ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GT vs RR: ರಾಜಸ್ಥಾನ್‌ ರಾಯಲ್ಸ್‌ ಎದುರು ಗುಜರಾತ್‌ ಟೈಟನ್ಸ್‌ಗೆ ಅಧಿಕಾರಯುತ ಗೆಲುವು!

GT vs RR Match Highlights: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 23ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಗುಜರಾತ್‌ ಟೈಟನ್ಸ್‌ ತಂಡ 58 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಟೂರ್ನಿಯ ನಾಲ್ಕನೇ ಗೆಲುವಿನ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ರಾಜಸ್ಥಾನ್‌ ಎದುರು ಗುಜರಾತ್‌ಗೆ ಅಧಿಕಾರಯುತ ಗೆಲುವು!

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಗುಜರಾತ್‌ ಟೈಟನ್ಸ್‌ಗೆ 58 ರನ್‌ ಜಯ.

Profile Ramesh Kote Apr 9, 2025 11:46 PM

ಅಹಮದಾಬಾದ್‌: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಗುಜರಾತ್‌ ಟೈಟನ್ಸ್‌ (Gujarat Titans) ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 23ನೇ ಪಂದ್ಯದಲ್ಲಿ (GT vs RR) ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 58 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಪಡೆಯುವ ಮೂಲಕ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟನ್ಸ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದರೆ, ಮೂರನೇ ಸೋಲು ಅನುಭವಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿಯೇ ಉಳಿದಿದೆ.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮದಲು ಬ್ಯಾಟ್‌ ಮಾಡುವಂತಾಗಿದ್ದ ಗುಜರಾತ್‌ ಟೈಟನ್ಸ್‌ ತಂಡ, ಸಾಯಿ ಸುದರ್ಶನ್‌ ( 82) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 217 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ 218 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಸಾಯಿ ಸುದರ್ಶನ್‌ ಜೊತೆಗೆ ಜೋಸ್‌ ಬಟ್ಲರ್‌ ಹಾಗೂ ಶಾರೂಖ್‌ ಖಾನ್‌ ತಲಾ 36 ರನ್‌ಗಳನ್ನು ಕಲೆ ಹಾಕಿದ್ದರು. ಆರ್‌ಆರ್‌ ಪರ ತುಷಾರ್‌ ದೇಶಪಾಂಡೆ ಹಾಗೂ ಮಹೇಶ ತೀಕ್ಷಣ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದ್ದರು.

IPL 2025: ಎರಡು ಬಾರಿ ದಂಡ ಬಿದ್ದರೂ ಬುದ್ಧಿ ಕಲಿಯದ ದಿಗ್ವೇಶ್‌ ರಾಥಿ; ಈ ಬಾರಿ ವಿಭಿನ್ನ ಸಂಭ್ರಮಾರಣೆ

ಬಳಿಕ ಗುರಿ ಹಿಂಬಾಲಿಸಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ, ಪ್ರಸಿಧ್‌ ಕೃಷ್ಣ (24ಕ್ಕೆ 3) ಸೇರಿದಂತೆ ಜಿಟಿ ಬೌಲರ್‌ಗಳ ದಾಳಿಗೆ ನಲುಗಿ 19.2 ಓವರ್‌ಗಳಿಗೆ 159 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 58 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ರಾಜಸ್ಥಾನ್‌ ರಾಯಲ್ಸ್‌ ಪರ ನಾಯಕ ಸಂಜು ಸ್ಯಾಮ್ಸನ್‌ ಆರಂಭದಲ್ಲಿ 41 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ರಿಯಾನ್‌ ಪರಾಗ್‌ 26 ರನ್‌ ಗಳಿಸಿ ಔಟ್‌ ಆಗಿದ್ದರು. ಶಿಮ್ರಾನ್‌ ಹೆಟ್ಮಾಯರ್‌ 32 ಎಸೆತಗಳಲ್ಲಿ 52 ರನ್‌ಗಳನ್ನು ಸಿಡಿಸಿ ವಿಕೆಟ್‌ ಒಪ್ಪಿಸಿದರು. ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕದೆ ವಿಕೆಟ್‌ ಒಪ್ಪಿಸಿದರು.



ಮಿಂಚಿದ ಸಾಯಿ ಸುದರ್ಶನ್‌

ಮೊದಲು ಬ್ಯಾಟ್‌ ಮಾಡಿದ್ದ ಗುಜರಾತ್‌ ಟೈಟನ್ಸ್‌ ಪರ ಬ್ಯಾಟಿಂಗ್‌ನಲ್ಲಿ ಮಿಂಚಿದ್ದು ಸಾಯಿ ಸುದರ್ಶನ್‌. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು 19ನೇ ಓವರ್‌ವರೆಗೂ ಅವರು ಬ್ಯಾಟ್‌ ಮಾಡಿದರು. ಆರ್‌ಆರ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು 53 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 82 ರನ್‌ಗಳನ್ನು ಸಿಡಿಸಿದರು. ಅಲ್ಲದೆ ಜೋಸ್‌ ಬಟ್ಲರ್‌ (36) ಹಾಗೂ ಶಾರೂಖ್‌ ಖಾನ್‌ ಅವರ ಜೊತೆ ತಲಾ 50 ರನ್‌ಗಳ ನಿರ್ಣಾಯಕ ಜೊತೆಯಾಟಗಳನ್ನು ಕೂಡ ಸುದರ್ಶನ್‌ ಆಡಿದ್ದರು. ರಾಹುಲ್‌ ತೆವಾಟಿಯಾ 12 ಎಸೆತಗಳಲ್ಲಿ 24 ರನ್‌ ಸಿಡಿಸಿದ್ದರು.



ಶಿಮ್ರಾನ್‌ ಹೆಟ್ಮಾಯರ್‌ ಸ್ಪೋಟಕ ಅರ್ಧಶತಕ

ರಾಜಸ್ಥಾನ್‌ ರಾಯಲ್ಸ್‌ ಪರ ಸ್ಟಾರ್‌ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಯಶಸ್ವಿ ಜೈಸ್ವಾಲ್‌ ನಿತೀಶ್‌ ರಾಣಾ ಹಾಗೂ ಧ್ರುವ್‌ ಜುರೆಲ್‌ ಬಹುಬೇಗ ವಿಕೆಟ್‌ ಒಪ್ಪಿಸಿದ್ದರು. ನಾಯಕ ಸಂಜು ಸ್ಯಾಮ್ಸನ್‌ 41 ರನ್‌ ಹಾಗೂ ರಿಯಾನ್‌ ಪರಾಗ್‌ 26 ರನ್‌ ಗಳಿಸಿ ಭರವಸೆ ಮೂಡಿಸಿದ್ದರು. ಆದರೆ, ಇವರಿಬ್ಬರನ್ನೂ ಕ್ರಮವಾಗಿ ಪ್ರಸಿಧ್‌ ಕೃಷ್ಣ ಹಾಗೂ ಕುಲ್ವಂತ್‌ ಖೆಜ್ರೋಲಿಯಾ ಔಟ್‌ ಮಾಡಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಹೊತ್ತು ಜಿಟಿ ಬೌಲರ್‌ಗಳನ್ನು ದಂಡಿಸಿದ್ದ ಶಿಮ್ರಾನ್‌ ಹೆಟ್ಮಾಯರ್‌ 32 ಎಸೆತಗಳಲ್ಲಿ 52 ರನ್‌ ಸಿಡಿಸಿ ಆರ್‌ಆರ್‌ ತಂಡವನ್ನು ಗೆಲ್ಲಿಸಲು ಪ್ರಯತ್ನ ನಡೆಸಿದ್ದರು. ಆದರೆ, ಮತ್ತೊಂದು ಯಾರಿಂದಲೂ ಸೂಕ್ತ ಬೆಂಬಲ ಸಿಗದ ಕಾರಣ ಔಟ್‌ ಆದರು.

ಸ್ಕೋರ್‌ ವಿವರ

ಗುಜರಾತ್‌ ಟೈಟನ್ಸ್‌: 20 ಓವರ್‌ಗಳಿಗೆ 217-6 (ಸಾಯಿ ಸುದರ್ಶನ್‌ 83, ಜೋಸ್‌ ಬಟ್ಲರ್‌ 36, ಶಾರೂಖ್‌ ಖಾನ್‌ 36; ತುಷಾರ್‌ ದೇಶಪಾಂಡೆ 53ಕ್ಕೆ 2, ಮಹೇಶ ತೀಕ್ಷಣ 54ಕ್ಕೆ 2)

ರಾಜಸ್ಥಾನ್‌ ರಾಯಲ್ಸ್‌: 19.2 ಓವರ್‌ಗಳಿಗೆ 159-10 (ಶಿಮ್ರಾನ್‌ ಹೆಟ್ಮಾಯರ್‌ 52, ಸಂಜು ಸ್ಯಾಮ್ಸನ್‌ 41; ಪ್ರಸಿಧ್‌ ಕೃಷ್ಣ 24ಕ್ಕೆ 3, ಸಾಯಿ ಕಿಶೋರ್‌ 20 ಕ್ಕೆ 2, ರಶೀದ್‌ ಖಾನ್‌ 37ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಸಾಯಿ ಸುದರ್ಶನ್