Stock Market: ಸೆನ್ಸೆಕ್ಸ್-ನಿಫ್ಟಿ ಮಹಾಪತನ ಕರಗಿದ 19 ಲಕ್ಷ ಕೋಟಿ; ಹೂಡಿಕೆದಾರರೇ ಭಯ ಬಿಡಿ, ಹೀಗೆ ಮಾಡಿ
ಜಾಗತಿಕ ಮಟ್ಟದಲ್ಲಿ ಟ್ರೇಡ್ ವಾರ್ ಮತ್ತು ಅಮೆರಿಕದಲ್ಲಿಆರ್ಥಿಕ ಹಿಂಜರಿತ ಸಂಭವಿಸುವ ಭೀತಿಯ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಿಂದ ವಿಶ್ವಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಭಾರಿ ಕುಸಿತಕ್ಕೀಡಾಗಿದೆ. ಭಾರತದಲ್ಲೂ ಸೋಮವಾರ ಬಾಂಬೆ ಸ್ಟಾಕ್ಸ್ ಎಕ್ಸ್‌ಚೇಂಜ್ ಸೂಚ್ಯಂಕ ಸೆನ್ಸೆನ್ಸ್ ಮತ್ತು ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿ ತೀವ್ರ ಕುಸಿತಕ್ಕೀಡಾಯಿತು.


- ಕೇಶವಪ್ರಸಾದ.ಬಿ
ಮುಂಬೈ: ಜಾಗತಿಕ ಮಟ್ಟದಲ್ಲಿ ಟ್ರೇಡ್ ವಾರ್ ಮತ್ತು ಅಮೆರಿಕದಲ್ಲಿ (Stock Market) ಆರ್ಥಿಕ ಹಿಂಜರಿತ ಸಂಭವಿಸುವ ಭೀತಿಯ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಿಂದ ವಿಶ್ವಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಭಾರಿ ಕುಸಿತಕ್ಕೀಡಾಗಿದೆ. ಭಾರತದಲ್ಲೂ ಸೋಮವಾರ ಬಾಂಬೆ ಸ್ಟಾಕ್ಸ್ ಎಕ್ಸ್‌ಚೇಂಜ್ ಸೂಚ್ಯಂಕ ಸೆನ್ಸೆನ್ಸ್ ಮತ್ತು ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿ ತೀವ್ರ ಕುಸಿತಕ್ಕೀಡಾಯಿತು. ಎಲ್ಲ ಸೆಕ್ಟರ್‌ಗಳಲ್ಲೂ ಸೂಚ್ಯಂಕಗಳು ಪತನವಾಯಿತು. ಸೋಮವಾರ ಬೆಳಗ್ಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 3,000ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡರೆ, ನಿಫ್ಟಿ ಕೂಡ 1,000ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿತು. ಹೂಡಿಕೆದಾರರಿಗೆ ಇದರಿಂದಾಗಿ ಇವತ್ತು 19 ಲಕ್ಷ ಕೋಟಿ ರುಪಾಯಿಗಳ ನೋಶನಲ್ ನಷ್ಟ ಉಂಟಾಗಿದೆ. ಹೀಗಾಗಿ ಇಂದು BLACK MONDAY ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಸ್ಟಾಕ್ ಮಾರ್ಕೆಟ್‌ನ ಸೆಕ್ಟರ್‌ಗಳನ್ನು ಗಮನಿಸುವುದಿದ್ದರೆ, ನಿಫ್ಟಿ ಮೆಟಲ್ 8% ಮತ್ತು ನಿಫ್ಟಿ ಐಟಿ 7% ಕುಸಿತಕ್ಕೀಡಾಯಿತು. ನಿಫ್ಟಿ ಆಟೊ, ರಿಯಾಲ್ಟಿ ಮತ್ತು ತೈಲ ಮತ್ತು ಅನಿಲ ಸೂಚ್ಯಂಕಗಳು ತಲಾ 5% ಇಳಿಕೆಯಾಯಿತು. ವಿಶಾಲ ಮಾರುಕಟ್ಟೆಯಲ್ಲಿ ಸ್ಮಾಲ್ ಕ್ಯಾಪ್ ಷೇರುಗಳು 10% ಮತ್ತು ಮಿಡ್ ಕ್ಯಾಪ್‌ಗಳು 7.3% ಕುಸಿತಕ್ಕೀಡಾಯಿತು. ಬೆಳಗ್ಗೆ 9:16 ಕ್ಕೆ ಬಿಎಸ್‌ಇ ಸೆನ್ಸೆಕ್ಸ್ 3,072 ಅಂಕ ಕುಸಿತಕ್ಕೀಡಾಯಿತು. ನಿಫ್ಟಿ 50 ಸೂಚ್ಯಂಕವೂ 1,146 ಅಂಕಿ ಇಳಿಯಿತು. ಮಧ್ಯಾಹ್ನ 12 ಗಂಟೆಯ ವೇಳೆಗೆ ಸೆನ್ಸೆಕ್ಸ್ 72,133 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 21,872ರ ಮಟ್ಟದಲ್ಲಿತ್ತು. 12.20ರ ವೇಳೆಗೆ ಸೆನ್ಸೆಕ್ಸ್ 3,200 ಅಂಕಗಳ ಕುಸಿತಕ್ಕೀಡಾಯಿತು. ಬಿಎಸ್‌ಇನಲ್ಲಿ ಲಿಸ್ಟೆಡ್ ಆಗಿರುವ ಎಲ್ಲ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 19 ಲಕ್ಷ ಕೋಟಿ ರುಪಾಯಿ ಇಳಿಕೆಯಾಯಿತು. 383 ಲಕ್ಷ ಕೋಟಿ ರುಪಾಯಿಗೆ ಇಳಿಯಿತು.
ಸೆನ್ಸೆಕ್ಸ್, ನಿಫ್ಟಿ ಮಹಾ ಕುಸಿತಕ್ಕೆ ಕಾರಣವೇನು?
- ಅಮೆರಿಕದಲ್ಲಿ ನಾಸ್‌ಡಾಕ್ ಷೇರು ಮಾರುಕಟ್ಟೆಯ ಸೂಚ್ಯಂಕಗಳ ಭಾರಿ ಕುಸಿತ
- ಏಷ್ಯಾ ಸೇರಿದಂತೆ ಜಾಗತಿಕ ಷೇರು ಮಾರುಕಟ್ಟೆ ಸೂಚ್ಯಂಕಗಳ ಪತನ.
- ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ
- ಜಾಗತಿಕ ಮಟ್ಟದಲ್ಲಿ ಕಮಾಡಿಟಿಗಳ ದರ ಕುಸಿತ
- ಷೇರು ಪೇಟೆಯಿಂದ ಹೂಡಿಕೆದಾರರ ಹಿಂತೆಗೆತ
- ಜಾಗತಿಕ ಟ್ರೇಡ್ ವಾರ್ ಸಂಭವಿಸುವ ಆತಂಕ
ನಾಸ್‌ಡಾಕ್ ಸ್ಟಾಕ್ ಮಾರ್ಕೆಟ್ ಪತನ:
ಅಮೆರಿಕದ ಸ್ಟಾಕ್ ಮಾರ್ಕೆಟ್ ಇಂಡೆಕ್ಸ್ ಕಳೆದ ಶುಕ್ರವಾರ ಭಾರಿ ಕುಸಿತಕ್ಕೀಡಾಗಿತ್ತು. ಸೋಮವಾರ ಕೂಡ ಕುಸಿತದ ಟ್ರೆಂಡ್ ಮುಂದುವರಿದಿದ್ದು, ವಿಶ್ವಾದ್ಯಂತ ಆತಂಕ ಸೃಷ್ಟಿಸಿದೆ. ನಾಸ್‌ಡಾಕ್ ಇಂಡೆಕ್ಸ್ ಇತ್ತೀಚಿನ ಎತ್ತರದಿಂದ 20% ಬಿದ್ದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾನಾ ದೇಶಗಳ ವಿರುದ್ಧ ಟಾರಿಫ್‌ಗಳನ್ನು ಘೋಷಿಸಿದ ಬಳಿಕ ಷೇರು ಮಾರುಕಟ್ಟೆಯಲ್ಲಿ ಆತಂಕ ಉಂಟಾಗಿದ್ದು, ಬ್ಲಡ್ ಬಾತ್ ಆಗಿದೆ. ಟಾರಿಫ್‌ಗಳ ಸ್ಕೇಲ್ ಮತ್ತು ಸ್ಕೋಪ್‌ಗಳು ಹೂಡಿಕೆದಾರರನ್ನು ಆತಂಕಕ್ಕೀಡು ಮಾಡಿದೆ.
ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮ್ ಪೊವೆಲ್ ಅವರು, " ಟಾರಿಫ್‌ಗಳು ನಿರೀಕ್ಷೆಗೂ ಮೀರಿ ದೊಡ್ಡದಾಗಿವೆ. ಇದರಿಂದ ಹಣದುಬ್ಬರ ಹೆಚ್ಚಬಹುದು ಆರ್ಥಿಕ ಬೆಳವಣಿಗೆಗೆ ಧಕ್ಕೆಯಾಗಬಹುದುʼʼ ಎಂದು ಎಚ್ಚರಿಸಿದ್ದಾರೆ. ಅವರ ಈ ಹೇಳಿಕೆಯೂ ಅಮೆರಿಕದ ಆರ್ಥಿಕತೆಯ ಮೇಲಿನ ಅನಿಶ್ಚಿತತೆಯನ್ನು ಹೆಚ್ಚಿಸಿದೆ.
- ಜಾಗತಿಕ ಷೇರು ಮಾರುಕಟ್ಟೆಗಳ ಪತನ:
ಕೇವಲ ಭಾರತ ಮಾತ್ರವಲ್ಲ, ಏಷ್ಯಾ, ಅಮೆರಿಕ, ಯುರೋಪ್ ಸೇರಿದಂತೆ ಜಗತ್ತಿನ ನಾನಾ ಕಡೆಗಳಲ್ಲಿ ಷೇರು ಸೂಚ್ಯಂಕಗಳು ಕುಸಿತಕ್ಕೀಡಾಗಿವೆ.
ಜಪಾನ್‌ನ ನಿಕ್ಕಿ ಸೂಚ್ಯಂಕ 7% ಕುಸಿದಿದೆ.
ದಕ್ಷಿಣ ಕೊರಿಯಾದ ಕೋಸ್ಪಿ 5% ಇಳಿದಿದೆ.
ಚೀನಾದ ಬ್ಲೂ ಚಿಪ್ ಇಂಡೆಕ್ಸ್ 7% ಕುಸಿದಿದೆ.
ಹಾಂಗ್ ಸೆಂಗ್ ಇಂಡೆಕ್ಸ್ 10% ಪತನವಾಗಿದೆ.
ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ: ಗೋಲ್ಡ್‌ಮನ್ ಸ್ಯಾಕ್ಸ್ ಪ್ರಕಾರ ಮುಂದಿನ 12 ತಿಂಗಳುಗಳಲ್ಲಿ ಅಮೆರಿಕದಲ್ಲಿ ರಿಸೆಶನ್ ಆಗುವ ಸಅಧ್ಯತೆ 45% ನಷ್ಟಿದೆ. ಜೆಪಿ ಮೋರ್ಗಾನ್ ಪ್ರಕಾರ ಅಮೆರಿಕದ ಇಕಾನಮಿ ಈ ವರ್ಷವೇ ಆರ್ಥಿಕ ಹಿಂಜರಿತಕ್ಕೆ ಸಿಲುಕಲಿದೆ.
ಟ್ರಂಪ್ ಟಾರಿಫ್ ಪರಿಣಾಮ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಳವಾಗಬಹುದು ಮತ್ತು ಆರ್ಥಿಕ ಹಿಂಜರಿತ ಉಂಟಾಗಬಹುದು ಎಂಬ ಆತಂಕ ಷೇರು ಹೂಡಿಕೆದಾರರನ್ನು ಕಾಡುತ್ತಿದೆ. ಒಂದು ವೇಳೆ ಆರ್ಥಿಕ ಹಿಂಜರಿತ ಉಂಟಾದರೆ ಕಾರ್ಪೊರೇಟ್ ಕಂಪನಿಗಳ ಆದಾಯ ಮತ್ತು ಲಾಭಾಂಶ ಕುಸಿಯಲಿದೆ. ಅಮೆರಿಕದ 87% ಕಂಪನಿಗಳು ಇದೇ ಏಪ್ರಿಲ್ 11 ಮತ್ತು ಮೇ 9ರ ನಡುವೆ ತಮ್ಮ ಫಲಿತಾಂಶಗಳ ವರದಿಗಳನ್ನು ಪ್ರಕಟಿಸಲಿವೆ.
- ಗ್ಲೋಬಲ್ ಕಮಾಡಿಟಿ ದರಗಳ ಇಳಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ನಾನಾ ಕಮಾಡಿಟಿಗಳ ದರ ಇಳಿದಿವೆ. ಬ್ರೆಂಟ್ ಕಚ್ಚಾ ತೈಲ ದರ ಬ್ಯಾರಲ್‌ಗೆ 62 ಡಾಲರ್‌ಗೆ ಇಳಿಕೆಯಾಗಿದೆ. ಬೇಸ್ ಮೆಟಲ್‌ಗಳ ದರ ಇಳಿದಿದೆ. ತಾಮ್ರ, ಝಿಂಕ್, ಅಲ್ಯುಮಿನಿಯ ದರ ತಗ್ಗಿದೆ.
- ಷೇರು ಬಿಟ್ಟು ಬಾಂಡ್‌ಗಳಲ್ಲಿ ಹೂಡಿಕೆಗೆ ಬೇಡಿಕೆ: ಹೂಡಿಕೆದಾರರು ಈಕ್ವಿಟಿ ಅಥವಾ ಷೇರು ಮಾರುಕಟ್ಟೆಯ ಬದಲಿಗೆ ಅಮೆರಿಕದ ಬಾಂಡ್‌ಗಳಲ್ಲಿ, ಚಿನ್ನದಲ್ಲಿ ಹೂಡಿಕೆಗೆ ಮುಂದಾಗುತ್ತಿದ್ದಾರೆ. ಗ್ಲೋಬಲ್ ರಿಸೆಶನ್ ಆಗುವ ಭೀತಿಯಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯ ಸಅಧನವಾಗಿರುವ ಅಮೆರಿಕದ ಟ್ರೆಶರಿಯ ಬಾಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಸರಕಾರಿ ಬಾಂಡ್‌ಗಳಿಗೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿಯೇ 10 ವರ್ಷಗಳ ಅವಧಿಯ ಬಾಂಡ್‌ಗಳು ಉತ್ಪತ್ತಿಯಲ್ಲಿ 8 ಬೇಸಿಸ್ ಪಾಯಿಂಟ್ ಇಳಿಕೆಯಾಗಿದ್ದು.3.91% ಕ್ಕೆ ಇಳಿದಿದೆ. ಹೀಗಿದ್ದರೂ, ಸುರಕ್ಷಿತ ಹೂಡಿಕೆ ಆಗಿರುವುದರಿಂದ ಹೂಡಿಕೆದಾರರ ಗಮನ ಸೆಳೆಯುತ್ತಿದೆ.
- ಜಾಗತಿಕ ವಾಣಿಜ್ಯ ಸಮರ (Global trade war): ಅಮೆರಿಕದ ಟಾರಿಫ್‌ಗಳಿಗೆ ಪ್ರತಿಯಾಗಿ ಚೀನಾ ಕೂಡ ಅಮೆರಿಕದ ವಿರುದ್ಧ ಟಾರಿಫ್‌ಗಳನ್ನು ಘೋಷಿಸಿದೆ. ಹೀಗಾಗಿ ಅಮೆರಿಕವು ಚೀನಾಕ್ಕೆ ರಫ್ತು ಮಾಡುವ ಸ್ತುಗಳ ದರಗಳೂ ದುಬಾರಿಯಾಗಲಿವೆ. ಇದರಿಂದ ಅಮೆರಿಕದ ರಫ್ತುದಾರರಿಗೂ ಚೀನಾದ ಮಾರುಕಟ್ಟೆಯಲ್ಲಿ ಕಷ್ಟವಾಗಲಿದೆ. ವಿಶ್ವದ ಎರಡು ಆರ್ಥಿಕ ದಿಗ್ಗಜಗಳ ಕಾದಾಟವು ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ. ಇದರಿಂದ ಸಪ್ಲೈ ಚೈನ್‌ಗಳು ಕಡಿದುಕೊಳ್ಳುವ ಮತ್ತು ಕಾರ್ಪೊರೇಟ್ ಕಂಪನಿಗಳ ಆದಾಯ ಕುಸಿಯುವ ಭೀತಿ ಉಂಟಾಗಿದೆ.
ಇಂಡಿಯಾ ವಿಕ್ಸ್ ಸೂಚ್ಯಂಕ 59% ಹೆಚ್ಚಳ: ಷೇರು ಮಾರುಕಟ್ಟೆಯ ಅನಿಶ್ಚಿತತೆಯನ್ನು ಬಿಂಬಿಸುವ ಇಂಡಿಯಾ ವಿಕ್ಸ್ ಇಂಡೆಕ್ಸ್ 59% ಏರಿಕೆಯಾಗಿದ್ದು, ಷೇರು ಹೂಡಿಕೆದಾರರ ಆತಂಕದ ಮಟ್ಟವನ್ನೂ ತೋರಿಸಿದೆ. ಕುಸಿತಕ್ಕೀಡಾಗಿರುವ ಪ್ರಮುಖ ಷೇರುಗಳು ಮತ್ತು ಅದಕ್ಕೆ ಕಾರಣಗಳೇನು ಎಂಬುದನ್ನೂ ತಿಳಿಯೋಣ.
ಟಾಟಾ ಮೋಟಾರ್ಸ್
ಕುಸಿತ : 10% ಕಾರಣ: ಅಮೆರಿಕಕ್ಕೆ ಟಾಟಾ ಮೋಟಾರ್ಸ್‌ನ ಲ್ಯಾಂಡ್ ರೋವರ್ ಕಾರುಗಳ ಪೂರೈಕೆ ಸ್ಥಗಿತ.
ಷೇರಿನ ಈಗಿನ ದರ : 571/-
ಟಾಟಾ ಮೋಟಾರ್ಸ್‌ನ ಭಾಗವಾಗಿರುವ, ಬ್ರಿಟನ್ ಮೂಲದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯ ಕಾರುಗಳು ಕಳೆದ ಏಪ್ರಿಲ್ ಬಳಿಕ ಅಮೆರಿಕಕ್ಕೆ ಪೂರೈಕೆಯಾಗುತ್ತಿಲ್ಲ. ಇದು ತಾತ್ಕಾಲಿಕ ಸ್ಥಗಿತವಾದರೂ, ಹೂಡಿಕೆದಾರರಲ್ಲಿ ಆತಂಕ ಉಂಟಾಗಿದೆ. ಷೇರಿನ ದರ ಕುಸಿತಕ್ಕೆ ಕಾರಣವಾಗಿದೆ.
ಟಾಟಾ ಸ್ಟೀಲ್
ಕುಸಿತ: 18% ಕಾರಣ: ಗ್ಲೋಬಲ್ ಟ್ರೇಡ್ ವಾರ್ ಆತಂಕ.
ಲೋಹ ವಲಯದ ಪ್ರಮುಖ ಕಂಪನಿಗಳ ಷೇರುಗಳು ಭಾರಿ ಇಳಿಕೆ ದಾಖಲಿಸಿವೆ. ಅವುಗಳಲ್ಲಿ ಟಾಟಾ ಸ್ಟೀಲ್, NMDC, ನ್ಯಾಲ್ಕೊ, ಹಿಂದೂಸ್ಥಾನ್ ಝಿಂಕ್, ವೇದಾಂತ ಕಂಪನಿಯ ಷೇರುಗಳೂ ಇವೆ.
ರಿಲಯನ್ಸ್ ಇಂಡಸ್ಟ್ರೀಸ್
ಕುಸಿತ: 7.4% ಕಾರಣ: ಜಾಗತಿಕ ವಾಣಿಜ್ಯ ಬಿಕ್ಕಟ್ಟು
ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿದಿರುವ ಪ್ರಸ್ತುತ ಸಂದರ್ಭ ಹೂಡಿಕೆದಾರರು ಏನು ಮಾಡಬಹುದು? ತಜ್ಞರು ಏನು ಹೇಳುತ್ತಾರೆ? ವಿವರವಾಗಿ ತಿಳಿಯೋಣ.
DONT PANIC, Review Portfolios, Diversify Investments ಮೊದಲನೆಯದಾಗಿ ಭಯ ಪಡರಿರಿ, ಎರಡನೆಯದಾಗಿ ನಿಮ್ಮ ಷೇರು ಹೂಡಿಕೆಯ ಖಾತೆಯನ್ನು ಪರಾಮರ್ಶಿಸಿ, ಮೂರನೆಯದಾಗಿ ಹೂಡಿಕೆಯನ್ನು ವೈವಿಧ್ಯವಾಗಿಸಿ ಎನ್ನುತ್ತಾರೆ ತಜ್ಞರು. ಈ ಸಂದರ್ಭ ಹೂಡಿಕೆದಾರರು ಎಚ್ಚರದಿಂದ ಕಾದು ನೋಡಬೇಕು. ಉತ್ತಮ ಷೇರುಗಳು ಕಡಿಮೆ ದರದಲ್ಲಿ ಸಿಗುವುದರಿಂದ ಮಾರ್ಕೆಟ್‌ಗೆ ಎಂಟ್ರಿ ಆಗಬಹುದು. ಹೀಗಿದ್ದರೂ, ಸ್ಟಾಪ್ ಲಾಸ್ ಹಾಕಿಕೊಂಡು ಎಚ್ಚರಿಕೆಯಿಂದ ಖರೀದಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.
ಮಾರುಕಟ್ಟೆ ಮೇಲೆ ಪ್ರಭಾವ ಬೀರಬಹುದಾದ ಮುಂಬರುವ ಎರಡು ವಿದ್ಯಮಾನಗಳು ಯಾವುದು ಎಂದರೆ, ಕಂಪನಿಗಳ ನಾಲ್ಕನೇ ತ್ರೈಮಾಸಿಕದ ರಿಸಲ್ಟ್. ಅಂದರೆ ಜನವರಿ-ಮಾರ್ಚ್ ಅವಧಿಯ ಫಲಿತಾಂಶ. ಎರಡನೆಯದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎಂಪಿಸಿ ಮೀಟಿಂಗ್. ಬಡ್ಡಿ ದರ ಇಳಿಕೆಯಾಗುವ ನಿರೀಕ್ಷೆ ಇದೆ.
ಷೇರು ಹೂಡಿಕೆದಾರರು ತಾಳ್ಳೆಗೆಟ್ಟು ಭಾವನಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬಾರದು. ಇನ್ವೆಸ್ಟರ್ಸ್ ಮತ್ತು ಟ್ರೇಡರ್ಸ್ ಇಬ್ಬರೂ ಶಾಂತಚಿತ್ತರಾಗುವುದು ಮುಖ್ಯ. ಮ್ಯೂಚುವಲ್ ಫಂಡ್ ಅಥವಾ ಷೇರುಗಳಲ್ಲಿ SIP ಮೂಲಕ ಹೂಡಿಕೆ ಮಾಡುವವರೂ ಮುಂದುವರಿಸಬೇಕು. ಹಠಾತ್ ನಿಲ್ಲಿಸಬಾರದು. ಶಿಸ್ತುಬದಧ ಹೂಡಿಕೆಯನ್ನು ಮುಂದುವರಿಸಬೇಕು. ಇನ್ನು ಕೆಲವರು ತಮ್ಮ ಷೇರುಗಳ ಖಾತೆಯಲ್ಲಿ ಕೆಲವು ಸಾವಿರ ಅಥವಾ ಕೆಲವು ಲಕ್ಷಗಳ ನಷ್ಟವನ್ನು ಕಂಡು ಕಂಗಾಲಾಗಿ, ಸಿಪ್‌ಗಳನ್ನು ನಿಲ್ಲಿಸುವ ತಪ್ಪೆಸಗುತ್ತಾರೆ. ಆದರೆ ಅಂಬಾನಿಯಿಂದ ಎಲಾನ್ ಮಸ್ಕ್ ತನಕ ಎಲ್ಲ ಉದ್ಯಮಿಗಳೂ ಈಗ ಕೋಟ್ಯಂತರ ಡಾಲರ್ ನಷ್ಟಕ್ಕೀಡಾಗಿದ್ದಾರೆ. ಭಾರತದಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಸಾವಿತ್ರಿ ಜಿಂದಾಲ್ ಕುಟುಂಬ ಮತ್ತು ಶಿವ್ ನಡಾರ್ ಸೋಮವಾರ ಒಂದೇ ದಿನ 10 ಬಿಲಿಯನ್ ಡಾಲರ್ ನೋಶನಲ್ ನಷ್ಟಕ್ಕೀಡಾಗಿದ್ದಾರೆ. ಎಲಾನ್ ಮಸ್ಕ್ ಸಂಪತ್ತಿನಲ್ಲಿ 130 ಬಿಲಿಯನ್ ಡಾಲರ್ ಕರಗಿದೆ. ಆದ್ದರಿಂದ ಆತಂಕಪಡದಿರಿ. ಆದರೆ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡಿ.
ಬುದ್ಧಿವಂತರು ಈಗ ಕ್ವಾಲಿಟಿ ಇರುವ ಷೇರುಗಳನ್ನು ಖರೀದಿಸುತ್ತಾರೆ. ಪೋರ್ಟ್ ಫೋಲಿಯೊಗಳನ್ನು ರಿವ್ಯೂ ಮಾಡುತ್ತಾರೆ. ಡೈವರ್ಸಿಫಿಕೇಶನ್ ಅನ್ನು ಕಾಯ್ದುಕೊಳ್ಳುತ್ತಾರೆ.
ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಅನ್ನು ಮುಂದುವರಿಸಬಹುದು. ಆದರೆ ಲಂಪ್ಸಮ್ ಆಗಿ ಹೂಡಿಕೆ ಮಾಡುವುದನ್ನು ಮುಂದೂಡುವುದು ಸೂಕ್ತ ಎನ್ನುತ್ತಾರೆ ತಜ್ಞರು. ಷೇರು ಹೂಡಿಕೆದಾರರು ಎರಡು ವಿಚಾರಗಳನ್ನು ಮರೆಯಬಾರದು. ಮೊದಲನೆಯದಾಗಿ, ಟ್ರಂಪ್ ಟಾರಿಫ್ ಪರ್ಮನೆಂಟ್ ಆಗಿ ಮುಂದುವರಿಯುವ ಸಾಧ್ಯತೆಗಳು ಇಲ್ಲ. ಎರಡನೆಯದಾಗಿ ಇತರ ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿಗತಿ ಉತ್ತಮವಾಗಿದೆ. ಅಮೆರಿಕಕ್ಕೆ ಭಾರತದ ರಫ್ತು ಜಿಡಿಪಿಯ ಕೇವಲ 2% ರಷ್ಟಿದೆ.
ಈ ಸುದ್ದಿಯನ್ನೂ ಓದಿ: Stock Market: ಸೆನ್ಸೆಕ್ಸ್-ನಿಫ್ಟಿ ಮಹಾಪತನ; ಕರಗಿದ 19 ಲಕ್ಷ ಕೋಟಿ! ಹೂಡಿಕೆದಾರರು ಏನು ಮಾಡಬೇಕು?
ಮೂರನೆಯದಾಗಿ ಅಮೆರಿಕದ ಜತೆಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಭಾರತ ಮಾತುಕತೆ ನಡೆಸುತ್ತಿದೆ. ಅದು ಯಶಸ್ವಿಯಾದರೆ ಟಾರಿಫ್ ಗಳು ಕಡಿಮೆಯಾಗಬಹುದು.
ಹೂಡಿಕೆದಾರರಿಗೆ ಮೋರ್ಗಾನ್ ಸ್ಟಾನ್ಲಿ ನೀಡಿರುವ ಸಲಹೆ ಏನು?
1. ಮಾರುಕಟ್ಟೆಯ ಏರಿಳಿತಗಳ ಸಂದರ್ಭ ಸ್ಥಿರವಾಗಿರುವ ಅಥವಾ ಕಡಿಮೆ ಏರಿಳಿತ ಎದುರಿಸುವ ಸೆಕ್ಟರ್‌ಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಿ.
2. ಯುಟಿಲಿಟಿ, ಟೆಲಿಕಾಂ, ಡಿಫೆನ್ಸ್, ಕನ್‌ಸ್ಯೂಮರ್ ಗೂಡ್ಸ್ ಸೆಕ್ಟರ್ ಸೂಕ್ತ.
- ದೀರ್ಘಾವಧಿಯ ಹೂಡಿಕೆಗೆ ಗಮನ ಕೊಡಿ.