ಹೋಳಿ ಆಚರಿಸಿದ ಶಮಿ ಪುತ್ರಿಯನ್ನು ಟೀಕಿಸಿದ ಮೌಲಾನ ಶಹಬುದ್ದೀನ್
ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಶಮಿ ಬೌಂಡರಿ ಲೈನ್ ಸಮೀಪ ಜ್ಯೂಸ್ ಸೇವಿಸಿದ್ದ ಚಿತ್ರ ವೈರಲ್ ಆಗಿತ್ತು. ಆಗಲೂ ಕೂಡ ರಮ್ಜಾನ್ ಉಪವಾಸವನ್ನು ಪಾಲಿಸದ ಶಮಿ ಪಾಪಿ ಎಂದು ಶಹಬುದ್ದೀನ್ ರಜ್ವಿ ಟೀಕಿಸಿದ್ದರು.


ನವದೆಹಲಿ: ಇತ್ತೀಚೆಗೆ ಮುಕ್ತಾಯ ಕಂಡ ಚಾಂಪಿಯನ್ಸ್ ಟ್ರೋಫಿಯ ವೇಳೆ ರಮ್ಜಾನ್ ತಿಂಗಳಲ್ಲಿ ಉಪವಾಸ(ರೋಜಾ) ಆಚರಿಸದಿದ್ದಕ್ಕಾಗಿ ಭಾರತ ತಂಡದ ವೇಗಿ ಮೊಹಮ್ಮದ್ ಶಮಿ(Mohammed Shami)ಯನ್ನು ಪಾಪಿ ಎಂದಿದ್ದ ಆಲ್ ಇಂಡಿಯಾ ಮುಸ್ಲಿಂ ಜಮಾತ್ (ಎಐಎಂಜೆ) ಅಧ್ಯಕ್ಷ ಮೌಲಾನ ಶಹಬುದ್ದೀನ್ ರಜ್ವಿ(Maulana Shahabuddin Razvi), ಈ ಬಾರಿ ಶಮಿ ಪುತ್ರಿ(Mohammed Shami Daughter) ಆಯ್‌ರಾ ಅವರನ್ನು ಗುರಿಯಾಗಿಸಿ ಟೀಕಿಸಿದ್ದಾರೆ. ಇದಕ್ಕೆ ಕಾರಣ ಶಮಿ ಪುತ್ರಿ ಹೋಳಿ ಆಚರಿಸಿದ್ದು. ಮುಸ್ಲಿಮರು ಹೋಳಿ ಆಚರಿಸುವುದು ಷರಿಯಾ ಕಾನೂನಿಗೆ ವಿರುದ್ಧ ಎಂದಿದ್ದಾರೆ. ಆಯ್‌ರಾ ಬಣ್ಣದೋಕುಳಿಯಲ್ಲಿ ಮಿಂಚಿದ್ದ ಚಿತ್ರವನ್ನು ಶಮಿಯ ಮಾಜಿ ಪತ್ನಿ ಹಸೀನ್ ಜಹಾನ್ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಕೆಲವರು ಶಮಿ ಪುತ್ರಿಯನ್ನು ನಿಂದಿಸಿ ಕಾಮೆಂಟ್ ಮಾಡಿದ್ದರು.
ವಿಡಿಯೊವೊಂದರಲ್ಲಿ ಮಾತನಾಡಿರುವ ಶಹಬುದ್ದೀನ್ ರಜ್ವಿ, ಶಮಿಯ ಪುತ್ರಿ ಚಿಕ್ಕವಳು. ಆಕೆ ಗೊತ್ತಿಲ್ಲದೆ ಹೋಳಿ ಆಚರಿಸಿದ್ದರೆ ಅದು ತಪ್ಪಲ್ಲ. ಆದರೆ ಗೊತ್ತಿದ್ದೂ ಆಕೆ ಹೋಳಿ ಆಚರಣೆಯಲ್ಲಿ ಪಾಲ್ಗೊಂಡರೆ ಅದು ಷರಿಯಾಕ್ಕೆ ವಿರುದ್ಧ ಎಂದಿದ್ದಾರೆ.
'ನಾನು ಶಮಿ ಮತ್ತು ಕುಟುಂಬಸ್ಥರಿಗೆ ಮನವಿ ಮಾಡಿದ್ದೇನೆ. ಷರಿಯಾದಲ್ಲಿ ಏನೆಲ್ಲ ಇಲ್ಲವೋ ಅವನ್ನು ಮಾಡಲು ಮಕ್ಕಳಿಗೆ ಬಿಡಬೇಡಿ ಎಂದಿದ್ದೇನೆ. ಹೋಳಿ ಹಿಂದುಗಳ ದೊಡ್ಡ ಹಬ್ಬ. ಮುಸ್ಲಿಮರು ಅದರ ಆಚರಣೆಯಿಂದ ದೂರವಿರಬೇಕು' ಎಂದು ರಜ್ವಿ ಹೇಳಿದ್ದಾರೆ.
ಶಹಬುದ್ದೀನ್ ರಜ್ವಿ ಹೇಳಿರುವ ಈ ವಿಡಿಯೊ ಕಂಡ ಅನೇಕ ನೆಟ್ಟಿಗರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳ ಮನಸ್ಸಿನಲ್ಲಿಯೂ ಧರ್ಮವನ್ನು ಕಾಣುವ ನಿಮ್ಮ ಮತೀಯ ವಿಚಾರ ಬದಿಗಿಡಿ ಎಂದಿದ್ದಾರೆ.
ಇದನ್ನೂ ಓದಿ ʻರೋಜಾ ಆಚರಿಸದ ಮೊಹಮ್ಮದ್ ಶಮಿ ಒಬ್ಬ ಕ್ರಿಮಿನಲ್ʼ ಎಂದ ಮೌಲಾನಾ ರಜ್ವಿ!
ಶಮಿ ಪುತ್ರಿ ಈ ರೀತಿಯ ಟೀಕೆಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ನವರಾತ್ರಿ ಸೇರಿ ಕೆಲವು ಹಬ್ಬವನ್ನು ಆಚರಿಸಿಕೊಂಡ ವೇಳೆಯೂ ಅವರ ವಿರುದ್ಧ ಹಲವು ಟೀಕೆಗಳು ಕೇಳಿ ಬಂದಿತ್ತು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಶಮಿ ಬೌಂಡರಿ ಲೈನ್ ಸಮೀಪ ಜ್ಯೂಸ್ ಸೇವಿಸಿದ್ದ ಚಿತ್ರ ವೈರಲ್ ಆಗಿತ್ತು. ಆಗಲೂ ಕೂಡ ರಮ್ಜಾನ್ ಉಪವಾಸವನ್ನು ಪಾಲಿಸದ ಶಮಿ ಪಾಪಿ ಎಂದು ಶಹಬುದ್ದೀನ್ ರಜ್ವಿ ಟೀಕಿಸಿದ್ದರು.