ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿಎಂ ಚಿನ್ನದ ಪದಕ ಗೆದ್ದ ಇನ್ಸ್‌ಪೆಕ್ಟರ್‌ ವಿರುದ್ಧ 50 ಗ್ರಾಮ್‌ ಚಿನ್ನ ಕದ್ದ ಆರೋಪ

CM Gold Medal: ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿರುದ್ಧ ಆರೋಪಿಯ ಮೈಮೇಲಿದ್ದ 50 ಗ್ರಾಮ್‌ ಚಿನ್ನ ಎಗರಿಸಿದ ಆರೋಪ ಬಂದಿದೆ. ಬಾಲಕೃಷ್ಣ ನಾಯಕ್‌ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ.

ಸಿಎಂ ಪದಕ ಗೆದ್ದ ಇನ್ಸ್‌ಪೆಕ್ಟರ್‌ ವಿರುದ್ಧ ಚಿನ್ನ ಕದ್ದ ಆರೋಪ

ಬಾಲಕೃಷ್ಣ ನಾಯಕ್‌, ಮುಖ್ಯಮಂತ್ರಿ ಚಿನ್ನದ ಪದಕ

Profile Ramesh B Apr 4, 2025 10:34 PM

ಮಂಗಳೂರು: ಮುಖ್ಯಮಂತ್ರಿ ಚಿನ್ನದ ಪದಕ (CM Gold Medal) ಪಡೆದ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿರುದ್ಧ ಆರೋಪಿಯ ಮೈಮೇಲಿದ್ದ 50 ಗ್ರಾಮ್‌ ಚಿನ್ನ ಎಗರಿಸಿದ ಆರೋಪ ಬಂದಿದೆ. ಉಳ್ಳಾಲ ಕೋಟೆಕಾರ್‌ ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣ ಭೇದಿಸಿದ ಪೊಲೀಸರ ತಂಡದಲ್ಲಿದ್ದ ಬಾಲಕೃಷ್ಣ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ (Mangaluru News). ಇದೇ ವೇಳೆ ಕಳವು ಪ್ರಕರಣಕ್ಕೆ ಸಂಬಂಧಿಸಿ 50 ಗ್ರಾಮ್ ಚಿನ್ನಾಭರಣವನ್ನು ಜಫ್ತಿ ಮಾಡುವ ವೇಳೆ ಇನ್ಸ್‌ಪೆಕ್ಟರ್‌ ಎಗರಿಸಿದ್ದಾರೆ ಎಂದು ಎಸಿಪಿಗೆ ದೂರು ನೀಡಿದ ವಿಚಾರ ಬಯಲಾಗಿದೆ.

ಉಳ್ಳಾಲ ಪೊಲೀಸ್‌ ಠಾಣೆಯಿಂದ ಭಾನಗಡಿ ಮಾಡಿ ಕಡ್ಡಾಯ ರಜೆಯಲ್ಲಿ ಮನೆಗೆ ಹೋಗಿದ್ದ ಬಾಲಕೃಷ್ಣ ನಾಯಕ್‌ ಹಿರಿಯ ಅಧಿಕಾರಿಗಳ ಕೃಪಾಕಟಾಕ್ಷದಿಂದ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್‌ ಠಾಣೆಗೆ ಇನ್ಸ್‌ಪೆಕ್ಟರ್‌ ಆಗಿ ಆಗಮಿಸಿದ್ದಾರೆ.

ಪ್ರಕರಣ ಹಿನ್ನೆಲೆ

2024ರ ಜೂ. 28ರಂದು ಉಳ್ಳಾಲದಲ್ಲಿ ವೃದ್ಧರೊಬ್ಬರು ತನ್ನ ಮನೆಯಿಂದ 15 ಲಕ್ಷ ರೂ. ಬೆಲೆಯ 32 ಪವನ್ ಚಿನ್ನಾಭರಣ ಕಳವಾದ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಇನ್ಸ್‌ಪೆಕ್ಟರ್‌ ಬಾಲಕೃಷ್ಣ ದೂರು ನೀಡಿದ ವ್ಯಕ್ತಿಯ ಮಗ ಪಿಯುಸಿ ವಿದ್ಯಾರ್ಥಿ ಸಹಿತ ಇಬ್ಬರು ಅಪ್ರಾಪ್ತರು ಮತ್ತು ಆತನ ಮೂವರು ವಯಸ್ಕ ಗೆಳೆಯರು ಸೇರಿ ಕಳವು ಕೃತ್ಯ ನಡೆಸಿರುವುದಾಗಿ ಆರೋಪ ಪಟ್ಟಿ ಸಲ್ಲಿಸಿದ್ದರು. ಕಳವಾದ ಚಿನ್ನಾಭರಣವನ್ನು ನಗರದ ಜುವೆಲ್ಲರಿಗಳಿಗೆ ಮಾರಾಟ ಮಾಡಿದ್ದು, ಇದನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು.‌

ಈ ಸುದ್ದಿಯನ್ನೂ ಓದಿ: Lokayukta Raid: ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್‌ಸ್ಪಕ್ಟರ್‌ ಲೋಕಾಯುಕ್ತ ದಾಳಿಗೆ ಹೆದರಿ ಪರಾರಿ

ಮಾರ್ಚ್ 13ರಂದು ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿ ಇನ್ಸ್‌ಪೆಕ್ಟರ್‌ ಬಾಲಕೃಷ್ಣ ವಿರುದ್ಧ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ಅವರಿಗೆ ದೂರು ನೀಡಿದಾಗ ಕಳವು ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿತ್ತು. "ಕಳವು ಪ್ರಕರಣದಲ್ಲಿ ಇದ್ದ ಎಂದು ನನ್ನ ಮಗನನ್ನು ಉಳ್ಳಾಲ ಪೊಲೀಸರು 2024ರ ಜೂನ್ ತಿಂಗಳಾಂತ್ಯದಲ್ಲಿ ವಶಕ್ಕೆ ಪಡೆದಿದ್ದರು. ಈ ಸಂಬಂಧ ಮಾತನಾಡಲೆಂದು ಮರುದಿನ ಉಳ್ಳಾಲ ಠಾಣೆಗೆ ತನ್ನನ್ನು ಕರೆಸಿಕೊಂಡಿದ್ದರು. ಪ್ರಕರಣದಲ್ಲಿ ಕಳವಾದ ಚಿನ್ನದ ರಿಕವರಿ ಆಗಬೇಕಿದೆ ಎಂದು ಹೇಳಿದ ಇನ್ಸ್‌ಪೆಕ್ಟರ್‌, ಪ್ರಕರಣ ಮುಚ್ಚಿ ಹಾಕಲು 3 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಜು. 1ರಂದು ಉಳ್ಳಾಲ ಠಾಣೆಯಲ್ಲೇ ಅವರಿಗೆ ಹಣ ನೀಡಿದ್ದೇನೆ. ಹಣ ಪಡೆದರೂ ಮಗನನ್ನು ಆರೋಪಿಯಾಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ, ಮಗನ ಮೈಯಲ್ಲಿದ್ದ ಬಂಗಾರದ ಸರ, ಒಂದು ಬ್ರಾಸ್ಲೇಟ್, ಒಂದು ಕಡಗ, ಮೂರು ಉಂಗುರ, ಒಂದು ಕಿವಿಯ ಓಲೆ ಸೇರಿ ಒಟ್ಟು 50 ಗ್ರಾಮ್ ಚಿನ್ನಾಭರಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಇದರ ಲೆಕ್ಕವನ್ನು ಚಾರ್ಜ್ ಶೀಟ್‌ನಲ್ಲಿ ಹಾಕುತ್ತೇನೆ, ಆಮೇಲೆ ರಿಕವರಿ ಮಾಡಿಕೊಳ್ಳಬಹುದು ಎಂದಿದ್ದರು. ಆದರೆ ಈಗ ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ ಶೀಟಿನಲ್ಲಿ ನನ್ನ ಮಗನ ಮೈಮೇಲಿದ್ದ ಚಿನ್ನಾಭರಣದ ಬಗ್ಗೆ ಉಲ್ಲೇಖಿಸಿಲ್ಲ. ಅದೂ ಅಲ್ಲದೆ ಮಗನಿಂದ ಖಾಲಿ ಕಾಗದಗಳಿಗೆ ಸಹಿ ಮಾಡಿಸಿದ್ದಾರೆ. ಆರೋಪಿ ಇನ್‌ಸ್ಪೆಕರ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ತಾಯಿ ಲಿಖಿತ ದೂರು ನೀಡಿದ್ದರು. ಇದೇ ಕಳವು ಪ್ರಕರಣದಲ್ಲಿ ಅಪ್ರಾಪ್ತ ಬಾಲಕರ ಹೆತ್ತವರು ಸೇರಿದಂತೆ ಇತರ ಆರೋಪಿಗಳ ಬಳಿಯಿಂದಲೂ ಹಣ ಪಡೆದು ಕೇಸು ಮುಚ್ಚಿ ಹಾಕಲೆತ್ನಿಸಿದ್ದ ಆರೋಪಗಳು ಕೇಳಿ ಬಂದಿವೆ.

ಎಸಿಬಿ ದಾಳಿ

ಈ ಹಿಂದೆ ಬಾಲಕೃಷ್ಣ ಮೈಸೂರು ಜಿಲ್ಲೆಯ ವಿಜಯನಗರದಲ್ಲಿ ಕರ್ತವ್ಯದಲ್ಲಿದ್ದಾಗ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪದಲ್ಲಿ ಎಸಿಬಿ ದಾಳಿಯಾಗಿತ್ತು. ಮಾ. 13ರಂದು ಎಸಿಪಿಗೆ ದೂರು ನೀಡಿದ್ದರೂ ಆರೋಪಿತ ಇನ್ಸ್‌ಪೆಕ್ಟರ್‌ ಬಾಲಕೃಷ್ಣ ಅವರಿಗೆ ಚಿನ್ನದ ಪದಕ ಲಭಿಸಿರುವುದು ಅಚ್ಚರಿ ಮೂಡಿಸಿದೆ. ಉಳ್ಳಾಲದಲ್ಲಿಯೂ ಕಾಂಗ್ರೆಸ್ ಮುಖಂಡರು ಪದೇ ಪದೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸ್‌ ಕಮಿಷನರ್‌ ಕ್ರಮ ಕೈಗೊಂಡು ಇನ್ಸ್‌ಪೆಕ್ಟರ್‌ನನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿದ್ದರು. ಶುಕ್ರವಾರ ಮಂಗಳೂರು ಕಮಿಷನರ್‌ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಎಲ್ಲ ಚಿನ್ನದ ಪದಕ ಪೊಲೀಸ್-‌ ಅಧಿಕಾರಿಗಳ ಜತೆಯಲ್ಲಿ ಇನ್ಸ್‌ಪೆಕ್ಟರ್‌ ಬಾಲಕೃಷ್ಣ ಅವರಿಗೂ ಸನ್ಮಾನ ನಡೆಯಿತು.

Anupam

ಎಸಿಪಿಯಿಂದ ತನಿಖೆ: ಪೊಲೀಸ್‌ ಕಮಿಷನರ್‌

''ಕಳವು ಆರೋಪಿಯ ತಾಯಿ ಇನ್ಸ್‌ಪೆಕ್ಟರ್‌ ವಿರುದ್ಧ 50 ಗ್ರಾಮ್‌ ಚಿನ್ನ ಎಗರಿಸಿದ ಆರೋಪ ಮಾಡಿದ್ದಾರೆ. ಈ ಆರೋಪದ ಸತ್ಯಾಸತ್ಯತೆ ಕುರಿತು ವಿಚಾರಣೆ ನಡೆಸುವಂತೆ ಎಸಿಪಿ ಧನ್ಯಾ ನಾಯಕ್‌ಗೆ ಸೂಚಿಸಿದ್ದೇನೆ. ಆರೋಪದಲ್ಲಿ ಸತ್ಯವೂ ಇರಬಹುದು. ವಕೀಲರ ಸಲಹೆ ಪಡೆದು ದೂರನ್ನು ಡ್ರಾಪ್ಟ್‌ ಮಾಡಿರಬಹುದು. ವಿಚಾರಣೆ ನಡೆದ ಬಳಿಕವೇ ಈ ಕುರಿತು ತೀರ್ಮಾನಕ್ಕೆ ಬರಲು ಸಾಧ್ಯ'' ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರವಾಲ್‌ 'ವಿಶ್ವವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.