Guruprasad: ಆತ್ಮಹತ್ಯೆಗೂ ಮುನ್ನ ಪತ್ನಿಗೆ ನಿರ್ದೇಶಕ ಗುರುಪ್ರಸಾದ್ ಫೋನ್ ಕಾಲ್; ಹೆಂಡ್ತಿ ಜತೆ ಜಗಳದ ಆಡಿಯೊ ವೈರಲ್!
Guruprasad: ಆತ್ಮಹತ್ಯೆಗೂ ಮುನ್ನ ಪತ್ನಿ ಜತೆಗೆ ಗುರುಪ್ರಸಾದ್ ಮಾತಿನ ಚಕಮಕಿ ನಡೆದಿತ್ತು. ಪತ್ನಿ ಸುಮಿತ್ರಾ ಸಿನಿಮಾಗೆ ಸ್ಟೇ ತಂದಿರುವ ಹಿನ್ನೆಲೆ ಸದ್ಯ ಗುರುಪ್ರಸಾದ್ ಅವರ ಆಪ್ತರು, ನಿರ್ದೇಶಕನ ಸಾವಿನ ಸತ್ಯ ಗೊತ್ತಾಗಲಿ ಎಂದು ಆಡಿಯೊ ರಿಲೀಸ್ ಮಾಡಿದ್ದಾರೆ.


ಬೆಂಗಳೂರು: ನಟ, ನಿರ್ದೇಶಕ ಗುರುಪ್ರಸಾದ್ ಅವರ ಕೊನೆಯ ಸಿನಿಮಾ ʼಎದ್ದೇಳು ಮಂಜುನಾಥ 2ʼ ಚಿತ್ರಕ್ಕೆ ಅವರ ಪತ್ನಿಯೇ ಕೋರ್ಟ್ ಮೆಟ್ಟಿಲೇರಿ ತಡೆ ತಂದಿದ್ದಾರೆ. ಇದಷ್ಟೇ ಅಲ್ಲದೇ ಸಾವಿಗೂ ಒಂದು ದಿನ ಮೊದಲು ಗುರುಪ್ರಸಾದ್ ಹಾಗೂ ಅವರ ಪತ್ನಿ ಸುಮಿತ್ರಾ ನಡುವೆ ನಡೆದ ಮಾತುಕತೆ ಆಡಿಯೊ ಇದೀಗ ವೈರಲ್ ಆಗುತ್ತಿದೆ. ಆತ್ಮಹತ್ಯೆಗೂ ಮುನ್ನ ಪತ್ನಿ ಜತೆಗೆ ಗುರುಪ್ರಸಾದ್ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ನಿನಗೆ, ಮಗಳಿಗೆ ಏನಾದರೂ ಸ್ವಲ್ಪ ಹಣ ಮಾಡಿ ಸತ್ತು ಹೋಗುತ್ತೇನೆ ಎಂದಿದ್ದಾರೆ. ಪದೇಪದೆ ಗುರುಪ್ರಸಾದ್ ಸಾಯುವ ಮಾತನ್ನಾಡಿರುವುದು ಆಡಿಯೊದಲ್ಲಿದೆ. ಪತ್ನಿ ಸುಮಿತ್ರಾ ಸಿನಿಮಾಗೆ ಸ್ಟೇ ತಂದಿರುವ ಹಿನ್ನೆಲೆ ಸದ್ಯ ಅವರ ಆಪ್ತರು, ಗುರುಪ್ರಸಾದ್ ಸಾವಿನ ಸತ್ಯ ಗೊತ್ತಾಗಲಿ ಎಂದು ಆಡಿಯೊ ರಿಲೀಸ್ ಮಾಡಿದ್ದಾರೆ.
ಸಾವಿಗೂ ಒಂದು ದಿನ ಮೊದಲು ಗುರುಪ್ರಸಾದ್ ಹಾಗೂ ಅವರ ಪತ್ನಿ ಸುಮಿತ್ರಾ ನಡುವೆ ನಡೆದ ಮಾತುಕತೆ ಆಡಿಯೊದಲ್ಲಿದೆ. “ನಿನಗೆ, ಮಗುಗೆ ಏನಾದ್ರು ಮಾಡಿಟ್ಟು ಸಾಯುತ್ತೇನೆ. ನಾನು ಒಂದು ರೂಪಾಯಿಗೂ ಒದ್ದಾಡ್ತಿದೀನಿ. ಸ್ವಲ್ಪ ತಾಳ್ಮೆಯಿಂದ ಇರಬೇಕು.
ನಿಮ್ಮ ಪ್ಲ್ಯಾನ್ ಏನು ಅಂತ ನನಗೆ ಗೊತ್ತಿದೆ. ಬ್ಯುಸಿನೆಸ್ ಮಾಡಿ ಹಣ ಬಂದಮೇಲೆ ನಿಮಗೆ ಕೊಟ್ಟು ಸಾಯುತ್ತೀನಿ. ನನ್ನ ಆರೋಗ್ಯ ಕೂಡ ಚೆನ್ನಾಗಿಲ್ಲ ಎಂದು ಗುರುಪ್ರಸಾದ್ ಆಡಿಯೊದಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪತ್ನಿ, ನಿಮಗೆ ತೊಂದರೆ ಕೊಡಬಾರದು ಅಂತ ನಾನು ಜಗಳ ಆಡದೆ ಹೊರಗಡೆ ಬಂದಿದ್ದೇನೆ. ನೀವು ಮಗುಗೆ ಮಾಡಿ. ನಿಮಗೆ ತೊಂದರೆ ಕೊಡೋಕೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ.
ಗುರುಪ್ರಸಾದ್ ಸಾವಿನ ಮಾತು ಸ್ವತಃ ತಾವೇ ಈ ಆಡಿಯೋ ರೆಕಾರ್ಡ್ ಮಾಡಿ ತಮ್ಮ ಆಪ್ತರಿಗೆ ಕಳಿಸಿದ್ದರು ಎನ್ನಲಾಗಿದೆ. ಈಗ ಪತ್ನಿ ಸುಮಿತ್ರಾ ಸಿನಿಮಾಗೆ ಸ್ಟೇ ತಂದಿರುವ ಹಿನ್ನೆಲೆ ಆಪ್ತ ಬಳಗ, ಗುರುಪ್ರಸಾದ್ ಅವರು ಸಾವಿಗೂ ಮುನ್ನ ಪತ್ನಿ ಜತೆ ಮಾತನಾಡಿರುವ ಆಡಿಯೊ ರಿಲೀಸ್ ಮಾಡಿದ್ದಾರೆ.
ಎದ್ದೇಳು ಮಂಜುನಾಥ 2 ಚಿತ್ರಕ್ಕೆ ತಡೆಯಾಜ್ಞೆ:
ನಟ, ನಿರ್ದೇಶಕ ಗುರುಪ್ರಸಾದ್ ಅವರ ಕೊನೆಯ ಸಿನಿಮಾ ʼಎದ್ದೇಳು ಮಂಜುನಾಥ 2ʼಕ್ಕೆ ತಡೆಯಾಜ್ಞೆ ಸಿಕ್ಕಿದ್ದು, ಗುರು ಸಿನಿಮಾ ರಿಲೀಸ್ ಮಾಡದಂತೆ ಪತ್ನಿಯೇ ಕೋರ್ಟ್ ಮೆಟ್ಟಿಲೇರಿದ್ದಾರೆ. ನಾಳೆ ʼಎದ್ದೇಳು ಮಂಜುನಾಥʼ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಗುರುಪ್ರಸಾದ್ ಪತ್ನಿ ಸುಮಿತ್ರಾ ಅವರು ಸಿನಿಮಾ ರಿಲೀಸ್ ಮಾಡದಂತೆ ಸ್ಟೇ ತಂದಿದ್ದಾರೆ. ಗುರು ಪ್ರಸಾದ್ ಪತ್ನಿ ನಡೆಗೆ ನಿರ್ಮಾಪಕರು ಆಕ್ರೋಶಗೊಂಡಿದ್ದಾರೆ.
ನಿರ್ಮಾಪಕರು ಹೇಳಿದ್ದೇನು?
ನಿರ್ಮಾಪಕ ರಮೇಶ್ ಮಾತನಾಡಿ, 'ಎಲ್ಲವೂ ಅಂದುಕೊಂಡಂತಾಗಿದ್ರೆ ಅದ್ಧೂರಿಯಾಗಿ ಕೊನೆಯ ಸಿನಿಮಾ ರಿಲೀಸ್ ಮಾಡಬಹುದಿತ್ತು. ಗುರುಪ್ರಸಾದ್ ಅವರಿಗೆ ಗೌರವ ಕೊಡುವಂತೆ ಈ ಸಿನಿಮಾ ರಿಲೀಸ್ ಮಾಡಬೇಕಿತ್ತು. ಕೆಲವು ವಾರಗಳ ಹಿಂದೆ ನಾಲ್ಕು ಲಕ್ಷ ರೂಪಾಯಿ ಹಣ ಕೊಡಿ ಎಂದು ಸುಮಿತ್ರಾ ಹೇಳಿದ್ದರು. ನಾನು ಕೊಟ್ಟಿರಲಿಲ್ಲ. ಈ ಸಿನಿಮಾಕ್ಕೋಸ್ಕರ ನಾನು ಗುರುಪ್ರಸಾದ್‌ಗೆ 40 ಲಕ್ಷ ರೂಪಾಯಿ ಕೊಟ್ಟಿದ್ದೆ. ಆದರೆ ಅವರು ಸಾಯುವ ಮುನ್ನ ಸಿನಿಮಾ ಫುಟೇಜ್ ಡಿಲಿಟ್ ಮಾಡಿ ಸತ್ತಿದ್ದಾರೆ. ನಾವು ತುಂಬಕಷ್ಟಪಟ್ಟು ಫುಟೇಜ್ ರಿಕವರಿ ಮಾಡಿದೆವು. ಈ ಬಗ್ಗೆ ವಾಣಿಜ್ಯ ಮಂಡಳಿಯಲ್ಲಿ ಚರ್ಚೆ ನಡೆದು ಈ ಸಿನಿಮಾ ಲಾಭದಲ್ಲಿ 51% ಸುಮಿತ್ರಾಗೆ ನೀಡಲಾಗುವುದು ಎಂದು ಕೂಡ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಈಗ ಹಣದ ಸಂಬಂಧ ಸುಮಿತ್ರಾ ಅವರು ಈ ರೀತಿ ಸ್ಟೇ ತಂದಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಗುರುಪ್ರಸಾದ್ ಪತ್ನಿ ಸುಮಿತ್ರಾ ಪ್ರತಿಕ್ರಿಯಿಸಿ, ಸಿನಿಮಾ ಪೂರ್ಣ ಮಾಡಬೇಕು ಎಂದು ಕಂಟೆಂಟ್ ತೆಗೆದುಕೊಂಡಿದ್ದಾರೆ. ನನ್ನ ಪತಿ ಮೃತದೇಹದ ಅಂತ್ಯಕ್ರಿಯೆಯೂ ಆಗಿರಲಿಲ್ಲ. ಆಗಲೇ ಕಂಟೆಂಟ್ ಕೊಡಿ ಎಂದು ಕೇಳಿದ್ದರು. ಸಿನಿಮಾ ಮುಗಿಸಲಿ ಎಂದು ನಾನು ಕೂಡ ಕಂಟೆಂಟ್ ನೀಡಿದೆ. ಗುರುಪ್ರಸಾದ್ ಬ್ಯಾನರ್‌ನಲ್ಲಿ ಸಿನಿಮಾ ಮಾಡುವುದಾಗಿ ನಿರ್ಮಾಪಕರು ಹೇಳಿದ್ದರು. ಆದರೆ ಈಗ ಎಲ್ಲವನ್ನೂ ತಮ್ಮ ಬ್ಯಾನರ್‌ನಲ್ಲೇ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕಥೆ, ಚಿತ್ರಕಥೆ ಎಲ್ಲಾ ನನ್ನ ಪತಿಯದ್ದು. ಆದರೆ ಸಿನಿಮಾ ಮುಗಿದ ಮೇಲೆ 51% ರಷ್ಟು ಲಾಭ ತೆಗೆದುಕೊಳ್ಳಿ ಎಂದು ಹೇಳಿದರು. ನನ್ನ ಮಗು ಭವಿಷ್ಯಕ್ಕೆ ನಾನೆಲ್ಲಿ ಹೋಗಲಿ?. ಸಿನಿಮಾ ಆಡಿಯೊ ರಿಲೀಸ್ ವೇಳೆಯೇ ನನಗೆ ಈ ವಿಚಾರ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Salman Khan: ಹಾಲಿವುಡ್‌ಗೆ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್! ಶೂಟಿಂಗ್ ಸೆಟ್‌ನಿಂದ ವಿಡಿಯೊ ಲೀಕ್
ನಾಳೆ ರಿಲೀಸ್ ಸಾಧ್ಯತೆ
ಮೂಲಗಳ ಪ್ರಕಾರ ಗುರು ಪತ್ನಿ ಸುಮಿತ್ರಾ ಅವರು ಸಿನಿಮಾದ ನಿರ್ಮಾಪಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಹಕ್ಕನ್ನು ಮೊದಲು ಮೈಸೂರ್ ರಮೇಶ್ ಅವರಿಗೆ ಗುರು ಪ್ರಸಾದ್ ಬರೆದುಕೊಟ್ಡಿದ್ದರು. ಆ ನಂತರ ಸುಮಿತ್ರಾ ಅವರು ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ. ಆದರೆ ಇಂದು ನಿರ್ಮಾಪಕರಾದ ರವಿ ದೀಕ್ಷಿತ್, ಮೈಸೂರ್ ರಮೇಶ್ ಕೂಡ ಕೋರ್ಟ್ ಮೆಟ್ಟಿಲೇರಿ ಕೋರ್ಟ್ ಮೆಟ್ಟಿಲೇರಿದ್ದು, ನಾಳೆ ರಿಲೀಸ್ ಮಾಡುವ ಪ್ರಯತ್ನದಲ್ಲಿದ್ದಾರೆ.