Champions Trophy 2025: ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಸಮಾರಂಭಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಗೈರಾಗಿದ್ದೇಕೆ?
Champions Trophy closing ceremony: ಸಮಾರೋಪ ಸಮಾರಂಭಕ್ಕೆ ತಮ್ಮ ಸಿಇಒ ಅವರನ್ನು ಏಕೆ ಆಹ್ವಾನಿಸಲಿಲ್ಲ ಎಂಬ ಬಗ್ಗೆ ಪಿಸಿಬಿ ಐಸಿಸಿಗೆ ದೂರು ನೀಡುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಒಟ್ಟಾರೆ ಟೂರ್ನಿ ಮುಕ್ತಾಯಗೊಂಡರೂ ಕೂಡ ವಿವಾದ ಮತ್ತು ಕಿತ್ತಾಟ ಮುಕ್ತಾಯಗೊಳ್ಳುವಂತೆ ಕಾಣುತ್ತಿಲ್ಲ.


ದುಬೈ: 29 ವರ್ಷ ಬಳಿಕ ಐಸಿಸಿ ಟೂರ್ನಿಯ ಆತಿಥ್ಯ ಸಿಕ್ಕಾಗ, ಬಿಸಿಸಿಐ ತೀವ್ರ ವಿರೋಧದ ನಡುವೆಯೂ ಪಟ್ಟು ಹಿಡಿದು ಆತಿಥ್ಯ ಹಕ್ಕು ಉಳಿಸಿಕೊಂಡಿದ್ದ ಪಾಕಿಸ್ತಾನ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ(Champions Trophy) ಒಂದೂ ಗೆಲುವು ಕಾಣದೆ ತನ್ನ ಅಭಿಯಾನ ಮುಕ್ತಾಯಗೊಳಿಸಿತ್ತು. ಭಾರತ ತಂಡ ಫೈನಲ್ ಪ್ರವೇಶಿಸಿದ ಕಾರಣ ಫೈನಲ್ ಪಂದ್ಯದ ಆತಿಥ್ಯ ಕೂಡ ಪಾಕ್‌ನಿಂದ ದುಬೈಗೆ ಸ್ಥಳಾತಂಗೊಂಡಿತ್ತು. ಇದೀಗ ಫೈನಲ್‌ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಕ್ ಕ್ರಿಕೆಟ್ ಮಂಡಳಿಯ(PCB) ಕನಿಷ್ಠ ಒಬ್ಬ ಸದಸ್ಯನೂ ಕೂಡ ಭಾಗವಹಿಸದೇ ಇರುವುದು ಬಾರೀ ಚರ್ಚೆಗೆ ಕಾರಣವಾಗಿದೆ. ಕೆಲ ಮೂಲಗಳ ಪ್ರಕಾರ ಫೈನಲ್ ಆತಿಥ್ಯ ಕೈತಪ್ಪಿದ ಸಿಟ್ಟಿನಿಂದ ಪಾಕ್ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಫೈನಲ್ ಸಮಾರಂಭದಲ್ಲಿ ಪಾಲ್ಗೊಳಲಿಲ್ಲ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಕೊನೆ ಬಾರಿಗೆ ಐಸಿಸಿ ಟೂರ್ನಿಯೊಂದು ನಡೆದಿದ್ದು 1996ರಲ್ಲಿ. ಭಾರತ ಹಾಗೂ ಶ್ರೀಲಂಕಾದ ಜತೆ ಪಾಕಿಸ್ತಾನ ಏಕದಿನ ವಿಶ್ವಕಪ್‌ಗೆ ಜಂಟಿ ಆತಿಥ್ಯ ವಹಿಸಿತ್ತು. 29 ವರ್ಷದ ಬಳಿಕ ಐಸಿಸಿ ಟೂರ್ನಿಗೆ ಆತಿಥ್ಯ ವಹಿಸಿದರೂ ಫೈನಲ್ ಪಂದ್ಯವನ್ನು ತನ್ನ ನೆಲದಲ್ಲಿ ನಡೆಸಲು ಆಗದ ಸಿಟ್ಟಿನಲ್ಲಿ ಪಾಕ್ ಫೈನಲ್ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ ಎನ್ನಲಾಗಿದೆ.
ಆದರೆ, ಪಿಟಿಐ ವರದಿಯ ಪ್ರಕಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ, ಫೆಡರಲ್ ಆಂತರಿಕ ಸಚಿವರಾಗಿರುವ ಮೊಹ್ಸಿನ್ ನಖ್ವಿಗೆ ಸಭೆಯೊಂದು ಇದ್ದ ಕಾರಣ ಅವರು ಪಿಸಿಬಿಯ ಸಿಇಒ ಅವರನ್ನು ಸಮಾರೋಪ ಸಮಾರಂಭಕ್ಕೆ ಕಳುಹಿಸಿದ್ದರಂತೆ. ಆದರೆ ಐಸಿಸಿ ಅಧಿಕಾರಿಗಳು ಅವರಿಗೆ ಆಹ್ವಾನ ನೀಡಿಲ್ಲ ಎಂದು ಪಿಸಿಬಿ ತಿಳಿಸಿರುವುದಾಗಿ ಪಿಟಿಐ ತಿಳಿಸಿದೆ.
ಇದನ್ನೂ ಓದಿ IND vs NZ Final: ಚಾಂಪಿಯನ್ ಟ್ರೋಫಿ ಗೆದ್ದ ಭಾರತ ತಂಡವನ್ನು ಅಭಿನಂದಿಸಿದ ಮೋದಿ, ಸಿದ್ದರಾಮಯ್ಯ
ಸಮಾರೋಪ ಸಮಾರಂಭಕ್ಕೆ ತಮ್ಮ ಸಿಇಒ ಅವರನ್ನು ಏಕೆ ಆಹ್ವಾನಿಸಲಿಲ್ಲ ಎಂಬ ಬಗ್ಗೆ ಪಿಸಿಬಿ ಐಸಿಸಿಗೆ ದೂರು ನೀಡುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಒಟ್ಟಾರೆ ಟೂರ್ನಿ ಮುಕ್ತಾಯಗೊಂಡರೂ ಕೂಡ ವಿವಾದ ಮತ್ತು ಕಿತ್ತಾಟ ಮುಕ್ತಾಯಗೊಳ್ಳುವಂತೆ ಕಾಣುತ್ತಿಲ್ಲ.
ಬದ್ಧವೈರಿ ಪಾಕಿಸ್ತಾನದ ನೆಲಕ್ಕೆ ತನ್ನ ಕ್ರಿಕೆಟ್ ತಂಡ ಕಾಲಿಡಲು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ ಕಾರಣ, ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಬಿಸಿಸಿಐ ನಿರಾಕರಿಸಿತ್ತು. ಹೀಗಾಗಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗಿತ್ತು. ಇಡೀ ಟೂರ್ನಿಯನ್ನೇ ಬೇರೆ ದೇಶಕ್ಕೆ ಸ್ಥಳಾಂತರಿಸಬೇಕು ಎನ್ನುವುದು ಬಿಸಿಸಿಐ ಮುಂದಿಟ್ಟ ಬೇಡಿಕೆಗಳಲ್ಲಿ ಒಂದಾಗಿತ್ತು. ದಕ್ಷಿಣ ಆಫ್ರಿಕಾ ಅಥವಾ ಐಸಿಸಿಯ ಕೇಂದ್ರ ಕಚೇರಿ ಇರುವ ಯುಎಇಗೆ ಪಂದ್ಯಾವಳಿ ಶಿಫ್ಟ್ ಆಗಬಹುದು ಎನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ, ಬಹಳಷ್ಟು ಕಸರತ್ತು ಮಾಡಿ ಪಿಸಿಬಿ ಆತಿಥ್ಯ ಹಕ್ಕು ಉಳಿಸಿಕೊಂಡಿತ್ತು.