HSRP number plates: ಮಾರ್ಚ್ 31 ಡೆಡ್‌ಲೈನ್, ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವು ಮತ್ತೆ ಮುಂದಕ್ಕೆ?
ಸರ್ಕಾರ 7 ಬಾರಿ ಅವಧಿ ವಿಸ್ತರಣೆ ಮಾಡಿದರೂ ವಾಹನ ಸವಾರರು ಮಾತ್ರ ಡೋಂಟ್ ಕೇರ್ ಮಾಡಿದ್ದಾರೆ. ಏಪ್ರಿಲ್ 1, 2019ರ ಮೊದಲು ನೋಂದಾಯಿಸಲಾದ ವಾಹನಗಳಿಗೆ ನವೆಂಬರ್ 2023 ರ ಮೊದಲು HSRP ಅಳವಡಿಸಲು ರಾಜ್ಯ ಸರ್ಕಾರ ಆಗಸ್ಟ್ 2023 ರಲ್ಲಿ ಅಧಿಸೂಚನೆ ಹೊರಡಿಸಿತು.


ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯುರಿಟಿ ನೋಂದಣಿ ಫಲಕಗಳ (HSRP number plates) ಅಳವಡಿಕೆಗೆ ಡೆಡ್‌ಲೈನ್ (Deadline) ಸಮೀಪಿಸಿದೆ. ಮಾರ್ಚ್ 31 ರಂದು ಗಡುವು ಕೊನೆಗೊಳ್ಳಲಿದೆ. ಆದರೆ ರಾಜ್ಯದಲ್ಲಿ ವಾಹನ ಸವಾರರು ನಿರಾಸಕ್ತಿ ತೋರಿಸುತ್ತಿದ್ದು, ಈವರೆಗೆ ಕೇವಲ 29% ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಸುಮಾರು 2 ಕೋಟಿ ವಾಹನಗಳಲ್ಲಿ ಕೇವಲ 29 ಪ್ರತಿಶತ ವಾಹನಗಳು ಮಾತ್ರ ಅವುಗಳನ್ನು ಅಳವಡಿಸಿದ್ದು, ಹೀಗಾಗಿ ಡೆಡ್‌ಲೈನ್ ಮತ್ತಷ್ಟು ವಿಸ್ತರಣೆಯಾಗುವ ಸಾಧ್ಯತೆಯಿದೆ.
ಸರ್ಕಾರ 7 ಬಾರಿ ಅವಧಿ ವಿಸ್ತರಣೆ ಮಾಡಿದರೂ ವಾಹನ ಸವಾರರು ಮಾತ್ರ ಡೋಂಟ್ ಕೇರ್ ಮಾಡಿದ್ದಾರೆ. ಏಪ್ರಿಲ್ 1, 2019ರ ಮೊದಲು ನೋಂದಾಯಿಸಲಾದ ವಾಹನಗಳಿಗೆ ನವೆಂಬರ್ 2023 ರ ಮೊದಲು HSRP ಅಳವಡಿಸಲು ರಾಜ್ಯ ಸರ್ಕಾರ ಆಗಸ್ಟ್ 2023 ರಲ್ಲಿ ಅಧಿಸೂಚನೆ ಹೊರಡಿಸಿತು. ವಾಹನ ಸುರಕ್ಷತೆ ಹೆಚ್ಚಿಸುವ, ವಾಹನಗಳ ಕಳ್ಳತನ ಮತ್ತು ದುರುಪಯೋಗವನ್ನು ತಡೆಯುವ ಮತ್ತು ಕಾನೂನು ಜಾರಿ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಈ ಹೊಸ ನಂಬರ್ ಪ್ಲೇಟ್ ಅಳವಡಿಸಲಾಗುತ್ತಿದೆ.
ಆದರೆ ನೀರಸ ಪ್ರತಿಕ್ರಿಯೆ ಪರಿಣಾಮ, 2023ರಿಂದ ಹಲವು ಬಾರಿ ಗಡುವು ವಿಸ್ತರಿಸಲಾಗಿದೆ. ರಾಜ್ಯ ಸಾರಿಗೆ ಇಲಾಖೆಯ ಪ್ರಕಾರ, ಕರ್ನಾಟಕದಲ್ಲಿ ಏಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ಸುಮಾರು 2 ಕೋಟಿ ವಾಹನಗಳಿದ್ದು, ಇದರಲ್ಲಿ, ಇಲ್ಲಿಯವರೆಗೆ ಸುಮಾರು 58 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ. ಬೆಂಗಳೂರು ನಗರದಲ್ಲಿ 24,77,653 ವಾಹನಗಳು ನಂಬರ್ ಪ್ಲೇಟ್ ಅಳವಡಿಸಿದರೆ, ಮೈಸೂರು ಜಿಲ್ಲೆಯಲ್ಲಿ 4,07,830 ಅಳವಡಿಸಿವೆ. ಇನ್ನುಳಿದಂತೆ ಇತರ ಜಿಲ್ಲೆಗಳಲ್ಲೂ ವಾಹನ ಮಾಲೀಕರು ನಿರಾಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಾರ್ಯ ಸವಾಲಾಗಿದೆ.
ಆದಾಗ್ಯೂ, ರಾಜ್ಯದಲ್ಲಿ HSRP ಅನುಷ್ಠಾನವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಇದ್ದ ಕಾರಣ, ಟ್ರಾಫಿಕ್ ಇಲಾಖೆ ದಂಡ ವಿಧಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಗಡುವನ್ನು ಮತ್ತೊಮ್ಮೆ ವಿಸ್ತರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಾಗಿದೆ.
ಎಚ್ಎಸ್ಆರ್‌ಪಿ ಅಳವಡಿಕೆ ಹೇಗೆ?
ಸರ್ಕಾರದ https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು Book HSRP ನ್ನು ಕ್ಲಿಕ್ ಮಾಡಿ.
ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿ.
ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆಮಾಡಿ.
ಎಚ್‌ಎಸ್‌ಆರ್‌ಪಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ. ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.
ನಿಮ್ಮ ಅನುಕೂಲಕ್ಕೆ, ತಕ್ಕಂತೆ ಹೆಚ್‌ಎಸ್‌ಆರ್‌ಪಿ ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
ವಾಹನ ಮಾಲೀಕರ ಕಚೇರಿ ಆವರಣ/ಮನೆಯ ಸ್ಥಳದಲ್ಲಿ ಹೆಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಆಯ್ಕೆ ಮಾಡಬಹುದು.
ಇದನ್ನೂ ಓದಿ: HSRP plate: ವಾಹನ ಮಾಲಿಕರಿಗೆ ಸಿಹಿ ಸುದ್ದಿ, ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಸದ್ಯಕ್ಕೆ ದಂಡ ಇಲ್ಲ