ರೈತ ಆತ್ಮಹತ್ಯೆ: ಪರಿಹಾರಕ್ಕೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ
ಸಾಲದ ಬಾಧೆ ತಾಳಲಾರದೇ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಫಜಲಪುರ ತಾಲೂಕಿನ ಘತ್ತರಗಾ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ರೈತರು ಅಫಜಲಪುರ ತಹಸೀಲ್ದಾರ್ ಕಚೇರಿ ಎದುರು ಮೃತ ರೈತನ ಶವವಿಟ್ಟು ಪ್ರತಿಭಟನೆ ನಡೆಸಿದರು.


ಅಫಜಲಪುರ: ಸಾಲದ ಬಾಧೆ ತಾಳಲಾರದೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ (Farmer Self Harming) ತಾಲೂಕಿನ ಘತ್ತರಗಾ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ರೈತರು ಅಫಜಲಪುರ ತಹಸೀಲ್ದಾರ್ ಕಚೇರಿ ಎದುರು ಮೃತ ರೈತನ ಶವವಿಟ್ಟು ಪ್ರತಿಭಟನೆ ನಡೆಸಿದರು. ಅಫಜಲಪುರ ತಾಲೂಕಿನ ಘತ್ತರಗಾ ಗ್ರಾಮದ ರೈತ ಚಂದ್ರಕಾಂತ ಮಲ್ಲೇಶಪ್ಪ ಬೆಲೂರ (56) ಸಾಲಬಾಧೆಯಿಂದ ಮನೆಯಲ್ಲಿ ನಸುಕಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ್ಡಿದ್ದಾನೆ. ಮೃತ ರೈತ ಚಂದ್ರಕಾಂತ 21 ಎಕರೆ ವ್ಯವಸಾಯ ಭೂಮಿಯಿದ್ದು, ದೇಸಾಯಿ ಕಲ್ಲೂರ ಗ್ರಾಮದ ಕೆಜಿಬಿಯಲ್ಲಿ 7 ಲಕ್ಷ ಸಾಲವಿದೆ. ಅಫಜಲಪುರ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ 6 ಲಕ್ಷ, ಖಾಸಗಿಯಾಗಿ 40 ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದನು ಎನ್ನಲಾಗಿದೆ. ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರೈತ ಆತ್ಮಹತ್ಯೆ ಹಿನ್ನೆಲೆ ತಹಸೀಲ್ದಾರ್ ಕಚೇರಿ ಎದುರು ಮೃತ ರೈತನ ಶವವಿಟ್ಟು ಪ್ರತಿಭಟನೆ ನಡೆಸಲಾಯಿತು. ರೈತ ಮುಖಂಡ ಅವ್ವಣ್ಣ ಮ್ಯಾಕೇರಿ ನೇತೃತ್ವದಲ್ಲಿ ಕುಟುಂಬದ ಸದಸ್ಯರೊಂದಿಗೆ ರೈತರು ಪ್ರತಿಭಟನೆ ನಡೆಸಿ, ಸೂಕ್ತ ಪರಿಹಾರಕ್ಕೆ ಆಗ್ರಹಿಸಿದರು.
ತಹಸೀಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯ ಸರಣಿ ಮುಂದುವರೆದಿದೆ. ಇಷ್ಟಾದರೂ ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ರಾಜು ಬಡದಾಳ, ಭೀಮರಾವ ಗೌರ, ಮಲ್ಲಯ್ಯ ಕರಬಂಟನಾಳ, ಸದಾಶಿವ ದಿವಾಣಜಿ, ಭಾಗಣ್ಣ ಮಾಂಗ, ಮಹಾಂತೇಶ ಬಳುಂಡಗಿ ಇತರರಿದ್ದರು.