ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಮನಸ್ಸಿನ ಮೌಲ್ಯಮಾಪನವು ಸಾಧ್ಯವೇ ?

ನಮ್ಮ ಮನಸ್ಸು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಮನಸ್ಸು ಎನ್ನುವುದು ಅಮೂರ್ತ. ಆದರೆ ಮನಸ್ಸು ಎನ್ನುವುದು ಇದೆ ಎಂದು ನಮಗೆ ಗೊತ್ತು. ಆದರೆ ಎಲ್ಲಿದೆ ಎಂದರೆ, ನಮಗೆ ಗೊತ್ತಿಲ್ಲ, ಬಹುಶಃ ಮಿದುಳಿ ನಲ್ಲಿ ಇದ್ದರೆ ಇರಬಹುದು ಎಂಬ ಅನುಮಾನದ ಉತ್ತರವನ್ನು ನೀಡಬೇಕಾಗುತ್ತದೆ. ಮನಸ್ಸು ಇರುವು ದರಿಂದ ನಾವು ಯೋಚಿಸುತ್ತೇವೆ.

ಮನಸ್ಸಿನ ಮರುಮೌಲ್ಯಮಾಪನವು ಸಾಧ್ಯವೇ ?

ಅಂಕಣಕಾರ ಡಾ.ನಾ.ಸೋಮೇಶ್ವರ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ನಾನು ಯಾರು? ಈ ಪ್ರಶ್ನೆಗೆ ಸ್ಥೂಲವಾಗಿ ‘ನಾನು ಎಂದರೆ ನನ್ನ ದೇಹ ಮತ್ತು ಮನಸ್ಸು’ ಎಂದು ಉತ್ತರವನ್ನು ನೀಡಬಹುದು. ನಮ್ಮ ದೇಹವು ನಮ್ಮ ಕಣ್ಣಿಗೆ ಕಾಣುತ್ತದೆ. ನಮ್ಮ ದೇಹಕ್ಕೆ ಸಂಬಂಧಿ ಸಿದ ವಿದ್ಯಮಾನಗಳನ್ನು ಸೂಕ್ತ ಸಾಧನ ಇಲ್ಲವೇ ವಿಧಾನದಿಂದ ಅಳೆಯಬಹುದು. ದೊರೆತ ಫಲಿ ತಾಂಶಗಳ ಮೌಲ್ಯಮಾಪನವನ್ನು ಮಾಡಬಹುದು. ಹೆಚ್ಚು ಕಡಿಮೆಯಾಗಿದ್ದಲ್ಲಿ ಸೂಕ್ತ ಚಿಕಿತ್ಸೆ ಯಿಂದ ಸರಿಪಡಿಸಬಹುದು. ಉದಾಹರಣೆಗೆ ದೇಹದ ತಾಪಮಾನ, ರಕ್ತದ ಒತ್ತಡ, ರಕ್ತಶರ್ಕರದ ಪ್ರಮಾಣ, ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಇತ್ಯಾದಿಗಳನ್ನು ಕರಾರುವಾಕ್ಕಾಗಿ ಅಳೆಯ ಬಹುದು ಹಾಗೂ ಅವುಗಳ ಮೌಲ್ಯಮಾಪನವನ್ನು ಮಾಡಬಹುದು. ಜ್ವರ ಹೆಚ್ಚಿದ್ದಲ್ಲಿ ಜ್ವರಹಾರಕ ಗುಳಿಗೆಯನ್ನು, ರಕ್ತದೊತ್ತಡ ಅಧಿಕವಾಗಿದ್ದಲ್ಲಿ ಒತ್ತಡವಿಳಿಸುವ ಔಷಧಗಳನ್ನು, ಸಕ್ಕರೆ ಅಧಿಕ ವಾಗಿದ್ದಲ್ಲಿ ಅದನ್ನು ತಹಬಂದಿಗೆ ತರುವಂಥ ಮಾತ್ರೆಯನ್ನೋ ಇಂಜೆಕ್ಷನ್ ಅನ್ನೋ ತೆಗೆದುಕೊಳ್ಳ ಬಹುದು. ನಮ್ಮ ಇಡೀ ದೇಹದ ಆರೋಗ್ಯ ಮೌಲ್ಯಮಾಪನವು ಇಂದು ಸಾಧ್ಯವಾಗಿದೆ.

ನಮ್ಮ ಮನಸ್ಸು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಮನಸ್ಸು ಎನ್ನುವುದು ಅಮೂರ್ತ. ಆದರೆ ಮನಸ್ಸು ಎನ್ನುವುದು ಇದೆ ಎಂದು ನಮಗೆ ಗೊತ್ತು. ಆದರೆ ಎಲ್ಲಿದೆ ಎಂದರೆ, ನಮಗೆ ಗೊತ್ತಿಲ್ಲ, ಬಹುಶಃ ಮಿದುಳಿನಲ್ಲಿ ಇದ್ದರೆ ಇರಬಹುದು ಎಂಬ ಅನುಮಾನದ ಉತ್ತರವನ್ನು ನೀಡಬೇಕಾಗುತ್ತದೆ. ಮನಸ್ಸು ಇರುವುದರಿಂದ ನಾವು ಯೋಚಿಸುತ್ತೇವೆ. ಭಾವನೆಗಳನ್ನು ವ್ಯಕ್ತಪಡಿಸುತ್ತೇವೆ. ಹಿಂದಿನ ಅನುಭವಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ.

ಇದನ್ನೂ ಓದಿ: Dr N Someshwara Column: ಪೋಲಿ ಮಾತುಗಳನ್ನಾಡಿಸುವ ಟೂರೆಟ್‌ ಲಕ್ಷಣಾವಳಿ

ಮುಂದೇನಾಗುತ್ತದೆಯೋ ಎಂದು ಕಳವಳಗೊಳ್ಳುತ್ತೇವೆ. ಭವಿಷ್ಯವು ಸುಖಮಯವಾಗಿರಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳುತ್ತೇವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಮನಸ್ಸಿನ ಮುಖ್ಯ ವ್ಯಾಪಾರಗಳು. ಬುದ್ಧಿವಂತಿಕೆ, ದಡ್ಡತನ, ಚಾಣಾಕ್ಷತನ, ವಂಚಕತನ, ಸ್ವಾರ್ಥತೆ ಮುಂತಾ ದವು ನಮ್ಮ ಬದುಕನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುವ ಮನಸ್ಸಿನ ಆಯಾಮಗಳು. ಪ್ರೀತಿ, ಪ್ರೇಮ, ದೇಶಭಕ್ತಿ, ಭಗವಂತನ ಅಸ್ತಿತ್ವದಲ್ಲಿ ನಂಬಿಕೆಗಳು ನಮ್ಮನ್ನು ರೂಪಿಸುತ್ತವೆ. ಇವು ಗಳನ್ನು ಅಳೆಯಲು ಸಾಧ್ಯವೆ? ಇವುಗಳ ಮೌಲ್ಯಮಾಪನವನ್ನು ಮಾಡಲು ಸಾಧ್ಯವೆ? ಇವು ಏರು ಪೇರಾಗಿದ್ದರೆ ಸೂಕ್ತ ಚಿಕಿತ್ಸೆಯಿಂದ ಇವುಗಳನ್ನು ಹತೋಟಿಯಲ್ಲಿಡಲು ಸಾಧ್ಯವೆ? ನಮ್ಮ ದೇಹದ ಆರೋಗ್ಯ ತಪಾಸಣೆಯನ್ನು ವರ್ಷಕ್ಕೊಮ್ಮೆ ಮಾಡುವಂತೆ, ಮನಸ್ಸಿನ ಆರೋಗ್ಯವನ್ನು ತಪಾಸಣೆ ಮಾಡಲು ಸಾಧ್ಯವೆ? ಈ ಪ್ರಶ್ನೆಗಳಿಗೆ ‘ಇಲ್ಲ’ ಎಂಬ ಸರಳ ಉತ್ತರವನ್ನು ನೀಡಬೇಕಾಗು ತ್ತದೆ.

ನಮಗೆ ನಮ್ಮ ದೇಹದ ಬಗ್ಗೆ ತಿಳಿದಿರುವಷ್ಟು, ನಮ್ಮ ಮನಸ್ಸಿನ ಬಗ್ಗೆ ತಿಳಿದಿಲ್ಲ ಎನ್ನಬೇಕಾಗುತ್ತದೆ. ನಮ್ಮ ಮನಸ್ಸು ಎನ್ನುವುದು ಅಮೂರ್ತವಾಗಿದ್ದರೂ, ನಮ್ಮ ವರ್ತನೆಗಳನ್ನು ವೀಕ್ಷಿಸುವ, ಹೋಲಿ ಸುವ, ನಿಯಂತ್ರಿತ ಪ್ರಯೋಗಗಳಿಗೆ ಒಳಪಡಿಸಿ ಅವುಗಳ ಮೌಲ್ಯಮಾಪನವನ್ನು ಮಾಡುವ ಪ್ರಯತ್ನಗಳು ನಡೆದಿವೆ ಹಾಗೂ ಇಂದಿಗೂ ನಡೆಯುತ್ತಿವೆ ಎನ್ನಬಹುದು.

ಈ ವಿಜ್ಞಾನವನ್ನು ‘ಪ್ರಯೋಗ ಪರೀಕ್ಷಾ ಮನೋವಿಜ್ಞಾನ’ ಅಥವಾ ‘ಎಕ್ಸ್‌ಪರಿಮೆಂಟಲ್ ಸೈಕಾ ಲಜಿ’ ಎಂದು ಕರೆಯಬಹುದು. ಇದರ ತಾಯಿಬೇರುಗಳೆಂದರೆ ತತ್ತ್ವಶಾಸ್ತ್ರ, ಅಂಗಕ್ರಿಯಾಶಾಸ್ತ್ರ ಮತ್ತು ವೈಜ್ಞಾನಿಕ ಮನೋಪ್ರವೃತ್ತಿ. ಮನಸ್ಸು ಎನ್ನುವುದು ಇಂದು ವಿಜ್ಞಾನದ ಒಂದು ಶಾಖೆ ಯಾಗಿದೆ.

ಇದನ್ನು ಮನೋವಿಜ್ಞಾನ ಅಥವಾ ಸೈಕಾಲಜಿ ಎಂದೂ, ಮನಸ್ಸಿಗೆ ಬರುವ ರೋಗಗಳನ್ನು ಹಾಗೂ ಅವುಗಳ ಚಿಕಿತ್ಸೆಯನ್ನು ಕುರಿತು ಮನೋವೈದ್ಯಕೀಯ ಅಥವಾ ಸೈಕಿಯಾಟ್ರಿ ಎಂದೂ ಕರೆಯು ತ್ತಿದ್ದೇವೆ. ಇವು ಇತ್ತೀಚಿನ ವಿಜ್ಞಾನ ಶಾಖೆಗಳು. ಆರಂಭದ ದಿನಗಳಲ್ಲಿ ಮನಸ್ಸಿನ ಅಧ್ಯಯನವನ್ನು ತತ್ತ್ವಶಾಸ್ತ್ರದ ವ್ಯಾಪ್ತಿಯಲ್ಲಿ ಮಾಡುತ್ತಿದ್ದೆವು.

ಗ್ರೀಸಿನ ಪ್ರಾಚೀನ ತತ್ತ್ವಜ್ಞಾನಿಗಳಾದ ಪ್ಲೇಟೋ ಮತ್ತು ಅರಿಸ್ಟಾಟಲ್, ಮನುಷ್ಯನ ಮನಸ್ಸು ಹಾಗೂ ವರ್ತನೆಗಳ ಬಗ್ಗೆ ಅಧ್ಯಯನವನ್ನು ಮಾಡಿದ ಆದ್ಯರು. ಪ್ಲೇಟೋ ವೈಚಾರಿಕತೆಗೆ ಆದ್ಯತೆ ನೀಡಿದ. “ಮನುಷ್ಯನ ಬುದ್ಧಿಶಕ್ತಿ, ಮನಸ್ಸು ಹಾಗೂ ವರ್ತನೆಗಳು ಜನ್ಮದತ್ತವಾಗಿ ಬರುತ್ತವೆ" ಎಂದ. ಅರಿಸ್ಟಾಟಲ್ ಇದಕ್ಕೆ ತದ್ವಿರುದ್ಧವಾಗಿ, “ಹುಟ್ಟುವಾಗ ಮಗುವಿನ ಮನಸ್ಸು ಎನ್ನುವುದು ಸ್ಲೇಟಿನ ಹಾಗೆ ಸ್ವಚ್ಛವಾಗಿರುತ್ತದೆ (ಟ್ಯಾಬುಲ ರಾಸ). ಆ ಮಗುವು ತನ್ನ ಜೀವನದಲ್ಲಿ ಏನನ್ನು ಕಲಿಯು ತ್ತದೆಯೋ, ಅದು ಆ ಮಗುವಿನ ಬುದ್ಧಿ, ಮನಸ್ಸು ಹಾಗೂ ವರ್ತನೆಗಳನ್ನು ರೂಪಿಸುತ್ತದೆ" ಎಂದ.

14-17ನೆಯ ಶತಮಾನಗಳ ನಡುವೆ ಯೂರೋಪಿನಲ್ಲಿ ನವೋದಯವು (ರಿನೇಸಾನ್ಸ್) ಆರಂಭ ವಾಯಿತು. ಈ ಅವಽಯಲ್ಲಿ ರೆನೆ ಡೆಸ್ಕಾರ್ಟೆ ದ್ವೈತವಾದವನ್ನು (ಡ್ಯೂಯಲಿಸಂ) ಮಂಡಿಸಿದ. ಈ ಸಿದ್ಧಾಂತದ ಅನ್ವಯ, ಅವನು ಮನಸ್ಸು ಹಾಗೂ ದೇಹ ಬೇರೆ ಬೇರೆ ಎಂದು ಸಾಧಿಸಿದ. ಆದರೆ ಬ್ರಿಟನ್ನಿನ ಜಾನ್ ಲೋಕೆ, ಜಾರ್ಜ್ ಬರ್ಕಲೆ ಮತ್ತು ಡೇವಿಡ್ ಹ್ಯೂಮ್ ಮುಂತಾದವರು, ಒಬ್ಬ ಮನುಷ್ಯನು ವಿವಿಧ ಇಂದ್ರಿಯಗಳ ಮೂಲಕ ಪಡೆಯುವ ಸಂವೇದನೆಯು ಅವನ ಜ್ಞಾನವನ್ನು, ಬುದ್ಧಿವಂತಿಕೆಯನ್ನು ಹಾಗೂ ವರ್ತನೆಗಳನ್ನು ನಿಯಂತ್ರಿಸುತ್ತದೆ ಎಂದರು.

ವ್ಯಕ್ತಿಗಳ ವರ್ತನೆಯನ್ನು ಅಧ್ಯಯನ ಮಾಡಬೇಕಾದ ಅಗತ್ಯವನ್ನು ಎತ್ತಿ ತೋರಿಸಿದರು. ಜರ್ಮ ನಿಯ ಅಂಗಕ್ರಿಯಾ ವಿಜ್ಞಾನಿ ಹಾಗೂ ತತ್ತ್ವಶಾಸಜ್ಞನಾಗಿದ್ದ ವಿಲ್ಹೆಲ್ಮ್ ವುಂಟ್ (1832-1920) ಜರ್ಮ ನಿಯ ಲೀಪ್ಜೀಗ್ ವಿಶ್ವವಿದ್ಯಾಲಯದಲ್ಲಿ ಪ್ರಪ್ರಥಮ ಪ್ರಯೋಗ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಿದ. ಇದರೊಡನೆ ಮನೋವಿಜ್ಞಾನವು ತತ್ತ್ವಶಾಸ್ತ್ರದಿಂದ ಬೇರ್ಪಟ್ಟಿತು. ಸ್ವತಂತ್ರ ವಿಜ್ಞಾನ ಶಾಖೆಯಾಗಿ ಬೆಳೆಯಿತು.

ವುಂಟ್ ಮೊದಲು ‘ಪ್ರಜ್ಞೆ’ ಅಥವಾ ‘ಕಾನ್ಷಿಯಸ್ನೆಸ್’ ಅನ್ನು ತನ್ನ ಪ್ರಯೋಗಕ್ಕೆ ಆಯ್ಕೆ ಮಾಡಿ ಕೊಂಡ. ಆಯ್ದ ಹಾಗೂ ತರಬೇತಿಯನ್ನು ಪಡೆದ ವ್ಯಕ್ತಿಗಳು ತಮ್ಮ ಅಂತರ್ವೀಕ್ಷಣೆಯ (ಇಂಟ್ರೋ ಸ್ಪೆಕ್ಷನ್) ಮೂಲಕ ಉತ್ತರಗಳನ್ನು ನೀಡಬೇಕಾಗಿತ್ತು. ವುಂಟ್ ಒಂದು ಪ್ರಚೋದನೆಯನ್ನು ನೀಡು ತ್ತಿದ್ದನು. ಆ ಪ್ರಯೋಗಪಟುಗಳು ಪ್ರಚೋದನೆಗೆ ತಕ್ಕ ಉತ್ತರವನ್ನು ನೀಡುತ್ತಿದ್ದರು.

ಪ್ರಯೋಗಪಟುಗಳು ನೀಡುತ್ತಿದ್ದ ಉತ್ತರಗಳ ಪ್ರತಿವರ್ತನಾ ಸಮಯ (ರಿಯಾಕ್ಷನ್ ಟೈಮ್) ಏಕಾ ಗ್ರತೆ, ಗ್ರಹಿಕೆ ಹಾಗೂ ಮಾನಸಿಕ ವರ್ತನೆಗಳನ್ನು ಕ್ರಮಬದ್ಧವಾಗಿ ವುಂಟ್ ದಾಖಲಿಸಿದ. ಆದರೆ ಅವನ ಸಮಕಾಲೀನ ಹಾಗೂ ನಂತರದ ವಿಜ್ಞಾನಿಗಳು ಈ ‘ಅಂತರ್ವೀಕ್ಷಣೆ’ಯ ವಿಧಾನವನ್ನು ಟೀಕಿಸಿದರು. ಏಕೆಂದರೆ ಅಂತರ್ವೀಕ್ಷಣೆಯೆನ್ನುವುದು ‘ವೈಯುಕ್ತಿಕ ಅನುಭವ’ ಮಾತ್ರವಾಗಲು ಸಾಧ್ಯ.

ಹಾಗಾಗಿ ಇವನ್ನು ಆಧರಿಸಿ ಸಮಷ್ಟಿ ನಿರ್ಣಯಕ್ಕೆ ಬರುವುದು ಅಸಾಧ್ಯ ಹಾಗೂ ಅಸಾಧು ಎಂದರು. ಆದರೆ ವುಂಟ್ ಬಹಳ ಕಟ್ಟುನಿಟ್ಟಾಗಿ ತನ್ನ ಪ್ರಯೋಗವನ್ನು ನಡೆಸಿದ್ದ. ಇವನ ಈ ಪ್ರಯೋಗವು ಮುಂದೆ ನಡೆದ ಎಲ್ಲ ಮನೋವೈಜ್ಞಾನಿಕ ಪ್ರಯೋಗ ಪರೀಕ್ಷೆಗಳಿಗೆ ಮಾರ್ಗದರ್ಶನವನ್ನು ನೀಡಿತು. ಇವನನ್ನು ‘ಪ್ರಯೋಗ ಪರೀಕ್ಷಾ ಮನೋವಿಜ್ಞಾನದ ಪಿತಾಮಹ’ ಎಂದು ಕರೆಯುವು ದುಂಟು.

ಹರ್ಮನ್ ಎಬಿಂಗಾಸ್ (1850-1909) ಪ್ರಯೋಗ ಪರೀಕ್ಷಾ ಮನೋವಿಜ್ಞಾನದ ಧ್ರುವತಾರೆ. ಈತನು ಮನುಷ್ಯರ ನೆನಪಿನ ಶಕ್ತಿಯ ಬಗ್ಗೆ ಮೊದಲ ಬಾರಿಗೆ ಪ್ರಯೋಗ ಪರೀಕ್ಷೆಗಳನ್ನು ನಡೆಸಿದ. ಕಲಿಕೆ ಎಂದರೆ ಏನು? ಕಲಿತದ್ದನ್ನು ಏಕೆ ಮರೆಯುತ್ತೇವೆ, ಕಲಿತದ್ದನ್ನು ಮರೆಯಬಾರದು ಎಂದರೆ ಏನು ಮಾಡಬೇಕು ಎನ್ನುವ ವಿಷಯಗಳನ್ನು ಕುರಿತು ಅದ್ಭುತ ಪ್ರಯೋಗಗಳನ್ನು ನಡೆಸಿ ತನ್ನ ಸಿದ್ಧಾಂತ ವನ್ನು ಮಂಡಿಸಿದ.

ಇವನ ನಂತರ ಬಂದ ಅನೇಕ ಮನೋವಿಜ್ಞಾನಿಗಳು ಈತನ ಸಿದ್ಧಾಂತವನ್ನು ಮತ್ತೆ ಮತ್ತೆ ಪರೀಕ್ಷೆಗೆ ಒಡ್ಡಿದರು. ಇವನ ಸಿದ್ಧಾಂತದಲ್ಲಿ ಹುರುಳಿರುವುದನ್ನು ಎತ್ತಿ ತೋರಿಸಿದರು. ಹಾಗಾಗಿ ಇಂದಿಗೂ, ಇವನ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಕಲಿಕೆಯ ವಿಧಾನಗಳನ್ನು ರೂಪಿಸುತ್ತಿರುವುದು ಮನನೀಯ ವಾಗಿದೆ.

ಗುಸ್ತಾವ್ ಥಿಯೋಡರ್ ಫೆಚ್ನರ್ (1801-1887) ಜರ್ಮನಿಯ ಭೌತವಿಜ್ಞಾನಿ ಹಾಗೂ ತತ್ತ್ವ ಶಾಸ್ತ್ರಜ್ಞ ನಾಗಿದ್ದ. ಇವನು ನಮ್ಮ ಪರಿಸರದಿಂದ ದೊರೆಯುವ ಒಂದು ಪ್ರಚೋದನೆಯು (ಸ್ಟಿಮ್ಯುಲಸ್) ಯಾವ ಪ್ರಮಾಣದ ಸಂವೇದನೆಯನ್ನು (ಸಂವೇದನೆ) ಉತ್ಪಾದಿಸುತ್ತದೆ ಹಾಗೂ ಅದನ್ನು ಒಬ್ಬ ವ್ಯಕ್ತಿಯು ಯಾವ ರೀತಿ ಗ್ರಹಿಸಬಲ್ಲ ಎನ್ನುವುದರ ಬಗ್ಗೆ ಅಧ್ಯಯನವನ್ನು ಮಾಡಿದ.

ಎಲಿಮೆಂಟ್ಸ್ ಆಫ್ ಸೈಕೋಫಿಸಿಕ್ಸ್ (ಮನೋಭೌತವಿಜ್ಞಾನದ ಮೂಲತತ್ತ್ವಗಳು) ಎಂಬ ಪುಸ್ತಕ ವನ್ನು 1860ರಲ್ಲಿ ಪ್ರಕಟಿಸಿದ. ಇದಕ್ಕೆ ಸಂಬಂಧಪಟ್ಟ ಒಂದು ಸೂತ್ರವನ್ನು ನೀಡಿದ. ಆ ಸೂತ್ರವು ಇಂದಿಗೂ ಮನೋಭೌತವಿಜ್ಞಾನದ ಪ್ರಯೋಗಗಳಲ್ಲಿ ಉಪಯುಕ್ತವಾಗಿದೆ.

ಫ್ರಾನ್ಸಿಸ್ಕಸ್ ಕಾರ್ನೀಲಿಯಸ್ ಡಾಂಡರ್ಸ್ (1818-1889) ಡಚ್ ನೇತ್ರವೈದ್ಯ ಹಾಗೂ ಅಂಗಕ್ರಿಯಾ ವಿಜ್ಞಾನಿ. ಈತನು ಮಿದುಳಿನ ‘ಪ್ರತಿವರ್ತನಾ ಕಾಲ’ವನ್ನು (ರಿಯಾಕ್ಷನ್ ಟೈಮ್) ಅಳೆದ ಮೊದಲಿಗ. ತೆನಾಲಿರಾಮನ ಬೆಕ್ಕು ಬಿಸಿಹಾಲಿಗೆ ತನ್ನ ಬಾಯಿಯನ್ನು ಹಾಕಿ ಸುಟ್ಟುಕೊಂಡಿತು. ಬೆಕ್ಕು ಯಾವಾ ಗ ಬಿಸಿಹಾಲಿಗೆ ಬಾಯಿಯನ್ನು ಹಾಕಿತು ಹಾಗೂ ಎಷ್ಟು ಹೊತ್ತಿನ ನಂತರ ತನ್ನ ಮೂತಿ ಯನ್ನು ಹಿಂತೆಗೆದುಕೊಂಡಿತು ಎನ್ನುವುದನ್ನು ಲೆಕ್ಕ ಮಾಡುವ ವಿಧಾನ.

ಪ್ರಕೃತಿಯ ಎಲ್ಲ ಪ್ರಚೋದನೆಗಳಿಗೆ ನಾವು ಪ್ರತಿಕ್ರಿಯೆಯನ್ನು ಎಷ್ಟು ತ್ವರಿತವಾಗಿ ಅಥವಾ ತಡ ವಾಗಿ ನೀಡುತ್ತೇವೆ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಹಾಗಾಗಿ ಇದನ್ನು ಅಳೆಯುವು ದರ ಮೂಲಕ ಮನಸ್ಸಿನ ವ್ಯಾಪಾರ-ವ್ಯವಹಾರಗಳನ್ನು ತಿಳಿಯಬಹುದೆಂದು ಪ್ರಾಯೋಗಿಕ ಪ್ರಯೋಗ ವಿಜ್ಞಾನಕ್ಕೆ ಭದ್ರವಾದ ತಳಪಾಯವನ್ನು ಹಾಕಿದ. ಅದು ಇಂದಿಗೂ ಅಸ್ತಿತ್ವದಲ್ಲಿದೆ.

20ನೆಯ ಶತಮಾನದ ಆರಂಭದಲ್ಲಿ ‘ರಚನಾತ್ಮಕವಾದ’ ಅಥವಾ ‘ಸ್ಟ್ರಕ್ಚರಲಿಸಂ’ ಹಾಗೂ ಕಾರ್ಯಾ ತ್ಮಕವಾದ’ ಅಥವಾ ‘ಫಂಕ್ಷನಲಿಸಂ’ ಬೆಳಕಿಗೆ ಬಂದವು. ಮನಸ್ಸಿನ ‘ರಚನೆ’ಯನ್ನು ಅಧ್ಯಯನ ಮಾಡಬೇಕು ಎಂದು ಮೊದಲನೆಯವಾದವು ಹೇಳಿದರೆ, ಎರಡನೆಯವಾದವು ಮನಸ್ಸಿನ ‘ಕಾರ್ಯ’ ವನ್ನು ಅರಿತರೆ ಸಾಕು ಎಂದು ವಾದಿಸಿತು.

ರಚನಾತ್ಮಕವಾದವನ್ನು ವುಂಟ್‌ನ ಶಿಷ್ಯನಾಗಿದ್ದ ಎಡ್ವರ್ಡ್ ಬಿ. ಟಿಟ್ಚನರ್ (1867-1927) ಮಂಡಿ ಸಿದ. ವುಂಟ್ ಮಂಡಿಸಿದ ಅಂತರ್ವೀಕ್ಷಣೆಯ ಮೂಲಕ ವ್ಯಕ್ತಿಯು ತನ್ನ ಅನುಭವಗಳನ್ನು ದಾಖ ಲಿಸಬೇಕಿತ್ತು. ಉದಾಹರಣೆಗೆ ಒಂದು ಗುಲಾಬಿ ಹೂವನ್ನು ನೋಡಿದಾಗ, ಅದರ ಬಣ್ಣ, ರೂಪ, ವಾಸನೆ, ಸ್ಪರ್ಶ ಇತ್ಯಾದಿಗಳೆಲ್ಲ ಆ ನೋಡುವಿಕೆಯಲ್ಲಿ ಅಡಕವಾಗಿರುತ್ತವೆ. ಕಾರ್ಯಾತ್ಮಕ ವಾದ ವನ್ನು ಮಂಡಿಸಿದ ವಿಲಿಯಮ್ ಜೇಮ್ಸ್, ಚಾರ್ಲ್ಸ್ ಡಾರ್ವಿನ್ನನ ವಿಚಾರಧಾರೆಯಿಂದ ಪ್ರಭಾವಿತ ನಾಗಿದ್ದ.

ಹಾಗಾಗಿ ‘ಮನಸ್ಸು ಒಬ್ಬ ವ್ಯಕ್ತಿಗೆ ಯಾವ ರೀತಿಯಲ್ಲಿ ಉಪಯುಕ್ತ’ ಎನ್ನುವುದಕ್ಕೆ ಆದ್ಯತೆಯನ್ನು ನೀಡಿದ. ಗುಲಾಬಿ ಹೂವಿನ ಬಣ್ಣ, ರೂಪ, ವಾಸನೆ, ಸ್ಪರ್ಶಗಳನ್ನು ತೆಗೆದುಕೊಂಡು ಏನು ಮಾಡ ಬೇಕು? ಅದರಿಂದ ನಮಗೆ ಏನು ಉಪಯೋಗ? ಗುಲಾಬಿ ಹೂವನ್ನು ಪ್ರೇಯಸಿಗೆ ಕೊಡಬಹುದು ಇಲ್ಲವೇ ಗುಲ್ಕನ್ ಮಾಡಿ ತಿನ್ನಬಹುದು ಎನ್ನುವುದು ಮುಖ್ಯ ಎಂದ. ಮನಸ್ಸು ಯಾಕೆ ಹೀಗೆ ವರ್ತಿಸುತ್ತದೆ ಎನ್ನುವುದನ್ನು ತಿಳಿಯುವುದೇ ಪ್ರಯೋಗ ಪರೀಕ್ಷಾ ಮನೋವಿಜ್ಞಾನದ ಆದ್ಯತೆ ಯೆಂದ.

20ನೆಯ ಶತಮಾನದ ಆರಂಭದಲ್ಲಿ ವರ್ತನಾ ಮನೋವಿಜ್ಞಾನವು ಮುಂಚೂಣಿಯಲ್ಲಿತ್ತು. ಜಾನ್ ಬ್ರಾಡಸ್ ವ್ಯಾಟ್ಸನ್ (1878-1958) ‘ವರ್ತನಾ ಮನೋವಿಜ್ಞಾನದ ಪಿತಾಮಹ’ ಎಂಬ ಅಭಿದಾನ ವನ್ನು ಗಳಿಸಿದ. ಈತನು ನಡೆಸಿದ ‘ಲಿಟ್ಲ್ ಆಲ್ಬರ್ಟ್ ಎಕ್ಸ್‌ಪರಿಮೆಂಟ್ಸ್’ ವಿ(ಕು)ಖ್ಯಾತವಾಗಿವೆ. ‘ಭಯ’ ಎನ್ನುವುದು ಮನುಷ್ಯನ ಹುಟ್ಟುಗುಣ. ಆದರೂ ಭಯವನ್ನು ‘ಕಲಿಸಬಹುದು’ ಎಂದ ವ್ಯಾಟ್ಸನ್. 11 ತಿಂಗಳ ಮಗು ಲಿಟ್ಲ್ ಆಲ್ಬರ್ಟ್. ಆ ವಯಸ್ಸಿನಲ್ಲಿ ಬಿಳಿಯ ಇಲಿ, ಮೊಲ, ನಾಯಿ, ಉಣ್ಣೆಕೋಟು ಇತ್ಯಾದಿಗಳನ್ನು ನೋಡುವಾಗ, ಆ ಮಗುವಿಗೆ ಯಾವುದೇ ರೀತಿಯ ಭಯವಾಗುತ್ತಿರಲಿಲ್ಲ.

ಬಿಳಿಯ ಇಲಿಯ ಜತೆಯಲ್ಲಿ ಆಟವಾಡಲು ಆಲ್ಬರ್ಟನಿಗೆ ಅವಕಾಶ ನೀಡಿದರು. ಅವನು ಆರಾಮ ವಾಗಿ ಆಟವಾಡುತ್ತಿದ್ದ. ನಂತರದ ಘಟ್ಟದಲ್ಲಿ ಆಲ್ಬರ್ಟ್ ಇಲಿಯನ್ನು ಮುಟ್ಟುತ್ತಿದ್ದಂತೆಯೇ ಒಂದು ಭಾರಿ ಭಯಾನಕ ಶಬ್ದವನ್ನು ಹೊರಡಿಸಿದರು. ಆ ಶಬ್ದಕ್ಕೆ ಆಲ್ಬರ್ಟ್ ಹೆದರಿ ಚೀರಿದ. ಅವನು ಪ್ರತಿಸಲ ಇಲಿಯನ್ನು ಮುಟ್ಟುವಾಗಲೂ ಶಬ್ದವನ್ನು ಮಾಡುತ್ತಿದ್ದರು.

ಕೊನೆ ಕೊನೆಗೆ ಶಬ್ದವಿಲ್ಲದಿದ್ದರೂ ಇಲಿಯನ್ನು ಕಂಡಕೂಡಲೇ ಆಲ್ಬರ್ಟ್ ಬೆಚ್ಚಿ ಚೀರುತ್ತಿದ್ದ. ಈ ಪ್ರಯೋಗದ ಮೂಲಕ ಆಲ್ಬರ್ಟನಲ್ಲಿ ‘ಭಯವನ್ನು ಬಿತ್ತಲು ಸಾಧ್ಯ’ ಎಂದು ನಿರೂಪಿಸಿದ. ಬುರ್ರಸ್ ಫ್ರೆಡ್ರಿಕ್ ಸ್ಕಿನ್ನರ್ (1904-1990) ಈ ವರ್ತನಾ ಮನೋವಿಜ್ಞಾನವನ್ನು ಮುಂದಿನ ಜಲಿಗೆ ಕರೆದೊಯ್ದ. ಈತನು ನಾವೆಲ್ಲರೂ ನೋಡಬಹುದಾದ ವರ್ತನೆಗಳ ಅಧ್ಯಯನಕ್ಕೆ ಆದ್ಯತೆಯನ್ನು ನೀಡಿದ. ‘ಮುಕ್ತ ಮನಸ್ಸು’ ಅಥವಾ ‘ಫ್ರೀ ವಿಲ್’ ಎನ್ನುವುದು ಇಲ್ಲವೆಂದ. ನಾವೆಲ್ಲರೂ ನಮ್ಮ ನಮ್ಮ ಪರಿಸರದ ಪ್ರಚೋದನೆಗಳ ಕೂಸು ಎಂದ.

ಇವನ ‘ಸ್ಕಿನ್ನರ್ ಬಾಕ್ಸ್’ ಪ್ರಯೋಗಗಳು ಖ್ಯಾತವಾಗಿವೆ. ಒಂದು ಪೆಟ್ಟಿಗೆಯಲ್ಲಿ ಇಲಿಯನ್ನು ಇಟ್ಟ. ಇಲಿಯು ಒಂದು ಸನ್ನೆ ಅಥವಾ ಲಿವರನ್ನು ಒತ್ತಿದ ಕೂಡಲೆ ಆಹಾರ ಸಿಗುವಂತೆ ವ್ಯವಸ್ಥೆಯನ್ನು ಮಾಡಿದ. ಆಗ ಇಲಿಯು ತನಗೆ ಹಸಿವಾದಾಗಲೆಲ್ಲ ಲಿವರ್ ಒತ್ತಬೇಕು ಎನ್ನುವುದನ್ನು ಕಲಿತು ಕೊಂಡಿತು. ಅದೇ ಇಲಿಗೆ, ಇಲಿಯು ಲಿವರ್ ಮುಟ್ಟಿದಾಗಲೆಲ್ಲ ಶಾಕ್ ಹೊಡೆಯುವ ಹಾಗೆ ಮಾಡಿದ. ಆಗ ಅದು ತನಗೆ ಎಷ್ಟೇ ಹಸಿವಾಗಿದ್ದರೂ ಲಿವರ್ ತಂಟೆಗೆ ಹೋಗುತ್ತಿರಲಿಲ್ಲ. ಈತನು ಅನೇಕ ಪುಸ್ತಕಗಳನ್ನು ಬರೆದ. ವ್ಯಾಟ್ಸನ್, ಸ್ಕಿನ್ನರ್ ಮತ್ತು ಪಾವಲೋವ್ ಈ ಕ್ಷೇತ್ರದ ಪ್ರಸಿದ್ಧರು.

ಜರ್ಮನಿಯ ಮ್ಯಾಕ್ಸ್ ವರ್ದೀಮರ್, ಕುರ್ತ್ ಕೋಫ್ಕ, ವೂಲ್ ಗಾಮ್ಗ್ ಕೋಹ್ಲರ್ ‘ಸಮಷ್ಟಿ ಮನೋ ವಿಜ್ಞಾನ’ ಅಥವಾ ‘ಗೆಸ್ಟಾಲ್ಟ್ ಸೈಕಾಲಜಿ’ಯನ್ನು ಆರಂಭಿಸಿದರು. ಒಂದರ್ಥದಲ್ಲಿ ಇದು ರಚನಾ ತ್ಮಕವಾದದ ಮತ್ತು ಕಾರ್ಯತ್ಮಕವಾದದ ಮುಂದುವರಿದ ಭಾಗವೆಂದೇ ಹೇಳಬಹುದು. ‘ಸಮಷ್ಟಿ ಚಿತ್ರವು ಅದರ ಬಿಡಿಭಾಗಗಳಿಗಿಂತ ಹಿರಿದು’ ಎನ್ನುವುದು ಇದರ ಸಾರ. ಒಂದು ಉದಾ ಹರಣೆಯನ್ನು ನೋಡೋಣ. ಒಬ್ಬ ವ್ಯಕ್ತಿಯ ಮುಖವನ್ನು ನೋಡಿದಾಗ, ನಾವು ಇಡೀ ಮುಖವನ್ನು ಪರಿಗಣಿಸು ತ್ತೇವೆ.

ಅವನ ಕಣ್ಣು, ಮೂಗು, ತುಟಿ, ಕಿವಿ, ಕೂದಲು ಇವನ್ನು ಪ್ರತ್ಯೇಕವಾಗೇನೂ ನೋಡಲ್ಲ. ಹಾಗೆಯೇ ಮನಸ್ಸು ಸಹ. ಮನಸ್ಸನ್ನು ಇಡಿಯಾಗಿ ಗ್ರಹಿಸಬೇಕು, ಅದರ ಬಿಡಿ ಬಿಡಿ ಅಂಶಗಳನ್ನಲ್ಲ. ರಚನಾ ತ್ಮಕತೆಗಿಂತ ಕಾರ್ಯಾತ್ಮಕತೆಯು ಮುಖ್ಯ ಎನ್ನುವುದು ಇದರ ತಿರುಳು. ಇವು ಪ್ರಯೋಗ ಪರೀಕ್ಷಾ ಮನೋವಿಜ್ಞಾನದ ಆರಂಭಿಕ ಘಟ್ಟಗಳು. ವಿವಿಧ ಸ್ಕ್ಯಾನುಗಳು ಹಾಗೂ ಸೂಕ್ಷ್ಮಾತಿಸೂಕ್ಷ ರಕ್ತ ಪರೀಕ್ಷೆಗಳು ಲಭ್ಯವಿರುವ ಇಂದಿನ ದಿನಗಳಲ್ಲಿ ಮನೋವಿಜ್ಞಾನವು ಆರೋಗ್ಯಕ್ಕೆ ಮಾತ್ರ ಸೀಮಿತ ವಾಗಿಲ್ಲ.

ಕಲಿಕೆ, ನೆನಪು, ಶಿಕ್ಷಣ, ಉದ್ಯಮ, ಆರ್ಥಿಕತೆ, ತಂತ್ರಜ್ಞಾನ, ಮಾನವ-ಕಂಪ್ಯೂಟರ್ ವರ್ತನೆಗಳು (ಹ್ಯೂಮನ್ -ಕಂಪ್ಯೂಟರ್ ಇಂಟರಾಕ್ಷನ್), ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಾಂತ್ರಿಕ ಕಲಿಕೆ, ನೈತಿಕ ಪ್ರಶ್ನೆಗಳು, ಸಾಮಾಜಿಕ ಮಾಧ್ಯಮಗಳ ವರ್ತನೆ, ಡಿಜಿಟಲೀಕರಣದ ಪ್ರಭಾವ... ಹೀಗೆ ನಮ್ಮ ಬದುಕಿನ ಅಸಂಖ್ಯ ಕ್ಷೇತ್ರಗಳಲ್ಲಿ ಪ್ರಯೋಗ ಪರೀಕ್ಷಾ ವಿಜ್ಞಾನವು ತನ್ನ ಕಬಂಧಬಾಹುಗಳನ್ನು ಚಾಚಿದೆ.