BJP Karnataka: ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ: ಬಿ.ವೈ.ವಿಜಯೇಂದ್ರ
ಬಿಜೆಪಿ ಮುಸ್ಲಿಂರ ವಿರೋಧಿ ಅಲ್ಲ. ಆದರೆ, ಮುಸ್ಲಿಂರಿಗೆ ತೃಪ್ತಿ ಮಾಡುವ ಮೂಲಕ ಹಿಂದುಗಳನ್ನು ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಓಲೈಕೆಯೇ ಆಗಿದೆಯೇ ಹೊರತು ಇದು ಅಭಿವೃದ್ಧಿ ಬಜೆಟ್ ಅಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.


ವಿಶ್ವವಾಣಿ ಸುದ್ದಿಮನೆ, ಕಲಬುರಗಿ: ಹನಿ ಟ್ರ್ಯಾಪ್ ಬಗ್ಗೆ ಹೆಚ್ಚೇನು ಚರ್ಚೆ ಮಾಡುವುದಿಲ್ಲ. ಈ ಬಗ್ಗೆ ಸದನದಲ್ಲಿ ಸಾಕಷ್ಟು ಚರ್ಚೆ ಆಗಿದೆ. ಸಂಪೂರ್ಣ ಪ್ರಕರಣ ಮುಖ್ಯಮಂತ್ರಿ ಕುರ್ಚಿಗೆ ಸುತ್ತುವರೆದಿದೆ. ಇನ್ನು ಬಿಜೆಪಿ ಮುಸ್ಲಿಂರ ವಿರೋಧಿ ಅಲ್ಲ. ಆದರೆ, ಮುಸ್ಲಿಂರಿಗೆ ತೃಪ್ತಿ ಮಾಡುವ ಮೂಲಕ ಹಿಂದುಗಳನ್ನು ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್‌ನ ಈ ಮುಸ್ಲಿಂ ತುಷ್ಟೀಕರಣದ ವಿರುದ್ಧ ಜೆಡಿಎಸ್ ಜತೆ ಸೇರಿ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಹೇಳಿದರು.
ಭಾನುವಾರ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿಗೆ ಹನಿ ಟ್ರ್ಯಾಪ್ ಪ್ರಕರಣ ಸುತ್ತುತ್ತಿದೆ. ಈಗಾಗಲೇ, ಸದನದಲ್ಲಿ ಈ ವಿಚಾರ ಮಾತನಾಡಿದ್ದೇವೆ. ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಇದರ ಬಗ್ಗೆ ಅವರಿಗೆ ಪ್ರಶ್ನೆ ಕೇಳಬೇಕು ಎಂದ ಅವರು, ಕಾಂಗ್ರೆಸ್‌ನಲ್ಲಿ ಆಂತರಿಕ ಗೊಂದಲದಿಂದ ಈಗ ಪ್ರಕರಣ ಹೊರ ಬರುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕ್ಷೀಪ್ರ ಬೆಳವಣಿಗೆ ನಡೆಯುತ್ತದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ ಎಂದು ತಿಳಿಸಿದರು.
ಮುಸ್ಲಿಂ ಓಲೈಕೆ ಸಲ್ಲದು
ಸಿಡಿ ಬಗ್ಗೆ ರಾಜಕಾರಣದ ಚರ್ಚೆ ನಾನು ಮಾಡಲ್ಲ. ಎಲ್ಲಾ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಅವರು ದೂರು ಕೊಡಲಿ, ಕೊಟ್ಟ ಮೇಲೆ ಏನಾಗುತ್ತೆ ನೋಡೊಣ ಎಂದ ವಿಜಯೇಂದ್ರ ಅವರು, ಇವತ್ತು ಚರ್ಚೆ ಆಗಬೇಕಿರೋದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಅದರ ಬಗ್ಗೆ ಚರ್ಚೆ ನಡೆಯಬೇಕು. ಬಿಜೆಪಿ ಮುಸ್ಲಿಂರ ವಿರೋಧಿ ಅಲ್ಲ. ಆದರೆ, ಮುಸ್ಲಿಂರಿಗೆ ತೃಪ್ತಿ ಮಾಡುವ ಮೂಲಕ ಹಿಂದುಗಳನ್ನು ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಓಲೈಕೆಯೇ ಆಗಿದೆಯೇ ಹೊರತು ಇದು ಅಭಿವೃದ್ಧಿ ಬಜೆಟ್ ಅಲ್ಲ. ಈ ಕುರಿತು ಈಗ ತಾನೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಜತೆಗೆ ಮಾತನಾಡಿದ್ದೇನೆ. ಬೆಂಗಳೂರಿಗೆ ಹೋದ ಮೇಲೆ ಕುಮಾರಸ್ವಾಮಿ ಜತೆ ಚರ್ಚೆ ಮಾಡುತ್ತೇನೆ. ಮುಸ್ಲಿಂ ತುಷ್ಟೀಕರಣದ ಬಗ್ಗೆ ಜೆಡಿಎಸ್ ಜತೆ ಸೇರಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಶಾಸಕರ ಅಮಾನತು, ಕ್ಷೇತ್ರದ ಜನರಿಗೆ ಅಪಮಾನ:
18 ಬಿಜೆಪಿ ಶಾಸಕರ ಅಮಾನತು ವಿಚಾರವಾಗಿ ಮಾತನಾಡಿ, ಈ ರೀತಿ ಯಾವತ್ತೂ ಸದಸ್ಯರನ್ನು ಅಮಾನತು ಮಾಡಿರಲಿಲ್ಲ. ಈ ಹಿಂದೆ ಪರಿಷತ್‌ನಲ್ಲಿ ಧರ್ಮೆಗೌಡರನ್ನು ಕಾಂಗ್ರೆಸ್ ಸದಸ್ಯರು ಪೀಠದಿಂದಲೇ ಹೊರ ಹಾಕಿದರು. 18 ಶಾಸಕರ ಅಮಾನತ್ತು ಏಕೆ ಮಾಡಿದ್ದಾರೆ ಎಂದು ಕೇಳಿದ್ದೇನೆ. ಶಾಸಕರ ವರ್ತನೆ ಸರಿಯಿಲ್ಲ ಅಂದರೆ, ಅವರ ಅಧಿಕಾರಕ್ಕೆ ಸಿಮೀತವಾದಂತೆ ಅಮಾನತು ಮಾಡಬಹುದಾಗಿತ್ತು. ಆದರೆ, ಆರು ತಿಂಗಳು ಅಮಾನತು ಮಾಡುವುದು ಕಾನೂನು ಬಾಹಿರವಾಗಿದೆ. ಅಮಾನತಿನ ಜತೆಗೆ ಕಂಡಿಷನ್ ಹಾಕಿರೋದು ಸಂವಿಧಾನ ವಿರೋಧಿ ನಡೆಯಾಗಿದೆ. ಯಾವುದೋ ಕೆಟ್ಟ ಗಳಿಗೆಯಲ್ಲಿ ನಮ್ಮವರು ಈ ರೀತಿ ನಡೆದುಕೊಂಡಿದ್ದಾರೆ. ಅಮಾನತು ಮಾಡಿರೋದು ಆ ಕ್ಷೇತ್ರದ ಜನರಿಗೆ ಮಾಡಿರುವ ಅಪಮಾನವಾಗಿದೆ. ಕೂಡಲೇ, ಅಮಾನತು ಆದೇಶ ಹಿಂತೆಗೆದುಕೊಳ್ಳಬೇಕು. ಈ ಬಗ್ಗೆ ಸಭಾಪತಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಬಿ.ಎಸ್.ವೈಗೂ ಕಲಬುರಗಿಗೂ ಅವಿನಾಭಾವ ಸಂಬಂಧ:
ಯಡಿಯೂರಪ್ಪ ಅವರಿಗೂ, ಕಲಬುರಗಿಗೂ ಅವಿನಾಭ ಸಂಬಂಧವಿದೆ. ಮುಖ್ಯಮಂತ್ರಿ ಇದ್ದಾಗ ಯಡಿಯೂರಪ್ಪ ಅವರು ಸಾಕಷ್ಟು ಕ್ಯಾಬಿನೆಟ್ ಮೀಟಿಂಗ್ ಕಲಬುರಗಿಯಲ್ಲಿ ಮಾಡಿದ್ದಾರೆ. ನಾನು ಸಹ ಕಲಬುರಗಿಯ ಹೆಣ್ಣುಮಗಳನ್ನು ಮದುವೆ ಆಗಿದ್ದೇನೆ. ಈಗ ನನ್ನ ಸಹೋದರನ ಮಗ ಸುಭಾಷ್‌ಗೆ ಇಲ್ಲಿನ ಹುಡುಗಿ ಜತೆ ಮದುವೆ ನಿಶ್ಚಯ ಆಗಿದೆ. ಲಿಂಗರಾಜಪ್ಪ ಅವರ ಮಗಳನ್ನು ನಮ್ಮ ಮನೆಗೆ ತೆಗೆದುಕೊಳ್ಳುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಮದುವೆ ಸಂಬಂಧದಿಂದ ರಾಜಕೀಯ ಲಾಭ: ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ ಅವರ ಮೊಮ್ಮಗನಿಗೆ ಕಲಬುರಗಿಯ ಸಂಬಂಧ ನಿಶ್ಚಯವಾಗಿದ್ದು, ಶರಣಬಸವೇಶ್ವರ ದಾಸೋಹ ಸಂಸ್ಥಾನ ಮನೆತನದ ಲಿಂಗರಾಜಪ್ಪ ಅವರ ಮಗಳ ಜತೆ ಮದುವೆ ಮಾತುಕತೆ ನಡೆದಿದೆ. ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು, ಈಗಾಗಲೇ, ಕಲಬುರಗಿ ಕುಟುಂಬದೊಂದಿಗೆ ಸಂಬಂಧ ಬೆಳೆಸಿರುವ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಈಗ ಸಂಸದ ರಾಘವೇಂದ್ರ ಅವರ ಮಗನಿಗೆ ಕಲಬುರಗಿಯಿಂದ ಸೊಸೆ ತರಲಾಗುತ್ತಿದೆ. ಸೋಮವಾರ ನಿಶ್ಚಿತಾರ್ಥ ಇದೆ. ಮದುವೆ ದಿನಾಂಕವು ಕೂಡ ಫಿಕ್ಸ್ ಆಗಿದೆ. ರಾಜಕೀಯದಲ್ಲಿ ಸ್ವಾರ್ಥ ಇರುತ್ತೆ. ಹೀಗಾಗಿ, ಇಲ್ಲಿನ ಸಂಬಂಧ ಬೆಳೆಸಿದ್ದೇವೆ. ನಮ್ಮ ಬೀಗರು ಕೂಡ ರಾಜಕೀಯದಲ್ಲಿ ಇದ್ದಾರೆ. ಹಾಗಾಗಿ, ಸಂಬಂಧದ ಜತೆಗೆ ಇಲ್ಲಿ ಪಕ್ಷ ಬೆಳೆಸೋದಕ್ಕೂ ಅನುಕೂಲ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ್ ಮತ್ತಿಮಡು, ಎಂಎಲ್‌ಸಿಗಳಾದ ಶಶೀಲ್ ನಮೋಶಿ, ಬಿಜಿ ಪಾಟೀಲ್, ಬಿಜೆಪಿ ಮಹಾನಗರ ಅಧ್ಯಕ್ಷ ಚಂದು ಪಾಟೀಲ್ ಸೇರಿ ಅನೇಕರು ಇದ್ದರು.
ಈ ಸುದ್ದಿಯನ್ನೂ ಓದಿ | BY Vijayendra: ಬೆಲೆ ಏರಿಕೆಯ ʼಗ್ಯಾರಂಟಿʼ ಕೊಟ್ಟ ಕಾಂಗ್ರೆಸ್ ಸರ್ಕಾರ- ಬಿ.ವೈ.ವಿಜಯೇಂದ್ರ