Saturday, 14th December 2024

ಪ್ರೀತಿ ಜನಿಸುವುದು ಎಲ್ಲಿ ?

ಹರೀಶ್ ಪುತ್ತೂರು

ಸವಿ ಸವಿ ಅನುಭವಗಳನು ಉದಿಸುವ ಪ್ರೀತಿಯ ಮೂಲವೆಲ್ಲಿ? ಅದು ಜನಿಸಿವುದು ಹೃದಯದಲ್ಲೇ, ಮನಸ್ಸಿನಲ್ಲೇ?

ಎಲ್ಲೋ ದೂರದಲ್ಲಿ ಕಾಣುವ ಬೆಟ್ಟವನ್ನು ನೋಡಿ ನನ್ನ ಕಣ್ಣುಗಳು ಹಂಬಲಿಸುತ್ತವೆ – ಒಮ್ಮೆ ನಿನ್ನ ಹತ್ತಿರ ಸರಿಯಬೇಕು, ನಿನ್ನನ್ನು ನೋಡಬೇಕು. ಕಾಮನಬಿಲ್ಲಿನಂತಿರುವ ಹುಬ್ಬಿನ ಕೆಳಗೆ ಮುಚ್ಚಿ ಮುಚ್ಚಿ ಬಿಡುವ ರೆಪ್ಪೆಯು ಕಣ್ಣಿನ ಜೊತೆ ಸೇರಿಳುವ ಪಿಸು ಮಾತು ಇಷ್ಟೆ. ಅಲ್ಲಿ ಕಾಣುವ ಪಾರ್ಕಿನಲ್ಲಿ ನಾನು ಅವನ ಜೊತೆ ಕೈಹಿಡಿದು ಸುತ್ತಾಡಬೇಕು ಎಂದು.ಅರೆ, ಇದು ನಿಜವಾದ ಪ್ರೀತಿ ಅಂತೀರಾ? ಇಲ್ಲ ಇದು ಕೇವಲ ಮನಸಿನ ಭಾವನೆಗಳಂತಿರಾ? ಹೂಂ ಯಾವುದು ಅಲ್ಲ ಇದು ವಯಸ್ಸಿನ ಅನಿವಾರ್ಯತೆ ಯಷ್ಟೆ. ಸ್ನೇಹಿತರೆ….. ಪ್ರೀತಿಗಾಗಿ ಗಿಫ್ಟ್ ಕೊಡ್ತೀವಿ, ನಂಬಿಕೆಗಾಗಿ ಹೆಸರು ಕೆತ್ತಿಸಿಕೊಳ್ತೀವಿ, ಆದ್ರೆ ಒಂದು ಕ್ಷಣದ ಮುನಿಸು ಇಡೀ ಜೀವನ ವನ್ನೇ ಕಳೆದುಕೊಳ್ಳುವ ಅಥವಾ ಮುಗಿಸಿಬಿಡುವ ನಿರ್ಧಾರಕ್ಕೆ ಬರುತ್ತೇವೆ.

ಹಾಗಾದರೆ ಇದು ನಿಜವಾದ ಪ್ರೇಮವೆ? ಅಲ್ಲ – ಇದೆಲ್ಲ ಬದುಕಿನ ಮೂರುದಿನದ ಜಾತ್ರೆಯಲ್ಲಿ ನಮ್ಮಿಷ್ಟದಂತೆ ಯಾವುದೋ ಆಕರ್ಷಣೆಗೆ ಒಳಗಾಗಿ, ಮತ್ಯಾರನ್ನೋ ನೋಡಿ ಹುಚ್ಚು ನಿರ್ಧಾರ ಮಾಡುವ ವಯಸ್ಸಿನ ಹುಡುಗಾಟ ಅಷ್ಟೆ, ಇದು ಪ್ರೀತಿಯಲ್ಲ ಪ್ರೇಮವಲ್ಲ. ಗೆಳೆತನ, ನಂಬಿಕೆ, ವಿಶ್ವಾಸ, ಇವೆಲ್ಲವೂ ನಾಲ್ಕು ಜನರ ಜತೆಯಲ್ಲಿದ್ದಾಗ ಅಲ್ಲ, ಒಬ್ಬಂಟಿಯಾಗಿzಗ ಹುಟ್ಟ ಬೇಕು. ಇವತ್ತಿನ ದಿನಗಳಲ್ಲಿ ಆಗಬಾರದ ಅನಾಹುತ ಗಳು ಬರೀ ಪ್ರೀತಿ ಪ್ರೇಮವೆಂಬ ಕಾರಣಗಳಿಗೆ ಸಂಭವಿಸುತ್ತಿದೆ, ವನು ಅವಳಿಗೆ ಮೋಸ ಮಾಡಿದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದಳು. ಇವನು ಮನೆಯವರು ಒಪ್ಪದಿದ್ದಕ್ಕೆ ವಿಷ ಕುಡಿದನು – ಬರೀ ಇಂತಹ ಸುದ್ದಿಗಳೇ ಕಂಡುಬರುತ್ತಿವೆ. ಹಾಗಾದರೆ ಇಷ್ಟು ದಿನ ಇದ್ದ ಇವರಿಬ್ಬರ ನಡುವಿನ ಪ್ರೀತಿಗೆ ಗ್ಯಾರಂಟಿಯೇ ಇರಲಿಲ್ಲವೇ? ಅಥವಾ ಸಮಯ ಕಳೆಯಲು ಮಾಡಿದ ಪ್ರೇಮ ನಾಟಕವೆ?

ಮಧುರ ನೆನಪು
ಹಿಂದಿನ ಕಾಲದ ಪ್ರೀತಿ ವಿಭಿನ್ನ, ವಿಶೇಷ. ಹೊಟ್ಟೆಗೆ ಹಿಟ್ಟಿಲ್ಲವೆಂದರೂ ಮುಡಿಗೆ ಮಲ್ಲಿಗೆ ಇರುತ್ತಿತ್ತು. ಬರೆಯಲು ಹಾಳೆಗಳಿಗೆ ಗತಿಯಿಲ್ಲದಿದ್ದರೂ ಪ್ರತಿನಿತ್ಯ ಪುಂಖಾನುಪುಂಖವಾಗಿ ಪ್ರೇಮಪತ್ರಗಳು ರವಾನೆ ಯಾಗುತ್ತಿದ್ದವು. ಮನಸಲ್ಲಿ ದಿನಾ ಪ್ರೇಮ ಕವನ ಗಳು ಗುಣುಗುಡುತ್ತಿದ್ದವು, ಪ್ರತಿ ದಿನವೂ ಮನೆಯಲ್ಲಿ ಸಂಭ್ರಮದ ಮಾತುಗಳು ಕೇಳುತ್ತಿದ್ದವು.

ನಮ್ಮ ಹಿರಿಯರೋ ಅಥವಾ ಮತ್ಯಾರೋ ಪ್ರೇಮವಿವಾಹವಾಗಿ ಸುಖ ಸಂಸಾರ ನಡೆಸುತ್ತಿದ್ದರಲ್ಲವೆ ಅದು ನಿಜವಾದ ಪ್ರೀತಿ.
ಅವರ ಪ್ರೀತಿಗೆ ಅಚ್ಚುಕಟ್ಟಾದ ರೀತಿ ಇರುತ್ತಿತ್ತು. ಅಂಚೆಯಲ್ಲಿ ಕಳಿಸಿದ ಪ್ರೇಮ ಪತ್ರದ ಮಡಿಕೆಗಳಲ್ಲಿ, ಪ್ರೀತಿಯ ಸುವಾಸನೆ ಅಡಗಿರುತ್ತಿತ್ತು. ಪ್ರೇಮ ಬರಹ ಬರೆದು ಕಳುಹಿಸುವಾಗ ಆಗುವ ಸಂತೋಷ ಮತ್ತು ಆ ಪತ್ರಕ್ಕೆ ಸಿಗಬೇಕಾದ ಉತ್ತರಕ್ಕೆ ಕುತೂಹಲ ದಿಂದ ಕಾಯುತ್ತಿರುವ ಸಮಯ ಇವತ್ತಿಗೂ ಅವರ ಜೀವನದಲ್ಲಿ ಮರೆಯಲಾಗದ ಮಧುರ ನೆನಪುಗಳಾಗಿ ಉಳಿಯುತ್ತವೆ.

ಯಾರೋ ಹೇಳಿದ ಮಾತ್ರಕ್ಕೆ ನಿಮ್ಮಲ್ಲಿ ಪ್ರೀತಿ ಜನ್ಮತಾಳಿತಾ ಅಥವಾ ಯಾವುದೋ ಕಾರಣಕ್ಕೆ ಪ್ರೇಮ ಉಕ್ಕಿಬಂತಾ? ಇಂತಹ ಪ್ರಶ್ನೆಗಳಿಗೆ ಉಡಾಫೆ ಉತ್ತರಗಳನ್ನು ನೀಡಿ ಸಮಯ ಕಳೆಯುವ ಬದಲು ಒಬ್ಬರನ್ನೊಬ್ಬರ ಅರ್ಥೈಸಿಕೊಂಡು ಮನೆಯವರ ಒಪ್ಪಿಗೆ ಪಡೆದು ಆದಷ್ಟು ಬೇಗ ಜೊತೆಯಾಗಿ ಬದುಕು ನಡೆಸುವ ನಿರ್ಧಾರವನ್ನು ಮಾಡಿ. ಮದುವೆಯ ಆ ದಿನ , ಇಬ್ಬರೂ
ಕೈಹಿಡಿದು ನಡೆಯುವುದನ್ನು ನೋಡಿ ಸಂತೋಷ ಪಡಲು ನಾನು ಬರುವೆ, ಶುಭ ಹಾರೈಸುವೆ.