ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Haryana Horror: ಕಾಂಗ್ರೆಸ್ ಕಾರ್ಯಕರ್ತೆ ಹತ್ಯೆ ಕೇಸ್‌; ಮೊಬೈಲ್ ಚಾರ್ಜರ್ ಕೇಬಲ್‌ನಿಂದ ಕೊಲೆ! ತನಿಖೆಯಲ್ಲಿ ಆರೋಪಿ ಹೇಳಿದ್ದೇನು?

ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಓರ್ವ ಆರೋಪಿಯನ್ನು ಬಂಧಿಸಿದ್ದು, ಆತ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹಣಕಾಸು ವಿಚಾರಕ್ಕೆ ಜಗಳ ನಡೆದು ಕೊಲೆ ಮಾಡಿರುವುದಾಗಿ ಆತ ಹೇಳಿದ್ದಾನೆ.

ಕಾಂಗ್ರೆಸ್ ಕಾರ್ಯಕರ್ತೆ ಹತ್ಯೆ; ಸಿಕ್ಕಿ ಬಿದ್ದಿ ಆರೋಪಿ ಹೇಳಿದ್ದೇನು?

ಮೃತ ಹಿಮಾನಿ ನರ್ವಾಲ್‌.

Profile Vishakha Bhat Mar 3, 2025 5:17 PM

ಚಂಡೀಗಢ: ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ (Himani Narwal) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಓರ್ವ ಆರೋಪಿಯನ್ನು ಬಂಧಿಸಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಯನ್ನು ಸಚಿನ್ ಎಂದು ಗುರುತಿಸಲಾಗಿದ್ದು, ಆತ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಸಚಿನ್ ವಿವಾಹಿತನಾಗಿದ್ದು, ಹರಿಯಾಣದ (Haryana Horror) ಝಜ್ಜರ್ ಜಿಲ್ಲೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ. ಹಣದ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದಿದೆ. ಜಗಳದ ನಂತರ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಜ್ಜರ್‌ನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿರುವ ಆರೋಪಿ ಸಚಿನ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಮತ್ತು ಮೃತ ವ್ಯಕ್ತಿ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯವಾಗಿದ್ದರು ಮತ್ತು ಅವನು ಆಕೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದನು. ಆಕೆ ವಿಜಯ್ ನಗರ ರೋಹ್ಟಕ್‌ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಳು ಎಂದು ಮೂಲಗಳು ತಿಳಿಸಿವೆ. ʼʼಫೆ. 27ರಂದು ಆತ ಆಕೆಯ ಮನೆಗೆ ಬಂದಿದ್ದಾನೆ. ಬಳಿಕ ಅವರು ಯಾವುದೋ ವಿಷಯಕ್ಕೆ ಜಗಳವಾಡಿದ್ದಾರೆ. ನಂತರ ಮೊಬೈಲ್ ಚಾರ್ಜರ್ ಕೇಬಲ್ ಸಹಾಯದಿಂದ ಆಕೆಯನ್ನು ಸಚಿನ್‌ ಕೊಲೆ ಮಾಡಿದ್ದಾನೆ" ಎಂದು ರೋಹ್ಟಕ್‌ನ ಎಡಿಜಿಪಿ ಕೃಷ್ಣ ಕುಮಾರ್ ರಾವ್ ಹೇಳಿದ್ದಾರೆ.



ಕೊಲೆ ಮಾಡಿದ ನಂತರ ಆರೋಪಿ ಹಿಮಾನಿ ನರ್ವಾಲ್ ಅವರ ಆಭರಣಗಳು, ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ದೋಚಿದ್ದಾನೆ. ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಿ ಸಂಪ್ಲಾ ಬಸ್ ನಿಲ್ದಾಣದ ಬಳಿಯ ಪೊದೆಯಲ್ಲಿ ಎಸೆದಿದ್ದಾನೆ ಎಂದು ಅವರು ತಿಳಿಸಿದ್ದಾರೆ. ದೋಚಿರುವ ಆಕೆಯ ಆಭರಣಗಳು, ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಜಜ್ಜರ್‌ನಲ್ಲಿರುವ ತನ್ನ ಅಂಗಡಿಗೆ ತೆಗೆದುಕೊಂಡು ಹೋಗಿದ್ದಾನೆ. ವಿಚಾರಣೆಯ ವೇಳೆ ಆತ ಈ ಸಂಗತಿಯನ್ನು ಬಾಯಿ ಬಿಟ್ಟಿದ್ದಾನೆ. ʼʼಅವರು ಹಣಕಾಸಿಗೆ ಸಂಬಂಧಿಸಿದಂತೆ ಜಗಳವಾಡಿದ್ದರು. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಎಲ್ಲ ಸತ್ಯ ತಿಳಿಯಲಿದೆʼʼ ಎಂದು ಕೃಷ್ಣ ಕುಮಾರ್ ರಾವ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Haryana Horror: ಹರಿಯಾಣ ಕಾಂಗ್ರೆಸ್​ ಕಾರ್ಯಕರ್ತೆ ಹತ್ಯೆ ಪ್ರಕರಣ ; ಓರ್ವ ಆರೋಪಿಯ ಬಂಧನ

ಈತನ್ಮಧ್ಯೆ ಆರೋಪಿಯ ಕೈಗಳಲ್ಲಿ ಕಚ್ಚಿದ ಗುರುತುಗಳು ಮತ್ತು ಗೀರುಗಳು ಪೊಲೀಸರಿಗೆ ಕಂಡುಬಂದಿವೆ. ಹಿಮಾನಿ ತನ್ನ ಆತ್ಮರಕ್ಷಣೆಗಾಗಿ ತನ್ನ ಕೈಯನ್ನು ಕಚ್ಚಿದ್ದಾರೆ ಎಂದು ಆರೋಪಿ ತಿಳಿಸಿದ್ದಾನೆ. ಆರೋಪಿಯ ಬಂಧನದ ಬಗ್ಗೆ ಮಾತನಾಡಿದ ಹಿಮಾನಿ ನರ್ವಾಲ್ ಸಹೋದರ ಆರೋಪಿಗೆ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.