Karnataka Bhavan-1: ನವದೆಹಲಿಯಲ್ಲಿ ಏ. 2ರಂದು ಕರ್ನಾಟಕ ಭವನ-1 ಉದ್ಘಾಟನೆ
Karnataka Bhavan-1: ನವದೆಹಲಿಯಲ್ಲಿ ಸುಮಾರು 50 ವರ್ಷಗಳ ಹಳೆಯ ಕರ್ನಾಟಕ ಭವನ-1 (Karnataka Bhavan-1) ಕಟ್ಟಡ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಕಟ್ಟಡವನ್ನು ಕೆಡವಿ ಆ ಸ್ಥಳದಲ್ಲಿ ಸುಮಾರು 138 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ.


ನವ ದೆಹಲಿ: ನವದೆಹಲಿಯ ಕೌಟಿಲ್ಯ ಮಾರ್ಗದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕರ್ನಾಟಕ ಭವನ-1 (ಕಾವೇರಿ)ರ ಉದ್ಘಾಟನಾ ಸಮಾರಂಭವನ್ನು ಏಪ್ರಿಲ್ 2ರಂದು ಸಂಜೆ 6.30ಕ್ಕೆ ಆಯೋಜಿಸಲಾಗಿದೆ. ಸುಮಾರು 50 ವರ್ಷಗಳ ಹಳೆಯ ಕರ್ನಾಟಕ ಭವನ-1 (Karnataka Bhavan-1) ಕಟ್ಟಡ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಕಟ್ಟಡವನ್ನು ಕೆಡವಿ ಆ ಸ್ಥಳದಲ್ಲಿ ಸುಮಾರು 138 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ.

ನವದೆಹಲಿಯ ಕೌಟಿಲ್ಯ ಮಾರ್ಗದಲ್ಲಿ 1967ರಲ್ಲಿ ಕರ್ನಾಟಕ ಭವನ-1 (ಕಾವೇರಿ) ನಿರ್ಮಾಣ ಮಾಡಲಾಗಿತ್ತು. ಈ ಕಟ್ಟಡ ಶಿಥಿಲವಾದ ಹಿನ್ನೆಲೆಯಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು 2018ರ ಜೂನ್ 18ರಂದು ತಾಂತ್ರಿಕ ಸಮಿತಿಯು ಶಿಫಾರಸು ಮಾಡಿತ್ತು. ಹೀಗಾಗಿ ಕರ್ನಾಟಕ ಸರ್ಕಾರದ 2018-19ನೇ ಸಾಲಿನ ಆಯವ್ಯಯದಲ್ಲಿ ಕರ್ನಾಟಕ ಭವನ-1 (ಕಾವೇರಿ)ರ ಹಳೆಯ ಕಟ್ಟಡವನ್ನು ಕೆಡವಿ ಸದರಿ ಜಾಗದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ಘೋಷಣೆ ಮಾಡಲಾಗಿತ್ತು. ಅದರಂತೆ 2019ರ ಫೆ.1ರಂದು ಉದ್ದೇಶಿತ ಹೊಸ ಕಟ್ಟಡ ಕರ್ನಾಟಕ ಭವನ-1 (ಕಾವೇರಿ) ನಿರ್ಮಿಸಲು 81.00 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಬೆಂಗಳೂರಿನ ಮೆ. ಬಾಲಾಜಿ ಕೃಪ ಪ್ರೊಜೆಕ್ಟ್ ಪ್ರೈ.ಲಿ. ಸಂಸ್ಥೆಯು ಗುತ್ತಿಗೆ ಪಡೆದು, ಕಟ್ಟಡ ಕಾಮಗಾರಿಯನ್ನು ಮುಗಿಸಿದೆ.

ಈ ಸುದ್ದಿಯನ್ನೂ ಓದಿ | MB Patil: ಸರ್ಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ಇ-ಕಾಮರ್ಸ್ ಪೋರ್ಟಲ್ ತೆರೆಯಲು ಸಿದ್ಧತೆ: ಎಂ.ಬಿ. ಪಾಟೀಲ್

3532 ಚ.ಮೀ. ವಿಸ್ತೀರ್ಣದ ನಿವೇಶನದಲ್ಲಿ 2B+G+6UF ಗಳನ್ನೊಳಗೊಂಡಂತೆ ಒಟ್ಟಾರೆಯಾಗಿ 9 ಮಹಡಿಗಳ 12,212 ಚ.ಮೀ ವಿಸ್ತೀರ್ಣದ (1,31,450 ಚದರ ಅಡಿ) ಕಟ್ಟಡವನ್ನು ನಿರ್ಮಿಸಲಾಗಿದೆ. ಇದರಲ್ಲಿ 2 VVIP ಕೊಠಡಿ, 32 ಇತರ ಕೊಠಡಿ, 18 ಸಿಂಗಲ್ ರೂಮ್ (Total 52 Rooms) and 86 ಶೌಚಗೃಹಗಳು ಇವೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್ಯದ ಪ್ರತಿಷ್ಠಿತ ರಾಯಭಾರಿ ಸಂಸ್ಥೆಯಾಗಿ ಕರ್ನಾಟಕ ಭವನವನ್ನು ಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರದ ವಿವಿಧ ಮಂತ್ರಾಲಯಗಳು, ವಿದೇಶಗಳ ರಾಯಭಾರಿ ಕಛೇರಿಗಳ ಜೊತೆಗೆ, ದೆಹಲಿಯಲ್ಲಿನ ಕೇಂದ್ರ ಮಂತ್ರಾಲಯದ ಇತರೆ ವಿಭಾಗಗಳು ಹಾಗೂ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯ ಸಂಪರ್ಕ ಸಾಧಿಸುವುದರೊಂದಿಗೆ, ರಾಜ್ಯಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಬಗ್ಗೆ ಕೇಂದ್ರ ಮಟ್ಟದಲ್ಲಿ ರಾಜ್ಯದ ಮೂಲ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕರ್ನಾಟಕ ಭವನವು ರಾಜ್ಯ ಸರ್ಕಾರದ ಆತಿಥ್ಯ ಸಂಸ್ಥೆಯಾಗಿ, ಕರ್ನಾಟಕದ ಚುನಾಯಿತ ಪ್ರತಿನಿಧಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳಿಗೆ ಆತಿಥ್ಯ ಒದಗಿಸುತ್ತಿದೆ.