Keshava Prasad B Column: ಹಣ ಎಲ್ಲೆಲ್ಲೂ ಇದೆ, ಆದರೆ ಎಲ್ಲರ ಕೈಗೆ ಏಕೆ ಸಿಗುತ್ತಿಲ್ಲ ?
ನಿಮ್ಮೂರಿನಲ್ಲಿಯೇ ಝೀರೊ ಲೆವೆಲ್‌ನಲ್ಲಿದ್ದವರು ನಿಮ್ಮ ಕಣ್ಣೆದುರೇ ಸ್ಥಿತಿವಂತರಾಗಿ ಬೆಳೆದದ್ದನ್ನು ನೋಡಿರಬಹುದು. ಹಣವನ್ನು ದುಡಿಯಲು ಮತ್ತು ದುಡಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಹಣ ಎನ್ನುವುದು ಎಲ್ಲೂ ಇದೆ. ಅದು ನಮ್ಮೆಲ್ಲರ ಮೇಲೆ ಪ್ರಭಾವವನ್ನೂ ಬೀರುತ್ತದೆ. ಆದರೆ ಹಣ ಗೊಂದಲ ವನ್ನೂ ಮೂಡಿಸುತ್ತದೆ

ಹಿರಿಯ ಪತ್ರಕರ್ತ ಕೇಶವ ಪ್ರಸಾದ್ ಬಿ. ಅಂಕಣ

ಮನಿ ಮೈಂಡೆಡ್
ಮಿತ್ರರೊಬ್ಬರು ಕುಂಭಮೇಳದ ವಿಡಿಯೊವೊಂದನ್ನು ಕಳಿಸಿದ್ದರು. ಅದರಲ್ಲೊಬ್ಬ ಅಯಸ್ಕಾಂತ ವನ್ನು ಬಳಸಿ ನದಿಯಿಂದ ನಾಣ್ಯಗಳನ್ನು ಸೆಳೆದುಕೊಳ್ಳುತ್ತಿದ್ದ. ದಿನಕ್ಕೆ ನಾಲ್ಕು ಸಾವಿರ ರುಪಾಯಿ ಗಳು ಸಿಗುತ್ತವೆ ಎಂದು ಆತ ಹೇಳುತ್ತಿದ್ದ. ನಮ್ಮ ದೇಶದಲ್ಲಿ ದುಡಿಯುವ ಮನಸ್ಸಿದ್ದರೆ, ಎಲ್ಲಾದರೂ ದುಡಿಯಬಹುದು. ಕುಂಭಮೇಳದಲ್ಲಿ ಚಹಾ ಮಾರುತ್ತಿದ್ದ ಚಾಯ್‌ವಾಲಾ ಕೂಡ ತಿಂಗಳಿಗೆ ಒಂದು ಲಕ್ಷ ರುಪಾಯಿ ಸಂಪಾದಿಸುತ್ತಿರುವ ಬಗ್ಗೆ ‘ಇಕನಾಮಿಕ್ ಟೈಮ್ಸ್’ನಲ್ಲಿ ವರದಿಯಾಗಿದೆ. ಅಷ್ಟು ದೂರ ಹೋಗುವುದೇ ಬೇಡ. ನಿಮ್ಮೂರಿನಲ್ಲಿಯೇ ಝೀರೊ ಲೆವೆಲ್‌ನಲ್ಲಿದ್ದವರು ನಿಮ್ಮ ಕಣ್ಣೆದುರೇ ಸ್ಥಿತಿವಂತರಾಗಿ ಬೆಳೆದದ್ದನ್ನು ನೋಡಿರಬಹುದು.
ಹಣವನ್ನು ದುಡಿಯಲು ಮತ್ತು ದುಡಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಹಣ ಎನ್ನುವುದು ಎಲ್ಲೂ ಇದೆ. ಅದು ನಮ್ಮೆಲ್ಲರ ಮೇಲೆ ಪ್ರಭಾವ ವನ್ನೂ ಬೀರುತ್ತದೆ. ಆದರೆ ಹಣ ಗೊಂದಲವನ್ನೂ ಮೂಡಿಸುತ್ತದೆ.
ಇದನ್ನೂ ಓದಿ: Keshava Prasad B Column: 4 ಲಕ್ಷದಿಂದಲೇ ಟ್ಯಾಕ್ಸ್ ಸ್ಲ್ಯಾಬ್ ಇರುವುದೇತಕ್ಕೆ ?!
ಆದ್ದರಿಂದ ಗಳಿಸಿದ ದುಡ್ಡನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವುದು ಹೇಗೆ ಎಂಬುದನ್ನು ತಿಳಿದಿರುವುದು ಅವಶ್ಯಕ. ಆಗ ಮಾತ್ರ ಗಳಿಸಿದ ಹಣವನ್ನು ಉಳಿಸಿ ಬೆಳೆಸಿಕೊಳ್ಳಬಹುದು. ಮೊದ ಲೆಲ್ಲ ಹಣವನ್ನು ಗಳಿಸಲು ದಾರಿಗಳು ಸೀಮಿತವಾಗಿತ್ತು. ಮಕ್ಕಳ ಬಳಿ “ನೀವು ಭವಿಷ್ಯದಲ್ಲಿ ಏನಾಗುತ್ತೀರಿ?" ಎಂದರೆ, “ಡಾಕ್ಟರ್, ಎಂಜಿನಿಯರ್ ಮತ್ತು ಟೀಚರ್ ಆಗುತ್ತೇನೆ" ಎಂಬ ಮೂರು ಪದಗಳ ಉತ್ತರವೇ ರಿಪೀಟ್ ಆಗುತ್ತಿತ್ತು.
ಆದರೆ ಇವತ್ತಿನ ಮಕ್ಕಳು, “ನಾನು ಯೂಟ್ಯೂಬರ್ ಆಗುವೆ, ಆರ್ಟಿ ಆಗುವೆ ಅಥವಾ ಯಕ್ಷಗಾನದಲ್ಲಿ ವೇಷ ಹಾಕುವೆ, ಇಲ್ಲವೇ ಕೃಷಿ ಸ್ಟಾರ್ಟಪ್ ಮಾಡುವೆ, ಸ್ಟಾಕ್ ಟ್ರೇಡರ್, ಇನ್ವೆಸ್ಟರ್ ಆಗುವೆ" ಎಂದ ರೂ ಅಲ್ಲಗಳೆಯುವಂತಿಲ್ಲ. ಈ ಎಲ್ಲ ಕ್ಷೇತ್ರಗಳಲ್ಲೂ ಮನಸ್ಸಿದ್ದರೆ ದುಡಿದು ಆರ್ಥಿಕ ಸ್ವಾತಂತ್ರ್ಯ ವನ್ನೂ ಗಳಿಸಲು ಅವಕಾಶಗಳು ಇವೆ. ಆದರೆ ಇವತ್ತು ನಿಯತ್ತಾಗಿ ದುಡಿದು ಗಳಿಸುವ ಹಣದಿಂದ ಜೀವನದ ಪ್ರಾಥಮಿಕ ಅವಶ್ಯಕತೆಗಳು, ದೀರ್ಘಕಾಲೀನ ಗುರಿಗಳನ್ನು ಸಾಧಿಸುವುದು ಹೇಗೆ? ಎಲ್ಲಿ ಹೂಡಿಕೆ ಮಾಡಿದರೆ ಲಾಭದಾಯಕವಾಗಲಿದೆ? ಮಾರುಕಟ್ಟೆಯ ರಿಸ್ಕ್‌ಗಳನ್ನು ಎದುರಿಸಿ ಸಂಪತ್ತನ್ನು ಸೃಷ್ಟಿಸಿಕೊಂಡು ಸ್ಥಿತಿವಂತರಾಗುವುದು ಹೇಗೆ? ಎಂಬುದು ಬಹುತೇಕ ಮಧ್ಯಮ, ಮೇಲ್ಮಧ್ಯಮ ವರ್ಗದ ಜನತೆಯನ್ನು ನಿತ್ಯ ಕಾಡುವ ಪ್ರಶ್ನೆ.
ಸಾಂಪ್ರದಾಯಿಕ ಹೂಡಿಕೆಯ ಸಾಧನಗಳಾದ ಬ್ಯಾಂಕ್ ಸೇವಿಂಗ್ಸ್ ಅಕೌಂಟ್, ಫಿಕ್ಸೆಡ್ ಡೆಪಾಸಿಟ್, ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು ನಿಮ್ಮ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಉತ್ತಮ ಆಯ್ಕೆಯಾದರೂ, ಅದರಲ್ಲಿ ಸಿಗುವ ಬಡ್ಡಿ ಕಡಿಮೆ. ಆದ್ದರಿಂದ ಹಣದುಬ್ಬರದ ಎದುರು ಅದು ಬೆಳೆಯುವುದೂ ನಿಧಾನ. ಸಾಮಾನ್ಯ ಉಳಿತಾಯ ಖಾತೆ ಅಥವಾ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ಅಂತೂ ನಿಮ್ಮ ಹಣದ ಮೌಲ್ಯವನ್ನು ಕರಗಿಸುತ್ತದೆ.
ಒಂದಿಪ್ಪತ್ತು ವರ್ಷಗಳ ಹಿಂದೆ ನೋಡೋದಿದ್ದರೆ, ಆಗ ಸ್ಟಾಕ್ ಮಾರ್ಕೆಟ್ ಇಷ್ಟೊಂದು ಬೆಳೆದಿರ ಲಿಲ್ಲ. ಆದರೆ ರಿಯಾಲ್ಟಿ ಚಟುವಟಿಕೆಗಳು ಚುರುಕಾಗಿತ್ತು. ಎರಡು ಸೈಟ್ ತೆಗೆದುಕೊಂಡರೆ ಒಂದನ್ನು ಮಾರಿ ಬಂದ ದುಡ್ಡಿನಲ್ಲಿ ಮನೆ ಕಟ್ಟಬಹುದು ಎಂದು ಜನ ಹೇಳುತ್ತಿದ್ದರು. ಆದರೆ ಸೈಟ್ ಮಾರಲು ಸಾಧ್ಯವಾಗದೆ, ಮನೆಯನ್ನೂ ಕಟ್ಟಲಾಗದೆ ಸೋತವರೂ ಇzರೆ. ಏಕೆಂದರೆ ರಿಯಲ್ ಎಸ್ಟೇಟ್‌ನಲ್ಲಿ ಲಿಕ್ವಿಡಿಟಿ ಕಡಿಮೆ.
ಬೇಕೆಂದಾಗ ಮಾರಾಟ ಮಾಡಿ ನಗದೀಕರಿಸಲು ಅಸಾಧ್ಯ.ಕೋವಿಡ್ ಘಟ್ಟ ಮುಗಿದ ಬಳಿಕ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್, ಕ್ರಿಪ್ಟೊ ಕರೆನ್ಸಿ ಯುವಜನರನ್ನು ಆಕರ್ಷಿಸುತ್ತಿದೆ. ಆದರೆ 2024ರ ಸೆಪ್ಟೆಂ ಬರ್ ಬಳಿಕ ಚಿತ್ರಣ ಬದಲಾಗಿದೆ. ಮತ್ತೆ ಭಾರಿ ಗೊಂದಲ! ಷೇರು ಸೂಚ್ಯಂಕಗಳು ಕುಸಿಯುತ್ತಿವೆ. ಈಗ ಸ್ಟಾಕ್ಸ್, ಮ್ಯೂಚುವಲ್ ಫಂಡ್‌ಗಳ ಸಿಪ್‌ಗಳಲ್ಲಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್) ಹೂಡಿಕೆ ಮಾಡಿದವರು ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾರೆ. ಚೀನಾ, ಕೆನಡಾ, ಮೆಕ್ಸಿಕೊ, ಬ್ರಿಕ್ಸ್ ರಾಷ್ಟ್ರಗಳು ಸೇರಿದಂತೆ ಜಾಗತಿಕ ಮಟ್ಟದಲ್ಲಿ ವಾಣಿಜ್ಯ ತೆರಿಗೆ ಸಮರವನ್ನು ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್ ಅವರ ಆಟಾಟೋಪಗಳಿಂದ ಜಾಗತಿಕ ಷೇರು ಮಾರುಕಟ್ಟೆ ಅಕಕಲವಾಗಿದೆ.
ಅಮೆರಿಕದ ಆರ್ಥಿಕ ತಜ್ಞ, ಪತ್ರಕರ್ತ ಮೋರ್ಗಾನ್ ಹೌಸೆಲ್ ಬರೆದಿರುವ ‘ದಿ ಸೈಕಾಲಜಿ ಆಫ್ ಮನಿ’ ವೈಯಕ್ತಿಕ ಹಣಕಾಸು ವಲಯದ ಜನಪ್ರಿಯ ಕೃತಿಗಳಂದು. ಮನುಷ್ಯನ ಸ್ವಭಾವಗಳು ಅವನ ಹಣಕಾಸು ಸ್ಥಿತಿಗತಿಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಈ ಪುಸ್ತಕ ವಿವರಿಸುತ್ತದೆ. “ಎಲ್ಲ ಬಡತನಕ್ಕೂ ಕೇವಲ ಸೋಮಾರಿತನ ಕಾರಣವಲ್ಲ. ಹಣಕಾಸು ವಿಚಾರದಲ್ಲಿ ಜನರು ತೆಗೆದುಕೊಳ್ಳುವ ನಿರ್ಧಾರಗಳು, ಸ್ವಭಾವಗಳು ಅವರ ಬಡತನ ಅಥವಾ ಶ್ರೀಮಂತಿಕೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ" ಎನ್ನುತ್ತಾರೆ ಮೋರ್ಗಾನ್ ಹೌಸೆಲ್. ಯಶಸ್ಸು ಮತ್ತು ವೈಫಲ್ಯ ವ್ಯಕ್ತಿಯ ನಿಯಂತ್ರಣದಲ್ಲಿ ಇರುವುದಿಲ್ಲ.
ನಿಮಗೆ ಎಷ್ಟು ಸಾಕು ಎಂಬ ಅರಿವೇ ಇಲ್ಲದೆ ಸಂಪತ್ತಿನ ಬೇಟೆಗೆ ಇಳಿದಾಗ, ಅನಗತ್ಯವಾಗಿ ರಿಸ್ಕ್ ಗಳನ್ನು ಮೈಗೆಳೆದುಕೊಳ್ಳುತ್ತೀರಿ. ನಿಮ್ಮ ಸಕಾರಾತ್ಮಕ ಮತ್ತು ನಕಾರಾತ್ಮಕ ಧೋರಣೆಗಳೂ ಹಣ ಕಾಸು ನಿರ್ಧಾರಗಳನ್ನು ಪ್ರಭಾವಿಸುತ್ತವೆ. ಸಣ್ಣ ಮತ್ತು ಸ್ಥಿರತೆಯಿಂದ ಹೂಡಿಕೆ ಮಾಡುವುದರಿಂದ ಚಕ್ರಬಡ್ಡಿಯ ಪ್ರಯೋಜನ ಪಡೆಯುತ್ತೀರಿ.
ದೀರ್ಘಕಾಲೀನವಾಗಿ ಸಂಪತ್ತು ಗಳಿಸಲು ಸಾಧ್ಯ. ನಿರ್ದಿಷ್ಟ ಹಂತದ ಬಳಿಕ ಭೌತಿಕ ವಸ್ತುಗಳಿಗೆ ಮಾಡುವ ಖರ್ಚು, ನಿಮ್ಮಲ್ಲಿ ಹಣ ಇದೆ ಎಂಬುದನ್ನು ಬೇರೆಯವರಿಗೆ ತೋರಿಸಿ ‘ಇಗೊ’ವನ್ನು ತಣಿಸಲು ಆಗಿರುತ್ತದೆ. ಉಳಿತಾಯವನ್ನು ಮಾಡಲು ಆದಾಯವನ್ನು ಹೆಚ್ಚಿಸುವುದಕ್ಕಿಂತಲೂ ನಮ್ರತೆಯನ್ನು ಹೆಚ್ಚಿಸುವುದು ಪರಿಣಾಮಕಾರಿಯಾಗಿರುತ್ತದೆ.
ನಿಮ್ಮಲ್ಲಿ ಎಷ್ಟು ದುಡ್ಡಿದೆ ಎಂಬುದನ್ನು ಬೇರೆಯವರಿಗೆ ತೋರಿಸುವ ಸಲುವಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡುವುದೇ ಹಣವನ್ನು ಅತ್ಯಂತ ವೇಗವಾಗಿ ಕಳೆದುಕೊಳ್ಳುವ ವಿಧಾನ ಎನ್ನಬಹುದು. ಉದಾಹರಣೆಗೆ ಪಕ್ಕದ ಮನೆಯವರ ಅಥವಾ ಹತ್ತಿರದ ಸಂಬಂಧಿಕರ ಬಳಿ ಐಷಾ ರಾಮಿ ಕಾರು ಇದ್ದರೆ, ತನಗೂ ಅದೇ ಬೇಕೆಂದು ಪಟ್ಟು ಹಿಡಿದು ಸಾಲ ಸೋಲ ಮಾಡಿಯಾದರೂ ಅದೇ ಬ್ರ್ಯಾಂಡ್ ಕಾರನ್ನು ಖರೀದಿಸುವವರು ಇದ್ದಾರೆ.
‘ಇಗೊ’ ತಣಿಸಲು ಕೈಗೊಳ್ಳುವ ಇಂಥ ತಪ್ಪು ನಿರ್ಧಾರಗಳಿಗೆ ಭಾರಿ ಬೆಲೆಯನ್ನೂ ತೆರಬೇಕಾಗುತ್ತದೆ. ಅದಕ್ಕೆ ಸರಿಯಾಗಿ, ಮಾಡರ್ನ್ ಕ್ಯಾಪಿಟಲಿಸಂ ನಿಮ್ಮನ್ನು ಹೆಚ್ಚೆಚ್ಚು ಖರ್ಚು ಮಾಡುವಂತೆ ಪ್ರೇರೇ ಪಿಸುತ್ತದೆ. ಅಲ್ಲಿ ಉಳಿತಾಯಕ್ಕೆ ಬೆಲೆ ಇಲ್ಲ. ಇದು ಮನುಷ್ಯರನ್ನು ನಕಲಿಯಾಗಿಸುತ್ತದೆ. ನೀವು ದುಬಾರಿ ಕಾರನ್ನು ಖರೀದಿಸುವ, ಕಾಸ್ಟ್ಲಿ ವಾಚುಗಳನ್ನು ಪಡೆಯುವ ಹಣಕಾಸು ಸಾಮರ್ಥ್ಯವನ್ನು ಗಳಿಸುವುದು ತಪ್ಪಲ್ಲ.
ಆದರೆ ಅನಗತ್ಯವಾಗಿ ಅವುಗಳಿಗೆ ದುಡ್ಡನ್ನು ಖರ್ಚು ಮಾಡುವುದು ಎಂದರೆ, ನಿಮ್ಮ ಹಣದ ನಷ್ಟ ಎಂದು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದಲೇ ಮೋರ್ಗಾನ್ ಹೌಸೆಲ್ ಅವರು, “ಸಂಪತ್ತು ಎಂದರೆ ನೀವು ನಾನಾ ವಿಷಯ ವಸ್ತುಗಳಿಗೆ ಪರಿವರ್ತಿಸಿಕೊಳ್ಳದಿರುವ ಹಣ" ಎಂದು ವಿವರಿಸುತ್ತಾರೆ. ಅಮೆರಿಕದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಅವರು ಶ್ರೀಮಂತರಾಗಿದ್ದು ಹೇಗೆ ಎಂಬುದರ ಬಗ್ಗೆ 2000ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ಅವುಗಳಲ್ಲಿ ಹಲವು ಕೃತಿಗಳು ಸೊಗಸಾಗಿವೆ.
ಆದರೆ ಕೆಲ ಪುಸ್ತಕಗಳು ಸರಳ ಸಂಗತಿಯನ್ನು ಗಮನಿಸಿಲ್ಲ. ವಾರೆನ್ ಬಫೆಟ್ ಅಪಾರ ಸಂಪತ್ತನ್ನು ಗಳಿಸಲು ಕಾರಣ ಅವರೊಬ್ಬ ಉತ್ತಮ ಹೂಡಿಕೆದಾರ ಎನ್ನುವುದಲ್ಲ. ಅವರು ಅಕ್ಷರಶಃ ಬಾಲ್ಯ ದಿಂದಲೇ ಉತ್ತಮ ಹೂಡಿಕೆದಾರ ಆಗಿದ್ದುದೇ ನಿಜವಾದ ಕಾರಣ. ಆದ್ದರಿಂದ ಷೇರುಪೇಟೆಯಲ್ಲಿ ಕ್ಷಿಪ್ರವಾಗಿ ಕೋಟ್ಯಂತರ ಹಣ ಗಳಿಸಬಹುದು ಎಂಬ ಕನಸು ಕಾಣುತ್ತಿರುವವರು ಎಚ್ಚರದಿಂದ ಈ ವಿಷಯವನ್ನು ಮನನ ಮಾಡಿಕೊಳ್ಳಬೇಕು.
ಮೋರ್ಗಾನ್ ಹೌಸೆಲ್ ಹೀಗೆನ್ನುತ್ತಾರೆ- “ನಾನು ಈ ಪುಸ್ತಕ ಬರೆಯುವ ವೇಳೆಗೆ ವಾರೆನ್ ಬಫೆಟ್ 84.5 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿದ್ದರು. ಇದರಲ್ಲಿ 84.2 ಶತಕೋಟಿ ಡಾಲರ್ ಸಂಪತ್ತನ್ನು ತಮ್ಮ 50ನೇ ವಯಸ್ಸಿನಲ್ಲಿ ಗಳಿಸಿದ್ದರು. 60ನೇ ವಯಸ್ಸು ದಾಟಿದ ಬಳಿಕ ಬಹುಪಾಲು ಸಂಪತ್ತು ಪಡೆದರು (ಈಗ ಬಫೆಟ್ ಆಸ್ತಿಯ ಮೌಲ್ಯ 147 ಶತಕೋಟಿ ಡಾಲರ್‌ಗೆ ವೃದ್ಧಿಸಿದೆ). ವಾರೆನ್ ಬಫೆಟ್ ಅಸಾಧಾರಣ ಹೂಡಿಕೆದಾರ.
ಕುಶಾಗ್ರಮತಿ ಕೂಡ. ಅವರಿಗೆ ಈಗ 94 ವರ್ಷ ವಯಸ್ಸು. ಆದರೆ 11 ವರ್ಷ ವಯಸ್ಸಿನಲ್ಲಿಯೇ ಸ್ಟಾಕ್ ಗಳಲ್ಲಿ ಹೂಡಿಕೆ ಶುರುಮಾಡಿದ್ದರು. ಬರೋಬ್ಬರಿ 83 ವರ್ಷಗಳ ಹೂಡಿಕೆಯ ಇತಿಹಾಸ ಅವರ ಬೆನ್ನಿಗಿದೆ. ಇದೇ ಕಾರಣದಿಂದ ಬಫೆಟ್ ಇವತ್ತು 147 ಶತಕೋಟಿ ಡಾಲರ್ ಸಂಪತ್ತಿನ ಮಾಲೀಕ ರಾಗಿದ್ದಾರೆ. ಒಂದು ವೇಳೆ ವಾರೆನ್ ಬಫೆಟ್ ಅವರು ತಮ್ಮ 30-40ರ ವಯಸ್ಸಿನಲ್ಲಿ ಹೂಡಿಕೆ ಆರಂಭಿ ಸಿರುತ್ತಿದ್ದರೆ ಮತ್ತು 60ರ ವಯಸ್ಸಿನಲ್ಲಿ ಹೂಡಿಕೆಯನ್ನು ನಿಲ್ಲಿಸಿ ನಿವೃತ್ತರಾಗಿರುತ್ತಿದ್ದರೆ, ಖಂಡಿತ ವಾಗಿಯೂ ಇಷ್ಟು ದೊಡ್ಡ ಸಂಪತ್ತು ಸೃಷ್ಟಿಸಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ.
11ನೇ ಎಳೆ ವಯಸ್ಸಿನಲ್ಲಿ ಗಂಭೀರವಾಗಿ ಷೇರುಗಳಲ್ಲಿ ಹೂಡಿಕೆ ಆರಂಭಿಸಿದ್ದ ವಾರೆನ್ ಬಫೆಟ್ ಅವರು 30ನೇ ವಯಸ್ಸಿಗೆ ಒಂದು ಮಿಲಿಯನ್ ಡಾಲರ್ ಗಳಿಸಿದ್ದರು. ಒಂದು ವೇಳೆ ಸಾಮಾನ್ಯ ಹದಿಹರೆಯದ ಮಕ್ಕಳಂತೆ ಹಣವನ್ನು ಖರ್ಚು ಮಾಡಿರುತ್ತಿದ್ದರೆ, ಉಳಿತಾಯ ಮಾಡದೆ ಇರುತ್ತಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ. “
ವಾರೆನ್ ಬಫೆಟ್ ಅವರ ಕೌಶಲ ಏನಾಗಿತ್ತೆಂದರೆ ಹೂಡಿಕೆ ಮಾಡುವ ಬುದ್ಧಿವಂತಿಕೆಯಾಗಿತ್ತು. ಆದರೆ ಅವರ ರಹಸ್ಯ ಏನಾಗಿತ್ತೆಂದರೆ, ದೀರ್ಘಾವಧಿಯ ಹೂಡಿಕೆ. ಚಕ್ರಬಡ್ಡಿ ಕೆಲಸ ಮಾಡುವುದೇ ಹಾಗೆ" ಎನ್ನುತ್ತಾರೆ ಮೋರ್ಗಾನ್ ಹೌಸೆಲ್.
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರಿಗೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಅಥವಾ ‘ಸಿಪ್’ ಎಂಬ ಪದ್ಧತಿ ಚಿರಪರಿಚಿತ. ಈ ವಿಧಾನದಲ್ಲಿ ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತ ವನ್ನು ಹೂಡಿಕೆ ಮಾಡಬಹುದು. ಇಡಿಯಾಗಿ ಹಾಕಬೇಕೆಂದೇನಿಲ್ಲ. ಎಲ್‌ಐಸಿ ಮ್ಯೂಚುವಲ್ ಫಂಡ್‌ನಲ್ಲಿ ಮಾಸಿಕ 200 ರುಪಾಯಿಯಿಂದಲೂ ‘ಸಿಪ್’ ಆರಂಭಿಸಬಹುದು. ಸಿಪ್ ಪರ್ಫಾರ್ಮೆನ್ಸ್ ಬಗ್ಗೆ ‘ಫಿಸ್ಡಮ್’ ಎಂಬ ಸಂಸ್ಥೆಯ ಇತ್ತೀಚಿನ ಅಧ್ಯಯನ ವರದಿಯು ದೀರ್ಘಾವಧಿ ಸಿಪ್‌ಗಳು ಲಾಭದಾಯಕ ಎಂಬುದನ್ನು ಸಾಬೀತುಪಡಿಸಿವೆ.
ಇದರಲ್ಲಿ 2021ರಿಂದ 2025ರ ತನಕ ‘ಸಿಪ್’ ಬಗ್ಗೆ ಸಮೀಕ್ಷೆ ಮಾಡಲಾಗಿತ್ತು. 2021 ಮತ್ತು 2022ರ ನಡುವೆ ‘ಸಿಪ್’ ಆರಂಭಿಸಿದ್ದವರಿಗೆ ಪಾಸಿಟಿವ್ ರಿಟರ್ನ್ ಲಭಿಸಿತ್ತು. ಆದರೆ ಕಳೆದ 9 ರಿಂದ 10 ತಿಂಗಳಿನಿಂದ ಹೂಡಿಕೆ ಮಾಡಿದ್ದವರಿಗೆ ನೆಗೆಟಿವ್ ರಿಟರ್ನ್ ಆಗಿತ್ತು.
ಕೊನೆಯದಾಗಿ, ನೆನಪಿನಲ್ಲಿಡಬೇಕಾದ ಮುಖ್ಯಾಂಶ ಏನೆಂದರೆ, ಸಂಪತ್ತು ಎಂದರೆ ನೀವು ಖರ್ಚು ಮಾಡಿದ ನಂತರ ನಿಮ್ಮ ಬಳಿ ಉಳಿಯುವಂಥದ್ದು. ಆದ್ದರಿಂದ ನಿಮಗೆ ಎಷ್ಟೇ ಆದಾಯವಿದ್ದರೂ, ಸೇವಿಂಗ್ಸ್ ಕೂಡ ಚೆನ್ನಾಗಿ ಇzಗ ಸಂಪತ್ತೂ ಬೆಳೆಯುತ್ತದೆ.