Chandrashekhertanaya Column: ಗುರುವೇ ನಿನ್ನಾಟ ಬಲ್ಲವರಾರು ?
ಅಷ್ಟರಲ್ಲಿ, ಮೋಟು ಅಂಗಿ ಮತ್ತು ಚಲ್ಲಣವನ್ನು ಧರಿಸಿ ಕೈಯಲ್ಲಿ ಬ್ಯಾಟರಿ ಹಿಡಿದುಕೊಂಡಿರುವ ಆಸಾಮಿಯೊಬ್ಬ ತಮ್ಮ ಕಡೆಗೇ ನಡೆದು ಬರುತ್ತಿರುವುದು ಅಧ್ಯಾಪಕರಿಗೆ ಕಂಡಿತು. ಪ್ರಾಯಶಃ ಕೂಲಿ ಯವನಿರಬೇಕು ಎಂದು ಭಾವಿಸಿದ ಅಧ್ಯಾಪಕರು, “ಲೋ ಅಣ್ಣಾ, ನಾನು ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮಕ್ಕೆ ಹೋಗಬೇಕು ಕಣಪ್ಪಾ. ನಾನು ಈ ಊರಿಗೆ ಹೊಸಬ. ನನ್ನ ಲಗೇಜುಗಳನ್ನು ಕೊಂಚ ಬಸ್ ನಿಲ್ದಾಣದವರೆಗೆ ತಂದುಕೊಡ್ತೀಯಾ? ದುಡ್ಡು ಕೊಡ್ತೀನಿ ಕಣಯ್ಯಾ..." ಎಂದರು.
ಚಂದ್ರಶೇಖರತನಯ
ಒಂದ್ಸಲ ಏನಾಯ್ತಪ್ಪಾ ಅಂದ್ರೇ
ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಅಧ್ಯಾಪಕರಾಗಿ ಕಾರ್ಯನಿರ್ವಹಿಸು ತ್ತಿದ್ದರು. ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿ ಹಳ್ಳಿಯ ಅನಾಥ ಸೇವಾಶ್ರಮದಲ್ಲಿ ಉಪನ್ಯಾಸ ನೀಡಲು ಒಮ್ಮೆ ಅವರು ತೆರಳಬೇಕಾಗಿ ಬಂತು. ಸರಿ, ಟ್ರೇನು ಹಿಡಿದು ಹೊರಟರು. ಅದು ಹೊಳಲ್ಕೆರೆ ನಿಲ್ದಾ ಣವನ್ನು ತಲುಪುವ ವೇಳೆಗೆ ಮುಂಜಾನೆ 5ರ ಚುಮುಚುಮು ಚಳಿಯ ವಾತಾವರಣ. ಅಧ್ಯಾ ಪಕರು ತಾವು ತಂದಿದ್ದ ಒಂದೆರಡು ಲಗೇಜು ಗಳನ್ನು ಪ್ಲಾಟ್ ಫಾರಂ ಮೇಲೆ ಹಾಕಿ, ಟ್ರೇನಿ ನಿಂದ ಇಳಿದು ಒಮ್ಮೆ ಸುತ್ತಮುತ್ತ ನೋಡಿದರು. ಹೊಸ ಜಾಗ, ಹೊಸ ವಾತಾವರಣ. ಹೊಳಲ್ಕೆರೆ ಯಿಂದ ಮಲ್ಲಾಡಿಹಳ್ಳಿಗೆ ಬಸ್ ಹಿಡಿದು ಹೋಗಬೇಕು, ಬಸ್ ನಿಲ್ದಾಣವೆಲ್ಲಿದೆ ಎಂದು ಯಾರನ್ನಾದರೂ ವಿಚಾರಿಸೋಣ ಎಂದು ಅಧ್ಯಾಪಕರು ಲೆಕ್ಕಾಚಾರ ಹಾಕುತ್ತಿದ್ದರು.
ಅಷ್ಟರಲ್ಲಿ, ಮೋಟು ಅಂಗಿ ಮತ್ತು ಚಲ್ಲಣವನ್ನು ಧರಿಸಿ ಕೈಯಲ್ಲಿ ಬ್ಯಾಟರಿ ಹಿಡಿದುಕೊಂಡಿರುವ ಆಸಾಮಿಯೊಬ್ಬ ತಮ್ಮ ಕಡೆಗೇ ನಡೆದು ಬರುತ್ತಿರುವುದು ಅಧ್ಯಾಪಕರಿಗೆ ಕಂಡಿತು. ಪ್ರಾಯಶಃ ಕೂಲಿಯವನಿರಬೇಕು ಎಂದು ಭಾವಿಸಿದ ಅಧ್ಯಾಪಕರು, “ಲೋ ಅಣ್ಣಾ, ನಾನು ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮಕ್ಕೆ ಹೋಗಬೇಕು ಕಣಪ್ಪಾ. ನಾನು ಈ ಊರಿಗೆ ಹೊಸಬ. ನನ್ನ ಲಗೇಜುಗಳನ್ನು ಕೊಂಚ ಬಸ್ ನಿಲ್ದಾಣದವರೆಗೆ ತಂದುಕೊಡ್ತೀಯಾ? ದುಡ್ಡು ಕೊಡ್ತೀನಿ ಕಣಯ್ಯಾ..." ಎಂದರು.
ಅದಕ್ಕೆ ಆ ವ್ಯಕ್ತಿ, “ಅಯ್ನೋರೇ, ತಾವು ಮೈಸೂರಿನಿಂದ ಬಂದವರು ಅಲ್ವೇ? ಬಸ್ ನಿಲ್ದಾಣಕ್ಕೆ ಹೋಗೋ ಅವಶ್ಯಕತೆಯಿಲ್ಲ, ಬನ್ನಿ ಆಶ್ರಮದಿಂದ ನಿಮಗಾಗಿ ಕಾರು ಬಂದಿದೆ" ಎಂದು ಹೇಳಿ ಅಧ್ಯಾಪಕರ ಲಗೇಜುಗಳನ್ನೆಲ್ಲಾ ಸುಲಲಿತವಾಗಿ ಎತ್ತಿ, ಹೆಗಲಿಗೊಂದನ್ನು ಏರಿಸಿ ಎರಡೂ ಕೈಯಲ್ಲಿ ಒಂದೊಂದನ್ನು ಹಿಡಿದುಕೊಂಡು ಮುಂದೆ ಸಾಗಿದ.
ಅಷ್ಟೂ ಲಗೇಜುಗಳು ಕಾರಿನ ಡಿಕ್ಕಿಯನ್ನು ಸೇರಿಕೊಂಡವು. ಮಲ್ಲಾಡಿಹಳ್ಳಿಗೆ ತಲುಪುವುದು ಹೇಗೆಂಬ ಆಲೋಚನೆಯಲ್ಲಿದ್ದ ಅಧ್ಯಾಪಕರಿಗೆ ತಮ್ಮ ಕೆಲಸ ಸುಸೂತ್ರವಾಗಿ ನೆರವೇರಿದ್ದು ಕಂಡು ನೆಮ್ಮದಿ-ಸಂತಸವಾದವು. ಕಾರು ಹೊರಟಿತು. ಆ ಸೇವಕನು ಅಧ್ಯಾಪಕರನ್ನು ಉದ್ದೇಶಿಸಿ, “ರೈಲಿನ ಪ್ರಯಾಣ ಆರಾಮದಾಯಕವಾಗಿತ್ತೇ, ರಾತ್ರಿ ಚೆನ್ನಾಗಿ ನಿದ್ರೆ ಬಂತೇ? ಮಾರ್ಗಮಧ್ಯದಲ್ಲಿ ಏನೂ ತೊಂದರೆಯಾಗಲಿಲ್ಲ ತಾನೇ?" ಎಂದೆಲ್ಲಾ ಕಾಳಜಿಪೂರ್ವಕ ದನಿಯಲ್ಲಿ ಯೋಗಕ್ಷೇಮವನ್ನು ವಿಚಾರಿಸಿದ.
ಅದಕ್ಕೆಲ್ಲಾ ‘ಹೂಂ’ಗುಟ್ಟಿದ ಅಧ್ಯಾಪಕರು ನಂತರ ತಮ್ಮ ಸ್ವಭಾವ ಸಹಜ ಗಂಭೀರ ದನಿಯಲ್ಲೇ, “ಏನಯ್ಯಾ ನಿನ್ನ ಹೆಸರು? ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಶ್ರೀರಾಘವೇಂದ್ರ ಸ್ವಾಮಿಗಳು ಕ್ಷೇಮವೇ? ಆಶ್ರಮ ತಲುಪುತ್ತಿದ್ದಂತೆಯೇ ಅವರನ್ನು ನಾನು ನೋಡಬಹುದಾ? ಯಾಕೆಂದರೆ ಅವರು ಯಾವಾಗಲೂ ಸಂಚಾರದಲ್ಲಿರುತ್ತಾರೆ ಎಂದು ಕೇಳ್ಪಟ್ಟೆ..." ಎಂದು ಕೇಳಿದರು.
ಅದಕ್ಕೆ ಆ ಸೇವಕ, “ಸ್ವಾಮೀ, ನನ್ನ ಹೆಸರು ತಿರುಕಪ್ಪ ಅಂತ. ಮುಂಜಾನೆ 3 ಗಂಟೆಗೆಲ್ಲಾ ಎದ್ದು ಬಿಡುವ ಸ್ವಾಮಿಗಳು ತಮ್ಮ ನಿತ್ಯಕರ್ಮಗಳು, ವ್ಯಾಯಾಮ ಇತ್ಯಾದಿಗಳನ್ನೆಲ್ಲಾ ಮುಗಿಸಿ ನಂತರ ಹೊರಬರುತ್ತಾರೆ. ನೀವು ಆಶ್ರಮ ತಲುಪುತ್ತಿದ್ದಂತೆಯೇ ಅವರೇ ನಿಮ್ಮನ್ನು ಭೇಟಿಯಾಗುತ್ತಾರೆ" ಎಂದ.
ಅಷ್ಟು ಹೊತ್ತಿಗೆ ಆಶ್ರಮ ಬಂತು. ಕಾರಿನಿಂದ ಇಳಿಯುತ್ತಲೇ ಅಧ್ಯಾಪಕರು “ಸ್ವಾಮಿಗಳ ದರ್ಶನ ಮಾಡಬೇಕು" ಎಂದು ಹೇಳುತ್ತಿದ್ದರೂ ತಿರುಕಪ್ಪ, “ಅಯ್ನೋರೇ, ಬಿಸಿನೀರಿದೆ, ಮೊದಲು ಮುಖ ತೊಳೆದುಕೊಳ್ಳಿ. ಕಾಫಿ ಕಳಿಸುತ್ತೇನೆ" ಎನ್ನುತ್ತಾ ಅವರ ಮಾತು ಕೇಳಿಸಲಿಲ್ಲವೇನೋ ಎಂಬಂತೆ ಅಲ್ಲಿಂದ ತೆರಳಿದ.
ಅಧ್ಯಾಪಕರಿಗೋ ಅಯೋಮಯ! ವಿಧಿಯಿಲ್ಲದೆ, ಆತ ಹೇಳಿದಂತೆಯೇ ಮುಖ ತೊಳೆದುಕೊಳ್ಳು ವಷ್ಟರಲ್ಲಿ ಹಬೆಯಾಡುತ್ತಿರುವ ಕಾಫಿ ಪ್ರತ್ಯಕ್ಷವಾಯಿತು, ಅದರ ಹಿಂದೆಯೇ ತಿರುಕಪ್ಪ! ಮನ ದಣಿಯೆ ಕಾಫಿ ಹೀರಿದ ಅಧ್ಯಾಪಕರು, “ಅಯ್ಯಾ, ಇನ್ನಾದರೂ ಸ್ವಾಮಿ ಗಳ ದರ್ಶನವಾಗಲಿ..." ಎನ್ನುತ್ತಿದ್ದರೂ, ಅವರ ಮಾತನ್ನು ಅಷ್ಟಕ್ಕೇ ತುಂಡರಿಸಿದ ತಿರುಕಪ್ಪ, “ಅಯ್ನೋರೇ, ನಿಮ್ಮ ಸ್ನಾನ-ತಿಂಡಿ-ತೀರ್ಥ ಮುಗಿಯಲಿ, ಅವರೇ ಬಂದು ನಿಮ್ಮನ್ನು ಕಾಣುತ್ತಾರೆ" ಎಂದು ಹೇಳಿ ನಕ್ಕ.
ಅವೆಲ್ಲವೂ ಮುಗಿಯುತ್ತಿದ್ದಂತೆ ಹಾಜರಾದ ತಿರುಕಪ್ಪ, “ಬನ್ನಿ ಬುದ್ಧೀ, ಸ್ವಾಮಿಗಳ ಬಳಿಗೆ ಹೋಗೋಣ" ಎನ್ನುತ್ತಾ ಅಧ್ಯಾಪಕರೊಂದಿಗೆ ಹೆಜ್ಜೆಹಾಕಿದ. ಆಶ್ರಮದ ಆವರಣದಲ್ಲಿ ಸಿಗುವ ವಿವಿಧ ಪಠ್ಯಕ್ರಮದ ಶಾಲಾ-ಕಾಲೇಜುಗಳು, ಶಿಕ್ಷಕರ ವಾಸಸ್ಥಳಗಳು, ಗೋಶಾಲೆ, ತಪೋವನ, ಗರಡಿ ಮನೆ, ಅನ್ನಪೂರ್ಣಾಲಯ, ದುರ್ಗಾಲಯ ಇತ್ಯಾದಿಗಳನ್ನು ತೋರಿಸುತ್ತಾ ತಿರುಕಪ್ಪ ಸಾಗಿದ. ತರುವಾಯ, ಸಭಾಂಗಣವನ್ನು ತೋರಿಸಿ, “ಇಲ್ಲೇ ನಿಮ್ಮ ಉಪನ್ಯಾಸ ನಡೆಯೋದು" ಎಂದ.
ಅಧ್ಯಾಪಕರಿಗೋ ರಾಘವೇಂದ್ರ ಸ್ವಾಮಿಗಳನ್ನು ನೋಡುವ ಹಂಬಲ. ಆದರೆ ತಿರುಕಪ್ಪ ಮಾತ್ರ ತೋರಿಸದೆ ಆಟವಾಡಿಸುತ್ತಿದ್ದ. ಅಷ್ಟರಲ್ಲಿ ಮಹಿಳೆಯೊಬ್ಬಳು ಧಾವಿಸಿ ಬಂದು, “ಬುದ್ಧೀ, ನನ್ನ ಗಂಡನ ಪ್ರಾಣ ಉಳಿಸಿಬಿಟ್ಟಿರಿ" ಎನ್ನುತ್ತಾ ತಿರುಕಪ್ಪನಿಗೆ ರಸ್ತೆಯಲ್ಲೇ ಅಡ್ಡಬಿದ್ದು ನಮಸ್ಕರಿಸಿದಳು. ಆಗ ಅಧ್ಯಾಪಕರು, ‘ಅರೆ, ಈತನನ್ನು ಸೇವಕ ಎಂದುಕೊಂಡುಬಿಟ್ಟಿದ್ದೆನಲ್ಲಾ? ಪ್ರಾಯಶಃ ಈತ ಇಲ್ಲಿಯ ಆಯುರ್ವೇದ ವೈದ್ಯನಿರಬೇಕು’ ಎಂದು ತಮ್ಮಲ್ಲೇ ಹೇಳಿಕೊಂಡರು.
ಮುಂದೆ ತಿರುಕಪ್ಪ ಕಾರ್ಯಾಲಯವನ್ನು ಪ್ರವೇಶಿಸಿ ಕುರ್ಚಿಯೊಂದರ ಮೇಲೆ ಕುಳಿತು, ಎದುರಿನ ಕುರ್ಚಿಯಲ್ಲಿ ಕೂರುವಂತೆ ಅಧ್ಯಾಪಕರಿಗೆ ವಿನಂತಿಸಿದ. ಆಶ್ರಮದ ಸಿಬ್ಬಂದಿಯೊಬ್ಬ ಒಂದಷ್ಟು ಕಾಗದ-ಪತ್ರಗಳನ್ನು ತಂದು ತಿರುಕಪ್ಪನ ಮುಂದಿರಿಸಿದ. ಅವುಗಳ ಪರಿಶೀಲನೆಯಲ್ಲಿ ತಿರುಕಪ್ಪ ವ್ಯಸ್ತನಾಗಿದ್ದುದು ಕಂಡ ಅಧ್ಯಾಪಕರು, ‘ಬಹುಶಃ, ಈತ ಆಶ್ರಮದ ಮ್ಯಾನೇಜರ್ ಇರಬಹುದು’ ಎಂದು ಭಾವಿಸಿದರು.
ನಂತರ ಧೈರ್ಯ ಮಾಡಿ, “ನಾನು ಸ್ವಾಮಿ ಗಳನ್ನ, ನನ್ನ ಗುರುಗಳನ್ನ ಭೇಟಿಯಾಗಬೇಕಿ ತ್ತಲ್ಲಾ..." ಎಂದು ವಿನಯಪೂರ್ವಕವಾಗಿ ನುಡಿದರು ಅಧ್ಯಾಪಕರು. ಆಗ ಕುರ್ಚಿಯಲ್ಲಿ ಕೂತಿದ್ದ ತಿರುಕಪ್ಪ, “ಗುರುವನ್ನು ನೋಡಬೇಕೇ? ಇಷ್ಟೂ ಹೊತ್ತು ಅವರು ನಿಮ್ಮೊಂದಿಗೇ ಹೆಜ್ಜೆಹಾಕುತ್ತಾ ಬಂದ್ರಲ್ಲಾ ಅಯ್ನೋರೇ?!" ಎನ್ನುತ್ತಾ ತುಂಟನಗೆ ಬೀರಿದ.
“ಅಂದ್ರೇ...?" ಎಂದು ಉದ್ಗರಿಸಿದ ಅಧ್ಯಾಪಕರಿಗೆ ದಿಟದರ್ಶನವಾಗಿ, ಕುರ್ಚಿಯಿಂದೆದ್ದು ತಿರುಕಪ್ಪ ನಿಗೆ ದೀರ್ಘದಂಡ ನಮಸ್ಕಾರ ಮಾಡಿದರು. ತಾವು ರೈಲಿನಿಂದ ಇಳಿದ ನಂತರ ತಮ್ಮ ಲಗೇಜು ಗಳನ್ನು ಹೊತ್ತು ಕಾರಿನವರೆಗೆ ತಂದಿದ್ದಲ್ಲದೆ, ಮಾರ್ಗದುದ್ದಕ್ಕೂ ಯೋಗಕ್ಷೇಮ ವಿಚಾರಿಸಿಕೊಂಡು, ಆಶ್ರಮಕ್ಕೆ ಬಂದ ನಂತರ ಊಟೋಪಚಾರಗಳ ಬಗ್ಗೆಯೂ ನಿಗಾವಹಿಸಿದ, ಆಶ್ರಮದ ಸಮಗ್ರ ಪರಿಚಯ ಮಾಡಿಸಿದ ನಂತರವಷ್ಟೇ ತನ್ನ ಪರಿಚಯವನ್ನು ಸೂಚ್ಯವಾಗಿ ಹೇಳಿಕೊಂಡ ತಿರುಕಪ್ಪನೇ ಸದರಿ ಅನಾಥ ಸೇವಾಶ್ರಮದ ಶ್ರೀ ರಾಘವೇಂದ್ರ ಸ್ವಾಮಿಗಳು ಎಂದರಿವಾಗಿ ಅಧ್ಯಾಪಕ ರಲ್ಲಿ ಪಶ್ಚಾತ್ತಾಪದ ಭಾವ ಮೂಡಿತು.
ಒಂದು ಮೋಟು ಅಂಗಿ ಮತ್ತು ಚಲ್ಲಣವನ್ನು ಧರಿಸಿದ್ದ ರಾಘವೇಂದ್ರ ಸ್ವಾಮಿಗಳ ಸರಳತೆ ಅಧ್ಯಾ ಪಕರನ್ನು ಕೆಲಕಾಲ ದಿಕ್ಕುತಪ್ಪಿಸಿತ್ತು! ಗುರುವಿನಾಟವನ್ನು ಬಲ್ಲವರಾರು? ಆತ ರೂಪ, ಅಂತಸ್ತು, ಸೌಂದರ್ಯ, ಪ್ರತಿಷ್ಠೆ, ದುಡ್ಡು ಮುಂತಾದ ಅಲಂಕಾರಗಳ ಹಿಡಿತಕ್ಕೆ ಸಿಗುವವನಲ್ಲ. ತನ್ನೆಡೆಗೆ ಒಂದು ಹೆಜ್ಜೆ ಹಾಕಿದವರ ಜತೆ ಅನುಗಾಲವೂ ಹೆಜ್ಜೆ ಹಾಕುವ ಈ ಸಹೃದಯಿ ನಮ್ಮ ಬದುಕಿನಲ್ಲಿ ಯಾವ ರೂಪದಲ್ಲಿ ಬೇಕಾದರೂ ಎದುರಾಗಬಹುದು. ಹೀಗಾಗಿ, ಕಣ್ಣುಗಳನ್ನು, ಅದರಲ್ಲೂ ಒಳಗಣ್ಣು ಗಳನ್ನು ‘ನಿಜಾರ್ಥದಲ್ಲಿ’ ತೆರೆದಿಟ್ಟು ಕೊಂಡಿರೋಣ!