IPL 2025: ಸದ್ದಿಲ್ಲದೆ ಐಪಿಎಲ್ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆದ ಶುಭಮನ್ ಗಿಲ್!
Shubman Gill Creates History: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. 25ನೇ ವಯಸ್ಸಿನ ಒಳಗಡೆ 25 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಗಿಲ್ ಭಾಜನರಾಗಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅರ್ಧಶತಕ ಸಿಡಿಸಿದ ಶುಭಮನ್ ಗಿಲ್ ಬ್ಯಾಟಿಂಗ್ ವೈಖರಿ.

ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಅರ್ಧಶತಕ ಸಿಡಿಸಿದ ನಾಯಕ ಶುಭಮನ್ ಗಿಲ್ (Shubman Gill) ಅವರು ಗುಜರಾತ್ ಟೈಟನ್ಸ್ (Gujarat Titans) ತಂಡದ 7 ವಿಕೆಟ್‌ಗಳ ಗೆಲುವಿಗೆ ನೆರವಾದರು. ಇಲ್ಲಿನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅರ್ಧಶತಕದ ಮೂಲಕ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್, ಐಪಿಎಲ್ ಟೂರ್ನಿಯಲ್ಲಿ ಅಪರೂಪದ ದಾಖಲೆಯನ್ನು ಬರೆದಿದ್ದಾರೆ. ಈ ಪಂದ್ಯದ ಗೆಲುವಿನ ಮೂಲಕ ಗುಜರಾತ್ ಟೈಟನ್ಸ್ ತಂಡ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 153 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಗುಜರಾತ್ ಟೈಟನ್ಸ್ ಪರ ಇನಿಂಗ್ಸ್ ಆರಂಭಿಸಿದ್ದ ಶುಭಮನ್ ಗಿಲ್, ಆರಂಭಿಕ ಎರಡು ವಿಕೆಟ್‌ಗಳು ಬಹುಬೇಗ ಕಳೆದುಕೊಂಡರೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 43 ಎಸೆತಗಳಲ್ಲಿ ಅಜೇಯ 61 ರನ್‌ಗಳನ್ನು ಕಲೆ ಹಾಕಿದರು. ಇದರ ಜೊತೆಗೆ ವಾಷಿಂಗ್ಟನ್ ಸುಂದರ್ ( 49 ರನ್) ಅವರ ಜೊತೆಗೆ ಮೌಲ್ಯಯುತ ಜೊತೆಯಾಟವನ್ನು ಆಡಿದರು. ಆ ಮೂಲಕ ಇನ್ನೂ 21 ಎಸೆತಗಳು ಬಾಕಿಉ ಇರುವಾಗಲೇ ಗುಜರಾತ್ ಟೈಟನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.
IPL 2025 Points Table: ಗೆಲುವಿನೊಂದಿಗೆ ದ್ವಿತೀಯ ಸ್ಥಾನಕ್ಕೇರಿದ ಗುಜರಾತ್
ಇತಿಹಾಸ ಸೃಷ್ಟಿಸಿದ ಶುಭಮನ್ ಗಿಲ್
ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಅರ್ಧಶತಕದ ಮೂಲಕ ಶುಭಮನ್ ಗಿಲ್ 25ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದರು. ಇದರಲ್ಲಿ ಅವರು ನಾಲ್ಕು ಶತಕಗಳು ಹಾಗೂ 21 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ 25ನೇ ಬಾರಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅಲ್ಲದೆ 25ನೇ ವಯಸಿನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ ಶುಭಮನ್ ಗಿಲ್. 2018ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಶುಭಮನ್ ಗಿಲ್ ಕೋಲ್ಕತಾ ನೈಟ್ ರೈಡರ್ಸ್ ಪರ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. 2021ರವರೆಗೂ ಅವರು ಕೆಕೆಆರ್ ಪರ ಐಪಿಎಲ್ ಆಡಿದ್ದರು.ಈ ತಂಡದ ಪರ ಅವರು 10 ಅರ್ಧಶತಕಗಳನ್ನು ಬಾರಿಸಿದ್ದಾರೆ. ನಂತರ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಅವರು ಗುಜರಾತ್ ಟೈಟನ್ಸ್‌ಗೆ ಸೇರಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ನಾಲ್ಕು ಶತಕಗಳು ಸೇರಿದಂತೆ 15 ಅರ್ಧಶತಕಗಳನ್ನು ಸಿಡಿಸಿದ್ದಾರೆ.
A terrific knock that sealed the victory for us! 🔥 pic.twitter.com/iNGwc4AUgS
— Gujarat Titans (@gujarat_titans) April 6, 2025
25ನೇ ವಯಸ್ಸಿನ ಹೊತ್ತಿಗೆ ಅತಿ ಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಗಳಿಸಿದವರು
ಶುಭಮನ್ ಗಿಲ್: ಕೆಕೆಆರ್, ಜಿಟಿ-25 ಬಾರಿ 50ಕ್ಕೂ ಹೆಚ್ಚು ರನ್, 4 ಶತಕ, 21 ಅರ್ಧಶತಕಗಳು
ರೋಹಿತ್ ಶರ್ಮಾ: ಡೆಕನ್ ಚಾರ್ಜರ್ಸ್, ಮುಂಬೈ ಇಂಡಿಯನ್ಸ್-19 ಬಾರಿ 50ಕ್ಕೂ ಹೆಚ್ಚು ರನ್, ಒಂದು ಶತಕ, 18 ಅರ್ಧಶತಕಗಳು
ಇಶಾನ್ ಕಿಶನ್: ಗುಜರಾತ್ ಲಯನ್ಸ್, ಮುಂಬೈ ಇಂಡಿಯನ್ಸ್-16 ಬಾರಿ 50ಕ್ಕೂ ಅಧಿಕ ರನ್, 16 ಅರ್ಧಶತಕಗಳು
ಶ್ರೇಯಸ್ ಅಯ್ಯರ್: ಡೆಲ್ಲಿ ಕ್ಯಾಪಿಟಲ್ಸ್-16 ಬಾರಿ 50ಕ್ಕೂ ಅಧಿಕ ರನ್, 16 ಅರ್ಧಶತಕಗಳು
ವಿರಾಟ್ ಕೊಹ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು-16 ಬಾರಿ 50ಕ್ಕೂ ಅಧಿಕ ರನ್, 16 ಅರ್ಧಶತಕಗಳು
ರಿಷಭ್ ಪಂತ್: ಡೆಲ್ಲಿ ಕ್ಯಾಪಿಟಲ್ಸ್--16 ಬಾರಿ 50ಕ್ಕೂ ಅಧಿಕ ರನ್, ಒಂದು ಶತಕ, 15 ಅರ್ಧಶತಕಗಳು
IPL 2025: ಐಪಿಎಲ್‌ನಲ್ಲಿ 100 ವಿಕೆಟ್ ಪೂರ್ತಿಗೊಳಿಸಿದ ಸಿರಾಜ್
26ನೇ ವಯಸ್ಸಿಗೂ ಮುನ್ನ 3000 ರನ್
ಐಪಿಎಲ್ ಟೂರ್ನಿಯಲ್ಲಿ ಶುಭಮನ್ ಗಿಲ್ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. 26ನೇ ವಯಸ್ಸಿಗೂ ಮುನ್ನ 3000 ರನ್‌ಗಳನ್ನು ಕಲೆ ಹಾಕಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಗಿಲ್ ಬರೆದಿದ್ದಾರೆ. ಸದ್ಯ ಗುಜರಾತ್ ಟೈಟನ್ಸ್ ನಾಯಕ ಇಲ್ಲಿಯ ತನಕ ಆಡಿದ 107 ಪಂದ್ಯಗಳಿಂದ 38.20ರ ಸರಾಸರಿಯಲ್ಲಿ 3362 ರನ್‌ಗಳನ್ನು ಸಿಡಿಸಿದ್ದಾರೆ. 98 ಪಂದ್ಯಗಳಿಂದ 2838 ರನ್‌ಗಳನ್ನು ಕಲೆ ಹಾಕಿದ ರಿಷಭ್ ಪಂತ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 3 ಹಾಗೂ 4 ಶತಕಗಳನ್ನು ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೂಡ ಗಿಲ್ ಹೆಸರಿನಲ್ಲಿದೆ. 26ನೇ ವಯಸ್ಸಿಗೂ 2 ಅಥವಾ ಅದಕ್ಕಿಂತ ಹೆಚ್ಚು ಶತಕ ಯಾರೂ ಇಲ್ಲಿಯವರೆಗೂ ಸಿಡಿಸಿಲ್ಲ.