗಿತ್ತು. ಈ ಸರ್ಕಾರ ಕೇವಲ ಶೇ. 1.76 ಹಣವನ್ನಷ್ಟೇ ಕೊಟ್ಟಿದೆ. ವಿವಿ, ಕಾಲೇಜುಗಳಿಗೆ ಹಣವನ್ನೇ ಕೊಡದೆ ಇದ್ದರೆ ಶಿಕ್ಷಣ ಸಂಸ್ಥೆಗಳು ನಡೆಯುವುದಾದರೂ ಹೇಗೆ ಎಂದ ಅವರು, ಬಿಜೆಪಿ ಇದ್ದಾಗ ತೆರೆದ ಯೂನಿವರ್ಸಿಟಿ ಎಂದು ರಾಜಕೀಯ ದ್ವೇಷದಿಂದ ಬಂದ್ ಮಾಡಿದರೆ, ಇದು ರಾಜ್ಯಕ್ಕೆ ಮಾಡುವ ಅಪಮಾನ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಆರೋಪಿಸಿದರು.