ಮಹಾರಾಷ್ಟ್ರ ಪುಂಡರಿಂದ ಮತ್ತೆ ಮೊಂಡಾಟ; ಕರ್ನಾಟಕದ ಬಸ್, ಚಾಲಕನ ಮುಖಕ್ಕೆ ಕಪ್ಪು ಮಸಿ ಬಳಿದು ದರ್ಪ
ಕರ್ನಾಟಕದ ಗಡಿ ಅಂಚಿನ ಮಹಾರಾಷ್ಟ್ರದ ಪುಣೆಯಲ್ಲಿ ಸ್ವಾರಗೇಟದ ಓವರ್ ಬ್ರೀಜ್ ದಾಟುವ ಸಂದರ್ಭದಲ್ಲಿ ಕರ್ನಾಟಕದ ಆಳಂದ-ಸೋಲಾಪೂರ-ಪುಣೆ ಬಸ್ ಹಾಗೂ ಚಾಲಕ ಮುಖಕ್ಕೆ ಮರಾಠಿ ಪುಂಡರು ಕಪ್ಪು ಮಸಿ ಬಳಿ ಉದ್ದಟತನ ಮೆರೆದಿದ್ದಾರೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.


ಕಲಬುರಗಿ(ಆಳಂದ): ಇತ್ತೀಚಿಗೆ ಬೆಳಗಾವಿಯ ಬಾಳೇಕುಂದ್ರಿಯ ಕೆ.ಎಚ್. ಗ್ರಾಮದ ಬಳಿ ಕನ್ನಡ ಮಾತನಾಡಿ ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆಯಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಭಾಷಾ ವಿಚಾರವಾಗಿ ಬಾರಿ ಸಂಘರ್ಷ ನಡೆದಿದೆ. ಅಲ್ಲದೇ ರಾಜ್ಯಾದ್ಯಂತ ಮಹಾರಾಷ್ಟ್ರದ ವಿರುದ್ಧ ಬಾರಿ ಆಕ್ರೋಶ ವ್ಯಕ್ತವಾಗಿ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆ ಮರೆಯಾಗಿವ ಮುನ್ನ ಇದೀಗ ಕರ್ನಾಟಕದ ಗಡಿ ಅಂಚಿನ ಮಹಾರಾಷ್ಟ್ರದ ಪುಣೆಯಲ್ಲಿ ಸ್ವಾರಗೇಟದ ಓವರ್ ಬ್ರೀಜ್ ದಾಟುವ ಸಂದರ್ಭದಲ್ಲಿ ಆಳಂದ-ಸೋಲಾಪೂರ-ಪುಣೆ ಬಸ್ ಹಾಗೂ ಚಾಲಕ ಮುಖಕ್ಕೆ ಮರಾಠಿ ಪುಂಡರು ಕಪ್ಪು ಮಸಿ ಬಳಿ ಉದ್ದಟತನ ಮೆರೆದಿದ್ದಾರೆ.
ಮತ್ತೆ ಮರಾಠಿ ಪುಂಡರು ಕರ್ನಾಟಕದ ಬಸ್ಸುಗಳನ್ನು ಗುರಿಯಾಗಿಸಿ ದಾಳಿ ನಡೆದಿದ್ದಾರೆ. ಸ್ವಾರಗೇಟ ಬ್ರೀಜ್ ದಾಟುವಾಗ ಬಸ್ಸನ್ನು ನಿಲ್ಲಿಸಿ ಚಾಲಕನನ್ನು ಕೆಳಗೆ ಇಳಿಸಿದ್ದಾರೆ. ಬಸ್ಸಿಗೆ ಹಾಗೂ ಡ್ರೈವರ್ ಮುಖ ಮತ್ತು ಕೈಗೆ ಕಪ್ಪು ಮಸಿ ಬಳಿದು ಬಸ್ಸಿನ ಮೇಲೆ ಜೈ ಮಹಾರಾಷ್ಟ್ರ, ಜೈ ಮರಾಠಿ ಬರೆದಿದ್ದಾರೆ. ʼʼನೀವು (ಕರ್ನಾಟಕದವರು) ಮರಾಠಿಗಳನ್ನು ಕೆಣಕಬೇಡಿ. ನಾವು ಪುಂಡರು, ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ. ನಮ್ಮವರನ್ನು (ಮರಾಠಿಗರನ್ನು) ಕರ್ನಾಟಕದಲ್ಲಿ ಏನಾದರೂ ಮಾಡಿದರೆ ನಿಮಗೆ ಇಲ್ಲಿ ಬರಲು ಬಿಡುವುದಿಲ್ಲ. ನಿಮ್ಮ ಸರ್ಕಾರಕ್ಕೆ ಹೇಳಿ ಬೇಷರತ್ತಾಗಿ ಮರಾಠಿಗರ ಬಳಿ ಕ್ಷಮೆ ಕೇಳಿʼʼ ಎಂದು ಬಸ್ ಚಾಲಕ ಸಾದೀಕ ಮುಲಗೆ ಪಡಸಾವಳಿ ಅವರಿಗೆ ಧಮಕಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಬಸ್‌ನಲ್ಲಿದ್ದ ನಿರ್ವಾಹಕ ಪರಮೇಶ್ವರ ಎಚ್ಚೆತ್ತು ಬಸ್ಸಿನಲ್ಲಿ ಇದ್ದ ಪ್ರಯಾಣಿಕರಿಗೆ 2 ಬದಿಯ ಕಿಡಿಗೇಡಿಗಳು ಹಾಗೂ ಬಾಗಿಲು ಮುಚ್ಚಲು ಹೇಳಿದ್ದಾರೆ. ಚಾಲಕ ಮತ್ತು ನಿರ್ವಾಹಕ ಸಮಯ ಪ್ರಜ್ಞೆ, ತಾಳ್ಮೆಯಿಂದ 40 ಜನ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Belagavi Assault Case: ಮಹಾರಾಷ್ಟ್ರ ಬಳಿಕ ಕರ್ನಾಟಕದಿಂದಲೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತ
ಮರಾಠಿ ಕಿಡಿಗೇಡಿಗಳಿಂದ ಗಲಾಟೆ
ಆಳಂದ ಬಸ್ ಡಿಪೋ ಘಟಕ ವ್ಯವಸ್ಥಾಪಕ ಯೋಗಿರಾಜ ಸರಸಂಬಿ (ಹಡಲಗಿ) ಮಾತನಾಡಿ, ʼʼಪುಣೆಯ ಹೊರ ವಲಯದಲ್ಲಿ ಮರಾಠಿ ಕಿಡಿಗೇಡಿಗಳು ಈ ರೀತಿ ಘಟನೆ ಮಾಡಿದ್ದಾರೆಂದು ಚಾಲಕ ಸಾದಿಕ್ ಮುಲಗೆ ಪಡಸಾವಳಿ ಮತ್ತು ನಿರ್ವಾಹಕ ಪರಮೇಶ್ವರ ಅವರು ಗಮನಕ್ಕೆ ತಂದಿದ್ದಾರೆ. ಕೂಡಲೇ ಈ ವಿಷಯವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಫೆ. 27ರ ರಾತ್ರಿಯಿಂದಲೇ ಪುಣೆ ಹೋಗುವ ಆಳಂದ ಬಸ್ಸು ರದ್ದು ಪಡಿಸಲಾಗಿದೆ. ಈ ಪ್ರಕರಣ ಕುರಿತು ಮಹಾರಾಷ್ಟ್ರದ ಘಟನೆ ನಡೆದ ಸ್ಥಳದ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳು ಪತ್ರ ಬರೆಯುತ್ತೇನೆʼʼ ಎಂದು ಹೇಳಿದ್ದಾರೆ.
ಕ್ರಮ ಕೈಗೊಳ್ಳದಿದ್ದರೆ ಹೋರಾಟ
ಆಳಂದದ ನಮ್ಮ ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷ ಮಹಾಂತೇಶ ಜಿ. ಸಣ್ಣಮನಿ ಮಾತನಾಡಿ, ʼʼಮರಾಠಿ ಪುಂಡರು ಪುಣೆಯಲ್ಲಿ ಕರ್ನಾಟಕದ ಆಳಂದ ಬಸ್ಸು ತಡೆದು ತಮ್ಮ ಮನಸ್ಥಿತಿಯನ್ನು ತೋರಿಸಿದ್ದಾರೆ. ಕೂಡಲೇ ಇಂತಹ ಪುಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕ್ರಮ ಆಗದೇ ಹೋದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆʼʼ ಎಂದು ತಿಳಿಸಿದ್ದಾರೆ.