CPIM: ಜು 9ರಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಾಮೂಹಿಕ ಮುಷ್ಕರ
ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕಾಗಿಸಬೇಕು ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು, ಹಾಗೂ ಉದ್ಯೋಗ ಸೃಷ್ಟಿ ಮಾಡಬೇಕು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ 200 ದಿನ ಕೆಲಸ, ದಿನವೊಂದಕ್ಕೆ ರೂ. 600 ಕೂಲಿ ನಿಗದಿಪಡಿಸಬೇಕೆಂದು ಆಗ್ರಹಿಸಿ ನಾಳೆ (ಜು 9) ಜಿಲ್ಲೆಯ ಜಿಲ್ಲಾ ಕೇಂದ್ರವು ಸೇರಿದಂತೆ ಜಿಲ್ಲೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಾಮೂಹಿಕ ಮುಷ್ಕರ ಹಮ್ಮಿಕೊಂಡಿದೆ

ಸುದ್ದಿಗೋಷ್ಠಿಯಲ್ಲಿ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿದರು.

ಚಿಕ್ಕಬಳ್ಳಾಪುರ: ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕಾಗಿಸಬೇಕು ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು, ಹಾಗೂ ಉದ್ಯೋಗ ಸೃಷ್ಟಿ ಮಾಡಬೇಕು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ 200 ದಿನ ಕೆಲಸ, ದಿನವೊಂದಕ್ಕೆ ರೂ. 600 ಕೂಲಿ ನಿಗದಿಪಡಿಸಬೇಕೆಂದು ಆಗ್ರಹಿಸಿ ನಾಳೆ (ಜು 9) ಜಿಲ್ಲೆಯ ಜಿಲ್ಲಾ ಕೇಂದ್ರವು ಸೇರಿದಂತೆ ಜಿಲ್ಲೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಾಮೂಹಿಕ ಮುಷ್ಕರ ಹಮ್ಮಿಕೊಂಡಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ ತಿಳಿಸಿದರು.
ಅವರು ನಗರದ ವಾಪಸಂದ್ರ ಬಡಾವಣೆಯ ಸಿಐಟಿಯು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದೇಶದ 13 ಕಾರ್ಮಿಕ ಸಂಘಟನೆಗಳಲ್ಲಿ ಬಿಜೆಪಿಯ ಕಾರ್ಮಿಕ ಸಂಘಟನೆ ಬಿ.ಎಂ.ಎಸ್. ಹೊರತು ಪಡಿಸಿ ಎಲ್ಲಾ 12 ಸಂಘಟನೆಗಳು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು ನಮ್ಮನ್ನ ಸಾಮೂಹಿಕ ಬಂಧನ ಮಾಡಿದರೂ ನಾವು ಹೆದರುವುದಿಲ್ಲ ನಮ್ಮ ಹಕ್ಕು ಗಳನ್ನು ನಾವು ಪಡೆಯಲು ಎಲ್ಲದಕ್ಕೂ ಸಿದ್ಧ ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು ವೇತನ ಸಂಹಿತೆಯಲ್ಲಿ 4, ಕೈಗಾರಿಕಾ ಬಾಂದವ್ಯ ಸಂಹಿತೆಯಲ್ಲಿ 3 ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯಲ್ಲಿ 13 ಮತ್ತು ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ 9 ಕಾನೂನುಗಳು ಸೇರಿದಂತೆ ಒಟ್ಟು 29 ಕಾನೂನು ಗಳನ್ನು 4 ಸಂಹಿತೆಗಳಲ್ಲಿ ರೂಪೀಕರಿಸಿದ್ದು ಈ ನಾಲ್ಕು ಲೇಬರ್ ಕೋಡ್‌ಗಳ ಜಾರಿ ನಿಲ್ಲಿಸಿ ದುಡಿಯುವ ಜನರ ಸ್ವಾಯತ್ತತೆ ಕೆಣಕದಿರಿ ಎಂಬ ಘೋಷಣೆಯೊಂದಿಗೆ ನಾಳೆ (ಜು 9) ಕಾರ್ಮಿಕ ಸಂಘಟನೆಗಳ ನೌಕರರು ತಮ್ಮ ಕೆಲಸಗಳ ಬಂದ್ ಮಾಡಿ ಜಿಲ್ಲೆಯ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಭಾಗಿಯಾಗ ಲಿದ್ದಾರೆ ಎಂದರು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ದೇಶದಲ್ಲಿ ಅತಿಹೆಚ್ಚು ಅಸಂಘಟಿತ, ಸ್ಕೀಂ ಮತ್ತು ಅನೌಪಚಾರಿಕ ಕಾರ್ಮಿಕರನ್ನು ಕಾನೂನುಗಳಡಿ ಯಲ್ಲಿ ತರಬೇಕು ಮತ್ತು 600 ರೂ ಒಂದು ದಿನದ ವೇತನ ನಿಗದಿ ಮಾಡಬೇಕೆಂಬ ಕೇಂದ್ರ ಕಾರ್ಮಿಕ ಸಂಘಟನೆಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ವೇತನ ಸಂಹಿತೆಯಲ್ಲಿ 15ನೇ ಐಎಲ್ ಸಿಯ ಕನಿಷ್ಠ ವೇತನ, ನ್ಯಾಯ ಸಮ್ಮತ ಮತ್ತು ಜೀವಿತ ವೇತನಗಳನ್ನು ನಿಗದಿ ಮಾಡುವ ಅಂಶಗಳನ್ನು ಒಳಗೊಳ್ಳುವ ಬದಲಿಗೆ 187 ರೂ. ನೆಲದ ಕೂಲಿಯನ್ನು ನಿರ್ದಿಷ್ಟಗೊಳಿಸಿದ್ದರಿಂದ ಇನ್ನು ಮುಂದೆ ವೇತನ ಹೆಚ್ಚಳಗಳಿಗೆ ಪೆಟ್ಟು ಬೀಳುತ್ತದೆ ಅದೇ ರೀತಿ 18 ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುವವರು ಸೂಪರ್‌ವೈಸರ್‌ಗಳು, ಅಪ್ರೆಂಟೀಸ್ ಗಳು, 40 ಕಾರ್ಮಿಕರಿದ್ದು ವಿದ್ಯುತ್‌ರಹಿತ ಉದ್ಯಮಗಳಲ್ಲಿರುವ ಕಾರ್ಮಿಕರು 50ಕ್ಕಿಂತ ಕಡಿಮೆ ಗುತ್ತಿಗೆ ಕಾರ್ಮಿಕರನ್ನು ಹೊಂದಿರುವ ಗುತ್ತಿಗೆದಾರರು ಲೈಸೆನ್ಸ್ ತೆಗೆದುಕೊಳ್ಳಬೇಕಿಲ್ಲ.
ಇದರಿಂದಾಗಿ ಭಾರತದ ಶೇ70 ರಷ್ಟು ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳು ಅನ್ವಯವಾಗುವು ದಿಲ್ಲ.100ಕ್ಕಿಂತ ಹೆಚ್ಚು ಕಾರ್ಮಿಕರಿದ್ದರೆ ಕಾರ್ಖಾನೆಗಳ ಲೇಆಫ್, ರಿಟ್ರಿಂಟ್ ಮೆಂಟ್ ಮತ್ತು ಕಾರ್ಖಾನೆ ಮುಚ್ಚುವಿಕೆಗೆ ಸರ್ಕಾರದ ಪೂರ್ವನುಮತಿ ಪಡೆಯಬೇಕಿತ್ತು. ಈಗ 300 ಕಾರ್ಮಿಕರಿಗೆ ಹೆಚ್ಚಿಸಲಾಗಿದೆ. ಇದರಿಂದ ಯಾವಾಗ ಬೇಕಾದರೂ ಕಾರ್ಖಾನೆ ತೆರೆಯಬಹುದು, ಬೇಡದಿದ್ದರೆ ಮುಚ್ಚಬಹುದಾದ ಸ್ವಾತಂತ್ರ್ಯವನ್ನು ಮಾಲೀಕರಿಗೆ ಕೊಡಲಾಗಿದೆ. ದಿನದ 8 ಗಂಟೆಯ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಲು ತೀರ್ಮಾನಿಸಿದ್ದು, ಈಗಿನ 8 ಗಂಟೆಗಳ ಅವಧಿ ಕೆಲಸದಲ್ಲಿ ಒತ್ತಡ ಹೆಚ್ಚಾಗಿ ಬಿಪಿ.ಶುಗರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ತುತ್ತಾಗಿ ವಯಸ್ಸಲ್ಲದ ವಯಸ್ಸಿ ನಲ್ಲಿ ಜನತೆ ಸಾಯುತ್ತಿದ್ದಾರೆ.ದಿನದ 8 ಗಂಟೆಯ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದ್ದು ಇದು ಅವೈಜ್ಞಾನಿಕ ಕ್ರಮವಾಗಿರುವ ಕಾರಣ ಈ ಎಲ್ಲಾ ಕಾಯ್ದೆಗಳು ದೇಶದ ಕಾರ್ಮಿಕರಿಗೆ ಮಾರಕವಾಗಿದೆ ಎಂದು ಆಕ್ರೋಷ ವ್ಯೆಕ್ತಪಡಿಸಿದರು.
ಬೇಡಿಕೆಗಳ ಪಟ್ಟಿ, ಮುಷ್ಕರ ನೋಟಿಸ್ ನೀಡಿದ ಕೂಡಲೇ ಸಂಧಾನ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ರಾಜೀ ಸಂಧಾನ ನಡೆಯುವಾಗ ಬೇಡಿಕೆಗಳು ಈಡೇರದಿದ್ದರೂ ಮುಷ್ಕರ ಮಾಡುವ ಹಾಗಿಲ್ಲ, ಮಾಡಿದರೆ ಅದನ್ನು ಕಾನೂನು ಬಾಹಿರ ಮುಷ್ಕರ ಎಂದು ಪರಿಗಣಿಸಿ ಮುಷ್ಕರ ಮಾಡಿದವರನ್ನು, ಮುಷ್ಕರಕ್ಕೆ ಬೆಂಬಲಿಸಿದವರಿಗೂ ಜೈಲು, ಜಾಮೀನುರಹಿತ ಕೇಸುಗಳು, ದಂಡ, ಕೆಲಸದ ನಿರಾಕರಣೆ ಮಾಡುವ ಹಕ್ಕನ್ನು ಮತ್ತು ಕಾರ್ಮಿಕ ಸಂಘದ ನೊಂದಾವಣಿಯನ್ನು ರದ್ದುಗೊಳಿಸುವ ಅಂಶಗಳನ್ನು ಈ ಸಂಹಿತೆಗಳಲ್ಲಿ ತರಲಾಗಿದೆ. ಇದರಿಂದ ಕಾರ್ಮಿಕರ ಸಾಮೂಹಿಕ ಚೌಕಾಸಿಯ ಬೆನ್ನೆಲುಬಾಗಿದ್ದ ಮುಷ್ಕರದ ಹಕ್ಕನ್ನು ನಿರಾಕರಿಸಲಾಗಿದೆ. ಕಾರ್ಮಿಕ ಸಂಘಗಳಿಗೆ ಮಾನ್ಯತೆ ನೀಡಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿ ಕಾರ್ಮಿಕ ಸಂಘ/ಚಳುವಳಿಗಳಿಲ್ಲದ ಮುಕ್ತ ವಾತವರಣ ರೂಪಿಸಲಿಕ್ಕಾಗಿ ಒಟ್ಟು ಕಾರ್ಮಿಕರಲ್ಲಿ ಶೇ10ರಷ್ಟು ಕಾರ್ಮಿಕರು ಮೊದಲೇ ಸದಸ್ಯರಾಗಿರಬೇಕು, ಸಂಘ ನೊಂದಣಿ ಮಾಡುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಕಾರ್ಮಿಕ ಇಲಾಖೆಗೆ ನೀಡಲಾಗಿದೆ. ಸಂಘಕ್ಕೆ ಮಾನ್ಯತೆ ನೀಡುವ, ಸಂಘದೊಂದಿಗೆ ಚೌಕಾಸಿ ಮಾಡುವ ಸಂಪೂರ್ಣ ಹಕ್ಕು ಮಾಲೀಕರ ಮರ್ಜಿಗೆ ಬಿಡಲಾಗಿದೆ ಎಂದವರು ಆರೋಪ ಮಾಡಿದರು.
ಸಿಐಟಿಯು ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ಮಾತನಾಡಿ, ಅಂಗನವಾಡಿ ಮತ್ತು ಬಿಸಿಯೂಟ ನೌಕರರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಅವರ ಕೆಲಸದ ಕಾರ್ಯಗಳು ಹೆಚ್ಚಿದೆ. ಒತ್ತಡದಲ್ಲಿ ಕೆಲಸ ಮಾಡುವಂತಾಗಿರುವ ಕಾರಣ ಹೃದಯಾಘಾತಗಳಂತಹ ಅವಘಡಗಳು ಹೆಚ್ಚಾಗುತಿವೆ.
ಜೀವನೋಪಾಯ ನಡೆಸಿಕೊಳ್ಳಲು ಭಯವಾಗುತ್ತಿದೆ ಇವೆಲ್ಲದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಾಗಲೀ, ಕೇಂದ್ರ ಸರ್ಕಾರವಾಗಲಿ ವೇತನ ಹೆಚ್ಚು ಮಾಡುವ ಕೆಲಸ ಆಗಬೇಕು ಎಂದ ಅವರು ಅಂಗನವಾಡಿಯ ಐಸಿಟಿಎಸ್ ಯೋಜನೆ ಪ್ರಾರಂಭವಾಗಿ 50 ವರ್ಷ ಹಾಗೂ, ಬಿಸಿಯೂಟ ಯೋಜನೆ ಪ್ರಾರಂಭವಾಗಿ 24 ವರ್ಷಗಳಾದರೂ ಸಮಸ್ಯೆಗಳು ಇನ್ನಷ್ಟು ಮತ್ತಷ್ಟು ಬಿಗಡಾಯಿ ಸುತ್ತದೆ ಬಂದಿವೆ ನಮ್ಮ ಸಮಸ್ಯೆಗಳು ಈಡೇರಿಸುವ ತನಕ ನಮ್ಮ ಹೋರಾಟಗಳು ವ್ಯತಿರಿಕ್ತ ವಾಗಿಯೇ ಇರಲಿವೆ ನಮ್ಮನ್ನ ಬಂಧಿಸಿದರೂ ಸರಿಯೇ ನಮ್ಮ ಹೋರಾಟಗಳು ಮಾತ್ರ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜುಲೈ 9 ರಂದು ಅಂಗನವಾಡಿ,ಬಿಸಿಯೂಟ ನೌಕರರು ತಮ್ಮ ಕೆಲಸಗಳನ್ನು ಬಂದ್ ಮಾಡಿ, ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು 26 ಸಾವಿರ ಕನಿಷ್ಟ ವೇತನ ನೀಡಬೇಕು. ಮಾಸಿಕ ಪಿಂಚಣಿ 10 ಸಾವಿರ ನೀಡಬೇಕು. ಕನಿಷ್ಠ ಕೂಲಿ ಜಾರಿಯಾಗಬೇಕು. ಬಹುಮುಖ್ಯವಾಗಿ ನಿವೃತ್ತಿಯಾದರೆ ಇಡಿಗಂಟು ನೀಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ಬಿ.ಎನ್.ಮುನಿಕೃಷ್ಣಪ್ಪ, ಅಕ್ಷರ ದಾಸೊಹದ ಎನ್.ಭಾರತಿ, ಸಿಐಟಿಯುನ ಜಯಮಂಗಳ, ಬಿ,ಭಾಗ್ಯಮ್ಮ, ಮುನಿರತ್ನಮ್ಮ ಇತರರು ಇದ್ದರು.