V Somanna: ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಏ.12 ರಿಂದ ಹೊಸ ರೈಲು: ವಿ. ಸೋಮಣ್ಣ
V Somanna: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಏ.12 ರಿಂದ ಹೊಸ ರೈಲು ಸಂಚರಿಸಲಿದೆ. ದಿನಕ್ಕೆ ನಾಲ್ಕು ಬಾರಿ ಹೋಗಿ ಬರುವಂತಹ ಕೆಲಸ ಆಗಲಿದೆ ಎಂದು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ತುಮಕೂರು: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಏ.12 ರಿಂದ ಹೊಸ ರೈಲು ಸಂಚರಿಸಲಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ತಿಳಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.12 ರಂದು ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ (Bangalore to Kukke Subramanya train) ಒಂದು ಹೊಸ ರೈಲು ಬಿಡುತ್ತಿದ್ದೇವೆ. ದಿನಕ್ಕೆ ನಾಲ್ಕು ಬಾರಿ ಹೋಗಿ ಬರುವಂತಹ ಕೆಲಸ ಆಗಲಿದೆ ಎಂದು ಹೇಳಿದರು. ಮುಂದಿನ 15 ದಿನಗಳಲ್ಲಿ ಗದಗ, ವಾಡಿ, ಕುಷ್ಟಗಿ, ಯಲಬುರ್ಗಾ ರೈಲು ಸಂಚಾರ ಲೋಕಾರ್ಪಣೆ ಮಾಡುತ್ತೇವೆ. ಅನೇಕ ರೈಲ್ವೆ ಯೋಜನೆಗಳನ್ನು ಲೋಕಾರ್ಪಣೆ ಮಾಡುವಂತಹ ಕೆಲಸ ಈಗಾಗಲೇ ಆಗಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಹಾವೇರಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದ್ದು, ಇದಕ್ಕೆ ಏಪ್ರಿಲ್ 11ರಂದು ಚಾಲನೆ ನೀಡಲಿದ್ದೇವೆ. ಚಿಕ್ಕಮಗಳೂರಿನಿಂದ ಬೇಲೂರು ರೈಲು ಮಾರ್ಗದ ಬಗ್ಗೆ ಈಗಾಗಲೇ ಪರೀಕ್ಷೆ ನಡೆಯುತ್ತಿದೆ. ಕರ್ನಾಟಕಕ್ಕೆ ರೈಲ್ವೆಯ ಒಂದು ಹೊಸ ಯುಗ ಆರಂಭವಾಗಿದೆ ಎಂದು ಹೇಳಿದರು.
23 ಕಾಮಗಾರಿಗಳ ಪೈಕಿ ಈಗಾಗಲೇ 10 ಕಾಮಗಾರಿಗೆ ಚಾಲನೆ ಕೊಡಲಾಗಿದೆ. ಹಂತ ಹಂತವಾಗಿ ಕೆಲಸಗಳನ್ನು ಪ್ರಾರಂಭ ಮಾಡಲಾಗುತ್ತದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಬಂದ ಮೇಲೆ ರೈಲ್ವೆ ಇಲಾಖೆಗೆ ಒಂದು ಕಾಯಕಲ್ಪ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Tumkur News: ಏ. 11ರಂದು ತುಮಕೂರಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಸೇವಾದೀಕ್ಷಾ, ಸಾಧಕರಿಗೆ ಸನ್ಮಾನ
ಬಡ್ಡಿಹಳ್ಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ
ತುಮಕೂರು: ನಗರದ ಬಡ್ಡಿಹಳ್ಳಿಯ ರೈಲ್ವೆ ಗೇಟ್ ಬಳಿ ಬುಧವಾರ ರೈಲ್ವೆ ಮೇಲುಸೇತುವೆ ನಿರ್ಮಾಣ ಕಾಮಗಾರಿಗೆ ಬುಧವಾರ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು. ಇದರೊಂದಿಗೆ ತಮ್ಮ ಬಹು ವರ್ಷಗಳ ಬೇಡಿಕೆ ಈಡೇರಿದಂತಾಗುವುದು ಎಂದು ಬಡ್ಡಿಹಳ್ಳಿ, ಗೋಕುಲ ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಇಲ್ಲಿನ ನಾಗರಿಕ ಸಮಿತಿಗಳ ಪರವಾಗಿ ಬಿಜೆಪಿ ಮುಖಂಡರಾದ ಎಸ್.ವಿ. ಪ್ರೇಮ್‌ಕುಮಾರ್, ನಿವೃತ್ತ ಪ್ರಾಚಾರ್ಯ ಬಿ.ಎಂ. ಮರಿಬಸಪ್ಪ ಅವರು ಸಚಿವ ಸೋಮಣ್ಣ, ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ನಿಗಧಿತ ಅವಧಿಯಲ್ಲಿ ಮೇಲುಸೇತುವೆ ಕಾಮಗಾರಿ ಪೂರ್ಣಗೊಂಡು ಸಂಚಾರ ಆರಂಭಕ್ಕೆ ಅನುವಾಗಲಿ ಎಂದು ಆಶಿಸಿದರು.
ಈ ಭಾಗದಲ್ಲಿ ಜನವಸತಿ ಪ್ರದೇಶ ವಿಸ್ತಾರವಾಗಿ ಬೆಳೆಯುತ್ತಿದೆ. ಜನಸಂಖ್ಯೆ, ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಲ್ಲಿನ ನಿವಾಸಿಗಳು ಬಿ.ಎಚ್.ರಸ್ತೆ ಮೂಲಕ ನಗರದ ವಿವಿಧ ಭಾಗಗಳಿಗೆ ಹೋಗಿಬರಲು ಬಡ್ಡಿಹಳ್ಳಿ ರೈಲ್ವೆ ಗೇಟ್ ದಾಟಬೇಕಾಗಿದೆ. ಆದರೆ, ಬೆಂಗಳೂರು-ತುಮಕೂರು ನಡುವೆ ಜೋಡಿ ಹಳಿ ಮಾರ್ಗವಾಗಿ ಇಲ್ಲಿ ಸಂಚಾರ ಮಾಡುವ ರೈಲುಗಳ ಸಂಖ್ಯೆಯೂ ಹೆಚ್ಚಾಗಿದೆ. ರೈಲುಗಳು ಹಾದುಹೋಗುವಾಗ ಅರ್ಧ ಗಂಟೆ, ಕಾಲು ಗಂಟೆಗೊಮ್ಮೆ ರೈಲ್ವೆ ಗೇಟ್ ಹಾಕಬೇಕಾಗಿದ್ದು, ನಾಗರೀಕರು ಸಕಾಲದಲ್ಲಿ ತಮ್ಮ ಕೆಲಸಕಾರ್ಯಗಳಿಗೆ ಹೋಗಲು ತೊಂದರೆ ಆಗುತ್ತಿದೆ. ಮೇಲುಸೇತುವೆ ನಿರ್ಮಾಣದಿಂದ ಈ ಸಮಸ್ಯೆ ಬಗೆಹರಿಯುತ್ತದೆ ಎಂದು 32ನೇ ವಾರ್ಡಿನ ಬಿಜೆಪಿ ಮುಖಂಡ ಎಸ್.ವಿ. ಪ್ರೇಮ್‌ಕುಮಾರ್ ಹರ್ಷ ವ್ಯಕ್ತಪಡಿಸಿದರು.
ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗ, ವ್ಯವಹಾರಗಳಿಗೆ ಹೋಗುವವರು, ಆಸ್ಪತ್ರೆಯಂತಹ ತುರ್ತು ಸೇವೆಗೆ ಹೋಗುವ ಸಂದರ್ಭದಲ್ಲಿ ರೈಲ್ವೆ ಗೇಟ್ ಮುಚ್ಚುವುದರಿಂದ ತೊಂದರೆಯಾಗುತ್ತದೆ. ಸೇತುವೆ ನಿರ್ಮಾಣವಾದರೆ ನಾಗರಿಕರು ನಿರಾಳವಾಗಿ ಹೋಗಿಬರಬಹುದು ಎಂದರು.
ನಿವೃತ್ತ ಪ್ರಾಂಶುಪಾಲ ಬಿ.ಎಂ.ಮರಿಬಸಪ್ಪ ಅವರು, ಬಡ್ಡಿಹಳ್ಳಿ, ಗೋಕುಲ ಬಡಾವಣೆ ವೇಗವಾಗಿ ಬೆಳೆಯುತ್ತಿದೆ. ನಗರ ಸಾರಿಗೆ ಸೇವೆಯಂತಹ ಹೆಚ್ಚಿನ ಸೌಕರ್ಯಗಳು ಈ ಪ್ರದೇಶಕ್ಕೆ ಅಗತ್ಯವಿದೆ. ರೈಲ್ವೆಗೇಟ್‌ನ ಸಮಸ್ಯೆಯಿಂದಾಗಿ ಇಂತಹ ಅನೇಕ ಸೌಕರ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ರೈಲ್ವೆ ಮೇಲುಸೇತುವೆ ಪೂರ್ಣಗೊಂಡರೆ ಈ ಪ್ರದೇಶ ಮತ್ತುಷ್ಟು ಅಭಿವೃದ್ಧಿಗೊಂಡು ಬೆಳವಣಿಗೆ ಆಗಲಿದೆ ಎಂದರು.
ಈ ಸುದ್ದಿಯನ್ನೂ ಓದಿ | ESIC Recruitment 2025: ಎಂಪ್ಲಾಯ್ಸ್ ಸ್ಟೇಟ್ ಇನ್ಶೂರೆನ್ಸ್ ಕಾರ್ಪೋರೇಷನ್‌ನಲ್ಲಿದೆ 558 ಹುದ್ದೆ; ಹೀಗೆ ಅಪ್ಲೈ ಮಾಡಿ
ಅಗ್ನಿಶಾಮಕ ಕಚೇರಿ, ಎಚ್‌ಎಂಟಿ ಎದುರು ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಮುಂದೆ ರೈಲ್ವೆ ಫ್ಲೈ ಓವರ್ ನಿರ್ಮಾಣವಾದರೆ ಬೆಂಗಳೂರಿಗೆ ಹೋಗಿಬರುವವರಿಗೆ ಮತ್ತಷ್ಟು ಅನುಕೂಲವಾಗಲಿದೆ. ರೈಲ್ವೆ ಗೇಟ್ ತೆರೆದಾಗ ಆಗುತ್ತಿದ್ದ ವಾಹನಗಳ ನೂಕುನುಗ್ಗಲು ತಪ್ಪುತ್ತದೆ ಎಂದು ಹೇಳಿದರು. ಸ್ಥಳೀಯ ಮುಖಂಡರಾದ ರಾಜಶೇಖರ್, ಎಂ.ಶಿವರಾಜು, ರೇಣುಕಾರಾಧ್ಯ, ನಟರಾಜು, ಮೂರ್ತಿ ಮೊದಲಾದವರು ಸಚಿವ ಸೋಮಣ್ಣ, ಶಾಸಕ ಜ್ಯೋತಿಗಣೇಶ್ ಅವರನ್ನು ಅಭಿನಂದಿಸಿದರು.