World’s Most Powerful Passport: ಈ ದೇಶದ ಪಾಸ್ ಪೋರ್ಟ್ ವಿಶ್ವದಲ್ಲೇ ಅತ್ಯಂತ ಪವರ್‌ಫುಲ್!
ಒಂದು ದೇಶದಿಂದ ಇನ್ನೊಂದು ದೇಶಕ್ಕೆ ನಾವು ಪ್ರಯಾಣಿಸಬೇಕಾದರೆ ನಮ್ಮಲ್ಲಿ ಅಗತ್ಯವಾಗಿ ಬೇಕಾಗಿರುವುದು ಪಾಸ್ ಪೋರ್ಟ್. ಪಾಸ್ ಪೋರ್ಟ್ ಇದ್ದು, ನಾವು ಭೇಟಿ ಕೊಡುವ ದೇಶದ ವೀಸಾ ಇದ್ದಲ್ಲಿ ನಾವು ಆ ದೇಶಕ್ಕೆ ಭೇಟಿ ಕೊಡಬಹುದು. ಹಾಗಾದ್ರೆ ಪವರ್‌ಫುಲ್ ಪಾಸ್ ಪೋರ್ಟ್ ಅಂದರೇನು? ಯಾವ ದೇಶದ ಪಾಸ್‌ಪೋರ್ಟ್ ಅತ್ಯಂತ ಬಲಿಷ್ಟವಾಗಿದೆ..? ಇಲ್ಲಿದೆ ಮಾಹಿತಿ...
![ವಿಶ್ವದ ಪವರ್‌ಫುಲ್ ಪಾಸ್ ಪೋರ್ಟ್ ಹೊಂದಿರುವ ದೇಶಗಳು ಇವೇ ನೋಡಿ](https://cdn-vishwavani-prod.hindverse.com/media/original_images/Passport_1.jpg)
![Profile](https://vishwavani.news/static/img/user.png)
ನವದೆಹಲಿ: ವಿಶ್ವದ ಬಲಿಷ್ಟ ಪಾಸ್ ಪೋರ್ಟ್ (world’s most powerful passport) ಎಂಬ ಹೆಗ್ಗಳಿಕೆಗೆ ಸಿಂಗಾಪೂರ (Singapore) ದೇ ಶದ ಪಾಸ್ ಪೋರ್ಟ್ ಭಾಜನವಾಗಿದೆ. ಇದೇ ಸಂದರ್ಭದಲ್ಲಿ ಭಾರತದ (India) ಪಾಸ್ ಪೋರ್ಟ್ 80ನೇ ಸ್ಥಾನದಲ್ಲಿದೆ. ಈ ಸ್ಥಾನದಲ್ಲಿ ಅಲ್ಜೀರಿಯಾ (Algeria), ಇಕ್ವೊಟೋರಿಯಲ್ ಗುನಿಯಾ (Equatorial Guinea) ಮತ್ತು ತಜಕಿಸ್ಥಾನಗಳೂ (Tajikistan) ಇದ್ದು ಇವುಗಳೊಂದಿಗೆ ಭಾರತ ಜಂಟಿಯಾಗಿ 80ನೇ ಸ್ಥಾನವನ್ನು ಹಂಚಿಕೊಂಡಿದೆ. 2025ನೇ ಸಾಲಿನ ಈ ನೂತನ ಸ್ಥಾನ ಪಟ್ಟಿಯನ್ನು ಹೆನ್ಲೇ ಪಾಸ್ ಪೋರ್ಟ್ ಇಂಡೆಕ್ಸ್ (Henley & Partners Index) ಬಿಡುಗಡೆ ಮಾಡಿದೆ. ಒಂದು ಪಾಸ್ ಪೋರ್ಟ್ ಮೂಲಕ ವೀಸಾ ರಹಿತವಾಗಿ ವಿಶ್ವದ ಎಷ್ಟು ದೇಶಗಳಿಗೆ ಭೇಟಿ ಕೊಡಬಹುದು ಎಂಬ ಆಧಾರದಲ್ಲಿ ವಿಶ್ವದ 199 ರಾಷ್ಟ್ರಗಳ ಪಾಸ್ ಪೋರ್ಟ್ ಗಳನ್ನು ಮೌಲ್ಯಮಾಪನ ಮಾಡಿ ಹೆಕ್ಲೇ ಆಂಡ್ ಪಾರ್ಟ್ನರ್ಸ್ ಎಂಬ ಜಾಗತಿಕ ಸರಕಾರಿ ಸಲಹಾ ಸಂಸ್ಥೆ ಈ ಸೂಚ್ಯಂಕವನ್ನು ಸಿದ್ಧಪಡಿಸುತ್ತದೆ. ಅಂತಾರಾಷ್ಟ್ರೀಯ ವಾಯುಮಾರ್ಗ ಸಂಚಾರ ಒಕ್ಕೂಟ (IATA)ದಿಂದ ಇದು ಮಾಹಿತಿಯನ್ನು ಸಂಗ್ರಹಿಸುತ್ತದೆ.
ವಿಶ್ವದಲ್ಲಿರುವ ಒಟ್ಟು 227 ರಾಷ್ಟ್ರಗಳ ಪೈಕಿ 193 ರಾಷ್ಟ್ರಗಳಿಗೆ ಆ ದೇಶಗಳ ವೀಸಾ ಅಗತ್ಯವಿಲ್ಲದೆ ಸಿಂಗಾಪೂರದ ಪಾಸ್ ಪೋರ್ಟ್ ಮೂಲಕ ಭೇಟಿ ನೀಡಬಹುದು. ಇದರ ನಂತರದ ಸ್ಥಾನದಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳ ಪಾಸ್ ಪೋರ್ಟ್ ಗಳಿವೆ, ಈ ಎರಡು ದೇಶಗಳ ಪಾಸ್ ಪೋರ್ಟ್ ನಿಮ್ಮಲ್ಲಿದ್ದರೆ ನೀವು 190 ದೇಶಗಳಿಗೆ ವೀಸಾ ಮುಕ್ತವಾಗಿ ಭೇಟಿ ನೀಡಬಹುದು. ಇದರ ಬಳಿಕದ ಸ್ಥಾನದಲ್ಲಿರುವ ಏಳು ದೇಶಗಳೆಂದರೆ, ಡೆನ್ಮಾರ್ಕ್, ಫಿನ್ ಲ್ಯಾಂಡ್, ಫ್ರಾನ್ಸ್, ಜರ್ಮನಿ, ಐರ್ಲ್ಯಾಂಡ್, ಇಟಲಿ ಮತ್ತು ಸ್ಪೈನ್. ಈ ದೇಶಗಳ ಪಾಸ್ ಪೋರ್ಟ್ ಮೂಲಕ 189 ದೇಶಗಳಿಗೆ ವಿಸಾ ಮುಕ್ತ ಭೇಟಿ ನೀಡಬಹುದಾಗಿದೆ.
ಈ ಇಂಡೆಕ್ಸ್ ಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ದೇಶವೆಂದರೆ ಅದು ಅಫ್ಘಾನಿಸ್ಥಾನ, ಈ ದೇಶದ ಪಾಸ್ ಪೋರ್ಟ್ ಗೆ 25 ದೇಶಗಳಿಗೆ ಮಾತ್ರವೇ ವಿಸಾ ಮುಕ್ತ ಪ್ರವೇಶವಿದೆ, ಸಿರಿಯಾ ದೇಶದ ಪಾಸ್ ಪೋರ್ಟಿಗೆ 27 ದೇಶಗಳಿಗೆ ಮಾತ್ರವೇ ಪ್ರವೇಶಾವಕಾಶವಿದ್ದು, ಈ ದೇಶ 98ನೇ ಸ್ಥಾನದಲ್ಲಿದೆ. 30 ದೇಶಗಳಿಗೆ ಪ್ರವೇಶಾವಕಾಶವನ್ನು ಒದಗಿಸುವ ಇರಾಕ್ 97ನೇ ಸ್ಥಾನದಲ್ಲಿದೆ.
ಕಳೆದ ವರ್ಷ ಟಾಪ್ ಸ್ಥಾನದಲ್ಲಿದ್ದ ಆರು ದೇಶಗಳ ಗುಂಪಿನಿಂದ ಸಿಂಗಾಪೂರ ಮತ್ತು ಜಪಾನ್ ಜಿಗಿತ ಕಂಡು ಟಾಪ್ ಸ್ಥಾನಕ್ಕೇರಿದೆ ಎಂದು ಹೆನ್ಲಿ ಹೇಳಿಕೊಂಡಿದೆ. ಜಪಾನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಇದು ಇತರೇ ದೇಶಗಳಿಗಿಂತ ಮುಂದಿದೆ. ಕೋವಿಡ್ ಲಾಕ್ ಡೌನ್ ಬಳಿಕ ಜಪಾನ್ ಚೀನಾ ದೇಶಕ್ಕೆ ವೀಸಾ-ಮುಕ್ತ ಪ್ರವೇಶವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Delhi Election Result 2025: ʼಕೈʼ ಹಿಡಿಯದ ಗ್ಯಾರಂಟಿ ಯೋಜನೆಗಳು; ಕಾಂಗ್ರೆಸ್ ಯುಗಾಂತ್ಯಕ್ಕೆ ಕಾರಣವೇನು?
ಫಿನ್ ಲ್ಯಾಂಡ್ ಹಾಗೂ ದಕ್ಷಿಣ ಕೊರಿಯಾ ಎರಡೂ ದೇಶಗಳೂ ಸಹ ಕಳೆದ 12 ತಿಂಗಳುಗಳಲ್ಲಿ ಒಂದು ಸ್ಥಾನವನ್ನು ಕಳೆದುಕೊಂಡು ಕೆಳಗಿಳಿದಿದೆ. ಈ ಎರಡೂ ದೇಶಗಳ ಪಾಸ್ ಪೋರ್ಟ್ ಮೂಲಕ 192 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರವೇಶಿಸಬಹುದಾಗಿದೆ.
ಈ ಇಂಡೆಕ್ಸ್ ನಲ್ಲಿ ಕಳೆದೊಂದು ದಶಕದಲ್ಲಿ ಭರ್ಜರಿ ನೆಗೆತವನ್ನು ಕಂಡಿರುವ ದೇಶವೆಂದರೆ ಯುಎಇ. ಈ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿರುವ ಏಕೈಕ ಅರಬ್ ದೇಶ ಯುಎಇ ಆಗಿದೆ. 2015ರ ಬಳಿಕ ಈ ದೇಶದ ಪಾಸ್ ಪೋರ್ಟ್ ಮೂಲಕ ಹೆಚ್ಚುವರಿ 72 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರವೇಶಿಸಬಹುದಾಗಿದೆ. ಯುಎಇ ಪಾಸ್ ಪೋರ್ಟ್ ಮೂಲಕ 185 ದೇಶಗಳಿಗೆ ವೀಸಾ ಮುಕ್ತ ಪ್ರಯಾಣ ಸಾಧ್ಯವಿದೆ. 32 ಸ್ಥಾನಗಳ ಏರಿಕೆಯೊಂದಿಗೆ ಯುಎಇ ಈ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಅಲಂಕರಿಸಿದೆ.
ಈ ಇಂಡೆಕ್ಸ್ ಪಟ್ಟಿಯಲ್ಲಿ ಭಾರೀ ಕುಸಿತ ಕಂಡಿರುವ ದೇಶವೆಂದರೆ ವೆನುಜುವೆಲಾ, ಇದರ ಬಳಿಕ ಆಶ್ಚರ್ಯಕರ ರಿತಿಯಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾದ ಸ್ಥಾನವೂ 2015 ರಿಂದ 2025ರ ನಡುವೆ ಭಾರೀ ಕುಸಿತ ಕಂಡಿದೆ. ವಿಶೇಷವೆಂದರೆ ಯುಎಸ್ ನಾಗರಿಕರು ಬದಲೀ ವಾಸ ಸ್ಥಾನ ಮತ್ತು ಪೌರತ್ವವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ದೊಡ್ಡ ಸಮೂಹವಾಗಿದೆ.
ಯುಎಇ ಜೊತೆಗೆ ಈ ಇಂಡೆಕ್ಸ್ ನಲ್ಲಿ ಭಾರೀ ಜಿಗಿತ ಕಂಡಿರುವ ದೇಶವೆಂದೆ ಅದು ಚಿನಾ. 2015ರಲ್ಲಿ 94ನೇ ಸ್ಥಾನದಲ್ಲಿದ್ದ ಈ ದೇಶದ ಸ್ಥಾನ 2025ರಲ್ಲಿ 60ನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ಒಂದು ವರ್ಷದಲ್ಲೇ ಚೀನಾ 29 ರಾಷ್ಟ್ರಗಳಿಗೆ ವೀಸಾ ಮುಕ್ತ ಪ್ರವೇಶದ ಅವಕಾಶವನ್ನು ಪಡೆದುಕೊಂಡಿದೆ. 58 ದೇಶಗಳಿಗೆ ವೀಸಾ ಮುಕ್ತ ಪ್ರವೇಶಾವಕಾಶವನ್ನು ಹೊಂದುವ ಮೂಲಕ ಚೀನಾ ಪ್ರಸ್ತುತ ಈ ವಿಷಯದಲ್ಲಿ 80ನೇ ಸ್ಥಾನದಲ್ಲಿದೆ.