BBMP Budget: ಇಂದು 20 ಸಾವಿರ ಕೋಟಿ ರೂ. ಮೊತ್ತದ ʼಬ್ರ್ಯಾಂಡ್ ಬೆಂಗಳೂರುʼ ಬಜೆಟ್ ಮಂಡನೆ
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಂತೆ ಸುಗಮ ಸಂಚಾರಿ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು ಹೀಗೆ ಎಂಟು ಪರಿಕಲ್ಪನೆಯಲ್ಲಿ ಬಜೆಟ್ ಸಿದ್ಧಪಡಿಸಲಾಗಿದ್ದು, ಇಂದು ಪುರಭವನದಲ್ಲಿ ಮಂಡನೆಯಾಗಲಿದೆ. ಆನ್‌ಲೈನ್ ವೀಕ್ಷಣೆಗೂ ವ್ಯವಸ್ಥೆಯಿದೆ.


ಬೆಂಗಳೂರು: ಬೆಂಗಳೂರಿನ (Bengaluru) ಸರ್ವತೋಮುಖ ಅಭಿವೃದ್ಧಿ, ಆರೋಗ್ಯ, ಮೂಲಸೌಕರ್ಯ, ರಸ್ತೆ, ಫ್ಲೈವರ್, ಸ್ಕೈಡೆಕ್ ಮುಂತಾದ ದೂರದೃಷ್ಟಿ ಯೋಜನೆಗಳು ಸೇರಿದಂತೆ ಬ್ರ್ಯಾಂಡ್ ಬೆಂಗಳೂರು (Brand Bengaluru) ಪರಿಕಲ್ಪನೆಯಡಿ ಇಂದು ಬೃಹತ್ ಬೆಂಗಳೂರು ಬಜೆಟ್ (BBMP Budget) ಮಂಡನೆಯಾಗಲಿದೆ. ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮಕ್ಷಮದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ। ಹರೀಶ್ ಕುಮಾರ್ ಬರೋಬ್ಬರಿ 20 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಲಿದ್ದಾರೆ. ಕಳೆದ ಮೂರು ತಿಂಗಳಿನಿಂದ ಬಿಬಿಎಂಪಿಯ ಬಜೆಟ್ ಕುರಿತು ಶಾಸಕರು, ಸಚಿವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಆಯವ್ಯಯ ಸಿದ್ಧಪಡಿಸಲಾಗಿದೆ.
ಬಿಬಿಎಂಪಿಯ 2025-26ನೇ ಸಾಲಿನ ಆಯವ್ಯಯದಲ್ಲಿ ರಾಜಧಾನಿಯ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ₹20 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡಿಸುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳಗ್ಗೆ 11ಕ್ಕೆ ನಗರದ ಪುರಭವನದಲ್ಲಿ ಆಯವ್ಯಯ ಮಂಡಿಸುವುದಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳಲಾಗಿದೆ. ಬಿಬಿಎಂಪಿಯ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮಕ್ಷಮದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ। ಹರೀಶ್ ಕುಮಾರ್ ಸುಮಾರು 45ರಿಂದ 50 ನಿಮಿಷ ಆಯವ್ಯಯದ ಭಾಷಣ ಮಂಡಿಸಲಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ನಗರದ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ವಿಶೇಷ ಉದ್ದೇಶಿತ ಕಾರ್ಯಕ್ರಮ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಆ ನಿಟ್ಟಿನಲ್ಲಿ ಟನಲ್ ರಸ್ತೆ, ಸ್ಕೈಡಕ್, ವೈಟ್ ಟಾಪಿಂಗ್, ಫ್ಲೈಓವರ್ ಸೇರಿದಂತೆ ಮೊದಲಾದ ಯೋಜನೆಗಳನ್ನು ಅನುಷ್ಠಾನಕ್ಕೆ ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಪ್ರತ್ಯೇಕ ಕಂಪನಿ ಸ್ಥಾಪಿಸುವ ಬಗ್ಗೆ ಘೋಷಣೆ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಂತೆ ಸುಗಮ ಸಂಚಾರಿ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು ಹೀಗೆ ಎಂಟು ಪರಿಕಲ್ಪನೆಯಲ್ಲಿ ಬಜೆಟ್ ಸಿದ್ಧಪಡಿಸಲಾಗಿದೆ. ಅದರಲ್ಲೂ ಸಂಚಾರ ದಟ್ಟಣೆ ಕಡಿಮೆ ಮಾಡುವುದಕ್ಕೆ ಘೋಷಿಸಲಾದ ಸುರಂಗ ರಸ್ತೆ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ಭರ್ಜರಿ ಅನುದಾನ ಮೀಸಲಿಡುವ ಮೂಲಕ ಬುನಾದಿ ಹಾಕಲು ಚಿಂತನೆ ನಡೆಸಲಾಗಿದೆ.
ಉಳಿದಂತೆ ನಗರದ ರಸ್ತೆಗಳನ್ನು ವೈಟ್‌ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದು. ರಾಜಕಾಲುವೆಯ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ, ಪ್ರಮುಖ ಜಂಕ್ಷನ್‌ಗಳಲ್ಲಿ ಫ್ಲೈಓವರ್, ಅಂಡರ್ ಪಾಸ್ ನಿರ್ಮಾಣ ಸೇರಿದಂತೆ ನಗರದ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ಆದ್ಯತೆ ನೀಡುವ ನಿರೀಕ್ಷೆ ಇದೆ. ಅಲ್ಲದೇ, ಸ್ಕೈಡಕ್‌ನಂತಹ ದೊಡ್ಡ ಮೊತ್ತದ ಯೋಜನೆಗಳ ಅನುಷ್ಠಾನಕ್ಕೆ ಹಣ ನೀಡಲಾಗುತ್ತದೆ.
ಜನಸಾಮಾನ್ಯರಿಗೆ ಹೆಚ್ಚಿನ ಶುಲ್ಕದ ಹೊರೆ
ಈಗಾಗಲೇ ಮೆಟ್ರೋ, ಬಸ್ ಪ್ರಮಾಣ ದರ, ಹಾಲಿನ ದರ ಹಾಗೂ ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರವು, ಬಿಬಿಎಂಪಿಯಡಿ ಬರುವ ಘನತ್ಯಾಜ್ಯ ವಿಲೇವಾರಿಯ ಶುಲ್ಕ ವಿಧಿಸುವುದಕ್ಕೆ ತೀರ್ಮಾನಿಸಿದ್ದು, ಅಧಿಕೃತವಾಗಿ ಆಯವ್ಯಯದಲ್ಲಿ ಘೋಷಣೆ ಮಾಡಿದರೂ ಅಥವಾ ಮಾಡದಿದ್ದರೂ ಏಪ್ರಿಲ್‌ನಿಂದ ಜಾರಿಗೆ ತರುವುದು ನಿಶ್ಚಿತವಾಗಿದೆ. ಜತೆಗೆ, ಬೇರೆ ಬೇರೆ ಮಾರ್ಗದಲ್ಲಿ ಹೆಚ್ಚಿನ ಆದಾಯ ಸಂಗ್ರಹಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಬಿಬಿಎಂಪಿಯ ದೊಡ್ಡ ಆದಾಯ ಮೂಲವಾದ ಆಸ್ತಿ ತೆರಿಗೆಯಿಂದ ಸುಮಾರು ₹6,500 ಕೋಟಿ, ಘನತ್ಯಾಜ್ಯ ಶುಲ್ಕದಿಂದ ₹700 ಕೋಟಿ, ಜಾಹೀರಾತು ಶುಲ್ಕದಿಂದ ₹750 ಕೋಟಿ, ಪ್ರೀಮಿಯಂ ಎಫ್‌ಎಆರ್‌ನಿಂದ ₹1 ಸಾವಿರ ಕೋಟಿ, ರಾಜ್ಯ ಸರ್ಕಾರದ ₹7 ಸಾವಿರ ಕೋಟಿ, ವಿಶ್ವಬ್ಯಾಂಕ್ ನೆರವು ₹2 ಸಾವಿರ ಕೋಟಿ, ಬಿಬಿಎಂಪಿ ಆಸ್ತಿಗಳ ಗುತ್ತಿಗೆ ದರ ಪರಿಷ್ಕರಣೆ ಹೀಗೆ, ಸುಮಾರು ₹19 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿ ಗಾತ್ರದ ಆಯವ್ಯಯ ಮಂಡಿಸುವುದಕ್ಕೆ ನಿರ್ಧರಿಸಲಾಗಿದೆ.
ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಅಧಿಕಾರ ಅವಧಿ 2020ರ ಸೆಪ್ಟಂಬರ್‌ನಲ್ಲಿ ಮುಕ್ತಾಯವಾಗಿದೆ. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಆಯವ್ಯಯವನ್ನು ಪಾಲಿಕೆ ಅಧಿಕಾರಿಗಳೇ ಮಂಡನೆ ಮಾಡುತ್ತಿದ್ದಾರೆ. ಈ ಬಾರಿಯೂ ಹಣಕಾಸು ವಿಭಾಗದ ವಿಶೇಷ ಆಯುಕ್ತರೇ ಮಂಡಿಸಲಿದ್ದಾರೆ. ಈ ಮೂಲಕ ಸತತ ಐದು ಬಾರಿ ಅಧಿಕಾರಿಗಳಿಂದ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ.
ವೀಕ್ಷಣೆಗೆ ಆನ್‌ಲೈನ್ ವ್ಯವಸ್ಥೆ
ಶನಿವಾರ ಪುರಭವನದಲ್ಲಿ ಮಂಡಿಸುವ ಬಿಬಿಎಂಪಿಯ ಆಯವ್ಯಯ ಸಾರ್ವಜನಿಕರ ವೀಕ್ಷಣೆಗೆ ಆನ್‌ಲೈನ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. https://www.youtube.com/live/eydr2vyROL8?si=q5q6Qz-Yem4uwj_M ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಇದನ್ನೂ ಓದಿ: Street vendors: ಬಿಬಿಎಂಪಿಯಿಂದ ಬೀದಿ ವ್ಯಾಪಾರಿಗಳಿಗೆ ಶೀಘ್ರ ಗುರುತಿನ ಚೀಟಿ