NCERT syllabus: ರಾಜ್ಯದಲ್ಲಿ 1ನೇ ತರಗತಿಯಿಂದಲೇ ಎನ್‌ಸಿಇಆರ್‌ಟಿ ಪಠ್ಯಕ್ರಮ ಜಾರಿ ಮಾಡಿ; ಸರ್ಕಾರಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ
NCERT syllabus: ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ಮಂಗಳವಾರ ನಡೆದಿದೆ. ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.


ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ಮಂಗಳವಾರ ನಡೆಯಿತು. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಎನ್‌ಸಿಇಆರ್‌ಟಿ ಪಠ್ಯಕ್ರಮ (NCERT syllabus) ಜಾರಿಗೊಳಿಸಲು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ. ಅಲ್ಲದೇ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾಹಿತಿ ನೀಡಿದ್ದು, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ, ಕಾನೂನು ಹಾಗೂ ಸಂಸದೀಯ ಇಲಾಖೆ, ಆರ್ಥಿಕ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕಡತವನ್ನು ಬೇಗನೆ ತರಿಸಿಕೊಂಡು, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ಪರಿಹಾರವನ್ನು ನೀಡಲು ಸಭೆಯಲ್ಲಿ ವಿನಂತಿಸಲಾಗಿದೆ.
ನಲಿಕಲಿ ಪದ್ಧತಿಯನ್ನು ರದ್ದುಗೊಳಿಸಿ ಸಾಮಾನ್ಯ ಶಿಕ್ಷಣ ಪದ್ಧತಿಯನ್ನು ಜಾರಿ ಮಾಡುವುದು, ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಿಂದ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆಗೆ ಹೊಡೆತ ಬೀಳಬಾರದು, ಜತೆಗೆ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯನ್ನು ಮಕ್ಕಳ ಸಂಖ್ಯೆಯನ್ನು ಆಧರಿಸಿ ಮಾಡದೇ ಶಾಲೆಗಳಲ್ಲಿ ಮಂಜೂರಾದ ಹುದ್ದೆಗಳು ಕೆಲಸ ನಿರ್ವಹಿಸುತ್ತಿರುವ ಹುದ್ದೆಗಳ ಆಧಾರದ ಮೇಲೆ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವುದರ ಜತೆಗೆ, ಮುಖ್ಯ ಗುರುಗಳ ಹುದ್ದೆ ಆಡಳಿತಾತ್ಮಕ ಹಾಗೂ ಬೋಧನೆ ನಿರ್ವಹಣೆ ಎರಡು ಮಾಡಬೇಕಾಗಿರುವುದರಿಂದ HM ಹುದ್ದೆಯನ್ನು PTR ನಲ್ಲಿ ಪರಿಗಣಿಸಬಾರದಾಗಿ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಅನೇಕ ತರಬೇತಿಗಳನ್ನು SKILL BASED LEARNING ಜಾರಿಗೊಳಿಸಲು ತೀರ್ಮಾನಿಸಲಾಯಿತು. ಮಕ್ಕಳ ಪೋಷಕಾಂಶವನ್ನು ಸುಧಾರಿಸುವುದು ಹಾಗೂ ಮೊಟ್ಟೆಯ ದರ ಹಾಗೂ ಮೊಟ್ಟೆಯನ್ನು 6 ದಿನಗಳವರೆಗೆ ವಿತರಿಸುವ ಕುರಿತು ಸಮಗ್ರವಾಗಿ ಚರ್ಚಿಸಲಾಗಿದೆ.
ಶಾಲೆಗಳಲ್ಲಿ ಶೌಚಾಲಯ ಹಾಗೂ ಸ್ವಚ್ಛತೆಗಾಗಿ ಪ್ರತ್ಯೇಕ ಏಜೆನ್ಸಿಯನ್ನು ನೀಡುವುದು, ಶಾಲೆಗಳಿಗೆ ಪಂಚಾಯಿತಿ ಮಟ್ಟದಲ್ಲಿ Attender/Clerk ನೀಡುವುದು, ಮುಖ್ಯೋಪಾಧ್ಯಾಯರ ಕಾರ್ಯ ಒತ್ತಡ ಹಾಗೂ ಜವಾಬ್ದಾರಿಗಳ ಕುರಿತು ಚರ್ಚಿಸಲಾಯಿತು ಎಂದು ಹೇಳಿದ್ದಾರೆ.
ಶಿಕ್ಷಕರನ್ನು ಬಿಎಲ್‌ಓ ಕರ್ತವ್ಯಕ್ಕೆ ಹಾಕುತ್ತಿರುವ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಲು ಮತ್ತು ಭಾರತ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ಮುಖ್ಯ ಕಾರ್ಯದರ್ಶಿಯವರು ವಿನಂತಿಸಲಾಯಿತು. ಒಂದನೇ ತರಗತಿಯಿಂದಲೇ NCERT SYLLABUS ಜಾರಿಗೊಳಿಸಲು ವಿನಂತಿಸಲಾಯಿತು. ಶಾಲೆಯಲ್ಲಿರುವ ಅಂಗಲವಿಕ ಮಕ್ಕಳು ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳುವಂತೆ ಚರ್ಚಿಸಲಾಯಿತು.
ಅನ್ಯ ಕಾರ್ಯಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಿ ಶಿಕ್ಷಕರನ್ನು ಕೇವಲ ಕಲಿಸುವುದಕ್ಕಾಗಿ ಮೀಸಲಿಡುವ ಬಗ್ಗೆ ಸುಧೀರ್ಘವಾಗಿ ಚರ್ಚಿಸಲಾಯಿತು. ಪ್ರತಿಭಾಕಾರಂಜಿ ಹಾಗೂ ಕ್ರೀಡಾಕೂಟಗಳನ್ನು ಒಂದೇ ಅವಧಿಯಲ್ಲಿ ಏರ್ಪಡಿಸುವ ಬದಲಾಗಿ ಕ್ರೀಡಾಕೂಟಗಳನ್ನು ಒಂದನೇ ಸೆಮಿಸ್ಟರ್‌ನಲ್ಲಿ ಹಾಗೂ ಪ್ರತಿಭಾ ಕಾರಂಜಿಯನ್ನು ಎರಡನೇ ಸೆಮಿಸ್ಟರ್‌ನಲ್ಲಿ ಆಯೋಜನೆ ಮಾಡುವ ಕುರಿತು ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ರಶ್ಮಿ.ವಿ.ಮಹೇಶ್, ಆಯುಕ್ತರಾದ ಡಾ. ಕೆ.ವಿ. ತ್ರಿಲೋಕಚಂದ್ರ, ಇಲಾಖೆಯ ನಿರ್ದೇಶಕರು ಹಾಗೂ ಇಲಾಖೆಯ ಅಧಿಕಾರಿಗಳು, ಹಾಸನ ಜಿಲ್ಲೆಯ ಅಣ್ಣಪ್ಪನವರು, ಮಾಗಡಿ ನರಸಿಂಹಮೂರ್ತಿ ರವರು ಉಪಸ್ಥಿತರಿದ್ದರು.