ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಸತತ 13 ಪಂದ್ಯಗಳಲ್ಲಿ ಟಾಸ್‌ ಸೋತು ಅನಗತ್ಯ ದಾಖಲೆ ಬರೆದ ಭಾರತ!

ಭಾರತ ಕ್ರಿಕೆಟ್ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕಾದಾಟ ನಡೆಸುತ್ತಿದೆ. ಈ ಪಂದ್ಯದಲ್ಲಿಯೂ ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಟಾಸ್‌ ಸೋತರು. ಆ ಮೂಲಕ ಸತತ 13 ಪಂದ್ಯಗಳಲ್ಲಿ ಟಾಸ್‌ ಸೋಲುವ ಮೂಲಕ ಭಾರತ ತಂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದೆ.

ಸತತ  13 ಪಂದ್ಯಗಳಲ್ಲಿ ಟಾಸ್‌ ಸೋತು ಅನಗತ್ಯ ದಾಖಲೆ ಬರೆದ ಭಾರತ!

ಸತತ 13 ಟೆಸ್ಟ್‌ ಪಂದ್ಯಗಳಲ್ಲಿ ಟಾಸ್‌ ಸೋತು ಅನಗತ್ಯ ದಾಖಲೆ ಬರೆದ ಭಾರತ ತಂಡ.

Profile Ramesh Kote Jul 10, 2025 8:58 PM

ಲಂಡನ್: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಜುಲೈ 10 ರಂದು ಗುರುವಾರ ಆರಂಭವಾದ ಮೂರನೇ ಟೆಸ್ಟ್‌ ಪಂದ್ಯದಲ್ಲಿ (IND vs ENG) ಕಾದಾಟ ನಡೆಸುತ್ತಿದೆ. ಅಚ್ಚರಿ ಏನೆಂದರೆ ಈ ಪಂದ್ಯದಲ್ಲಿ ಭಾರತ ತಂಡದ ಯುವ ನಾಯಕ ಶುಭಮನ್‌ ಗಿಲ್‌ (Shubman Gill) ಮತ್ತೊಮ್ಮೆ ಟಾಸ್‌ ಸೋತಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದೆ. ಇನ್ನು ಟಾಸ್‌ ಗೆದ್ದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಜನವರಿ 31, 2025 ರಿಂದ ಭಾರತ ಸತತ 13 ಪಂದ್ಯಗಳಲ್ಲಿ ಟಾಸ್ ಸೋತಿದೆ. ಇದಕ್ಕೂ ಮೊದಲು ಈ ಅನಗತ್ಯ ದಾಖಲೆ ವೆಸ್ಟ್ ಇಂಡೀಸ್ ಹೆಸರಿನಲ್ಲಿತ್ತು. 1999 ಫೆಬ್ರವರಿ 2 ಮತ್ತು 1999 ರ ಏಪ್ರಿಲ್ 21 ನಡುವೆ ವೆಸ್ಟ್ ಇಂಡೀಸ್ ಸತತ 12 ಬಾರಿ ಟಾಸ್ ಸೋತಿತ್ತು. ಇಂಗ್ಲೆಂಡ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 2022ರ ಡಿಸೆಂಬರ್ 17 ಮತ್ತು 2023ರ ಮಾರ್ಚ್ 12ರ ನಡುವೆ ಇಂಗ್ಲೆಂಡ್ ಸತತ 11 ಪಂದ್ಯಗಳಲ್ಲಿ ಟಾಸ್ ಸೋತಿತ್ತು. ಇದೀಗ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ ಟಾಸ್‌ ಸೋಲುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸತತ ಹೆಚ್ಚು ಪಂದ್ಯಗಳಲ್ಲಿ ಟಾಸ್‌ ತಂಡಗಳ ಸಾಲಿನಲ್ಲಿ ಭಾರತ ಅಗ್ರ ಸ್ಥಾನವನ್ನು ಅಲಂಕರಿಸುವ ಮೂಲಕ ವಿಂಡಿಸ್‌ ಅನ್ನು ಹಿಂದಿಕ್ಕಿದೆ.

IND vs ENG: ʻಬೆಳಿಗ್ಗೆವರೆಗೂ ಗೊಂದಲದಲ್ಲಿದ್ದೆʼ-ಟಾಸ್‌ ವೇಳೆ ಶುಭಮನ್‌ ಗಿಲ್‌ ಹೀಗೇಳಿದ್ದೇಕೆ?

ಟಾಸ್ ಗೆದ್ದ ಬೆನ್ ಸ್ಟೋಕ್ಸ್

ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಿರ್ಧರಿಸಿದ್ದರು. ಲಂಡನ್‌ನಲ್ಲಿ ಹವಾಮಾನ ತುಂಬಾ ಚೆನ್ನಾಗಿದ್ದು, ಬಿಸಿಲು ಕಾಣುತ್ತಿದೆ. ಎರಡೂ ತಂಡಗಳು ತಮ್ಮ ಪ್ಲೇಯಿಂಗ್‌ XI ನಲ್ಲಿ ತಲಾ ಒಂದೊಂದು ಬದಲಾವಣೆಯನ್ನು ಮಾಡಿಕೊಂಡಿವೆ. ಇಂಗ್ಲೆಂಡ್ ತಂಡ, ಜಾಶ್‌ ಟಾಗ್‌ ಅವರ ಬದಲಿಗೆ ಜೋಫ್ರಾ ಆರ್ಚರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಪ್ರವಾಸಿ ಭಾರತ ತಂಡ ಪ್ರಸಿದ್ಧ್ ಕೃಷ್ಣ ಬದಲಿಗೆ ಜಸ್‌ಪ್ರೀತ್‌ ಬುಮ್ರಾ ಅವರನ್ನು ಪ್ಲೇಯಿಂಗ್‌ XIಗೆ ಸೇರಿಸಿಕೊಂಡಿದೆ.



ಇಂಗ್ಲೆಂಡ್‌ಗೆ ಆಘಾತ ನೀಡಿದ ನಿತೀಶ್‌ ರೆಡ್ಡಿ

ಟಾಸ್ ಸೋತ ನಂತರ ಮಾತನಾಡಿದ್ದ ಶುಭಮನ್‌ ಗಿಲ್, ಇಲ್ಲಿ ಟಾಸ್‌ ಗೆದ್ದರೆ ಬ್ಯಾಟ್‌ ಮಾಬೇಕಾ? ಅಥವಾ ಬೌಲ್‌ ಮಾಡಬೇಕಾ? ಎಂಬ ಬಗ್ಗೆ ಬೆಳಿಗ್ಗೆವರೆಗೂ ಗೊಂದಲದಲ್ಲಿದ್ದೆ ಎಂದು ಹೇಳಿದ್ದಾರೆ. ಆದರೆ, ಟಾಸ್ ಗೆದ್ದಿದ್ದರೆ ಬಹುಶಃ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದು ತಿಳಿಸಿದ್ದರು. ಇಂಗ್ಲೆಂಡ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇಂಗ್ಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಬೆನ್ ಡಕೆಟ್ ಮತ್ತು ಝ್ಯಾಕ್ ಕ್ರಾವ್ಲಿ ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದರು. ಆದರೆ ನಂತರ ನಿತೀಶ್ ಕುಮಾರ್ ರೆಡ್ಡಿ 14ನೇ ಓವರ್‌ನಲ್ಲಿ ಈ ಇಬ್ಬರನ್ನೂ ಔಟ್ ಮಾಡಿ ಇಂಗ್ಲೆಂಡ್‌ಗೆ ಆರಂಭಿಕ ಆಘಾತ ನೀಡಿದರು.

IND vs ENG: ಲಾರ್ಡ್ಸ್‌ ಅಂಗಣಕ್ಕೆ ಮೊದಲ ಪ್ರವೇಶದ ಘಟನೆಯನ್ನು ನೆನೆದ ಸಚಿನ್‌ ತೆಂಡೂಲ್ಕರ್‌!

ಇಂಗ್ಲೆಂಡ್‌ ತಂಡಕ್ಕೆ ಜೋ ರೂಟ್‌ ಆಸರೆ

ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ಇಂಗ್ಲೆಂಡ್‌ ತಂಡ, ಜೋ ರೂಟ್‌ (64*) ಅವರ ಅರ್ಧಶತಕದ ನೆರವಿನಿಂದ ಉತ್ತಮ ಆರಂಭವನ್ನು ಪಡೆದಿದೆ. ಝ್ಯಾಕ್‌ ಕ್ರಾವ್ಲಿ ಹಾಗೂ ಬೆನ್‌ ಡಕೆಟ್‌ ವಿಕೆಟ್‌ ಒಪ್ಪಿಸಿದ ಬಳಿಕ ಜೋ ರೂಟ್‌ ಹಾಗೂ ಒಲ್ಲಿ ಪೋಪ್‌ ಜೋಡಿ ಮೂರನೇ ವಿಕೆಟ್‌ಗೆ 109 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಉತ್ತಮವಾಗಿ ಬ್ಯಾಟ್‌ ಮಾಡುತ್ತಿದ್ದ ಪೋಪ್‌ (44 ರನ್‌) ಅರ್ಧಶತಕದಂಚಿನಲ್ಲಿ ರವೀಂದ್ರ ಜಡೇಜಾಗೆ ವಿಕೆಟ್‌ ಒಪ್ಪಿಸಿದರು. ನಂತರ ಬಂದ ಹ್ಯಾರಿ ಬ್ರೂಕ್‌ ಕೂಡ 11 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಅದ್ಭುತವಾಗಿ ಬ್ಯಾಟ್‌ ಮಾಡುತ್ತಿರುವ ಜೋ ರೂಟ್‌ ಅಜೇಯ 64 ರನ್‌ ಗಳಿಸಿ ಇಂಗ್ಲೆಂಡ್‌ಗೆ ಆಸರೆಯಾಗಿದ್ದಾರೆ. ಇಂಗ್ಲೆಂಡ್‌ 57 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 176 ರನ್‌ ಗಳಿಸಿದೆ.