Chikkaballapur News: ಭೋಗನಂದೀಶ್ವರ ಜಾತ್ರೆಯಲ್ಲಿ ನಿಯಮ ಮೀರಿ ಅಂಗಡಿಗಳಿಂದ ಕಂಡಾಪಟ್ಟೆ ಸುಂಕ ವಸೂಲಿ
ತಾಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದ ಸುತ್ತ ಮುತ್ತಲೂ ರಸ್ತೆಬದಿ ಯಲ್ಲಿ ಅಂಗಡಿಯಿಟ್ಟುಕೊಂಡು ಬುರುಗು ಬತ್ತಾಸು, ಮಕ್ಕಳ ಆಟಿಕೆ, ಜಾಯಿಂಟ್ ವೀಲ್, ಜರಡಿ ಮೊರ, ಏರ್‌ಪಿನ್ ರಬ್ಬರ್, ಮಣಿಸರ ಹೀಗೆ ವ್ಯಾಪಾರ ಮಾಡುವ ಹವ್ಯಾಸಿ ವ್ಯಾಪಾರಿ ಗಳಿಂದ ಸುಂಕ ವಸೂಲಿ ಮಾಡುವ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ

ಸುಂಕ ವಸೂಲಿಗೆ ಇಳಿದಿರುವ ಗುತ್ತಿಗೆದಾರ ಹಿತೇಶ್‌ಗೌಡ

ನಿಯಮದಂತೆಯೇ ವಸೂಲಿ ಮಾಡಲಾಗಿದೆ ಗುತ್ತಿಗೆದಾರ
ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿಯೆಂದೇ ಪ್ರಸಿದ್ದಿಯಾಗಿರುವ ನಂದಿಗ್ರಾಮದ ಶ್ರೀಭೋಗ ನಂದೀಶ್ವರ ಜಾತ್ರೆಯು ಜೋಡಿ ರಥೋತ್ಸವಕ್ಕೆ ಖ್ಯಾತಿಯಾಗಿದ್ದರೆ, ಈ ಬಾರಿ ಗುತ್ತಿಗೆದಾರರ ದುಬಾರಿ ಸುಂಕದ ವಿಚಾರದಲ್ಲಿ ಕುಖ್ಯಾತಿಗೆ ಒಳಗಾಗಿರುವುದು ವಿಚಿತ್ರವಾದರೂ ಸತ್ಯ ವಾಗಿದೆ. ಹೌದು. ತಾಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದ ಸುತ್ತ ಮುತ್ತಲೂ ರಸ್ತೆಬದಿಯಲ್ಲಿ ಅಂಗಡಿಯಿಟ್ಟುಕೊಂಡು ಬುರುಗು ಬತ್ತಾಸು, ಮಕ್ಕಳ ಆಟಿಕೆ, ಜಾಯಿಂಟ್ ವೀಲ್, ಜರಡಿ ಮೊರ, ಏರ್‌ಪಿನ್ ರಬ್ಬರ್, ಮಣಿಸರ ಹೀಗೆ ವ್ಯಾಪಾರ ಮಾಡುವ ಹವ್ಯಾಸಿ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡುವ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೌದು ಮಹಾಶಿವರಾತ್ರಿ ಹಾಗೂ ಮರನೆಯ ದಿನದ ಪಾರಣೆಯಂದು ನಡೆಯುವ ರಥೋ ತ್ಸವವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಲಕ್ಷಾಂತರ ಮಂದಿ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದಂತೆ, ಜಾತ್ರೆಗೆ ಬಂದ ನೆನೆಪಿನಲ್ಲಿ ಏನಾದರೂ ಕೊಂಡುಕೊಂಡು ಮನೆಗೆ ತರಳುವುದು ಈಭಾಗದಲ್ಲಿ ನೂರಾರು ವರ್ಷದಿಂದ ನಡೆದುಕೊಂಡು ಬಂದಿರುವ ವಾಡಿಕೆ.ಅದಕ್ಕಾಗಿಯೇ ನೂರಾರು ಅಂಗಡಿಗಳವರು ಇಲ್ಲಿ ಬಂದು ಟೆಂಟುಗಳನ್ನು ಹಾಕಿ ಕೊಂಡು ಜಾತ್ರೆಯೆನ್ನು ಗುತ್ತಿಗೆ ಪಡೆದವರಿಗೆ ಸುಂಕಕಟ್ಟಿ ಒಂದೆರಡುವಾರಗಳ ವ್ಯಾಪಾರ ಮಾಡಿಕೊಂಡು ಹೋಗುತ್ತಾರೆ.ಇದು ರಾಜ್ಯದ ಉದ್ದಗಲಕ್ಕೂ ನಡೆದುಕೊಂಡು ಬಂದಿರುವ ಪದ್ದತಿ.ಆದರೆ ಈಬಾರಿ ಇದೇ ಸುಂಕದ ವಿಚಾರದಲ್ಲಿ ವ್ಯಾಪಾರಿಗಳ ಮೂಲಕ ಗುತ್ತಿಗೆ ದಾರರ ಮುಖವಾಡ ಕಳಚಿರುವುದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಅಡಿಗೆ ೧೦ ರೂಪಾಯಿ ಬದಲು ೧೦೦೦ ರೂಪಾಯಿ ಸುಂಕ
ಜಾತ್ರೆಯಲ್ಲಿ ಸುಂಕ ವಸೂಲಿಯ ಗುತ್ತಿಗೆಯನ್ನು ಹರಾಜು ಪ್ರಕ್ರಿಯೆಯಲ್ಲಿ ತನ್ನದಾಗಿಸಿ ಕೊಂಡಿರುವ ನಂದಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರ ಮಗ ಹಿತೇಶ್ ಗೌಡ ಹರಾಜು ನಿಬಂಧನೆಗಳ ಪ್ರಕಾರ ೧ ಅಡಿಗೆ ೧೦ ರೂಪಾಯಿ ಸುಂಕ ವಸೂಲಿ ಮಾಡಬೇಕು ಎಂದಿದೆ. ಆದರೆ ನಿಯಮಗಳನ್ನು ಗಾಳಿಗೆ ತೂರಿದ ಈತ ೧ ಅಡಿಗೆ ೧೦ ರೂಪಾಯಿ ಬದಲು ೧೦೦೦ ರೂಪಾಯಿ ವಸೂಲಿ ಮಾಡಿದ್ದಾರೆ ಎಂಬುದು ವ್ಯಾಪಾರಸ್ಥರು ಆಕ್ರೋಶ ಹೊರ ಹಾಕಿ ದ್ದಾರೆ.
ಈತನ ಸುಂಕದ ಪರಿ ಹೇಗಿದೆ ಎಂದರೆ ಹೇಳಿದ್ದೇ ರೇಟ್ ಮಾಡಿದ್ದೇ ಕಾನೂನು ಎಂಬಂತಾ ಗಿದೆ. ಬಡಪಾಯಿ ವ್ಯಾಪಾರಿಗಳ ಬಳಿ ಒಂದೊಂದು ಅಂಗಡಿಗೆ ೭೦೦೦ ದಿಂದ ೫೦೦೦೦ ದವರೆಗೂ ವಸೂಲಿ ಮಾಡಿದ್ದಾನೆ. ಸುಂಕ ವಸೂಲಿ ನಿಯಮಗಳನ್ನು ಗಾಳಿಗೆ ತೂರಿರುವ ಈತ ಒಬ್ಬೊಬ್ಬರಿಗೆ ಒಂದೊಂದು ರೀತಿ ಸಾವಿರಾರು ರೂಪಾಯಿ ವಸೂಲಿ ಮಾಡಿದ್ದಾ ನೆಂದು ದೂರಲಾಗಿದೆ. ದುಬಾರಿ ಸುಂಕದ ಬಗ್ಗೆ ಪ್ರಶ್ನೆ ಮಾಡಿದವರ ಮೇಲೆ ದೌರ್ಜನ್ಯ ದರ್ಪ ತೋರಿದ ಆರೋಪವೂ ಕೇಳಿಬಂದಿದೆ. ಹೆಣ್ಣು ಮಕ್ಕಳು ಮುದುಕರು ಎನ್ನದೆ ಕೀಳು ಭಾಷಾ ಪ್ರಯೋಗ ಮಾಡಿ ಹಣ ವಸೂಲಿ ಮಾಡಲಾಗಿದೆ ಎಂದು ಮಹಿಳಾ ವ್ಯಾಪಾರಸ್ಥರು ನೊಂದು ನುಡಿಯುತ್ತಾರೆ.
ಓಲೆಗೆ ಕಂಟಕವಾದ ಸುಂಕ
ನಂದಿ ಜಾತ್ರೆಗೆ ವ್ಯಾಪಾರಕ್ಕೆಂದು ಬಂದ ಒಬ್ಬೊಬ್ಬರದ್ದು ಒಂದೊಂದು ಅಳಲಾಗಿದೆ. ವಯಸ್ಸಾದರೂ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಬಂದಿರುವ ಅಜ್ಜಿ ಸಾವಿತ್ರ ಮ್ಮ ಜರಡಿ, ಸ್ಟೀಲ್ ಪಾತ್ರೆ ಸಾಮಾನು ಅಂಗಡಿ ಇಟ್ಟುಕೊಂಡಿದ್ದಾರೆ.ಇವರ 7 ಅಡಿಯ ಪುಟ್ಟ ಅಂಗಡಿಯ ಜಾಗಕ್ಕೆ ಗುತ್ತಿಗೆದಾರ ೭ಸಾವಿರ ಸುಂಕ ನಿಗಧಿ ಮಾಡಿದ್ದಾನೆ.
ಹಣ ನೀಡಲು 5000 ಕ್ಕೆ ಕಿವಿ ಒಲೆ ಅಡ ಇಟ್ಟು ಸುಂಕ ಕಟ್ಟಿದ್ದೇನೆ.ಸುಂಕ ಜಾಸ್ತಿ ಮಾಡಿದ್ದೀ ರಲ್ಲ ಸ್ವಾಮಿ ಕಡಿಮೆ ಮಾಡಿ ಎಂದರೆ ೭ ಸಾವಿರ ಕೊಟ್ಟು ಇಟ್ರೇ ಇಡಿ, ಇಲ್ಲ ಅಂದ್ರೆ ಅಂಗಡಿ ಎತ್ತುವಂತೆ ಅವಾಜ್ ಹಾಕ್ತಾನಂತೆ ಅಂತ ಮಾಧ್ಯಮದ ಎದುರು ಅಜ್ಜಿ ದು:ಖ ತೋಡಿಕೊಳ್ಳುತ್ತಾರೆ.ಇದು ಒಬ್ಬ ಅಜ್ಜಿಯ ಕಥೆಯಲ್ಲ ಬದಲಿಗೆ ಹಲವು ವ್ಯಾಪಾರಸ್ಥರು ಇದನ್ನೇ ಹೇಳುತ್ತಾರೆ.
*
ನಂದಿ ಜಾತ್ರೆ ಇವತ್ತು ನಿನ್ನೆಯಿಂದ ನಡೆಯುತ್ತಿಲ್ಲ. ನೂರಾರು ವರ್ಷದಿಂದ ಜಾತ್ರೆಯಲ್ಲಿ ಗುತ್ತಿಗೆ ಪಡೆಯುವ ಪದ್ಧತಿ ನಡೆಯುತ್ತಿದೆ.ಎಲ್ಲರೂ ವಸೂಲಿ ಮಾಡಿದಂತೆ ನಾನೂ ವಸೂಲಿ ಮಾಡಿದ್ದೇನೆ. 25 ದಿನಗಳಿಗೆ ಸುಂಕ ಪಡೆಯಲು ಗುತ್ತಿಗೆಯನ್ನು ೮ ಲಕ್ಷಕ್ಕೆ ಪಡೆದಿದ್ದೇನೆ. ಅಂಗಡಿಯಿಟ್ಟಿರುವ ವ್ಯಾಪಾರಸ್ಥರ ಬಳಿ ೨೫ ದಿನದ್ದು ಮುಂಗಡವಾಗಿಯೇ ಪಡೆಯುತ್ತಿದ್ದೇನೆ.ಯಾರಿಂದಲೂ ಹೆಚ್ಚಾಗಿ ಪಡೆದಿಲ್ಲ.ನಿಯಮಾನುಸಾರವಾಗಿಯೇ ಪಡೆದಿದ್ದೇನೆ. ೧ಅಡಿಗೆ ೧೦ ರೂಪಾಯಿ ನಿಜ.೭ ಅಡಿ ಅಂಗಡಿಯಿದ್ದರೆ ಸುತ್ತಳತೆ ಸೇರಿದಾಗ ೪೯ ಅಡಿ ಆಗುತ್ತದೆ.ದಿನಕ್ಕೆ ೪೯೦ ಆದರೆ ೨೫ ದಿನಕ್ಕೆ ಎಷ್ಟು ಪಡೆಯಬೇಕು 12250 ಆಗಲಿದೆ. ನಾನು ಪಡೆದಿರುವುದು ೭ ಸಾವಿರ. ಎಲ್ಲಿ ದುಬಾರಿ ಹಣ ಪಡೆದಿದ್ದೇನೆ. ನಾನು ತಪ್ಪು ಮಾಡಿಲ್ಲ,ತಪ್ಪಾಗಿದ್ದರೆ ಸಂಬಂಧಪಟ್ಟವರು ಕ್ರಮವಹಿಸಲಿ.
-ಹಿತೇಶ್‌ಗೌಡ ನಂದಿಜಾತ್ರೆ ಗುತ್ತಿಗೆದಾರ.
ಈಬಾರಿ ನಂದಿ ಜಾತ್ರೆಯ ಅಂಗಡಿ ಮುಂಗಟ್ಟೆಗಳ ಗುತ್ತಿಗೆಯನ್ನು ಹಿತೇಶ್‌ಗೌಡ ಎಂಬು ವರು ಪಡೆದಿದ್ದಾರೆ. ನಮ್ಮ ನಿಯಮಗಳ ಪ್ರಕಾರ ಒಂದು ಅಡಿಗೆ ೧೦ ರೂಪಾಯಿ ಪಡೆಯ ಬೇಕಿದೆ. ಆದರೆ ಈತ ಇದನ್ನು ಮೀರಿ ವಸೂಲಿ ಮಾಡಿರುವ ಬಗ್ಗೆ ನಮಗೂ ದೂರುಗಳು ಬಂದಿವೆ.ಸೋಮವಾರ ಕಾರಣ ಕೇಳಿ ನೋಟೀಸು ಜಾರಿ ಮಾಡುತ್ತೇವೆ.ಇದಕ್ಕೆ ಏನು ಉತ್ತರ ಕೊಡುತ್ತಾರೆ ಎಂಬುದನ್ನು ನೋಡಿ ಕ್ರಮ ಜರುಗಿಸುತ್ತೇವೆ.ಒಂದು ವೇಳೆ ತಪ್ಪು ಮಾಡಿದ್ದಲ್ಲಿ ಸದರಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು.
-ರುಕ್ಮಿಣಿ ಮುಜರಾಯಿ ದೇವಾಲಯಗಳ ತಹಶೀಲ್ದಾರ್ ಚಿಕ್ಕಬಳ್ಳಾಪುರ
ಒಟ್ಟಾರೆ ಭೋಗನಂದೀಶ್ವರನ ಸನ್ನಿಧಿ ಭಕ್ತಿ ಶಕ್ತಿಯ ತಾಣವಾಗಿ ಲಕ್ಷಾಂತರ ಭಕ್ತರ ನೆಮ್ಮದಿಯ ಕ್ಷೇತ್ರವಾಗಿ ಜಗದ್ವಿಖ್ಯಾತವಾಗಿತ್ತು. ಆದರೆ ಇದೇ ಮೊದಲ ಬಾರಿಗೆ ದುಬಾರಿ ಸುಂಕ ವಸೂಲಿ ಮಾಡಲಾಗಿದೆ ಎಂಬ ಸುದ್ದಿಯ ಮೂಲಕ ಕುಖ್ಯಾತಿಗೆ ಒಳಗಾಗಿರುವುದು ಭಕ್ತರಲ್ಲಿ ಬೇಸರವನ್ನು ಉಂಟು ಮಾಡಿದೆ.ಮುಜರಾಯಿ ಇಲಾಖೆ ಈ ಬಗ್ಗೆ ಯಾವ ಕ್ರಮ ವಹಿಸುವುದೋ ಕಾದು ನೋಡಬೇಕಿದೆ.