Greater Bengaluru: ರಾಜ್ಯ ಸರ್ಕಾರಕ್ಕೆ ಹಿನ್ನಡೆ; ಗ್ರೇಟರ್ ಬೆಂಗಳೂರು ವಿಧೇಯಕ ವಾಪಸ್ ಕಳುಹಿಸಿದ ಗವರ್ನರ್
Greater Bengaluru: ಬಿಜೆಪಿ-ಜೆಡಿಎಸ್ ವಿರೋಧದ ನಡೆಯು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಮಂಡಿಸಿದ್ದ ಗ್ರೇಟರ್ ಬೆಂಗಳೂರು ವಿಧೇಯಕ ಮಂಡಿಸಿತ್ತು. ಆದರೆ, ರಾಜ್ಯಪಾಲರು ಕೆಲವು ಸ್ಪಷ್ಟನೆಗಳನ್ನು ಕೋರಿ ಗ್ರೇಟರ್ ಬೆಂಗಳೂರು ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ. ಸ್ಪಷ್ಟನೆಗಳೊಂದಿಗೆ ಪುನಃ ಒಪ್ಪಿಗೆ ಕೋರಿ ರಾಜ್ಯಪಾಲರಿಗೆ ಸರ್ಕಾರ ಕಳುಹಿಸಲಿದೆ.


ಬೆಂಗಳೂರು: ಬಿಜೆಪಿ-ಜೆಡಿಎಸ್ ವಿರೋಧದ ನಡೆಯು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಮಂಡಿಸಿದ್ದ ಗ್ರೇಟರ್ ಬೆಂಗಳೂರು ವಿಧೇಯಕವನ್ನು ರಾಜ್ಯಪಾಲರು ಸಹಿ ಹಾಕದೆ ವಾಪಸ್ ಕಳುಹಿಸಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸಿನ ಕೂಸು ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ವಿಪಕ್ಷಗಳ ವಿರೋಧದ ನಡುವೆಯೂ ಅನಮೋದನೆ ಸಿಕ್ಕಿತ್ತು. ಆದರೆ, ಇದೀಗ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಕೆಲವೊಂದು ಸ್ಪಷ್ಟನೆ ಕೇಳಿ ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಪ್ರಕತಿಕ್ರಿಯಿಸಿದ್ದು, ರಾಜ್ಯಪಾಲರು ಕೆಲವು ಸ್ಪಷ್ಟನೆಗಳನ್ನು ಕೋರಿ ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ. ಸ್ಪಷ್ಟನೆಗಳೊಂದಿಗೆ ಪುನಃ ಒಪ್ಪಿಗೆ ಕೋರಿ ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
2023ರ ಆಗಸ್ಟ್ ನಿಂದ ಈವರೆಗೆ 119 ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ. ಈ ಪೈಕಿ 83 ಮಸೂದೆಗಳನ್ನು ಕಾಯ್ದೆಯಾಗಿ ಜಾರಿಗೊಳಿಸಲಾಗಿದೆ. ನಾಲ್ಕು ಮಸೂದೆಗಳು ರಾಜ್ಯಪಾಲರ ಬಳಿ ಇವೆ. ಏಳು ಮಸೂದೆಗಳ ಕುರಿತು ಸ್ಪಷ್ಟಿಕರಣ ಕೇಳಿದ್ದಾರೆ. ಐದು ಮಸೂದೆಗಳನ್ನು ರಾಷ್ಟ್ರಪತಿಯವರಿಗೆ ಕಳುಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Chalavadi Narayanaswamy: ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಭಯ ಏನಾದರೂ ಇದೆಯೇ? ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ
7 ಪಾಲಿಕೆಗಳಾಗಿ ಬಿಬಿಎಂಪಿ ವಿಭಜನೆ
ಆಡಳಿತ ವೀಕೆಂದ್ರಿಕರಣ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಖ್ಯೆಯನ್ನು ಹೆಚ್ಚು ಮಾಡುವ ಉದ್ದೇಶದ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ (Greater Bengaluru Governance Bill 2024 )ವನ್ನು ರಾಜ್ಯ ಸರ್ಕಾರ ಮಂಡಿಸಿದೆ.
ವಿಧೇಯಕ ಮಂಡನೆ ಕುರಿತು ಈ ಹಿಂದೆ ಮಾತನಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ 74ನೇ ತಿದ್ದುಪಡಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಬೆಂಗಳೂರಿನ ಭವಿಷ್ಯದ ಹಿತದೃಷ್ಟಿಯಿಂದ ಈ ವಿಧೇಯಕ ಪವಿತ್ರವಾದದ್ದು. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ಕಾರಣ ಓರ್ವ ಪಾಲಿಕೆ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳಿಂದ ನಿಭಾಯಿಸಲು ಕಷ್ಟವಾಗುತ್ತಿದೆ. ಹೀಗಾಗಿ ಈ ಮಸೂದೆಯಲ್ಲಿ 7 ಪಾಲಿಕೆ ರಚನೆಗೆ ಮುಂದಾಗಿದ್ದೇವೆ. ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಶಾಸಕರಿಗೆ ನಿಯಂತ್ರಣ ಇರಬೇಕು, ವಾರ್ಡ್ ಸಮಿತಿಗಳಾಗಬೇಕು, ಅಲ್ಲಿ ಜನಪ್ರತಿನಿಧಿಗಳು ಇರಬೇಕು. ಈ ಮಸೂದೆಯಲ್ಲಿ ಎಲ್ಲಾ ಶಾಸಕರು, ಸಂಸದರು ಕೂಡ ಸದಸ್ಯರಾಗಿರುತ್ತಾರೆ. ಮುಖ್ಯಮಂತ್ರಿಗಳು ಇದರ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಉಪಾಧ್ಯಕ್ಷರಾಗಿರುತ್ತಾರೆ. ಪಾಲಿಕೆ ರಚನೆಯನ್ನು ನಾವು ಯಾವುದೇ ರೀತಿ ಬದಲವಾವಣೆ ಮಾಡುತ್ತಿಲ್ಲ” ಎಂದು ತಿಳಿಸಿದ್ದರು.
ತಜ್ಞರ ಸಮಿತಿಯನ್ನು ರಚಿಸಿದ್ದು, ಆರು ಸಮಿತಿಗಳನ್ನು ನೇಮಿಸಲಾಗಿದೆ. ನಮ್ಮ ಮಸೂದೆಯಲ್ಲಿ 1ರಿಂದ 7 ಪಾಲಿಕೆ ಮಾಡಲು ಅವಕಾಶವಿದೆಯೇ ಹೊರತು, 7ಕ್ಕಿಂತ ಹೆಚ್ಚು ಮಾಡಲು ಅವಕಾಶವಿಲ್ಲ. ಒಂದಾದರೂ ಮಾಡಬಹುದು, ಎರಡು, ಮೂರು, ನಾಲ್ಕು ಹೀಗೆ ಮಾಡಬಹುದು. ಈ ವಿಚಾರದಲ್ಲಿ ಶಾಸಕರ ಅಭಿಪ್ರಾಯವನ್ನು ಪಡೆದು ನಂತರ ತೀರ್ಮಾನ ಮಾಡಲಾಗುವುದು. ಇಲ್ಲಿ ಪ್ರತಿ ಪಾಲಿಕೆಯ ಜನಸಂಖ್ಯೆ 10 ಲಕ್ಷಕ್ಕಿಂತ ಹೆಚ್ಚಾಗಿರಬೇಕು. ಕನಿಷ್ಠ 300 ಕೋಟಿಯಷ್ಟು ಆದಾಯ ಸಂಗ್ರಹವಾಗಬೇಕು ಎಂದು ಡಿಕೆಶಿ ತಿಳಿಸಿದ್ದರು.