ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Isro: ಮ್ಯಾನ್ಮಾರ್ ಭೂಕಂಪ; ವಿನಾಶದ ಪ್ರಮಾಣವನ್ನು ಬಹಿರಂಗಪಡಿಸಿದ ಇಸ್ರೋ ಉಪಗ್ರಹ ಚಿತ್ರಗಳು

ಶುಕ್ರವಾರ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದ ಉಂಟಾದ ವ್ಯಾಪಕ ಹಾನಿಯ ಉಪಗ್ರಹ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆ ಮಾಡಿದೆ. ಮಂಡಲೆ ವಿಶ್ವವಿದ್ಯಾಲಯಕ್ಕೆ ಉಂಟಾದ ಹಾನಿ ಮತ್ತು ಆನಂದ ಪಗೋಡಾದಲ್ಲಿ ಉಂಟಾದ ಕುಸಿತವನ್ನು ಸಹ ತೋರಿಸಲಾಗಿದೆ. 2019 ರಲ್ಲಿ ಉಡಾವಣೆಯಾದ ಕಾರ್ಟೊಸ್ಯಾಟ್ -3, ಮೂರನೇ ತಲೆಮಾರಿನ ಉಪಗ್ರಹದಿಂದ ಫೋಟೋಗಳನ್ನು ತೆಗೆಯಲಾಗಿದೆ.

ಮ್ಯಾನ್ಮಾರ್ ವಿನಾಶದ ಪ್ರಮಾಣವನ್ನು ಬಹಿರಂಗಪಡಿಸಿದ ಇಸ್ರೋ ಉಪಗ್ರಹ ಚಿತ್ರಗಳು

Profile Vishakha Bhat Apr 1, 2025 9:40 AM

ನವದೆಹಲಿ: ಶುಕ್ರವಾರ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದ ಉಂಟಾದ ವ್ಯಾಪಕ ಹಾನಿಯ ಉಪಗ್ರಹ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆ ಮಾಡಿದೆ. 50 ಸೆಂಟಿಮೀಟರ್‌ಗಳಿಗಿಂತ ಕಡಿಮೆ ರೆಸಲ್ಯೂಶನ್‌ನಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುವ ತನ್ನ ಅತ್ಯಾಧುನಿಕ ಭೂ ಚಿತ್ರಣ ಉಪಗ್ರಹವಾದ ಕಾರ್ಟೊಸಾಟ್ -3 ಅನ್ನು ಬಳಸಿಕೊಂಡು, ಇಸ್ರೋ ಭೂಮಿಯಿಂದ 500 ಕಿಲೋಮೀಟರ್ ಎತ್ತರದಿಂದ ಫೋಟೋಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಇಸ್ರೋ ಬಿಡುಗಡೆ ಮಾಡಿದ ಫೋಟೋದಲ್ಲಿ ಇರಾವಡ್ಡಿ ನದಿಯ ಮೇಲಿನ ಬೃಹತ್ ಸೇತುವೆ ಹೇಗೆ ಕುಸಿದಿದೆ ಎಂಬುದು ಕಾಣಿಸುತ್ತದೆ.

ಮಂಡಲೆ ವಿಶ್ವವಿದ್ಯಾಲಯಕ್ಕೆ ಉಂಟಾದ ಹಾನಿ ಮತ್ತು ಆನಂದ ಪಗೋಡಾದಲ್ಲಿ ಉಂಟಾದ ಕುಸಿತವನ್ನು ಸಹ ತೋರಿಸಲಾಗಿದೆ. 2019 ರಲ್ಲಿ ಉಡಾವಣೆಯಾದ ಕಾರ್ಟೊಸ್ಯಾಟ್ -3, ಮೂರನೇ ತಲೆಮಾರಿನ ಉಪಗ್ರಹದಿಂದ ಫೋಟೋಗಳನ್ನು ತೆಗೆಯಲಾಗಿದೆ. ಮ್ಯಾನ್ಮಾರ್‌ನ ಮಂಡಲೆ ಮತ್ತು ಸಾಗಿಂಗ್ ನಗರಗಳಲ್ಲಿ ಉಂಟಾದ ಹಾನಿಯನ್ನು ಕಾಣಬಹುದಾಗಿದೆ.



ಶುಕ್ರವಾರ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ನಂತರ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಸಾಗೈಂಗ್-ಮಂಡಲೆ ಗಡಿಯ ಬಳಿ 10 ಕಿ.ಮೀ ಆಳದಲ್ಲಿದೆ ಎಂದು ವಿಜ್ಞಾನಿಗಳು ತಿಳಸಿದ್ದಾರೆ. ದೇಶದ ಎರಡನೇ ಅತಿದೊಡ್ಡ ನಗರ ಮಂಡಲೆ ನಾಮಾವಶೇಷವಾಗಿದೆ. ಇದರ ನಡುವೆಯೇ ಶನಿವಾರ ಮತ್ತೆ ಭೂಮಿ ಕಂಪಿಸಿ ಆತಂಕ ಹೆಚ್ಚಿಸಿದೆ. ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಘಟಿಸಿದ ಭೂಕಂಪ ನೂರು ವರ್ಷಗಳ ಬಳಿಕ ಸಂಭವಿಸಿದ ಅತೀ ಭೀಕರ ಭೂಕಂಪ ಎನ್ನಲಾಗಿದೆ. ಭೂಕಂಪದ ಕೇಂದ್ರ ಬಿಂದುವಿನಿಂದ ನೂರಾರು ಕಿ.ಮೀ ದೂರದ ಬ್ಯಾಂಕಾಕ್‌, ಚೀನಾದಲ್ಲಿರುವ ಕಟ್ಟಡಗಳಿಗೂ ಹಾನಿ ಮಾಡುವಷ್ಟರ ಮಟ್ಟಿಗೆ ಪ್ರಬಲವಾಗಿ ಭೂಮಿ ಕಂಪಿಸಿದೆ ಎಂದು ಅಮೆರಿಕ ಭೂವಿಜ್ಞಾನಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Myanmar Earthquake: ಮ್ಯಾನ್ಮಾರ್‌ ರಣಭೀಕರ ಭೂಕಂಪದ ಸ್ಯಾಟಲೈಟ್‌ ಫೊಟೋಗಳು ರಿಲೀಸ್‌!

ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ವರದಿಗಳ ಪ್ರಕಾರ 2,900 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಸಾವಿರಾರು ಜನರು ಗಾಯಗೊಂಡಿದ್ದಾರೆ . ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ತತ್ತರಿಸಿರುವ ಮ್ಯಾನ್ಮಾರ್‌ಗೆ ಮಾನವೀಯ ನೆರವು ನೀಡಲು ನೀಡಲು ಭಾರತ ಮುಂದಾಗಿದೆ. ರಕ್ಷಣಾ ಹಾಗೂ ಪರಿಹಾರ ಕಾರ್ಯ ಕೈಗೊಳ್ಳಲು 80 ಜನರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಯನ್ನು ರವಾನಿಸಿದೆ. ಭಾರತದಿಂದ 15 ಟನ್‌ ಪರಿಹಾರ ಸಾಮಗ್ರಿ ರವಾನಿಸಲಾಗಿದೆ. ಆಪರೇಷನ್‌ ಬ್ರಹ್ಮ ಹೆಸರಿನಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ಶುರುವಾಗಿದೆ.