Mandala Art Exhibition: ಬೆಂಗಳೂರಿನಲ್ಲಿ ಜುಲೈ 10 ರಿಂದ 13ರವರೆಗೆ ʼಮಂಡಲ ಕಲೆʼ ಪ್ರದರ್ಶನ
Mandala Art Exhibition: ಮಾಧುರ್ಯ ದ್ವಾರಕಾನಾಥ್ ಮತ್ತು ರೋಹಿಣಿ ಭರತ್ ಎಂಬಿಬ್ಬರು ಕಲಾವಿದರು ಸೇರಿ ‘ಮಂಡಲ ಆರ್ಟಿಸ್ಟ್ಸ್ ಕಲೆಕ್ಟಿವ್ - ಬೆಂಗಳೂರು’ ಎಂಬ ಗುಂಪನ್ನು ರಚಿಸಿದ್ದಾರೆ. ಈ ಕಲಾವಿದರ ತಂಡದಿಂದ ಜುಲೈ 10ರಿಂದ 13ರವರೆಗೆ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಮಂಡಲ ಕಲೆ ಪ್ರದರ್ಶನ ಆಯೋಜಿಸಲಾಗಿದೆ.


ಬೆಂಗಳೂರು: ಮಂಡಲ ಕಲೆ ಒಂದು ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಮಾನಸಿಕ ಶಾಂತಿಗೆ ಸಹಾಯಕವಾದ ಪ್ರಾಚೀನ ಕಲೆಯ ರೂಪವಾಗಿದೆ. ಇಂತಹ ಅಪರೂಪದ ಕಲೆಯೊಂದನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವ ʼಮಂಡಲ ಆರ್ಟಿಸ್ಟ್ಸ್ ಕಲೆಕ್ಟಿವ್ʼ ವತಿಯಿಂದ (Mandala artists collective) ʼಸೋಲ್ ಸರ್ಕಲ್ಸ್ʼ ವಿಶೇಷ ಮಂಡಲ ಕಲೆ ಪ್ರದರ್ಶನವನ್ನು (soul circles mandala art exhibition) ಜುಲೈ 10 ರಿಂದ 13ರವರೆಗೆ ನಗರದ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಡಲ ಕಲೆ ಹಿಂದಿನಿಂದಲೂ ಸೃಜನಾತ್ಮಕತೆ ಮತ್ತು ಧ್ಯಾನಕ್ಕಾಗಿ ಬಹಳ ಮಹತ್ವ ಪಡೆದಿದೆ. ಇದು ಟಿಬೆಟ್, ನೇಪಾಳ ಸೇರಿದಂತೆ ಭಾರತದಲ್ಲಿ ಪ್ರಾರಂಭದ ವೇದಗಳಲ್ಲಿ ಮತ್ತು ಬೌದ್ಧ ಧರ್ಮದ ಧ್ಯಾನಪಥಗಳಲ್ಲಿ ತಪಸ್ಸು ಮತ್ತು ಆಧ್ಯಾತ್ಮಿಕ ಅಭ್ಯಾಸಗಳ ಪ್ರಮುಖ ಭಾಗವಾಗಿತ್ತು. ಮಂಡಲ ಚಿತ್ರಶೈಲಿಯನ್ನು ನಾವು ಹೆಚ್ಚಾಗಿ ದೇವಾಲಯಗಳ ಶಿಲ್ಪಗಳಲ್ಲಿ, ಕಾವ್ಯಗಳಲ್ಲಿ ಮತ್ತು ಆಲಂಕಾರಿಕ ಕಲೆಯಲ್ಲೂ ಕಾಣಬಹುದು.
ಇತ್ತೀಚಿನ ಕಾಲದಲ್ಲಿ ಮಂಡಲಾ ಕಲೆ ಯುರೋಪ್ ಮತ್ತು ಅಮೆರಿಕದಲ್ಲಿ ಮನಃಶಾಂತಿ, ಆರ್ಟ್ ಥೆರಪಿ (Art Therapy) ಮತ್ತು ಕ್ರಿಯೇಟಿವಿಟಿ ಕಲಿಕೆಯ ಒಂದು ಭಾಗವಾಗಿ ಹರಡಿದೆ. ಮಂಡಲ ಚಿತ್ರಕಲೆಯು ಏಕಾಗ್ರತೆ ಹೆಚ್ಚಿಸಲು, ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ. ಆದ್ದರಿಂದ ಇದನ್ನು ಮಕ್ಕಳ ಶಿಕ್ಷಣ ಮತ್ತು ಮನಃ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇಷ್ಟೆಲ್ಲಾ ಉಪಯೋಗವಿರುವ ಮಂಡಲ ಚಿತ್ರಕಲೆ ಮತ್ತದರ ಮಹತ್ವ ತಿಳಿದಿರುವ ಅದೆಷ್ಟೋ ಕಲಾವಿದರು ಎಲೆಮರೆಯ ಕಾಯಿಯಂತೆ ತಮ್ಮ ಚಿತ್ರಕಲೆಯ ಸೇವೆಯನ್ನು ಮಾಡುತ್ತಾ ಇತರರೊಡನೆ ಹಂಚಿಕೊಳ್ಳುತ್ತಿದ್ದಾರೆ.

ಇಂತಹ ಅಪರೂಪದ ಕಲೆಯೊಂದನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವ ಕಲಾವಿದರೆಲ್ಲರಿಗೂ ಒಂದು ಸಮುದಾಯದ ಅವಶ್ಯಕತೆ ಇದೆ ಎಂಬ ಆಲೋಚನೆಯಿಂದ ಮಾಧುರ್ಯ ದ್ವಾರಕಾನಾಥ್ ಮತ್ತು ರೋಹಿಣಿ ಭರತ್ ಎಂಬಿಬ್ಬರು ಕಲಾವಿದರು ಸೇರಿ ‘ಮಂಡಲ ಆರ್ಟಿಸ್ಟ್ಸ್ ಕಲೆಕ್ಟಿವ್ - ಬೆಂಗಳೂರು’ ಎಂಬ ಗುಂಪನ್ನು ರಚಿಸಿದ್ದಾರೆ. ವಾಟ್ಸ್ ಆ್ಯಪ್ ಮೂಲಕ ಒಟ್ಟಾಗಿರುವ ಈ ಗುಂಪಿನಲ್ಲಿ ಪೂರ್ಣಕಾಲಿಕ ಕಲಾವಿದರು, ಹವ್ಯಾಸಿ ಕಲಾವಿದರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ, ಈಗಾಗಲೇ 50 ಮಂದಿ ಸೇರಿದ್ದಾರೆ. ತಿಂಗಳಿಗೊಂದು ಸಭೆ ಸೇರಿಸಿ, ಎಲ್ಲರೂ ಒಟ್ಟಾಗಿ ಕುಳಿತು ಕಲಾಕೃತಿಗಳನ್ನು ಬಿಡಿಸುವುದು, ಪರಸ್ಪರ ಜ್ಞಾನ ಹಂಚಿಕೆ, ಕಲಾಕೃತಿ ಅವಕಾಶಗಳ ವಿಚಾರ ವಿನಿಮಯ ಇತ್ಯಾದಿ ಚರ್ಚೆಗಳೊಂದಿಗೆ, ಈ ಅಪರೂಪದ ಕಲೆಯೊಂದನ್ನು ಕಲೆಗಾರರನ್ನು ಮತ್ತಷ್ಟು ಕೇಂದ್ರೀಕೃತ ಮಾಡುವ ಉದ್ದೇಶವನ್ನು ಈ ಗುಂಪು ಹೊಂದಿದೆ.
ಬಳಸುವ ಬ್ರಶ್ ಕುರಿತಾದ ಚರ್ಚೆಯಿಂದ ಹಿಡಿದು, ತಜ್ಞ ಕಲಾವಿದರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರವರೆಗೆ, ಯುವ ಪ್ರತಿಭೆಗಳಿಗೆ ಪ್ರೇರಣೆ ನೀಡುವಂತಹ ಚರ್ಚೆಗಳು ಈ ಗುಂಪಿನಲ್ಲಿ ನಡೆಯುತ್ತವೆ. ಮಾರ್ಚ್‌ನಿಂದ ಪ್ರಾರಂಭವಾದ ಈ ಗುಂಪಿನ ತಿಂಗಳ ಎರಡು ಸಭೆಗಳಿಗೆ ಭಾಗವಹಿಸಿದ ಮಂಡಲ ಆರ್ಟಿಸ್ಟ್ ಸೌಮ್ಯ ಬೀನಾ, "ಕಲಾವಿದರು ಕೇವಲ ಕಲೆಯಿಂದ ಬದುಕು ಕಟ್ಟಿಕೊಳ್ಳುವವರು ಮಾತ್ರವಲ್ಲ; ಕಲಾವಿದರು ಅವರ ಚಿತ್ರಗಳ ಮೂಲಕ ಸಮಾಜವನ್ನು ಉದ್ಬೋಧಿಸುವವರೂ, ಜಾಗೃತಿಗೊಳಿಸುವವರೂ ಆಗಿರುತ್ತಾರೆ. ಇಂತಹದೊಂದು ಸಮುದಾಯದ ಮೂಲಕ, ಕಲಾವಿದರೆಲ್ಲ ಸೇರಿ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆ, ವಿಭಿನ್ನ ಹಿನ್ನಲೆಯಲ್ಲೂ ಸಹಭಾಗಿತ್ವ, ಪರಸ್ಪರ ಆರ್ಥಿಕ ಅವಕಾಶಗಳಿಗೆ ಪ್ರೇರಣೆ ಮತ್ತು ಹೊಸ ಚಿಂತನೆಗಳ ಕುರಿತಾದ ಚರ್ಚೆ ಇತ್ಯಾದಿ ವಿಷಯಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳಲು ಒಂದೊಳ್ಳೆ ವೇದಿಕೆಯಾಗಿ ಬಳಸಿಕೊಳ್ಳಬೇಕು" ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ | Swapna Mantapa Movie: ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನಮಂಟಪʼ ಚಿತ್ರ ಜು.25ಕ್ಕೆ ರಿಲೀಸ್
ಮಂಡಲ ಆರ್ಟಿಸ್ಟ್ ಸೌಮ್ಯ ಬೀನಾ ಅವರು ಇದೇ ಗುಂಪು ಜುಲೈ 10ರಿಂದ 13ರವರೆಗೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಆಯೋಜಿಸುತ್ತಿರುವ ಪ್ರದರ್ಶನದಲ್ಲಿ ಒಟ್ಟು 70 ಕಲಾಕೃತಿಗಳನ್ನು ಪ್ರದರ್ಶಿಸಲಿರುವ 20 ಕಲಾವಿದರಲ್ಲಿ ಒಬ್ಬರು. ನೋಡಲು ಮನಸ್ಸಿಗೆ ಮುದ ನೀಡುವ, ಮನಸ್ಸಿಗೆ ಶಾಂತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ, ಭಾವನೆಗಳನ್ನು ವರ್ತುಲದ ಚಿತ್ರದಲ್ಲಿ ತೋರ್ಪಡಿಸಲು ಪ್ರಯತ್ನಿಸುವ ಈ ಕಲಾವಿದರ ಚಿತ್ರ ಪ್ರದರ್ಶನವನ್ನು ವೀಕ್ಷಿಸಿ, ಬೆಂಬಲಿಸುವಂತೆ ಮಂಡಲ ಕಲಾವಿದರ ಗುಂಪು ಕೋರಿದೆ.