ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Basanagouda Patil Yatnal: ಪಕ್ಷದ ಶಿಸ್ತು ಉಲ್ಲಂಘನೆ: ಸೋಮಶೇಖರ್‌, ಹೆಬ್ಬಾರ್‌, ರೇಣುಕಾಚಾರ್ಯ, ಕಟ್ಟಾಗೂ ಬಿಜೆಪಿ ಹೈಕಮಾಂಡ್‌ ನೋಟೀಸ್

Basanagouda Patil Yatnal: ಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪಗಳನ್ನು ಆಧರಿಸಿ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್, ಬಿ.ಪಿ.ಹರೀಶ್ ಹಾಗೂ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, 72 ಗಂಟೆಗಳೊಳಗೆ ಆರೋಪಗಳ ಬಗ್ಗೆ ಉತ್ತರ ನೀಡಬೇಕು.

ಸೋಮಶೇಖರ್‌, ಹೆಬ್ಬಾರ್‌, ರೇಣುಕಾಚಾರ್ಯ, ಕಟ್ಟಾಗೂ ಬಿಜೆಪಿ ನೋಟೀಸ್

ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್

ಹರೀಶ್‌ ಕೇರ ಹರೀಶ್‌ ಕೇರ Mar 27, 2025 1:05 PM

ಬೆಂಗಳೂರು: ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (basanagouda patil yatnal) ಅವರನ್ನು ಮುಂದಿನ 6 ವರ್ಷಗಳ ಕಾಲ ಪ್ರಾಥಮಿಕ ಸದಸ್ಯ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿರುವ ಬೆನ್ನಲ್ಲೇ ಬಿಜೆಪಿಯಲ್ಲಿ (BJP) ಬಂಡಾಯ ಎದ್ದಿರುವ ಇಬ್ಬರು ನಾಯಕರಾದ ಎಸ್‌ ಟಿ ಸೋಮಶೇಖರ್ (ST Somashekar) ಹಾಗೂ ಶಿವರಾಂ ಹೆಬ್ಬಾರ್ (Shivaram hebbar) ಅವರಿಗೂ ಬಿಜೆಪಿ ಶಿಸ್ತು ಸಮಿತಿಯು ಇಬ್ಬರೂ ನಾಯಕರಿಗೂ ಶೋಕಾಸ್ ನೋಟಿಸ್ ನೀಡಿದೆ. ಇದಕ್ಕೆ ಕಾಲಮಿತಿ ನೀಡಿ, ಉತ್ತರಿಸುವಂತೆ ಸಮಿತಿ ಸೂಚಿಸಿದೆ. ಇವರನ್ನೂ ಪಕ್ಷವು ಉಚ್ಛಾಟನೆ ಮಾಡುವ ಸಾಧ್ಯತೆಗಳಿವೆ ಎಂಬ ಅನುಮಾನ ಮೂಡಿದೆ.

ಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪಗಳನ್ನು ಆಧರಿಸಿ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್, ಬಿ.ಪಿ.ಹರೀಶ್ ಹಾಗೂ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, 72 ಗಂಟೆಗಳೊಳಗೆ ಆರೋಪಗಳ ಬಗ್ಗೆ ಉತ್ತರ ನೀಡಬೇಕು. ಗಡುವಿನೊಳಗೆ ಉತ್ತರ ನೀಡದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರ ಮೇಲೆ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಆರೋಪವಿದೆ. ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ. ಬಿ.ವೈ.ವಿಜಯೇಂದ್ರ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ಮಾಜಿ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೂ ಸಹ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪಗಳ ಮೇರೆಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಶೋಕಾಸ್ ನೋಟಿಸ್ ನೀಡಿ 72 ಗಂಟೆಗಳ ಅವಧಿಯಲ್ಲಿ ಉತ್ತರಿಸುವಂತೆ ಸೂಚಿಸಿದೆ.

ಸೋಮಶೇಖರ್‌ ಏನಂದರು?

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್.ಟಿ.ಸೋಮಶೇಖರ್ ಅವರು, ನಾವು ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ಕೆಪಿಸಿಸಿ ಕಚೇರಿಗೂ ಭೇಟಿ ನೀಡಿಲ್ಲ. ದೇವರು ನನಗೆ ಶಕ್ತಿ ನೀಡಿದ್ದಾನೆ, ನಾನು ಕಾನೂನುಬದ್ಧವಾಗಿ ಹೋರಾಡುತ್ತೇನೆ. ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗಿನ ಭೇಟಿ ಅಧಿಕೃತವಾಗಿತ್ತು ಎಂದು ಹೇಳಿದ್ದಾರೆ. ಡಿಕೆ.ಶಿವಕುಮಾರ್ ಕೇವಲ ಕೆಪಿಸಿಸಿ ಅಧ್ಯಕ್ಷರಷ್ಟೇ ಅಲ್ಲ, ಅವರು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದಾರೆ. ನನ್ನ ಕ್ಷೇತ್ರ ಅವರ ಅಡಿಯಲ್ಲಿ ಬರುತ್ತದೆ, ಆದ್ದರಿಂದ ನಾನು ಅವರನ್ನು ಭೇಟಿಯಾಗಿದ್ದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಇತರೆ ಸಚಿವರನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆಯೇ ವಿನಃ ಅವರ ಪಕ್ಷದ ಕಾರ್ಯಕ್ರಮಗಳಲ್ಲಿ ಅಲ್ಲ. ನನ್ನ ಕ್ಷೇತ್ರಕ್ಕೆ ಹಣ ಕೇಳಲು ಸರ್ಕಾರ ಬಳಿ ಹೋಗುವುದರಲ್ಲಿ ತಪ್ಪೇನಿದೆ? ಸರ್ಕಾರ ಬೆಂಗಳೂರು ಶಾಸಕರೊಂದಿಗೆ ಬಜೆಟ್ ಪೂರ್ವ ಸಭೆ ಕರೆದಿತ್ತು, ಆದರೆ, ಉಳಿದವರು ಯಾರೂ ಹಾಜರಾಗಲಿಲ್ಲ. ನನ್ನ ಕ್ಷೇತ್ರಕ್ಕೆ ಅನುದಾನ ಬೇಕೆಂದು ನಾನು ಹೋಗಿದ್ದೆ. ಪಕ್ಷಕ್ಕೆ ಮುಜುಗರ ಉಂಟುಮಾಡಿಲ್ಲ ಅಥವಾ ಯಾವುದೇ ಬಿಜೆಪಿ ನಾಯಕನ ವಿರುದ್ಧ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

ವಿರೋಧ ಪಕ್ಷವಾಗಿ ಬಿಜೆಪಿ ವಿಫಲವಾಗಿದೆ. ಶೋಕಾಸ್ ನೋಟಿಸ್‌ನಲ್ಲಿ ಪಕ್ಷದ ಹೈಕಮಾಂಡ್ ತನಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ನಿಗದಿತ ಸಮಯದೊಳಗೆ ಉತ್ತರಿಸಬೇಕಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ ಅಥವಾ ಕಾಂಗ್ರೆಸ್ ಸಭೆಗಳಲ್ಲಿ ಭಾಗವಹಿಸಿಲ್ಲ. ನನಗೆ ಅನ್ಯಾಯವಾಗಿದೆ. ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದು ಎಲ್ಲವನ್ನೂ ವಿವರಿಸುತ್ತೇನೆ. ವಿವಿಧ ಕಾರಣಗಳಿಂದಾಗಿ ತಾನು ಮೌನವಾಗಿದ್ದೇನೆ. ಪಕ್ಷದಲ್ಲಿನ ಬೆಳವಣಿಗೆಗಳಿಂದ ನನಗೆ ನೋವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Basangouda Patil Yatnal: ಯತ್ನಾಳ್ ಉಚ್ಛಾಟನೆ ವಿರೋಧಿಸಿ ಲಿಂಗಾಯತ ಶಾಸಕರು ಬಿಜೆಪಿಯಿಂದ ಹೊರಬರಲು ಮಠಾಧೀಶರ ಕರೆ