ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs GT: ತವರು ಅಭಿಮಾನಿಗಳ ಎದುರು ಆರ್‌ಸಿಬಿಗೆ ಮೊದಲ ಸೋಲು, ಟೈಟನ್ಸ್‌ಗೆ ಎರಡನೇ ಜಯ!

RCB vs GT Match Highlights: ಮೊಹಮ್ಮದ್‌ ಸಿರಾಜ್‌ ಮಾರಕ ದಾಳಿ ಹಾಗೂ ಜೋಸ್‌ ಬಟ್ಲರ್‌ ಅರ್ಧಶತಕದ ಬಲದಿಂದ ಗುಜರಾತ್‌ ಟೈಟನ್ಸ್‌ ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 14ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ 8 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಆರ್‌ಸಿಬಿ ಪ್ರಸಕ್ತ ಆವೃತ್ತಿಯಲ್ಲಿ ಮೊದಲನೇ ಸೋಲು ಅನುಭವಿಸಿತು.

RCB vs GT: ತವರು ಅಭಿಮಾನಿಗಳ ಎದುರು ಆರ್‌ಸಿಬಿಗೆ ಮೊದಲ ಸೋಲು!

ಗುಜರಾತ್‌ ಟೈಟನ್ಸ್‌ ಎದುರು ಆರ್‌ಸಿಬಿಗೆ ಸೋಲು.

Profile Ramesh Kote Apr 2, 2025 11:03 PM

ಬೆಂಗಳೂರು: ಆರಂಭಿಕ ಎರಡು ಪಂದ್ಯಗಳನ್ನು ಗೆದ್ದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ತನ್ನ ಮೂರನೇ ಪಂದ್ಯದಲ್ಲಿ(RCB vs GT) ತವರು ಅಭಿಮಾನಿಗಳ ಎದುರು ಮೊದಲನೇ ಸೋಲು ಅನುಭವಿಸಿತು. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಗುಜರಾತ್‌ ಟೈಟನ್ಸ್‌ ತಂಡ, ಪ್ರಸಕ್ತ ಟೂರ್ನಿಯ 14ನೇ ಪಂದ್ಯದಲ್ಲಿ ಆರ್‌ಸಿಬಿ ಎದುರು 8 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಈ ಸೋಲಿನ ಮೂಲಕ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಟೂರ್ನಿಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಬುಧವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 170 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್‌ ಟೈಟನ್ಸ್‌ ತಂಡ, ಜೋಸ್‌ ಬಟ್ಲರ್‌ (73*) ಅವರ ಅರ್ಧಶತಕದ ಬಲದಿಂದ 17.5 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ ಗೆಲುವಿನ ದಡ ಸೇರಿತು. ಗುಜರಾತ್‌ ಪರ ನಾಯಕ ಶುಭಮನ್‌ ಗಿಲ್‌ 14 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದು ಬಿಟ್ಟರೆ ಬ್ಯಾಟ್‌ ಮಾಡಿದ ಇನ್ನುಳಿದ ಮೂವರು ಬ್ಯಾಟ್ಸ್‌ಮನ್‌ಗಳು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರು.

IPL 2025: ʻಕೆಕೆಆರ್‌ ಪ್ರಶಸ್ತಿ ಗೆದ್ದರೂ ಶ್ರೇಯಸ್‌ ಅಯ್ಯರ್‌ಗೆ ಸಿಗದ ಶ್ರೇಯʼ-ಸುನೀಲ್‌ ಗವಾಸ್ಕರ್‌!

ಸುದರ್ಶನ್‌-ಬಟ್ಲರ್‌ ಜುಗಲ್‌ಬಂದಿ

ಎರಡನೇ ವಿಕೆಟ್‌ಗೆ ಜೊತೆಯಾದ ಸಾಯಿ ಸುದರ್ಶನ್‌ ಹಾಗೂ ಜೋಸ್‌ ಬಟ್ಲರ್‌ ಆರ್‌ಸಿಬಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಜೋಡಿ 75 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಗುಜರಾತ್‌ ಟೈಟನ್ಸ್‌ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟರು. ಭರ್ಜರಿಯಾಗಿ ಬ್ಯಾಟ್‌ ಮಾಡಿದ ಸಾಯಿ ಸುದರ್ಶನ್‌ 36 ಎಸೆತಗಳಲ್ಲಿ 49 ರನ್‌ ಗಳಿಸಿದರು. ಆದರೆ, ಕೇವಲ ಒಂದು ರನ್‌ ಅಂತರದಲ್ಲಿ ಸುದರ್ಶನ್‌ ಅರ್ಧಶತಕವನ್ನು ಕಳೆದುಕೊಂಡರು. ಇವರು ಜಾಶ್‌ ಹೇಝಲ್‌ವುಡ್‌ ಬೌಲಿಂಗ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಔಟ್‌ ಆದರು.



ಜೋಸ್‌ ಬಟ್ಲರ್‌ ಮಿಂಚಿನ ಬ್ಯಾಟಿಂಗ್‌

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ಜೋಸ್‌ ಬಟ್ಲರ್‌ ಆರ್‌ಸಿಬಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಇವರು ಆಡಿದ 39 ಎಸೆತಗಳಲ್ಲಿ6 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 73 ರನ್‌ಗಳನ್ನು ಸಿಡಿಸಿ ಗುಜರಾತ್‌ ಟೈಟನ್ಸ್‌ ತಂಡವನ್ನು ಗೆಲ್ಲಿಸಿದರು. ಇವರ ಜೊತೆ ಕೊನೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಶೆರ್ಫೆನ್‌ ಋದರ್‌ಫೋರ್ಡ್‌ 18 ಎಸೆತಗಳಲ್ಲಿ ಅಜೇಯ 30 ರನ್‌ ಸಿಡಿಸಿದರು.



169 ರನ್‌ ಕಲೆ ಹಾಕಿದ್ದ ಆರ್‌ಸಿಬಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 169 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಗುಜರಾತ್‌ ಟೈಟನ್ಸ್‌ ತಂಡಕ್ಕೆ 170 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ತಂಡದ ಪರ ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ವಿರಾಟ್‌ ಕೊಹ್ಲಿ (7), ದೇವದತ್‌ ಪಡಿಕ್ಕಲ್‌ (4), ಫಿಲ್‌ ಸಾಲ್ಟ್‌ (14) ಹಾಗೂ ರಜತ್‌ ಪಾಟಿದಾರ್‌ (12) ಅವರು ಗುಜರಾತ್‌ ಬೌಲರ್‌ಗಳಿಗೆ ಬಹುಬೇಗ ಶರಣರಾದರು. ಐದನೇ ಕ್ರಮಾಂಕದಲ್ಲಿ ಜೊತೆಯಾಗಿದ್ದ ಲಿಯಾಮ್‌ ಲಿವಿಂಗ್‌ಸ್ಟೋನ್‌ ಹಾಗೂ ಜಿತೇಶ್‌ ಶರ್ಮಾ 52 ರನ್‌ಗಳನ್ನು ಕಲೆ ಹಾಕಿದರು. ಒಂದು ಹಂತದಲ್ಲಿ 21 ಎಸೆತಗಳಲ್ಲಿ 33 ರನ್‌ಗಳನ್ನು ಕಲೆ ಹಾಕಿ ಭರವಸೆ ಮೂಡಿಸಿದ್ದ ಜಿತೇಶ್‌ ಶರ್ಮಾ ಸಾಯಿ ಕಿಶೋರ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಕೃಣಾಲ್‌ ಪಾಂಡ್ಯ ಕೂಡ ಸಾಯಿ ಕಿಶೋರ್‌ಗೆ ಕ್ಯಾಚ್‌ ಕೊಟ್ಟರು. ಆದರೆ, ಆರ್‌ಸಿಬಿಗೆ ನೆರವಾಗಿದ್ದ ಟಿಮ್‌ ಡೇವಿಡ್‌ ಕೇವಲ 18 ಎಸೆತಗಳಲ್ಲಿ 32 ರನ್‌ಗಳ ಉಪಯುಕ್ತ ಕೊಡುಗೆಯನ್ನು ನೀಡಿದರು.

IPL 2025: ಪಂತ್‌ಗೆ ಮತ್ತೆ ಎಚ್ಚರಿಕೆ ಕೊಟ್ಟ ಸಂಜೀವ್ ಗೋಯೆಂಕಾ

ಲಿಯಾಮ್‌ ಲಿವಿಂಗ್‌ಸ್ಟೋನ್‌ ಅರ್ಧಶತಕ

ನಾಲ್ಕು ವಿಕೆಟ್‌ ಕಳೆದುಕೊಂಡು ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಕ್ರೀಸ್‌ಗೆ ಬಂದಿದ್ದ ಲಿಯಾಮ್‌ ಲಿವಿಂಗ್‌ಸ್ಟೋನ್‌ ಭರ್ಜರಿ ಬ್ಯಾಟ್‌ ಬೀಸಿದರು. ಗುಜರಾತ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಇವರು, ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಅರ್ಧಶತಕವನ್ನು ಬಾರಿಸಿದರು. ಆಡಿದ 40 ಎಸೆತಗಳಲ್ಲಿ ಐದು ಭರ್ಜರಿ ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ 54 ರನ್‌ ಸಿಡಿಸಿದರು. ಆ ಮೂಲಕ ಆರ್‌ಸಿಬಿ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.



ಸ್ಕೋರ್‌ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಲ್ಲಿ 169-8 (ಲಿಯಾಮ್‌ ಲಿವಿಂಗ್‌ಸ್ಟೋನ್‌ 54, ಜಿತೇಶ್‌ ಶರ್ಮಾ 33, ಟಿಮ್‌ ಡೇವಿಡ್‌ 32; ಮೊಹಮ್ಮದ್‌ ಸಿರಾಜ್‌ 19 ಕ್ಕೆ 3, ಸಾಯಿ ಕಿಶೋರ್‌ 22ಕ್ಕೆ 2

ಗುಜರಾತ್‌ ಟೈಟನ್ಸ್:‌ 17.5 ಓವರ್‌ಗಳಲ್ಲಿ 170-2 (ಜೋಸ್‌ ಬಟ್ಲರ್‌ 73*, ಸಾಯಿ ಸುದರ್ಶನ್‌ 49*, ಶೆರ್ಫೆನ್‌ ಋದರ್‌ಫೋರ್ಡ್‌ 30*)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಮೊಹಮ್ಮದ್‌ ಸಿರಾಜ್‌