Basavaraj Horatti: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಬಸವರಾಜ್ ಹೊರಟ್ಟಿ
Basavaraj Horatti: ವೈರಲ್ ಆಗಿದ್ದ ರಾಜೀನಾಮೆ ಪತ್ರ ನನ್ನದೇ. ಅದನ್ನು ನಾನೇ ಬರೆದದ್ದು ನಿಜವಾದರೂ ಸಹಿ ಹಾಕಿರಲಿಲ್ಲ. ಹಲವರು ನನಗೆ ಫೋನ್ ಮಾಡಿ ರಾಜೀನಾಮೆ ನೀಡಬೇಡಿ ಎಂದು ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ನಿರ್ಧಾರವನ್ನು ಕೈಬಿಟ್ಟಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.


ಹುಬ್ಬಳ್ಳಿ: ಸದನದಲ್ಲಿನ ಬೆಳವಣಿಗೆಗಳಿಂದ ಬೇಸತ್ತು ರಾಜೀನಾಮೆ ನೀಡಲು ಮುಂದಾಗಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು, ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ವೈರಲ್ ಆಗಿದ್ದ ರಾಜೀನಾಮೆ ಪತ್ರ ನನ್ನದೇ. ಅದನ್ನು ನಾನೇ ಬರೆದದ್ದು ನಿಜವಾದರೂ ಸಹಿ ಹಾಕಿರಲಿಲ್ಲ. ರಾಜ್ಯಪಾಲರು ಸೇರಿ ಹಲವರು ನನಗೆ ಫೋನ್ ಮಾಡಿ ರಾಜೀನಾಮೆ ನೀಡಬೇಡಿ ಎಂದು ಹೇಳಿದ್ದಾರೆ. ಹೀಗಾಗಿ ಸಭಾಪತಿ ಸ್ಥಾನದಲ್ಲಿ ಕುಳಿತುಕೊಂಡೇ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಮಾಡುವೆ. ರಾಜೀನಾಮೆ ನಿರ್ಧಾರವನ್ನು ಕೈಬಿಟ್ಟಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾನು ಸಹಿ ಮಾಡಿದ್ದ ಲೇಟರ್ ಕಬೋರ್ಡ್ನಲ್ಲಿ ಇಟ್ಟಿದ್ದೆ. ಆದರೆ, ಸಹಿ ಮಾಡದ ಲೆಟರ್ ಅನ್ನು ಯಾರೋ ಒಬ್ಬರು ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಇದನ್ನು ನೋಡಿದ ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ಸೇರಿದಂತೆ ಸರಿಸುಮಾರು 100ಕ್ಕೂ ಹೆಚ್ಚು ಜನರು ನನಗೆ ಫೋನ್ ಮಾಡಿ ಮಾತನಾಡಿದ್ದಾರೆ. ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸಲಹೆ ನೀಡಿದ್ದಾರೆ. ನಾನು ಮಾಡಿದ ತೀರ್ಮಾನಕ್ಕೆ ವಿರೋಧ ಬಂದಿದ್ದರಿಂದ ಎಲ್ಲರೂ ರಾಜೀನಾಮೆ ಕೊಡಬೇಡಿ ಅಂತ ಹೇಳುತ್ತಿದ್ದಾರೆ. ಹೀಗಾಗಿ ರಾಜೀನಾಮೆಯನ್ನು ಅಲ್ಲಿಗೆ ಕೈಬಿಟ್ಟಿದ್ದೇನೆ. ಬೆಂಗಳೂರಲ್ಲಿ ಸಭೆ ಮಾಡೋದಾಗಿ ಅಂದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ಶಾಸನ ಸಭೆ ಸದಸ್ಯರು ಕೂಡ ರಾಜೀನಾಮೆ ನೀಡದಂತೆ ತಿಳಿಸಿದ್ದಾರೆ. ಪುಟ್ಟಣ್ಣ, ಸಿಟಿ ರವಿ ಸೇರಿದಂತೆ ಹಲವರು ಕರೆ ಮಾಡಿ ರಾಜೀನಾಮೆ ವಿಷಯದಲ್ಲಿ ಮುಂದುವರಿಬೇಡಿ ಅಂತ ಸಲಹೆ ನೀಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ನನಗೆ ಇಷ್ಟೊಂದು ಗೌರವ ಕೊಡುತ್ತಿರುವುದರಿಂದ ನಾನು ಹಿಂದೆ ಸರಿದ್ದೇನೆ. ಈ ಹಿಂದೆ ಇಂತಹ ಘಟನೆ ಆಗಿರಲಿಲ್ಲ. ಈ ಬಾರಿ ನಡೆದ ಅಧಿವೇಶನದಲ್ಲಿ ಮಾ. 19, 20, 21ಕ್ಕೆ ಸದನ ಮುಂದುವರಿಸಲಾಗದಂತೆ ಆಯ್ತು. ಬಜೆಟ್ ಮೇಲೆ ಸಿಎಂ ಉತ್ತರ ಕೊಟ್ಟ ನಂತರ ಹನಿ ಟ್ರ್ಯಾಪ್ ಉತ್ತರ ಕೊಡಿಸುವ ಜವಾಬ್ದಾರಿ ನನ್ನದು ಅಂತ ನಾನು ಹೇಳಿದ್ದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಕೂಡ ಭರಸವೆ ನೀಡಿದರು. ಆದರೂ, ಅದೇ ಗದ್ದಲದಲ್ಲಿ ಬಿಲ್ ಕೂಡ ಪಾಸ್ ಆದವು. ಚರ್ಚೆ ಆಗದೇ ಈ ರೀತಿ ಗದ್ದಲದಲ್ಲಿ ಬಿಲ್ ಪಾಸ್ ಆಗಬಾರದಿತ್ತು ಅನ್ನೋದು ನನ್ನ ಅಭಿಪ್ರಾಯ. ಇದು ಜನರಿಗೆ ಮೋಸ ಮಾಡಿದಂತೆ ಎಂದು ಹೊರಟ್ಟಿ ಬೇಸರ ಹೊರಹಾಕಿದ್ದಾರೆ.
ರಾಜೀನಾಮೆ ನೀಡಬಾರದು ಅಂತ ಈಗಾಗಲೇ ತೀರ್ಮಾನ ಮಾಡಿದ್ದೇನೆ. ಮಾ. 27ರ ನಂತರ ಎಲ್ಲ 75 ಸದಸ್ಯರಿಗೆ ಸದನದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಪತ್ರ ಕಳಿಸುವೆ. ಯಾರೂ ನನ್ನ ಮಾತು ಮೀರಲ್ಲ ಅನ್ನೋ ನಂಬಿಕೆ ಇದೆ. ಈ ಘಟನೆ ಆಗಿದ್ದು ಒಳ್ಳೆದಾಯ್ತು, ಸುಧಾರಣೆಗೆ ಒಂದು ದಾರಿ ಆದಂತಾಗಿದೆ. ನಾನು ಸ್ವಲ್ಪ ಭಾವುಕನಾಗೋದು ಸಹಜವಾಗಿ ಕಣ್ಣಲ್ಲಿ ನೀರು ಬರುತ್ತೆ. ವ್ಯವಸ್ಥೆ ಸರಿಪಡಿಸಲು ಏನಾದರೂ ಮಾಡಬೇಕು. ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡ್ತೇನೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | KN Rajanna: ಬ್ಲೂ ಜೀನ್ಸ್ ಹುಡುಗಿ ಹನಿ ಟ್ರ್ಯಾಪ್ ಮಾಡಲು ಬಂದಿದ್ದಳು: ಸಚಿವ ಕೆ.ಎನ್.ರಾಜಣ್ಣ