ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pawan Kalyan: ಸಿಂಗಾಪುರ ಶಾಲೆಯಲ್ಲಿ ಬೆಂಕಿ ಅವಘಡ: ಗಾಯಗೊಂಡ ಪವನ್ ಕಲ್ಯಾಣ್ ಪುತ್ರನ ಆರೋಗ್ಯ ಹೇಗಿದೆ?

Mark Shankar Pawanovich: ಸಿಂಗಾಪುರ ಶಾಲೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗಾಯಗೊಂಡ ನಟ ಮತ್ತು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪುತ್ರ ಮಾರ್ಕ್ ಶಂಕರ್ ಪವನೋವಿಚ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ. ಸದ್ಯ ಘಟನೆಯ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸಿಂಗಾಪುರದಲ್ಲಿ ಗಾಯಗೊಂಡ ಪವನ್ ಕಲ್ಯಾಣ್ ಪುತ್ರ ಹೇಗಿದ್ದಾನೆ?

ಸಿಂಗಾಪುರ: ಇಲ್ಲಿನ ಶಾಲೆಯೊಂದರಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡು ಗಾಯಗೊಂಡ ಭಾರತೀಯ ನಟ, ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರ ಪುತ್ರ ಮಾರ್ಕ್ ಶಂಕರ್ ಪವನೋವಿಚ್ (Mark Shankar Pawanovich) ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ಮಾರ್ಕ್‌ ಶಂಕರ್‌ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಸಿಕ್ಕಿ ಹಾಕಿಕೊಂಡಿದ್ದರು. ಅವಘಡದಲ್ಲಿ ಒಂದು ಮಗು ಸಾವನ್ನಪ್ಪಿದೆ. ಮಾರ್ಕ್ ಶಂಕರ್ ಸೇರಿದಂತೆ ಗಾಯಗೊಂಡ 19 ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಬೆಂಕಿ ಅವಘಡದ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಮಕ್ಕಳನ್ನು ರಕ್ಷಿಸಲು ತುರ್ತು ಸೇವಾ ತಂಡ ಸ್ಥಳಕ್ಕೆ ಧಾವಿಸಿದೆ. ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಅಪಾಯಕಾರಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿವೆ. ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪವನ್ ಸಿಂಗಾಪುರಕ್ಕೆ ತೆರಳಿದ್ದಾರೆ.

ಸಿಂಗಾಪುರದ ರಿವರ್ ವ್ಯಾಲಿ ಪ್ರದೇಶದ ಶಾಲೆ ಎರಡು ಮತ್ತು ಮೂರನೇ ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹೊಗೆಯಿಂದ ತುಂಬಿದ ತರಗತಿ ಕೊಠಡಿಗಳಲ್ಲಿ ಭಯಭೀತರಾಗಿದ್ಧ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕಿಟಕಿಗಳನ್ನು ಒಡೆದು ಸಹಾಯ ಮಾಡುವುದನ್ನು ವೈರಲ್ ಆಗಿರುವ ವಿಡಿಯೊದಲ್ಲಿ ಕಾಣಬಹುದು. ಸಿಂಗಾಪುರ ನಾಗರಿಕ ರಕ್ಷಣಾ ಪಡೆ (SCDF) ಸೇರಿದಂತೆ ತುರ್ತು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ.

ಈ ಘಟನೆಯಲ್ಲಿ 10 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. 15 ಮಕ್ಕಳು ಸೇರಿದಂತೆ ಸುಮಾರು 20 ಜನರು ಗಾಯಗೊಂಡಿದ್ದಾರೆ ಎಂದು ಸಿಂಗಾಪುರದ ಗೃಹ ಸಚಿವ ಕೆ. ಷಣ್ಮುಗಂ ದೃಢಪಡಿಸಿದ್ದಾರೆ.



ಪವನ್ ಪುತ್ರನಿಗೆ ಗಾಯ

ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ಅವರ ಕಿರಿಯ ಮಗ ಮಾರ್ಕ್ ಶಂಕರ್ ನ ತೋಳು ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು, ಹೊಗೆಯಿಂದಾಗಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾನೆ ಎನ್ನಲಾಗಿದೆ. ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: Viral Video: ರೈಲ್ವೇ ಸಿಬ್ಬಂದಿಯಿಂದ ಘೋರ ಕೃತ್ಯ! ಚಲಿಸುತ್ತಿದ್ದ ರೈಲಿನಿಂದ ಯುವಕನನ್ನು ತಳ್ಳಿದ GRP ಮತ್ತು TTE

pavan

ಹೇಗಿದೆ ಮಾರ್ಕ್ ಆರೋಗ್ಯ?

ಸದ್ಯ ಮಾರ್ಕ್‌ನನ್ನು ತುರ್ತು ಚಿಕಿತ್ಸಾ ವಿಭಾಗದಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಆದರೆ ಸುಟ್ಟಗಾಯಗಳು ಮತ್ತು ಹೊಗೆ ಸೇವನೆಯಾಗಿರುವುದರಿಂದ ಚಿಕಿತ್ಸೆ ಮುಂದುವರಿಸಲಾಗಿದೆ. ಪವನ್ ವೈದ್ಯರೊಂದಿಗೆ ಮಾತನಾಡಿದ್ದಾರೆ. ಮಾರ್ಕ್ ಚೇತರಿಸಿಕೊಳ್ಳುತ್ತಿದ್ದು, ಹೊಗೆಯಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕಿದೆ. ಕನಿಷ್ಠ ಮೂರು ದಿನಗಳವರೆಗೆ ನಿಗಾ ವಹಿಸಬೇಕಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಪವನ್ ಕಲ್ಯಾಣ್, ತಮ್ಮ ಮಗ ಚೇತರಿಸಿಕೊಳ್ಳುತ್ತಿದ್ದಾನೆ. ಅವನಿಗೆ ಬ್ರಾಂಕೋಸ್ಕೋಪಿ ಮಾಡಬೇಕಾಗಿದೆ. ಹೊಗೆಯಿಂದಾಗಿ ಉಸಿರಾಡುವಿಕೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.



ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಸಿಂಗಾಪುರ ಅಧಿಕಾರಿಗಳ ತ್ವರಿತ ಪ್ರತಿಕ್ರಿಯೆಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣವೇ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಹೈಕಮಿಷನ್ ಮೂಲಕ ಬೆಂಬಲ ನೀಡಿದ್ದಾರೆ. ಮಾತ್ರವಲ್ಲದೆ ಅವರು ವೈಯಕ್ತಿಕವಾಗಿ ತಮಗೆ ಕರೆ ಮಾಡಿ, ಕಷ್ಟದ ಸಮಯದಲ್ಲಿ ಧೈರ್ಯ ತುಂಬಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿ ಧೈರ್ಯ ತುಂಬಿದ್ದಾರೆ ಎಂದು ಹೇಳಿರುವ ಅವರು, ಮಾರ್ಕ್ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಪವನ್ ಕಲ್ಯಾಣ್ ಮತ್ತು ಅವರ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರಿಗೆ ಇಬ್ಬರು ಮಕ್ಕಳು. ಮಗ ಮಾರ್ಕ್ ಮತ್ತು ಮಗಳು ಪೋಲೆನಾ. ಬೇಸಿಗೆ ಶಿಬಿರಕ್ಕೆ ಸಿಂಗಪುರಕ್ಕೆ ತೆರಳಿದ್ದಾಗ ಅಲ್ಲಿ ಅವಘಡ ಸಂಭವಿಸಿದೆ.