IPL 2025: ಮುಂಬೈ ಇಂಡಿಯನ್ಸ್‌ಗೆ ಜಸ್‌ಪ್ರೀತ್ ಬುಮ್ರಾ ಸೇರ್ಪಡೆ ಯಾವಾಗ? ಹೆಡ್ ಕೋಚ್ ಹೇಳಿದ್ದಿದು!
Jasprit Bumrah injury updates: ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಮುಂಬೈ ಇಂಡಿಯನ್ಸ್ ಪರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಯಾವಾಗ ಮರಳಲಿದ್ದಾರೆಂದು ಇನ್ನೂ ಸ್ಪಷ್ಟತೆ ಇಲ್ಲ. ಈ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಮಹೇಲಾ ಜಯವರ್ದನೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಜಸ್‌ಪ್ರೀತ್ ಬುಮ್ರಾ

ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಸೋಲು ಅನುಭವಿಸಿದ್ದ ಮುಂಬೈ ಇಂಡಿಯನ್ಸ್ (MI) ತಂಡ, ಶನಿವಾರ ಗುಜರಾತ್ ಟೈಟನ್ಸ್ ವಿರುದ್ಧ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಅಂದ ಹಾಗೆ ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲನೇ ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಜಸ್‌ಪ್ರೀತ್ ಬುಮ್ರಾ ಅವರ ಸೇವೆಯನ್ನು ಕಳೆದುಕೊಂಡಿತ್ತು. ಆದರೆ, ಎರಡನೇ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಲಭ್ಯರಾಗಿದ್ದಾರೆ. ಆದರೆ, ಕೀ ವೇಗಿ ಜಸ್‌ಪ್ರೀತ್ ಬುಮ್ರಾ ಮರಳುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಬುಮ್ರಾ ಅವರ ಮರಳುವ ಬಗ್ಗೆ ಮುಂಬೈ ಇಂಡಿಯನ್ಸ್ ಹೆಡ್ ಕೋಚ್ ಮಹೇಲಾ ಜಯವರ್ದನೆ ಪ್ರಮುಖ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೇಲಾ ಜಯವರ್ದನೆ, ಮುಂಬೈ ಇಂಡಿಯನ್ಸ್ ತಂಡದ ಎರಡನೇ ಪಂದ್ಯಕ್ಕೆ ಜಸ್‌ಪ್ರೀತ್ ಬುಮ್ರಾ ಲಭ್ಯರಾಗುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಬುಮ್ರಾ ಅವರು ಸದ್ಯ ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಪ್ರಕ್ರಿಯೆ ಉತ್ತಮವಾಗಿದೆ. ಆದರೆ, ಅವರು ಯಾವಾಗ ಮರಳಲಿದ್ದಾರೆಂಬ ಬಗ್ಗೆ ಖಚಿತತೆ ಇಲ್ಲ ಎಂದಿದ್ದಾರೆ.
"ಜಸ್‌ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿ ಪ್ರತಿಯೊಬ್ಬರೂ ತಂಡಕ್ಕೆ ಲಭ್ಯರಾಗಿದ್ದಾರೆ. ಅವರು ಪ್ರತಿನಿತ್ಯ ತಮ್ಮ ಪ್ರಕ್ರಿಯೆಯಲ್ಲಿ ಮುಂದುವರಿಯುತ್ತಿದ್ದಾರೆ. ಅವರು ಎಲ್ಲಾ ರೀತಿಯಲ್ಲಿ ಉತ್ತಮವಾಗಿ ಸಾಗುತ್ತಿದ್ದಾರೆ. ಆದರೆ, ಅವರು ಎಂದು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆಂಬ ಬಗ್ಗೆ ಎನ್‌ಸಿಎ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಇದಕ್ಕಾಗಿ ನಾವು ಕಾಯಬೇಕಾಗುತ್ತದೆ," ಎಂದು ಮಹೇಲಾ ಜಯವರ್ದನೆ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಕೊನೆಯ ಬಾರಿ ಆಡಿದ್ದರು. ಕೆಳ ಬೆನ್ನು ಭಾಗದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಟೆಸ್ಟ್ ಸರಣಿಯ ಕೊನೆಯ ಪಂದ್ಯದಿಂದ ಬುಮ್ರಾ ಹೊರ ಬಿದ್ದಿದ್ದರು. ಅಷ್ಟೇ ಅಲ್ಲದೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಜಸ್‌ಪ್ರೀತ್ ಬುಮ್ರಾ ಹೊರಬಿದ್ದಿದ್ದರು. ಇದೀಗ ಅವರು ಐಪಿಎಲ್ ಟೂರ್ನಿಯ ಆರಂಭಿಕ ಮೂರು ಪಂದ್ಯಗಳಿಂದ ಹೊರ ನಡೆದಿದ್ದಾರೆ. ಅಂದ ಹಾಗೆ ಏಪ್ರಿಲ್ ಮೊದಲ ವಾರದಲ್ಲಿ ಅವರು ಲಭ್ಯರಾಗಬಹುದು.
IPL 2025 Points Table: ಆರ್‌ಸಿಬಿ ಅಗ್ರಸ್ಥಾನ ಸುಭದ್ರ; 7ನೇ ಸ್ಥಾನಕ್ಕೆ ಕುಸಿದ ಚೆನ್ನೈ
ಮುಂಬೈ ಇಂಡಿಯನ್ಸ್ ತಂಡದಲ್ಲಿ ಉತ್ತಮ ಬೌಲಿಂಗ್ ವಿಭಾಗವಿದೆ
ಮುಂಬೈ ಇಂಡಿಯನ್ಸ್ ತಂಡದಲ್ಲಿ ಅತ್ಯುತ್ತಮ ಬೌಲಿಂಗ್ ವಿಭಾಗವವಿದೆ. ಯಾವುದೇ ಸ್ಥಳದಲ್ಲಿ ಯಾವುದೇ ತಂಡದ ವಿರುದ್ಧ ದಾಳಿ ನಡೆಸಬಲ್ಲ ಸಾಮರ್ಥ್ಯವನ್ನು ನಮ್ಮ ಬೌಲಿಂಗ್ ವಿಭಾಗ ಹೊಂದಿದೆ ಎಂದು ಮಹೇಲಾ ಜಯವರ್ದನೆ ತಿಳಿಸಿದ್ದಾರೆ.
"ನಮ್ಮಲ್ಲಿ ಅತ್ಯುತ್ತಮ ಅನುಭವ ಹೊಂದಿರುವ ಬೌಲರ್‌ಗಳು ಇದ್ದಾರೆ. ನಾವು ಸ್ಥಳಗಳನ್ನು ಬೇರ್ಪಡಿಸಬೇಕೆಂದು ಭಾವಿಸುತ್ತೇನೆ. ಬೇರೆ ಬೇರೆ ಸ್ಥಳಗಳಲ್ಲಿ
ಹೇಗೆ ಬೌಲ್ ಮಾಡಬೇಕು ಹಾಗೂ ಪಿಚ್ ಹೇಗೆ ವರ್ತಿಸಲಿದೆ ಎಂಬುದು ಅರ್ಥ ಮಾಡಿಕೊಳ್ಳಬಲ್ಲ ಅನುಭವಿಗಳು ನಮ್ಮಲ್ಲಿದ್ದಾರೆ. ವಿಭಿನ್ನ ಸ್ಥಳ ಹಾಗೂ ವಿಭಿನ್ನ ತಂಡಗಳಲ್ಲಿ ವಿಭಿನ್ನ ಸವಾಲುಗಳು ಎದುರಾಗುತ್ತವೆ. ಇದರ ಕಡೆಗೆ ನಾವು ಹೆಚ್ಚಿನ ಗಮನವನ್ನು ಕೇಂದ್ರಿಕರಿಸುತ್ತೇವೆ," ಎಂದು ಶ್ರೀಲಂಕಾ ಮಾಜಿ ನಾಯಕ ಹೇಳಿದ್ದಾರೆ.