Smart meters: ಸ್ಮಾರ್ಟ್ ಮೀಟರ್ ಹೆಸರಲ್ಲಿ ಮಹಾ ಸುಲಿಗೆ; ಗ್ರಾಹಕ ವಿರೋಧಿ ನೀತಿ ಕೈಬಿಡಲು ಆಗ್ರಹ
Smart meters: ಸ್ಮಾರ್ಟ್ ಮೀಟರ್ ಕಡ್ಡಾಯ ಯೋಜನೆಯುವ ಗ್ರಾಹಕ ವಿರೋಧಿಯಾಗಿದ್ದು, ಈ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಆಗ್ರಹಿಸಿದೆ. 6 ಸಾವಿರ ಕೋಟಿಗೂ ಅಧಿಕ ಮೊತ್ತದ ಬೃಹತ್ ಹಗರಣ ಜಾರಿಗೆ ತರಲು ಸರ್ಕಾರ/ಎಸ್ಕಾಂಗಳು ನಿಯಮಗಳನ್ನು ಗಾಳಿಗೆ ತೂರಿವೆ ಎಂಬ ಆರೋಪ ಕೇಳಿಬಂದಿದೆ.


ಬೆಂಗಳೂರು: ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ರಾಜ್ಯ ಸರ್ಕಾರ ಜನರ ಕಿಸೆಯಿಂದ ಸ್ಮಾರ್ಟ್ ಆಗಿ ಸಾವಿರಾರು ಕೋಟಿ ರೂ. ಸುಲಿಗೆ ಮಾಡಲು ಮುಂದಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈಗಾಗಲೇ ಗುಣಮಟ್ಟದ ವಿದ್ಯುತ್ ಪೂರೈಸಲು ವಿಫಲವಾಗಿ ಜನರ ಆಕ್ರೋಶಕ್ಕೆ ಗುರಿಯಾಗಿರುವ ಸರ್ಕಾರ, ದುಬಾರಿ, ಅನಗತ್ಯ ಸ್ಮಾರ್ಟ್ ಮೀಟರ್ (Smart meters) ಖರೀದಿಸಲು ಕಡ್ಡಾಯ ಮಾಡುವ ಯೋಜನೆಯೊಂದನ್ನು ರೂಪಿಸಿ, ಅದಕ್ಕಾಗಿ ಟೆಂಡರ್ ಪ್ರಕ್ರಿಯೆಯನ್ನೂ ಆರಂಭಿಸಿದೆ. ಈ ಬಗ್ಗೆ ವ್ಯಾಪಕವಾಗಿ ವಿರೋಧ ಮತ್ತು ಪ್ರತಿಭಟನೆಗಳು ನಡೆಯುತ್ತಿದ್ದರೂ ಸರ್ಕಾರ ಅಥವಾ ಎಸ್ಕಾಂಗಳು ಕ್ಯಾರೇ ಎನ್ನುತ್ತಿಲ್ಲ. ಸ್ಮಾರ್ಟ್ ಮೀಟರ್ ಕಡ್ಡಾಯ ಯೋಜನೆಯುವ ಗ್ರಾಹಕ ವಿರೋಧಿಯಾಗಿದ್ದು, ಈ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
ಏನಿದು ಸ್ಮಾರ್ಟ್ ಮೀಟರ್?
ವಿದ್ಯುತ್ ಬಳಕೆಯ ವಿವರ ಸೇರಿದಂತೆ ಅನೇಕ ತಾಂತ್ರಿಕ ಮಾಹಿತಿಗಳನ್ನು ಹಿಡಿದಿಟ್ಟುಕೊಳ್ಳುವ ಮತ್ತು ಸರ್ವರ್‌ನಿಂದ ನೇರವಾಗಿ ನಿಯಂತ್ರಿಸಬಹುದಾದ ಹೊಸ ತಂತ್ರಜ್ಞಾನದ ಸಾಧನವೇ ಸ್ಮಾರ್ಟ್ ಮೀಟರ್. ಈ ಸ್ಮಾರ್ಟ್ ಮೀಟರ್ ಮೂಲಕ ವಿದ್ಯುತ್ ಬಳಕೆಯ ಮಾಪನವನ್ನಷ್ಟೇ ಅಲ್ಲದೆ ಸ್ಥಳಕ್ಕೆ ತೆರಳದೆಯೇ ಸಂಪರ್ಕ ಕಡಿತಗೊಳಿಸುವ ಮತ್ತು ಮರುಸ್ಥಾಪಿಸುವ ಪ್ರಕ್ರಿಯೆಯನ್ನೂ ಮಾಡಬಹುದು.
ಇದರ ಅಳವಡಿಕೆಯಿಂದ ಉಪಯೋಗ ಮತ್ತು ತೊಂದರೆಗಳೆರಡೂ ಇವೆ. ನಿಖರ ಮತ್ತು ನೈಜ ಸಮಯದ ಮಾಹಿತಿ ಪಡೆಯಬಹುದು, ಆದರೆ ಈ ತಂತ್ರಜ್ಞಾನದ ನೈಜ ಉಪಯೋಗವಾಗುವುದು ಪ್ರತಿ ಮನೆಗೂ ಇದನ್ನು ಅಳವಡಿಸಿದಾಗ ಮಾತ್ರ. ಅಷ್ಟೇ ಅಲ್ಲ ಇದು ಅತಿ ದುಬಾರಿ ಉಪಕರಣವೂ ಹೌದು.
ನಿಯಮ ಮತ್ತು ಕಾನೂನುಗಳು ಲೆಕ್ಕಕ್ಕೇ ಇಲ್ಲ
6 ಸಾವಿರ ಕೋಟಿಗೂ ಅಧಿಕ ಮೊತ್ತದ ಈ ಬೃಹತ್ ಹಗರಣ ಜಾರಿಗೆ ತರಲು ಸರ್ಕಾರ/ಎಸ್ಕಾಂ ಗಳು ನಿಯಮಗಳನ್ನು ಸ್ಪಷ್ಟವಾಗಿ ಮತ್ತು ಉದ್ದೇಶ ಪೂರ್ವಕವಾಗಿ ಗಾಳಿಗೆ ತೂರಿವೆ ಎಂಬ ಆರೋಪ ಕೇಳಿಬಂದಿದೆ.
ಕೇಂದ್ರ ಸರ್ಕಾರ ವಿದ್ಯುತ್ ವಿತರಣೆಯನ್ನು ಪರಿಣಾಮಕಾರಿಯಾಗಿಸಲು ಆರ್‌ಡಿಡಿಎಸ್ (Revamped Distribution Sector Scheme) ಯೋಜನೆಯನ್ನು ಜಾರಿಗೆ ತಂದು ರಾಜ್ಯಸರ್ಕಾರಗಳಿಗೆ ಹಣಕಾಸಿನ ನೆರವನ್ನೂ ಘೋಷಿಸಿತ್ತು. ಅನೇಕ ರಾಜ್ಯಗಳು ಇದರ ಉಪಯೋಗ ಪಡೆದುಕೊಂಡಿದ್ದರೆ, ಕರ್ನಾಟಕ ಮಾತ್ರ ಇನ್ನೂ ಈ ಯೋಜನೆಯ ನೆರವನ್ನು ಪಡೆದುಕೊಂಡಿರಲಿಲ್ಲ.
ಎಸ್ಕಾಂಗಳ ಕಾರ್ಯನಿರ್ವಹಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಷ್ಟು ನಿಯಮಾವಳಿಗಳನ್ನು ರೂಪಿಸಿವೆ. ಕೇಂದ್ರ ಸರ್ಕಾರದ Central Electricity Authority (CEA) ಮತ್ತು Karnataka Electricity Regulatory Commission (KERC) ಮತ್ತು ಎಲ್ಲಾ ಎಸ್ಕಾಂಗಳು ತಪ್ಪದೇ ಪಾಲಿಸಲೇಬೇಕು.
ಈಗ ಸರ್ಕಾರ ಎಸ್ಕಾಂಗಳ ಉದ್ಧಾರಕ್ಕಾಗಿ ಎಂದು ಬಿಂಬಿಸಿ ಪರಿಚಯಿಸಲು ಮುಂದಾಗಿರುವ ಸದರಿ ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆ ರೂಪಿಸುವಾಗ ಮಾತ್ರ ಸಿಇಎ ಮತ್ತು ಕೆಇಆರ್‌ಸಿ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಗಾಳಿಗೆ ತೂರಿದೆ. ಸರ್ಕಾರದ ಈ ಅವಸರದ ಹಿಂದಿರುವುದು ಮಾತ್ರ ಗ್ರಾಹಕರ ಜೇಬಿಗೆ ಕತ್ತರಿ ಹಾಕಿ, ಕೆಲ ಅಧಿಕಾರಿಗಳ ಮತ್ತು ಅಧಿಕಾರಸ್ಥರ ತಿಜೋರಿ ತುಂಬಿಸುವ ಹುನ್ನಾರ ಎನ್ನಲಾಗಿದೆ.
ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆ ರೂಪಿಸುವಾಗ ಸರ್ಕಾರ ಕೆಲವು ಹಂತಗಳನ್ನು ಅನುಸರಿಸಬೇಕಿತ್ತು. ಈ ಹಂತಗಳನ್ನು ಪಾಲಿಸಿದಾಗಲಷ್ಟೇ ಸಾವಿರಾರು ಕೋಟಿ ವೆಚ್ಚದ ಈ ಯೋಜನೆಯ ಸಂಪೂರ್ಣ ಉಪಯೋಗ ಸಿಗುವುದು. ಆದರೆ ಸರ್ಕಾರ ಮೊದಲ ಎರಡು ಹಂತಗಳನ್ನು ನಿರ್ಲಕ್ಷಿಸಿ ಹೊಸ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸುವ ಅವೈಜ್ಞಾನಿಕ, ಅಪ್ರಸ್ತುತ, ಅಪ್ರಯೋಜಕ ಕೆಲಸಕ್ಕೆ ಮುಂದಾಗಿದೆ. ಕೆಇಅರ್‌ಸಿ (Quasi Judiciary Body) ನಿಯಮದ ಪ್ರಕಾರ ಸರ್ಕಾರ ಅಥವಾ ಎಸ್ಕಾಂಗಳು ಹೊಸ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸುವಂತೆಯೇ ಇಲ್ಲ. ಇದು ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ. ಈ ಕಸರತ್ತಿನ ಹಿಂದಿರುವ ಏಕೈಕ ಉದ್ದೇಶ ಗ್ರಾಹಕರಿಂದ ಹಣ ದೋಚಿ ತಮ್ಮ ತಿಜೋರಿ ತುಂಬಿಸಿಕೊಳ್ಳುವುದು.
ಈ ಸುದ್ದಿಯನ್ನೂ ಓದಿ | ವಾಹನ ಪರಿವರ್ತನೆ ಹೆಚ್ಚಿಸಲು ಕರ್ನಾಟಕದ ಮುಂದಿನ ಅವಕಾಶ - ಜೆಇವಿ ಆದೇಶ
ಸ್ಮಾರ್ಟ್ ಮೀಟರ್‌ಗಾಗಿ ಸರ್ಕಾರ ಅನುಮೋದನೆ ಮಾಡಿರುವ ಮೊತ್ತ (SR Price) ಈ ಕೆಳಗಿನಂತಿದೆ.
- ಸಿಂಗಲ್ ಫೇಸ್ ಸ್ಮಾರ್ಟ್ಸ್ ಮೀಟರ್- Rs 2,034/- Per Meter
- ತ್ರೀ ಫೇಸ್ ಸ್ಮಾರ್ಟ್ಸ್ ಮೀಟರ್- Rs 2,712/- Per Meter
- ತ್ರೀ ಫೇಸ್ LT-CT ಸ್ಮಾರ್ಟ್ಸ್ ಮೀಟರ್- Rs 3,390/- Per Meter
ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಸಾಧಾರಣ ಮೀಟರ್‌ನ ದರಪಟ್ಟಿ

ಇತರ ರಾಜ್ಯಗಳಲ್ಲಿ ಬಳಸುವ ದರ ಮತ್ತು ವಿಧಾನ ನೋಡುವುದಾದರೆ ಸ್ಮಾರ್ಟ್ ಮೀಟರ್‌ನ ವೆಚ್ಚ + AMISP ವೆಚ್ಚ + ಅನುಸ್ಥಾಪನಾ ಶುಲ್ಕಗಳು + ಮಾನವಶಕ್ತಿ ವೆಚ್ಚ + ಮೀಟರ್ ಔಟ್ಲೆಟ್ ಬಾಡಿಗೆ ಶುಲ್ಕಗಳು ಸೇರಿದಂತೆ ಎಲ್ಲಾ ಕ್ಯಾಪೆಕ್ಸ್ ಹೂಡಿಕೆಯನ್ನು ಮಾರಾಟಗಾರರೇ ಮಾಡಬೇಕು. ಇದರಿಂದ ಮಾರಾಟಗಾರರಿಗೆ 10 ವರ್ಷಗಳವರೆಗೆ ಮಾಸಿಕ ಶುಲ್ಕ ದೊರೆಯುತ್ತದೆ. ಇಲಾಖೆ ಅಥವಾ ಗ್ರಾಹಕರಿಂದ ಯಾವುದೇ ಮುಂಗಡ ಪಾವತಿ ಇರುವುದಿಲ್ಲ. ಆದರೆ, ರಾಜ್ಯದಲ್ಲಿ ಜನರಿಂದ ಹಣ ಸುಲಿಗೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಕಿಡಿಕಾರಿದೆ.
ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ವಸೂಲಾಗುವ ಮೊತ್ತ

ಈ ಮಹಾ ದರೋಡೆಯ ಸುಳಿವು ತಿಳಿದ ಅನೇಕ ಸಂಘಟನೆಗಳ ಮನವಿ ಮತ್ತು ಪ್ರತಿಭಟನೆಗಳಿಗೂ ಸರ್ಕಾರ ಮತ್ತು ಬೆಸ್ಕಾಂ ಸೇರಿದಂತೆ ರಾಜ್ಯದ ವಿದ್ಯುತ್ ವಿತರಣಾ ಸಂಸ್ಥೆಗಳು ಕ್ಯಾರೇ ಎನ್ನುತ್ತಿಲ್ಲ. ಈ ಎಲ್ಲರ ಉದ್ದೇಶ ಕೇವಲ ಕರ್ನಾಟಕದ ಸಮಸ್ತ ಜನರನ್ನು ವಂಚಿಸಿ ಹಣ ಮಾಡಿಕೊಳ್ಳುವುದು. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕಾದ ಅಗತ್ಯವಿದೆ ಮತ್ತು ಈ ಅಪ್ರಯೋಜಕ ಯೋಜನೆಯನ್ನು ತಕ್ಷಣವೇ ಕೈಬಿಡಬೇಕಿದೆ ಎಂದು ವಿದ್ಯುತ್ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
ಬೆಸ್ಕಾಂ ಕಚೇರಿಯಿಂದ ಮುಂಬರುವ ಎಲ್ಲಾ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಬೇಕು ಎಂದು ಫೆ.15ರಂದು ಆದೇಶ ಹೊರಡಿಸಲಾಗಿತ್ತಿ. ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ ನಡೆಸಲಾಗಿತ್ತು.
ಹೊಸ ಸ್ಮಾರ್ಟ್ ಮೀಟರ್‌ನ ಬೆಲೆ ಅತಿ ಹೆಚ್ಚಾಗಿದ್ದು ಗ್ರಾಹಕರಿಗೆ ಹೊರೆಯಾಗುವ ಮುನ್ಸೂಚನೆಗಳು ಹೆಚ್ಚಾಗಿವೆ. ಸಿಇಎ ಹಾಗೂ ಕೆಇಆರ್‌ಸಿ ನಿಯಮಗಳ ಪ್ರಕಾರ ಎಲ್ಲೂ ಹೊಸ ವಿದ್ಯುತ್ ಸಂಪರ್ಕಗಳಿಗೆ ಕಡ್ಡಾಯವಾಗಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಬೇಕು ಆದೇಶ ಇಲ್ಲ. ಹೀಗಾಗಿ ಬೆಸ್ಕಾಂ ಕೇಂದ್ರ ಕಚೇರಿಯಿಂದ ಹೊರಡಿಸಿರುವ ಪತ್ರವನ್ನು ಹಿಂಪಡೆಯಬೇಕು. ದೇಶದ ಬೇರೆ ರಾಜ್ಯಗಳಲ್ಲೆಲ್ಲ ಉಚಿತ ಮಾಪಕಗಳನ್ನು ಕೊಟ್ಟಿದ್ದು ಹಾಗೂ ಹಳೆಯ ಸಂಪರ್ಕಗಳಿಗೆ ಮೊದಲು ಬದಲಾಯಿಸಿ ಗ್ರಾಹಕರಿಗೆ ಬೇಕಾದರೆ ಮಾತ್ರವೇ ಮಾಪಕಗಳನ್ನು ಮಾರಾಟ ಮಾಡಲಾಗುತ್ತಿದೆ. ಸ್ಮಾರ್ಟ್ ಮೀಟರ್ ನೆಪದಲ್ಲಿ ಹೊಸ ಗ್ರಾಹಕರಿಗೆ ಸಿಗಬೇಕಾದ ಗೃಹಜೋತಿ ಫಲಾನುಭವಿಗಳಿಗೆ ಕತ್ತರಿ ಹಾಕಲು ಬೆಸ್ಕಾಂ ಇಲಾಖೆ ಪಿತೂರಿಗೆ ಮುಂದಾಗಿದೆ. ಹಾಗಾಗಿ ಈ ಗ್ರಾಹಕರ ವಿರೋಧಿ ನೀತಿಯನ್ನು ಹಿಂಪಡೆದು ಕಾನೂನಾತ್ಮಕವಾಗಿ ವಿದ್ಯುತ್ ಗ್ರಾಹಕರಿಗೆ ಸಹಕಾರಿಯಾಗುವ ರೀತಿಯಲ್ಲಿ ಹೊಸ ಆದೇಶವನ್ನು ಹೊರಡಿಸಬೇಕೆಂದು ಆಗ್ರಹಿಸಿ ಗ್ರಾಹಕರು ಮತ್ತು ವಿದ್ಯುತ್ ಗುತ್ತಿಗೆದಾರರು ಸೇರಿ ಮೌನ ಪ್ರತಿಭಟನೆ ಮಾಡಿದ್ದರು.