ʻರೊವ್ಮನ್ ಪೊವೆಲ್‌ಗೆ ನ್ಯಾಯ ಕೊಡಿʼ: ನಾಯಕತ್ವ ಬದಲಿಸಿದ ವಿಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಡ್ವೇನ್ ಬ್ರಾವೊ ಕಿಡಿ!
Dwayne Bravo slammed Windies cricket: ವೆಸ್ಟ್ ಇಂಡೀಸ್ ಟಿ20ಐ ತಂಡದ ನಾಯಕತ್ವದಿಂದ ರೊವ್ಮನ್ ಪೊವೆಲ್ ಅವರನ್ನು ಕೆಳಗಿಳಿಸಿದ್ದರಿಂದ ವಿಂಡೀಸ್ ಕ್ರಿಕೆಟ್ ಮಂಡಳಿ ವಿರುದ್ದ ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೊ ಕಿಡಿ ಕಾರಿದ್ದಾರೆ. ಮಾರ್ಚ್ 31 ರಂದು ವೆಸ್ಟ್ ಇಂಡೀಸ್ ಟಿ20ಐ ತಂಡಕ್ಕೆ ಶೇಯ್ ಹೋಪ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ.

ರೊವ್ಮನ್ ಪೊವೆಲ್

ನವದೆಹಲಿ: ಮಾರ್ಚ್ 31 ರಂದು ವೆಸ್ಟ್ ಇಂಡೀಸ್ ಟಿ20 ತಂಡದ ನೂತನ ನಾಯಕನಾಗುವ ಮೂಲಕ ಶೇಯ್ ಹೋಪ್( Shai Hope), ರೊವ್ಮನ್ ಪೊವೆಲ್ (Rovman Powell) ಅವರ ಸ್ಥಾನವನ್ನು ತುಂಬಿದ್ದಾರೆ. ಈ ಬೆಳವಣಿಗೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದಾರೆ. ಅದರಂತೆ ರೊವ್ಮನ್ ಪೊವೆಲ್ ಅವರನ್ನು ನಾಯಕತ್ವದಿಂದ ಹಠಾತ್ ಕೆಳಗಿಳಿಸಿದ ಬಗ್ಗೆ ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೊ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಂಡೀಸ್ ಆಟಗಾರರಿಗೆ ನ್ಯಾಯ ನೀಡುವಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ(west Indies Cricket Board) ಮತ್ತೊಮ್ಮೆ ವಿಫಲವಾಗಿದೆ ಎಂದು ಬ್ರಾವೊ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಭಾರತ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ತವರು ಟಿ20ಐ ಸರಣಿಗಳಲ್ಲಿ ವೆಸ್ಟ್ ಇಂಡೀಸ್ ತಂಡ ಗೆಲ್ಲಲು ರೊವ್ಮನ್ ಪೊವೆಲ್ ತಮ್ಮ ನಾಯಕತ್ವದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. 2024ರ ಐಸಿಸಿ ಟಿ20ಐ ವಿಶ್ವಕಪ್ ಟೂರ್ನಿಯಲ್ಲಿಯೂ ವೆಸ್ಟ್ ಇಂಡೀಸ್ ತಂಡವನ್ನು ಸೂಪರ್ 8 ಕ್ಕೆ ತಲುಪಿಸಲು ಪೊವೆಲ್ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲದೆ ಐಸಿಸಿ ಟಿ20ಐ ತಂಡಗಳ ಶ್ರೇಯಾಂಕದಲ್ಲಿ 9ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ತಲುಪಿಸಲು ರೊವ್ಮನ್ ಪೊವೆಲ್ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದರು. ಒಟ್ಟು 37 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿರುವ ರೊವ್ಮನ್ ಪೊವೆಲ್ 19ರಲ್ಲಿ ಗೆಲುವು ಪಡೆದಿದ್ದಾರೆ.
IPL 2025: ʻಪವರ್‌ಪ್ಲೇನಲ್ಲಿ ಅಶ್ವಿನ್‌ಗೆ ಬೌಲಿಂಗ್ ಕೊಡಬೇಡಿʼ-ಸಿಎಸ್‌ಕೆಗೆ ಶ್ರೀಕಾಂತ್ ಸಲಹೆ!
ವೆಸ್ಟ್ ಇಂಡೀಸ್ ಟಿ20 ತಂಡದ ನಾಯಕತ್ವದಿಂದ ರೊವ್ಮನ್ ಪೊವೆಲ್ ಅವರನ್ನು ಕೈ ಬಿಟ್ಟಿದ್ದಕ್ಕೆ ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೊ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯೆ ನೀಡಿದ ಬ್ರಾವೊ, ಆಟಗಾರರಿಗೆ ಅನ್ಯಾಸ ಮಾಡುವುದನ್ನು ವಿಂಡೀಸ್ ಕ್ರಿಕೆಟ್ ಮಂಡಳಿ ಮುಂದುವರಿಸಿದೆ ಎಂದು ದೂರಿದ್ದಾರೆ.
"ವಿಂಡೀಸ್ ಕ್ರಿಕೆಟ್ ಮೂಲಕ, ಆಟಗಾರರ ಮೇಲಿನ ಅನ್ಯಾಯಗಳು ಮುಂದುವರಿದಿವೆ ಎಂಬುದನ್ನು ನೀವು ಮತ್ತೊಮ್ಮೆ ಕೆರಿಬಿಯನ್ ಜನರಿಗೆ ಮತ್ತು ಕ್ರಿಕೆಟ್ ಜಗತ್ತಿಗೆ ಸಾಬೀತುಪಡಿಸಿದ್ದೀರಿ! ಮಾಜಿ ಆಟಗಾರ ಮತ್ತು ವಿಂಡೀಸ್ ಕ್ರಿಕೆಟ್ ಅಭಿಮಾನಿಯಾಗಿ, ಇದು ಅತ್ಯಂತ ಕೆಟ್ಟ ನಿರ್ಧಾರಗಳಲ್ಲಿ ಒಂದಾಗಿದೆ. ವೆಸ್ಟ್ ಇಂಡೀಸ್ ಟಿ20 ತಂಡ ಶ್ರೇಯಾಂಕದಲ್ಲಿ 9ನೇ ಸ್ಥಾನದಲ್ಲಿದ್ದಾಗ ನಾಯಕತ್ವ ವಹಿಸಿಕೊಂಡ ಅವರು 3ನೇ ಶ್ರೇಯಾಂಕಕ್ಕೆ ಏರಿಸಲು ನೆರವು ನೀಡಿದ್ದರು. ತಮ್ಮ ನಾಯಕತ್ವದಲ್ಲಿ ಅವರು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಅಂಥಾ ಆಟಗಾರನನ್ನು ಈ ರೀತಿ ನಡೆಸಿಕೊಳ್ಳಬಾರದು," ಎಂದು ಡ್ವೇನ್ ಬ್ರಾವೊ ತಿಳಿಸಿದ್ದಾರೆ.
ವಿಂಡೀಸ್ ಕೋಚ್ ಡೆರೆನ್ ಸಾಮಿ ಹೇಳಿದ್ದೇನು?
ವೆಸ್ಟ್ ಇಂಡೀಸ್ ಟಿ20 ತಂಡದ ನಾಯಕತ್ವದಿಂದ ರೊವ್ಮನ್ ಪೊವೆಲ್ ಅವರನ್ನು ಕೈ ಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಹೆಡ್ ಕೋಚ್ ಡೆರೆನ್ ಸಾಮಿ, "ಕಳೆದ 18 ತಿಂಗಳುಗಳಲ್ಲಿ 50 ಓವರ್‌ಗಳ ತಂಡದಲ್ಲಿ ಶೇಯ್ ಹೋಪ್ ಅವರ ಯಶಸ್ಸನ್ನು ಗಮನಿಸಿದರೆ, ಅವರ ನೇಮಕವು ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಪ್ರಗತಿಪರ ಬದಲಾವಣೆಯನ್ನು ಸೂಚಿಸುತ್ತದೆ. ತಂಡವು ತನ್ನ ವಿಕಾಸವನ್ನು ಮುಂದುವರಿಸುತ್ತಿದ್ದಂತೆ, ಶೇಯ್ ಹೋಪ್ ಸಹಜವಾದ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ವಿಶ್ಲೇಷಣಾತ್ಮಕ ನಿಖರತೆಯೊಂದಿಗೆ ಸಂಯೋಜಿಸುತ್ತದೆ, ಆಳವಾದ ಪಂದ್ಯದ ಡೇಟಾ ಮತ್ತು ಆಟಗಾರರ ಕಾರ್ಯಕ್ಷಮತೆಯ ಒಳನೋಟಗಳನ್ನು ಬಳಸಿಕೊಂಡು ತಂತ್ರವನ್ನು ರೂಪಿಸುತ್ತದೆ. ತಂಡದ ಪ್ರದರ್ಶನದಲ್ಲಿ ಶೇಯ್ ಹೋಪ್ ಅವರಿಗೆ ಬಲವಾದ ನಂಬಿಕೆಯಿದೆ ಮತ್ತು ಅವರ ನಿಖರವಾದ ತಯಾರಿ, ಒತ್ತಡದಲ್ಲಿನ ಅವರ ಶಾಂತ ಮತ್ತು ಸಂಯಮದ ವರ್ತನೆಯೊಂದಿಗೆ ಈ ಹಂತದಲ್ಲಿ ಅವರನ್ನು ಆದರ್ಶ ನಾಯಕನನ್ನಾಗಿ ಮಾಡುತ್ತದೆ," ಎಂದು ಹೇಳಿಕೊಂಡಿದ್ದಾರೆ.