ಕರ್ನಾಟಕ ಚಿಕ್ಕಬಳ್ಳಾಪುರ

Delhi Election Result: ದಿಲ್ಲಿ ಚುನಾವಣೆ ಫಲಿತಾಂಶ ಇಂದು ಪ್ರಕಟ; ಗೆಲುವಿನ ಮಾಲೆ ಯಾರ ಕೊರಳಿಗೆ?

ದೆಹಲಿ ಚುನಾವಣೆ 2025 ರ ಮತ ಎಣಿಕೆ ಇಂದು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಲಿದೆ. ಎಣಿಕೆ ಸಂಜೆ 6 ಗಂಟೆಯೊಳಗೆ ಮುಗಿಯುವ ನಿರೀಕ್ಷೆಯಿದೆ. ಆದರೆ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶದ ಸ್ಪಷ್ಟ ಚಿತ್ರಣ ತಿಳಿಯಲಿದೆ. ದೆಹಲಿಯಲ್ಲಿ ಒಟ್ಟು 1.5 ಕೋಟಿಗೂ ಹೆಚ್ಚು ಮತದಾರರಿದ್ದು, ಈ ಬಾರಿ ಶೇಕಡಾ 60.42 ರಷ್ಟು ಮತದಾನ ಆಗಿದೆ.

ದಿಲ್ಲಿಯಲ್ಲಿ ಪಟ್ಟಕ್ಕೇರೋದು ಯಾರು? ಇಂದು ಭವಿಷ್ಯ ನಿರ್ಧಾರ

Profile Rakshita Karkera Feb 8, 2025 5:00 AM

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ(Delhi Election 2025) ಮತಎಣಿಕೆ ಇಂದು ನಡೆಯಲಿದ್ದು, ಆಡಳಿತರೂಢ ಆಪ್‌, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ನೇರ ಜಿದ್ದಾಜಿದ್ದಿಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಅಂತಿಮ ತೆರೆ ಬೀಳಲಿದೆ(Delhi Election Result). ಒಟ್ಟು 70 ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, 699 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ಪ್ರಕಟಗೊಳ್ಳಲಿದೆ. ಇನ್ನು ಸರ್ಕಾರ ರಚನೆಗೆ ಕನಿಷ್ಠ 36 ಮ್ಯಾಜಿಕ್‌ ನಂಬರ್‌ ಆಗಿದ್ದು, ಆಡಳಿತಾರೂಢ ಆಪ್‌ ರಾಜಧಾನಿಯಲ್ಲಿ ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯಬಹುದೇ ಅಥವಾ ಬರೋಬ್ಬರಿ 27 ವರ್ಷಗಳ ನಂತರ ಬಿಜೆಪಿ ಗದ್ದುಗೆ ಏರಲಿದೆಯೇ ಎಂಬುದು ಇಂದು ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟವಾಗಲಿದೆ.

ಮತ ಎಣಿಕೆ ಎಷ್ಟು ಹೊತ್ತಿಗೆ ಶುರು?

ದೆಹಲಿ ಚುನಾವಣೆ 2025 ರ ಮತ ಎಣಿಕೆ ಇಂದು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಲಿದೆ. ಎಣಿಕೆ ಸಂಜೆ 6 ಗಂಟೆಯೊಳಗೆ ಮುಗಿಯುವ ನಿರೀಕ್ಷೆಯಿದೆ. ಆದರೆ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶದ ಸ್ಪಷ್ಟ ಚಿತ್ರಣ ತಿಳಿಯಲಿದೆ. ದೆಹಲಿಯಲ್ಲಿ ಒಟ್ಟು 1.5 ಕೋಟಿಗೂ ಹೆಚ್ಚು ಮತದಾರರಿದ್ದು, ಈ ಬಾರಿ ಶೇಕಡಾ 60.42 ರಷ್ಟು ಮತದಾನ ಆಗಿದೆ.

ಫಲಿತಾಂಶ ಎಲ್ಲಿ ನೋಡಬಹುದು?

2025 ರ ದೆಹಲಿ ವಿಧಾನಸಭಾ ಚುನಾವಣೆಯ ನೇರ ಮತ ಎಣಿಕೆಯನ್ನು ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಟ್ರ್ಯಾಕ್ ಮಾಡಬಹುದು. ಚುನಾವಣಾ ಸಂಸ್ಥೆಯ ವೆಬ್‌ಸೈಟ್ ಎಲ್ಲಾ ಕ್ಷೇತ್ರಗಳಿಗೆ ಸ್ಥಾನವಾರು ವಿಜೇತರು ಮತ್ತು ನೇರ ಮತ ಎಣಿಕೆಯನ್ನು ಪ್ರದರ್ಶಿಸುತ್ತದೆ.

ಸಮೀಕ್ಷೆಗಳು ಹೇಳೋದೇನು?

ದಿಲ್ಲಿಯಲ್ಲಿ ಚುನಾವಣೋತ್ತರ ಸಮೀಕ್ಷೆ(Delhi Exit Poll Results 2025) ಪ್ರಕಟಗೊಂಡಿದ್ದು, ಬಿಜೆಪಿ (BJP) ಅಧಿಕಾರಕ್ಕೆ ಬರಲಿದೆ ಎಂದೇ ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ದಿಲ್ಲಿಯಲ್ಲಿ ಒಟ್ಟು 70 ಸೀಟುಗಳಿದ್ದು, ಮ್ಯಾಜಿಕ್‌ ನಂಬರ್‌ 36. ಒಟ್ಟು 10 ವಾಹಿನಿಗಳು ನಡೆಸಿದ ಸಮೀಕ್ಷೆಗಳ ಪೈಕಿ ಶೇ.90 ಸಮೀಕ್ಷೆಗಳು ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಗದ್ದುಗೆಗೆ ಏರುವ ಸಾಧ್ಯತೆ ಇದೆ ಎಂದು ಹೇಳಿವೆ.

ಚಾಣಕ್ಯ ಸ್ಟ್ರಾಟಜಿಸ್, ಜೆವಿಸಿ, ಪೋಲ್ ಡೈರಿ, ಪಿ-ಮಾರ್ಕ್, ಪೀಪಲ್ಸ್ ಇನ್‌ಸೈಟ್‌ ಮತ್ತು ಪೀಪಲ್ಸ್ ಪಲ್ಸ್, ಟುಡೇಸ್ ಚಾಣಕ್ಯ, ಎಕ್ಸಿಸ್ ಮೈ ಇಂಡಿಯಾ ಮತ್ತು ಸಿಎನ್ಎಕ್ಸ್ ಮತಗಟ್ಟೆ ಮುಂತಾದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ ಸರಳ ಬಹುಮತದ ಮೂಲಕ 27 ವರ್ಷಗಳ ಬಳಿಕ ದಿಲ್ಲಿಯಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Delhi Election 2025: ದೆಹಲಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ? ಮತ್ತೆರಡು ಸಮೀಕ್ಷೆಗಳು ಪ್ರಕಟ

ಕಣದಲ್ಲಿರುವ ಪ್ರಮುಖರು ಯಾರು?

ಈ ಚುನಾವಣೆಯಲ್ಲಿ, ಅರವಿಂದ್ ಕೇಜ್ರಿವಾಲ್ ತಮ್ಮ ಭದ್ರಕೋಟೆಯಾದ ನವದೆಹಲಿಯಲ್ಲಿ ಸತತ ನಾಲ್ಕನೇ ಗೆಲುವಿನತ್ತ ಕಣ್ಣಿಟ್ಟಿದ್ದಾರೆ. 2013 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿಯಿಂದ ಬಿಜೆಪಿಯ ಪರ್ವೇಶ್ ಸಿಂಗ್ ವರ್ಮಾ ಹಾಗೂ ಕಾಂಗ್ರೆಸ್‌ನಿಂದ ಸಂದೀಪ್ ದೀಕ್ಷಿತ್ ಅವರು ಸ್ಪರ್ಧಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಜಂಗ್‌ಪುರದಿಂದ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಹಿಂದೆ 2015 ಮತ್ತು 2020ರಲ್ಲಿ ಆಪ್‌ನ ಪ್ರವೀಣ್ ಕುಮಾರ್ ಗೆದ್ದಿದ್ದರು. ದೆಹಲಿ ಮುಖ್ಯಮಂತ್ರಿ ಕಲ್ಕಾಜಿ ಕ್ಷೇತ್ರದಿಂದ ಸರ್ಧೆ ಮಾಡುತ್ತಿದ್ದು, ಬಿಜೆಪಿಯಿಂದ ಮಾಜಿ ಸಂಸದ ರಮೇಶ್ ಬಿಧುರಿ ಅವರು ಸ್ಪರ್ಧೆ ಮಾಡಲಿದ್ದಾರೆ. ಕಾಂಗ್ರೆಸ್‌ನ ಫೈರ್‌ಬ್ರಾಂಡ್ ನಾಯಕಿ ಅಲ್ಕಾ ಲಾಂಬಾ ಕೂಡ ಸ್ಪರ್ಧೆಯಲ್ಲಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

2015 ಮತ್ತು 2020ರ ಚುನಾವಣೆಯಲ್ಲಿ ಏನಾಗಿತ್ತು?

2015ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದು ಇತಿಹಾಸ ಬರೆದಿತ್ತು. ಉಳಿದ 3 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಕಾಂಗ್ರೆಸ್ ತನ್ನ ಖಾತೆಯನ್ನು ತೆರೆದಿರಲಿಲ್ಲ. ಆಪ್‌ 2020ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿತ್ತು. ಆ ಬಾರಿ 62 ಸ್ಥಾನಗಳನ್ನು ಗೆದ್ದುಕೊಂಡರೆ ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ ಸಾಧನೆ ಮತ್ತೆ ಶೂನ್ಯದಲ್ಲೇ ಮುಂದುವರಿದಿತ್ತು. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸುಮಾರು 27 ವರ್ಷಗಳ ಬಳಿಕ ಗದ್ದುಗೆಗೆ ಏರಿದಂತಾಗುತ್ತದೆ.