ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Karnataka Weather: ರಾಜ್ಯದಲ್ಲಿ ಫೆಬ್ರವರಿಯಲ್ಲೇ ರಣಬಿಸಿಲು, ಏಪ್ರಿಲ್‌ನಲ್ಲಿ ಮಳೆ!

Karnataka Weather: ಕಳೆದೊಂದು ವಾರದಿಂದ ಬಿಸಿಲಿನ ಝಳಕ್ಕೆ ಕರ್ನಾಟಕ ಸಿಲುಕಿದ್ದು, ಈ ಬಗ್ಗೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಫೆಬ್ರವರಿಯಲ್ಲೇ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಪ್ರಮಾಣ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದ್ದು, ತಿಂಗಳ ಕೊನೆಯ ವಾರದಲ್ಲಿ ತಾಪಮಾನ ಇಳಿಮುಖವಾಗುವ ಸಾಧ್ಯತೆಯಿದೆ ಎಂದು ವಿವರಿಸಿದ್ದಾರೆ.

ರಾಜ್ಯದಲ್ಲಿ ಫೆಬ್ರವರಿಯಲ್ಲೇ ರಣಬಿಸಿಲು, ಏಪ್ರಿಲ್‌ನಲ್ಲಿ ಮಳೆ!

Profile Prabhakara R Feb 21, 2025 6:04 PM

ವಿಶ್ವವಾಣಿ ಸುದ್ದಿಮನೆ, ಬೆಂಗಳೂರು: ತೀವ್ರ ಚಳಿಯಿಂದ ಬಳಲಿದ್ದ ಕರ್ನಾಟಕದಲ್ಲಿ ಇದೀಗ ಫೆಬ್ರವರಿಯಲ್ಲಿಯೇ ಬಿಸಿಲಿನ ತಾಪದಲ್ಲಿ ತೀವ್ರ ಏರಿಕೆ ಕಂಡಿದ್ದು, ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಅಲ್ಲದೇ, ಪೂರ್ವ ಮುಂಗಾರಿನಲ್ಲಿಯೂ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ನೇತೃತ್ವದಲ್ಲಿ ನಡೆದ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಭೆಯಲ್ಲಿ ಪ್ರಸ್ತುತ 2025ನೇ ಸಾಲಿನ ಹಿಂಗಾರು-ಮುಂಗಾರು ಮಳೆ ಸ್ಥಿತಿ, ಕೃಷಿ, ಕುಡಿಯುವ ನೀರು, ಹವಾಮಾನ ಹಾಗೂ ಅಣೆಕಟ್ಟೆಗಳಲ್ಲಿನ ನೀರಿನ ಮಟ್ಟದ ಕುರಿತು ಚರ್ಚಿಸಲಾಯಿತು. ಈ ವೇಳೆ ಮಾಹಿತಿ ನೀಡಿರುವ ಅಧಿಕಾರಿಗಳು, ಪ್ರಸ್ತುತ ವರ್ಷ ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ. ಏಪ್ರಿಲ್-ಮೇನಲ್ಲಿ ಉತ್ತಮ ಮಳೆಯಾಗಲಿದೆ. ಫೆಬ್ರವರಿ-ಮಾರ್ಚ್ ತಿಂಗಳ ಕೊನೆಯ ವಾರದಲ್ಲೂ ಹೆಚ್ಚು ಮಳೆ ಸಾಧ್ಯತೆ ಇದೆ. ಆದರೆ, ಹಿಂಗಾರಿನಲ್ಲಿ ಪ್ರಸ್ತುತ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹೇಳಿದ್ದಾರೆ.

ಇನ್ನು ಕಳೆದೊಂದು ವಾರದಿಂದ ಬಿಸುಲಿನ ಝಳಕ್ಕೆ ಕರ್ನಾಟಕ ಸಿಲುಕಿದ್ದು, ಈ ಬಗ್ಗೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಫೆಬ್ರವರಿಯಲ್ಲೇ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಪ್ರಮಾಣ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದ್ದು, ತಿಂಗಳ ಕೊನೆಯ ವಾರದಲ್ಲಿ ತಾಪಮಾನ ಇಳಿಮುಖವಾಗುವ ಸಾಧ್ಯತೆಯಿದೆ ಎಂದು ವಿವರಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಬಿಸಿಲು ಬೇಗ ಕಾಣಿಸಿಕೊಂಡಿರುವುದರಿಂದ ಬೇಸಿಗೆ ಕಾಲದಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿನ ಪ್ರಮುಖ 14 ಜಲಾಶಯಗಳಲ್ಲಿ ಪ್ರಸ್ತುತ 535.21 ಟಿಎಂಸಿ ನೀರಿನ ಸಂಗ್ರಹಣೆಯಿದೆ.

ಸರಾಸರಿ ನೀರಿನ ಸಂಗ್ರಹಣೆಯ ಶೇ.60ರಷ್ಟು ಇದೆ. ಕಳೆದ ವರ್ಷ ಇದೇ ಸಮಯದಲ್ಲಿ 332.52 ಟಿ.ಎಂ.ಸಿ. ನೀರಿನ ಸಂಗ್ರಹಣೆ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಸರಾಸರಿ ನೀರಿನಲ್ಲಿ ಏರಿಕೆಯಿದ್ದರೂ ಹಲವು ಜಿಲ್ಲೆಗಳಲ್ಲಿ ನೀರಿನ ಅಭಾವ ಕಾಡುವ ಸಾಧ್ಯತೆಯಿದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.

ರಾಜ್ಯದ ಕೆಲ ಜಲಾಶಯಗಳಲ್ಲಿ ನೀರಿನ ಮಟ್ಟ ತೃಪ್ತಿಕರವಾಗಿಲ್ಲ. ಆದ್ದರಿಂದ ಜಲಾನಯನ ಪ್ರದೇಶಗಳಲ್ಲಿನ ಬೆಳೆಗಳಿಗೆ ಅವಶ್ಯವಿರುವ ನೀರಿನ ಪ್ರಮಾಣದ ಬಗ್ಗೆ ಗಮನದಲ್ಲಿರಿಸಿಕೊಂಡು ಮುಂಬರುವ ದಿನಗಳಲ್ಲಿ ಜಲಾಶಯಗಳ ನೀರಿನ ಮಟ್ಟ ಯಾವ ಮಟ್ಟ ತಲುಪಲಿದೆ? ಅದರಿಂದಾಗಿ ಕುಡಿಯುವ ನೀರಿಗಾಗಿ ಲಭ್ಯವಾಗಲಿರುವ ನೀರಿನ ಪ್ರಮಾಣವೆಷ್ಟು? ಈ ಕುರಿತು ಮುಂದಿನ ಸಭೆಗಳಲ್ಲಿ ಸ್ಪಷ್ಟ ಮಾಹಿತಿ ನೀಡುವಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕುಡಿಯುವ ನೀರಿಗೆ ಅವಶ್ಯವಿರುವ ನೀರನ್ನು ಕಾಯ್ದಿರಿಸಿದ ನಂತರವೇ ನೀರಾವರಿಗಾಗಿ ನೀರನ್ನು ಬಿಡುಗಡೆಗೊಳಿಸುವ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಟ್ಯಾಂಕ‌ರ್ ನೀರು ಒದಗಿಸಿ

ರಾಜ್ಯದ ಐದು ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳ 13 ತಾಲೂಕುಗಳ ವ್ಯಾಪ್ತಿಯ 66 ಗ್ರಾಮಗಳಿಗೆ ದೀರ್ಘಕಾಲೀನ ಸಮಸ್ಯೆ ಹಾಗೂ ನೀರಿನ ಗುಣಮಟ್ಟದ ಸಮಸ್ಯೆಯಿಂದಾಗಿ ಬಾಡಿಗೆ ಟ್ಯಾಂಕರ್ ಮತ್ತು ಬೋರ್‌ವೆಲ್‌ಗಳ ಮುಖಾಂತರ ಕುಡಿಯುವ ನೀರು ಸರಬ ರಾಜು ಮಾಡಲಾಗುತ್ತಿದೆ. ಅದೇ ರೀತಿ ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ 2 ಜಿಲ್ಲೆಗ ಳಾದ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳ 5 ನಗರ ಸ್ಥಳೀ ಯ ಸಂಸ್ಥೆಗಳ 56 ವಾರ್ಡ್‌ಗಳಿಗೆ ಟ್ಯಾಂಕ‌ರ್ ಮತ್ತು ಬೋರ್‌ವೆಲ್‌ಗಳ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳ ಪಟ್ಟಿಯನ್ನು ಗುರುತಿಸಲು ಸಭೆಯಲ್ಲಿ ಸೂಚನೆ ನೀಡಲಾಯಿತು ಎಂದು ಸಚಿವ ಕೃಷ್ಣಭೈರೇಗೌಡ ವಿವರಿಸಿದರು.

ಈ ಸುದ್ದಿಯನ್ನೂ ಓದಿ | Gym Injury Tips: ಫಿಟ್ ಆಗಿರಲೂ ಜಿಮ್​ಗೆ ಹೋಗುವ ಮುನ್ನ ಈ ವಿಚಾರ ನೆನಪಿನಲ್ಲಿಡಿ!

ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಉಪಸ್ಥಿತರಿದ್ದರು.