ಕುರುಬನಿಂದ ಗುರುವಿನ ದರ್ಶನ..!
ಒಂದು ಕಾಲಕ್ಕೆ ರಂಗಭೂಮಿಯಲ್ಲಿ ತಮ್ಮೊಂದಿಗೆ ಒಡನಾಡಿದ ಗೆಳೆಯರನ್ನು ಮತ್ತು ಹಿತೈಷಿಗಳನ್ನು ದೂರ ಮಾಡಿಕೊಳ್ಳಲಿಲ್ಲ. ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ, ಆರಂಭಿಕ ಕೆಲ ದಶಕಗಳವರೆಗೆ ಮದ್ರಾಸ್‌ನಲ್ಲೇ ನೆಲೆಯಾಗಿದ್ದರೂ, ಯಾವಾಗಲಾದ ರೊಮ್ಮೆ ಸಮಯಾವಕಾಶ ಮಾಡಿಕೊಂಡು ತಮ್ಮ ಹಳೆಯ ಮಿತ್ರರನ್ನೆಲ್ಲ ಭೇಟಿಯಾಗಿ ಹಿಂದಿನ ರಸಮಯ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದುದು ಅಣ್ಣಾವ್ರ ವೈಶಿಷ್ಟ್ಯವಾಗಿತ್ತು
![ಕುರುಬನಿಂದ ಗುರುವಿನ ದರ್ಶನ..!](https://cdn-vishwavani-prod.hindverse.com/media/original_images/ondala_ok.jpg)
![Profile](https://vishwavani.news/static/img/user.png)
ಚಂದ್ರಶೇಖರತನಯ
ಒಂದ್ಸಲ ಏನಾಯ್ತಪ್ಪಾ ದರ್ಶನ..!
ಪದ್ಮಭೂಷಣ ಡಾ. ರಾಜ್‌ಕುಮಾರ್ ಅವರು ಮೂಲತಃ ರಂಗಭೂಮಿಯಿಂದ ಹೊಮ್ಮಿದ ಪ್ರತಿಭೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವಂಥದ್ದೇ. ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ಅವರು ಬೆಳ್ಳಿತೆರೆಗೆ ಪದಾರ್ಪಣ ಮಾಡಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ ಎನ್ನ ಬೇಕು. ಹಾಗೆಂದ ಮಾತ್ರಕ್ಕೆ ಅವರು, ಒಂದು ಕಾಲಕ್ಕೆ ರಂಗಭೂಮಿಯಲ್ಲಿ ತಮ್ಮೊಂದಿಗೆ ಒಡನಾಡಿದ ಗೆಳೆಯರನ್ನು ಮತ್ತು ಹಿತೈಷಿಗಳನ್ನು ದೂರ ಮಾಡಿಕೊಳ್ಳಲಿಲ್ಲ. ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ, ಆರಂಭಿಕ ಕೆಲ ದಶಕಗಳವರೆಗೆ ಮದ್ರಾಸ್‌ನಲ್ಲೇ ನೆಲೆಯಾಗಿದ್ದರೂ, ಯಾವಾಗಲಾದ ರೊಮ್ಮೆ ಸಮಯಾವಕಾಶ ಮಾಡಿಕೊಂಡು ತಮ್ಮ ಹಳೆಯ ಮಿತ್ರರನ್ನೆಲ್ಲ ಭೇಟಿಯಾಗಿ ಹಿಂದಿನ ರಸಮಯ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದುದು ಅಣ್ಣಾವ್ರ ವೈಶಿಷ್ಟ್ಯವಾಗಿತ್ತು.
ಅಣ್ಣಾವ್ರ ಇಂಥ ಗೆಳೆಯರ ಪೈಕಿ ಎದ್ದು ಕಾಣುವವರು ತಿಪಟೂರು ರಾಮಸ್ವಾಮಿಯವರು. ಯಾರೇ ಇಬ್ಬರು ಗೆಳೆಯರ ನಡುವಿನ ಗಾಢಸ್ನೇಹದ ಕುರಿತು ಹೇಳುವಾಗಲೆಲ್ಲಾ, “ಒಂದೇ ತಟ್ಟೆಯಲ್ಲಿ ಊಟ ಮಾಡ್ತಿದ್ದವರು", “ಎರಡು ದೇಹ, ಒಂದು ಪ್ರಾಣ" ಎಂಬೆಲ್ಲಾಅಲಂಕಾರಿಕ ಮಾತುಗಳನ್ನು ಬಳಸುವುದು ವಾಡಿಕೆ.
ಇದನ್ನೂ ಓದಿ: R T Vittalmurthy Column: ಬೊಮ್ಮಾಯಿ, ನಿರಾಣಿ ರೇಸಿನಲ್ಲಿ ಕಾಣಿಸಿಕೊಂಡರು
ಇಂಥ ಹೋಲಿಕೆಗೆ ಪುಷ್ಟಿ ನೀಡುವಂತಿತ್ತು ಅಣ್ಣಾವ್ರು ಹಾಗೂ ತಿಪಟೂರು ರಾಮಸ್ವಾಮಿಯವರ ನಡುವಿನ ನಿರ್ವ್ಯಾಜ ಸ್ನೇಹ, ಅಕಳಂಕ ಪ್ರೇಮ. ರಾಮಸ್ವಾಮಿಯವರನ್ನು ನೋಡಬೇಕು ಎನಿಸಿ ದಾಗಲೆಲ್ಲಾ ಮನೆಮಂದಿಯನ್ನೆಲ್ಲಾ ಎಬ್ಬಿಸಿಕೊಂಡು ತಿಪಟೂರಿಗೆ ಹೋಗಿಬಿಡುತ್ತಿದ್ದರಂತೆ ಅಣ್ಣಾ ವ್ರು!
ಕೆಲವೊಮ್ಮೆಯಂತೂ, ರಾಮ ಸ್ವಾಮಿಯವರು ಕಾರ್ಯನಿಮಿತ್ತವಾಗಿ ಬೆಂಗಳೂರಿಗೆ ಬಂದವರು ಅಣ್ಣಾವ್ರ ಭೇಟಿಗೂ ತೆರಳಿದಾಗ, ಭೇಟಿ, ಮಾತುಕತೆ, ಊಟೋಪಚಾರಗಳೆಲ್ಲ ಮುಗಿದ ನಂತರ ಅಣ್ಣಾವ್ರು ತಿಪಟೂರಿನವರೆಗೂ ಹೋಗಿ ರಾಮಸ್ವಾಮಿಯವರನ್ನು ಬಿಟ್ಟುಬಂದಿದ್ದೂ ಇದೆಯಂತೆ! ಅಂಥ ಅನುಪಮ ಸ್ನೇಹದ ಕಡಲಲ್ಲಿ ತೇಲುತ್ತಿದ್ದ ದೋಣಿಗಳಾಗಿದ್ದರು ಅಣ್ಣಾವ್ರು ಹಾಗೂ ರಾಮ ಸ್ವಾಮಿಯವರು. ಹೀಗೇ ಇವರಿಬ್ಬರೂ ಒಮ್ಮೆ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಅಣ್ಣಾವ್ರಿಗೆ ದಾಹ ವಾಯಿತಂತೆ.
ಜತೆಯಲ್ಲಿ ಇಟ್ಟುಕೊಂಡಿದ್ದ ನೀರೂ ಖಾಲಿಯಾಗಿತ್ತು. ಅದು ಜನಸಂದಣಿಯಿಲ್ಲದ ಊರ ಹೊರ ವಲಯದಂಥ ಪ್ರದೇಶ. ಅಣ್ಣಾವ್ರು ಅತ್ತಿತ್ತ ಕಣ್ಣು ಹಾಯಿಸಿದಾಗ, ರಸ್ತೆಯ ಬದಿಯ ಹೊಲವೊಂದ ರಲ್ಲಿ ಮೆಟ್ಟಿಲುಗಳುಳ್ಳ ಕಲ್ಯಾಣಿಯ ತರಹದ ಒಂದು ಬಾವಿ ಕಾಣಿಸಿ ತಂತೆ. ಅತೀವ ಸಂತಸ ಗೊಂಡ ಅಣ್ಣಾವ್ರು ಕಾರನ್ನು ನಿಲ್ಲಿಸಲು ಹೇಳಿ, ಕೆಳಗಿಳಿದು ಆ ಬಾವಿಗೆ ಇಳಿದೇಬಿಟ್ಟರು. ಇವಿಷ್ಟನ್ನೂ ಅಲ್ಲಿನ ಕುರಿಗಾಹಿಯೊಬ್ಬ ನೋಡುತ್ತಿದ್ದ.
ಅಣ್ಣಾವ್ರು ಬಾವಿಗಿಳಿದಿದ್ದನ್ನು ಕಂಡು ಅಲ್ಲಿಗೆ ಧಾವಿಸಿದ ಆತ, “ನಿಮಗೇನು ಮೈಮೇಲೆ ಜ್ಞಾನ ವಿಲ್ಲವೇ?" ಎಂದು ಕೇಳಿಯೇ ಬಿಟ್ಟನಂತೆ! ಅವನು ಹಾಗೆ ಪ್ರಶ್ನಿಸಿದ ಶೈಲಿ ಹಾಗೂ ರಭಸವನ್ನು ಕಂಡ ಅಣ್ಣಾವ್ರಿಗೆ ತಾವು ಯಾರೆಂಬುದು ಈತನಿಗೆ ಗೊತ್ತಿಲ್ಲ ಅಂತ ಖಾತ್ರಿಯಾಯಿತು.
ಮರುಕ್ಷಣವೇ,“ಯಾಕಪ್ಪಾ... ಏನಾಯ್ತು?" ಎಂದು ಆತನನ್ನು ಅಮಾಯಕವಾಗಿ ಪ್ರಶ್ನಿಸಿದರು ಅಣ್ಣಾವ್ರು. ಅದಕ್ಕೆ ಆ ಕುರಿಗಾಹಿ, “ಏನಾಯ್ತು ಅಂತ ಕೇಳ್ತೀರಾ? ಚಪ್ಪಲಿ ಹಾಕಿಕೊಂಡು ಕುಡಿಯೋ ನೀರಿನ ಬಾವಿಗೆ ಯಾರಾದ್ರೂ ಇಳೀತಾರೇನ್ರೀ? ಮೊದಲು ಚಪ್ಪಲಿಯನ್ನು ಮೇಲೆ ಬಿಟ್ಟು ಆಮೇಲೆ ಬಾವಿಗಿಳಿಯಿರಿ.
ಇಲ್ಲಾಂದ್ರೆ ಆ ಗಂಗವ್ವ ಕೋಪ ಮಾಡ್ಕೋತಾಳೆ" ಎಂದು ತನ್ನದೇ ಶೈಲಿಯಲ್ಲಿ ಹೇಳಿದ. ಈ ಬೆಳವ ಣಿಗೆಗೆ ಸಾಕ್ಷಿಯಾದ ರಾಮಸ್ವಾಮಿಯವರು, “ನಿಂಗೆ ಗೊತ್ತಿಲ್ವೇ? ಇವರು ರಾಜ್ ಕುಮಾರ್..." ಅಂತೇ ನೋ ಹೇಳುವ ಹವಣಿಕೆಯಲ್ಲಿದ್ದಾಗ, ಕಣ್ಸನ್ನೆಯಿಂದಲೇ ಅವರನ್ನು ಸುಮ್ಮನಾಗಿಸಿದರು ಅಣ್ಣಾವ್ರು. ನಂತರ ಬಾವಿಯ ಮೆಟ್ಟಿಲೇರಿ ಬಂದು ಆ ಕುರಿಗಾಹಿ ಹೇಳಿದಂತೆ ಚಪ್ಪಲಿಯನ್ನು ಕಾರಿನ ಬಳಿಯೇ ಬಿಟ್ಟು, ನಂತರ ಬರಿಗಾಲಲ್ಲಿ ಮರಳಿ ನೀರಿಗಿಳಿದು ದಾಹ ತೀರಿಸಿಕೊಂಡು ಮೇಲೆ ಬರು ವಾಗ, “ನನ್ನದು ತಪ್ಪಾಯ್ತು ಕಂದಾ" ಎಂದು ಹೇಳಿ, ವಯಸ್ಸಿನಲ್ಲಿ ಆತ ಚಿಕ್ಕವನಾದರೂ ಯಾವ ಹಮ್ಮು-ಬಿಮ್ಮು ಇಲ್ಲದೆ ಆತನಿಗೆ ನಮಸ್ಕರಿಸಿ, ಕಾರನ್ನೇರಿ ಅಲ್ಲಿಂದ ತೆರಳಿದರಂತೆ.
ನಂತರ ರಾಮಸ್ವಾಮಿಯವರೊಂದಿಗೆ ಮಾತನಾಡುತ್ತಾ, “ಇಂದು ಕುರುಬನಿಂದ ಗುರುವಿನ ದರ್ಶನ ವಾಯಿತು.." ಎಂದರಂತೆ! ಇನ್ನೊಂದು ಪ್ರಸಂಗ ಇನ್ನೂ ಮಜವಾಗಿದೆ. ಅಣ್ಣಾವ್ರು ತಮ್ಮ ಸೋದರ ವರದಪ್ಪ ಅವರೊಂದಿಗೆ ಹೀಗೇ ಒಮ್ಮೆ ಕಾರಿನಲ್ಲಿ ಎಲ್ಲಿಗೋ ತೆರಳುತ್ತಿದ್ದರು. ಮಾರ್ಗಮಧ್ಯದಲ್ಲಿ ಅದೇನೋ ಕಾರಣಕ್ಕೆ ಕಾರನ್ನು ನಿಲ್ಲಿಸಬೇಕಾಗಿ ಬಂತು.
ಕಾರಿನಲ್ಲಿ ಅಣ್ಣಾವ್ರು ಇರುವ ಸಂಗತಿ ಅದು ಹೇಗೋ ಜನರಿಗೆ ಗೊತ್ತಾಗಿ ನೋಡಲು ಬಂದರು. ಎಲ್ಲರನ್ನೂ ಮಾತಾಡಿಸಿ ಕಳಿಸಿದ ನಂತರ ಹಣ್ಣಣ್ಣು ಮುದುಕಿಯೊಬ್ಬಳು ಬಂದು ಅಣ್ಣಾವ್ರಿಗೆ ನಮಸ್ಕರಿಸಿದಳಂತೆ. ಅವಳಿದ್ದ ಸ್ಥಿತಿ ಗತಿಯನ್ನು ಕಂಡು ಅಣ್ಣಾವ್ರಿಗೆ ಅದೇನನ್ನಿಸಿತೋ ಏನೋ, ಪಕ್ಕದಲ್ಲಿದ್ದ ಸೋದರನಿಗೆ, “ವರದಪ್ಪಾ, ಆಕೆಗೆ ಐದು ನೂರು ರುಪಾಯಿ ಕೊಡು" ಎಂದು ಹೇಳಿದರಂತೆ.
ಅಣ್ಣನ ಸೂಚನೆಯಂತೆ ವರದಪ್ಪ ಆಕೆಗೆ ದುಡ್ಡು ಕೊಟ್ಟು ಕಳಿಸಿದರು, ಕಾರು ಪ್ರಯಾಣ ಮುಂದು ವರಿಯಿತು. ಕೆಲಕಾಲ ಕಾರಿನಲ್ಲಿ ದಿವ್ಯಮೌನ, ಅದಕ್ಕೆ ಕಾರಣ ಅಣ್ಣಾವ್ರಲ್ಲಿ ಉಂಟಾಗಿದ್ದ ಸಣ್ಣ ಅಸಮಾಧಾನ. ಅದನ್ನು ಗ್ರಹಿಸಿದ ವರದಪ್ಪನವರು, ಏನಾಯ್ತು ಎಂಬಂತೆ ಮುಖಭಾವ ಮಾಡಿ ದಾಗ ಅಣ್ಣಾವ್ರು, “ವರದಪ್ಪಾ, ನಾನು ಹೇಳಿದ್ದೇನು, ನೀನು ಮಾಡಿದ್ದೇನು? ಆ ಮುದುಕಿಗೆ ಐದು ನೂರು ರುಪಾಯಿ ಕೊಟ್ಟು ಕಳಿಸು ಎಂದು ನಾನು ಹೇಳಿದರೆ, ನೀನು ಒಂದೇ ಒಂದು ನೋಟು ಕೊಟ್ಟು ಕಳಿಸಿದೆಯಲ್ಲಾ? ಅದ್ಯಾಕೆ ಹೀಗೆ ಮಾಡಿದೆ?" ಎಂದು ಲೈಟಾಗಿ ತರಾಟೆಗೆ ತೆಗೆದುಕೊಂಡ ರಂತೆ.
ವರದಪ್ಪನವರಿಗೆ ಸಣ್ಣದಾಗಿ ನಗು ಬಂದರೂ ತೋರಿಸಿಕೊಳ್ಳದೆ, “ಇಲ್ಲಣ್ಣಾ, ಆಕೆಗೆ ಐದು ನೂರರ ನೋಟನ್ನೇ ಕೊಟ್ಟಿದ್ದು" ಎಂದು ಸಮಜಾಯಿಷಿ ನೀಡಲು ಮುಂದಾದರಂತೆ. ಆಗ ಅಣ್ಣಾವ್ರು, “ನಾನೇ ಕಣ್ಣಾರೆ ನೋಡಿದೆ ನಲ್ಲಾ.. ಐದು ನೂರು ಕೊಟ್ಟಿದ್ದರೆ ಐದು ನೋಟುಗಳು ಇರಬೇಕಿತ್ತು, ಆದರೆ ನೀನು ಕೊಟ್ಟಿದ್ದು ಒಂದೇ ಒಂದು ನೋಟು" ಎಂದರಂತೆ.
ಆಗ ವರದಪ್ಪನವರು, “ಅಣ್ಣಾ, ಈಗ ಐದು ನೂರು ಮುಖಬೆಲೆಯ ನೋಟೂ ಬಂದಿದೆ, ನೀವು ಹೇಳಿದಂತೆ ಅದನ್ನೇ ಆಕೆಗೆ ನಾನು ಕೊಟ್ಟು ಕಳಿಸಿದ್ದು" ಎಂದು ಹೇಳಿ ಸಮಾಧಾನಿಸಿದರಂತೆ! “ಅಯ್ಯೋ ಶಿವನೇ, ಐದು ನೂರು ರುಪಾಯಿಯ ನೋಟೂ ಬಂದಿದೆಯೇ? ನಂಗೆ ಗೊತ್ತೇ ಇಲ್ವ ಲ್ಲಪ್ಪಾ..!" ಎಂದು ಉದ್ಗಾರ ತೆಗೆದರಂತೆ ಅಣ್ಣಾವ್ರು.
ತಾವು ಅಭಿನಯಿಸಿದ ಚಲನಚಿತ್ರಗಳು ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಿದ್ದರೂ, ಅದನ್ನು ಮೈಗೆ ಸೋಕಿಸಿ ಕೊಳ್ಳದೆ ದೂರವುಳಿದಿದ್ದ ಅಣ್ಣಾವ್ರು, ದುಡ್ಡು- ಕಾಸಿನ ವಿಷಯದಲ್ಲಿ ಅದೆಷ್ಟು ಮುಗ್ಧರಾಗಿದ್ದರು ಎಂಬುದಕ್ಕೆ ಈ ಘಟನೆ ಸಾಕ್ಷಿ.