ಇನ್ನೂ ದಡ ಸೇರದ 12 ಸಾವಿರ ಕೆರೆಗಳ ಒತ್ತುವರಿ ಸಮಸ್ಯೆ
ಕೆರೆಗಳ ಒತ್ತುವರಿಗಳನ್ನೂ ಗುರುತಿಸಿ ಅವುಗಳ ಡಿಜಿಟಲ್ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸುತ್ತಿದೆ. ಹೀಗಾಗಿ ಈತನಕ ರಾಜ್ಯದಲ್ಲಿರುವ 42 ಸಾವಿರ ಕೆರೆಗಳ ಪೈಕಿ 12 ಸಾವಿರ ಕೆರೆಗಳು ಒತ್ತುವರಿಯಾಗಿರುವುದು ಪತ್ತೆಯಾಗಿದೆ. ಅಂದರೆ ಜಮೀನು ಮತ್ತು ಕೆರೆಗಳ ಒತ್ತುವರಿಯನ್ನು ಪತ್ತೆ ಮಾಡಲು ಹಳೇ ಸರಪಳಿ ಪದ್ಧತಿಯಿಂದ ಹೊರಬಂದಿರುವ ಸರ್ವೇ ಇಲಾಖೆಯು ಈಗ ಅತ್ಯಂತ ಕಡಿಮೆ ಅವಧಿಯಲ್ಲಿ ಅಳತೆ ಮಾಡಿ ಅವುಗಳ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ


ಶಿವಕುಮಾರ್ ಬೆಳ್ಳಿತಟ್ಟೆ
ಒತ್ತುವರಿ ಜತೆ ಸ್ಥಳೀಯ ಸಂಸ್ಥೆಗಳ ಹೊಂದಾಣಿಕೆ ಸರ್ವೇ
ಇಲಾಖೆ ಕಾರ್ಯಕ್ಕೆ ಸರಕಾರದ ಶ್ಲಾಘನೆ
ಬೆಂಗಳೂರು: ರಾಜ್ಯದಲ್ಲಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಎಚ್ಚರಿಕೆಗಳ ನಂತರ ವೂ ಕೆರೆಗಳ ಒತ್ತುವರಿ ಹೆಚ್ಚಾಗುತ್ತಿದ್ದು, ಸರಕಾರದ ಸರ್ವೇ ಇಲಾಖೆ ಸದ್ದಿಲ್ಲದೆ ಕೆರೆಗಳ ಒತ್ತುವರಿಗಳನ್ನು ಪತ್ತೆ ಮಾಡಿದೆ. ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಸರಕಾರಿ ಜಮೀನು ಒತ್ತುವರಿ ಆರೋಪದ ಹಿನ್ನೆಲೆ ಯಲ್ಲಿ ರಾಜ್ಯಾದ್ಯಂತ ಸರ್ವೇ ಕಾರ್ಯಗಳನ್ನು ನಡೆಸುವ ಮೂಲಕ ಹೆಚ್ಚು ಸಕ್ರಿಯ ರಾಗಿರುವ ಸರ್ವೇ ಇಲಾಖೆಯು ಈಗ ಕೆರೆಗಳ ಒತ್ತುವರಿ ಕಡೆ ಗಮನ ಹರಿಸುತ್ತಿದೆ. ಈ ತನಕ ಹಳೇ ಪದ್ಧತಿಯಲ್ಲಿ ಸರ್ವೇ ನಡೆಯುತ್ತಿದ್ದ ಕಾರಣ ಒತ್ತುವರಿ ಗುರುತಿಸುವುದು ತೀರಾ ವಿಳಂಬವಾಗುತ್ತಿತ್ತು. ಇದರಿಂದ ಕೆರೆಗಳ ಒತ್ತುವರಿ ಹಗಲು ದರೋಡೆಯಂತೆ ನಡೆಯುತ್ತಿತ್ತು.
ಇದನ್ನು ಅಧಿಕಾರಿ ಗಳು ಪ್ರಶ್ನಿಸಿದರೆ, ಭೂಗಳ್ಳಲು ತಡೆಯಾಜ್ಞೆಗಳನ್ನು ತಂದು ಸರಕಾರಕ್ಕೆ ಸವಾಲಾಗುತ್ತಿದ್ದರು. ಇದನ್ನು ತಪ್ಪಿಸಲು ಸರ್ವೇ ಇಲಾಖೆಯು ಈಗ ಸುಧಾರಿತ ತಂತ್ರಜ್ಞಾ ನದ ರೋವರ್ ಉಪ ಕರಣ ಬಳಸಿ ಸರ್ವೇಗಳನ್ನು ನಡೆಸುತ್ತಿದ್ದು, ಆ ಮೂಲಕ ಕೆರೆಗಳ ದಾಖಲೆಗಳನ್ನು ಸಂರ ಕ್ಷಣೆ ಮಾಡುತ್ತಿದೆ.
ಹಾಗೆಯೇ ಕೆರೆಗಳ ಒತ್ತುವರಿಗಳನ್ನೂ ಗುರುತಿಸಿ ಅವುಗಳ ಡಿಜಿಟಲ್ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸುತ್ತಿದೆ. ಹೀಗಾಗಿ ಈತನಕ ರಾಜ್ಯದಲ್ಲಿರುವ 42 ಸಾವಿರ ಕೆರೆಗಳ ಪೈಕಿ 12 ಸಾವಿರ ಕೆರೆಗಳು ಒತ್ತುವರಿಯಾಗಿರುವುದು ಪತ್ತೆಯಾಗಿದೆ. ಅಂದರೆ ಜಮೀನು ಮತ್ತು ಕೆರೆಗಳ ಒತ್ತುವರಿಯನ್ನು ಪತ್ತೆ ಮಾಡಲು ಹಳೇ ಸರಪಳಿ ಪದ್ಧತಿಯಿಂದ ಹೊರಬಂದಿರುವ ಸರ್ವೇ ಇಲಾಖೆಯು ಈಗ ಅತ್ಯಂತ ಕಡಿಮೆ ಅವಧಿಯಲ್ಲಿ ಅಳತೆ ಮಾಡಿ ಅವುಗಳ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ.
ಅಷ್ಟೇ ಅಲ್ಲದೆ, ಆ ದಾಖಲೆಗಳು ಸರ್ವ ಕಾಲಕ್ಕೂ ಸಿಗುವಂತಾಗಲು ಡಿಜಿಟಲೀಕರಣ ಗೊಳಿಸಿ ಸಂಗ್ರಹಿಸುತ್ತಿದೆ. ಹೀಗಾಗಿ ಇಲಾಖೆ ಆಯುಕ್ತರು ಮತ್ತು ಇತರ ಅಧಿಕಾರಿಗಳ ಕಾರ್ಯವನ್ನು ಸರಕಾರ ಮೆಚ್ಚಿಕೊಂಡಿದ್ದು, ಕೆರೆಗಳ ಒತ್ತುವರಿ ಸರ್ವೇ ಕಾರ್ಯವನ್ನು ಮುಂದುವರಿಸುವಂತೆ ಸೂಚಿಸಿದ್ದಾರೆ.
ಆದರೆ ಬೇಸರದ ಸಂಗತಿ ಎಂದರೆ, ಸರ್ವೇ ಇಲಾಖೆ ಪತ್ತೆ ಮಾಡಿರುವ ಒತ್ತುವರಿಗಳನ್ನು ತೆರವುಗೊಳಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ಆಸಕ್ತಿ ತೋರಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಅದರಲ್ಲೂ ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಕೆರೆಗಳ ಒತ್ತುವರಿ ಹೆಚ್ಚಾಗಿದ್ದು, ಇದರ ಬಗ್ಗೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಮುಂದಾ ಗದೆ ಹೊಂದಾಣಿಕೆಯೊಂದಿಗೆ ಒತ್ತುವರಿ ಮುಂದುವರಿಯುಂತೆ ಮಾಡಿದ್ದಾರೆ ಎನ್ನುವ ದೂರುಗಳು ಸರಕಾರಕ್ಕೆ ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆರೆಗಳೇ ಮಾಯ, ದಾಖಲೆಗಳಿಗೆ ಗಾಯ: ರಾಜ್ಯದಲ್ಲಿ 100 ಎಕರೆ ವಿಸ್ತೀರ್ಣಕ್ಕಿಂತ ಕಡಿಮೆ ಇರುವ ಕೆರೆಗಳು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಸೇರುತ್ತವೆ. ಹೆಚ್ಚಿನ ವಿಸ್ತೀರ್ಣ ಇರುವ ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಆದರೆ ರಾಜ್ಯ ದಲ್ಲಿ ಸಾವಿರಾರು ಕೆರೆಗಳಿದ್ದರೂ ಅವುಗಳಿಗೆ ಸೂಕ್ತ ದಾಖಲೆಗಳಿಲ್ಲದೆ ಅವುಗಳನ್ನು ಸಂರಕ್ಷಿಸಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಅನೇಕ ಕಡೆ ಕೆರೆಗಳೇ ಮಾಯವಾಗಿದ್ದು, ಇರುವ ಚೂರುಪಾರು ದಾಖಲೆಗಳಿಗೂ ಗಾಯವಾಗಿದೆ. ಇದೇ ಪರಿಸ್ಥಿತಿ ರಾಜ್ಯಾದ್ಯಂತ ಇದೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ 202 ಕೆರೆಗಳಿದ್ದು, ಅವುಗಳ ಪೈಕಿ 159 ಕೆರೆಗಳಲ್ಲಿ ಒತ್ತುವರಿ ಇರುವುದನ್ನು ಗುರುತಿಸ ಲಾಗಿದೆ. ಇದನ್ನು ಮನಗಂಡಿರುವ ಸರ್ವೇ ಇಲಾಖೆ ರೋವರ್ ಎಂಬ ಹೊಸ ತಂತ್ರಜ್ಞಾನ ದ ಮೂಲಕ ಕೆರೆಗಳ ಸರ್ವೇ ನಡೆಸಿ ಅವುಗಳ ಸುತ್ತ 30 ಮೀಟರ್ ಬಫರ್ ವಲಯಗಳನ್ನೂ ಸೇರಿದಂತೆ ಗಡಿ ಗುರುತಿಸಿ ದಾಖಲೆಗಳನ್ನು ಸಿದ್ಧಪಡಿಸಿದೆ.
ಏನಿದು ರೋವರ್ ತಂತ್ರಜ್ಞಾನ?: ಕೆರೆ ಸೇರಿದಂತೆ ವಿವಿಧ ರೀತಿಯ ಜಮೀನುಗಳ ಸರ್ವೇ ಕಾರ್ಯವನ್ನು ಹಳೇ ಕಾಲದ ಸರಪಳಿ ವ್ಯವಸ್ಥೆ ಬದಲು ಡ್ರೋಣ್ ಬಳಸಿ ಚಿತ್ರಗಳನ್ನು ತೆಗೆದು ಆಸ್ತಿಗಳ ಗಡಿ ಗುರುತಿಸುವ ಸುಧಾರಿತ ವ್ಯವಸ್ಥೆಯೇ ರೋವರ್. ಅಂದರೆ ಸುಮಾರು 120 ಮೀಟರ್ ಎತ್ತರದಿಂದ ಡ್ರೋಣ್ ಕ್ಯಾಮೆರಾದ ಮೂಲಕ ಚಿತ್ರಗಳನ್ನು ತೆಗೆದು, ಅದಕ್ಕೆ ಕೋಡ್ ಸ್ಟೇಷನ್‌ಗಳ ಮೂಲಕ ಗಡಿ ಗುರುತಿಸಲಾಗುತ್ತದೆ. ಅದನ್ನು ಸುಧಾರಿತ ಸರ್ವೇ ಯಂತ್ರವಾದ ರೋವರ್‌ಗೆ ಲಿಂಕ್ ಮಾಡಿ, ಆ ಮೂಲಕ ಆಸ್ತಿಯ ನಾಲ್ಕೂ ಮೂಲೆಗಳ ಗಡಿಯನ್ನು ಗುರುತಿಸಿ ಅದನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ.
ಹೀಗಾಗಿ ರಾಜ್ಯದಲ್ಲಿ ಒಂದು ವರ್ಷದಲ್ಲಿ ನಡೆಯಬೇಕಿರುವ ಸರ್ವೇ ಕಾರ್ಯಗಳನ್ನು ಕೆಲವೇ ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದಲ್ಲಿ 42ಸಾವಿರ ಕೆರೆಗಳಿದ್ದು, ಅವುಗಳ ಪೈಕಿ ಈಗಾಗಲೇ ಸುಮಾರು 31 ಸಾವಿರ ಕೆರೆಗಳ ಸರ್ವೇ ಕಾರ್ಯ ಮುಗಿಸಲಾಗಿದೆ. ಉಳಿದ 11 ಸಾವಿರ ಕೆರೆಗಳನ್ನು ಶೀಘ್ರವೇ ಪೂರ್ಣಗೊಳಿಸಿ, ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲಾಗುತ್ತದೆ.
-ಜೆ.ಮಂಜುನಾಥ್ ಸರ್ವೇ ಇಲಾಖೆ ಆಯುಕ್ತರು
*
ಕೆರೆಗಳ ಒತ್ತುವರಿಯನ್ನು ಪತ್ತೆ ಮಾಡಲು ಹಳೇ ಸರಪಳಿ ಪದ್ಧತಿಯಿಂದ ಹೊರಬಂದಿರುವ ಸರ್ವೇ ಇಲಾಖೆ
ಕಡಿಮೆ ಅವಧಿಯಲ್ಲಿ ಅಳತೆ ಮಾಡಿ ದಾಖಲೆಗಳನ್ನು ಸಿದ್ಧಪಡಿಸಿ, ಡಿಜಿಟಲೀಕರಣ ಗೊಳಿಸುತ್ತಿರುವ ಇಲಾಖೆ.