Basanagouda Patil Yatnal: ಪ್ರಖರ ಹಿಂದೂ ರಾಷ್ಟ್ರೀಯವಾದದಿಂದ ವಕ್ಫ್ ವಿರುದ್ಧದ ಹೋರಾಟದವರೆಗೆ; ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯ ಹಾದಿ ಹೇಗಿತ್ತು?
ಬಿ.ಎಸ್.ಯಡಿಯೂರಪ್ಪ, ಕುಟುಂಬ ರಾಜಕೀಯದ ವಿರುದ್ಧ ಪದೇ ಪದೆ ವಾಗ್ದಾಳಿ ನಡೆಸುತ್ತ ಬಿಜೆಪಿ (BJP)ಗೆ ತಲೆನೋವಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರ ರಾಜಕೀಯ ಜೀವನ ಹೇಗಿದೆ ಎನ್ನುವ ಸಂಕ್ಷಿಪ್ತ ವಿವರ ಇಲ್ಲಿದೆ.

ಬಸನಗೌಡ ಪಾಟೀಲ್ ಯತ್ನಾಳ್.

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ, ಕುಟುಂಬ ರಾಜಕೀಯದ ವಿರುದ್ಧ ಪದೇ ಪದೆ ವಾಗ್ದಾಳಿ ನಡೆಸುತ್ತ ಬಿಜೆಪಿ (BJP)ಗೆ ತಲೆನೋವಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸುವ ಮೂಲಕ ಹೈಕಮಾಂಡ್ ಶಾಕ್ ನೀಡಿದೆ. ಪ್ರಬಲ ಹಿಂದೂ ರಾಷ್ಟ್ರೀಯವಾಗಿಯಾಗಿದ್ದ ಯತ್ನಾಳ್ ನೇರ ಮಾತುಗಳಿಂದಲೇ ರಾಜಕೀಯದಲ್ಲಿ ಗಮನ ಸೆಳೆದಿದ್ದಾರೆ. ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ನಡೆದ ವಕ್ಫ್ ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಅವರ ರಾಜಕೀಯ ಜೀವನ ಹೇಗಿದೆ ಎನ್ನುವ ಸಂಕ್ಷಿಪ್ತ ವಿವರ ಇಲ್ಲಿದೆ.
ಕರ್ನಾಟಕದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರೆನಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಿತ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾದವರು. ವಿರೋಧಿ ಪಕ್ಷಗಳಲ್ಲದೆ ತಮ್ಮದೇ ಪಕ್ಷವನ್ನು, ಪಕ್ಷದ ನಾಯಕರನ್ನು ಟೀಕಿಸುತ್ತಲೇ ಹೈಕಮಾಂಡ್ ಕೆಂಗಣ್ಣಿಗೂ ಗುರಿಯಾದವರು.
ಈ ಸುದ್ದಿಯನ್ನೂ ಓದಿ: Basanagouda Patil Yatnal: ಸತ್ಯವಂತರಿಗಿದು ಕಾಲವಲ್ಲ, ದುಷ್ಟರಿಗೆ ಸುಭಿಕ್ಷಕಾಲ: ಉಚ್ಚಾಟನೆ ಬಗ್ಗೆ ಯತ್ನಾಳ್ ಕಿಡಿ
ಬಾಲ್ಯ
ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರ ತಾಲೂಕಿನ ಐನಾಪುರದಲ್ಲಿ 1963ರ ಡಿ. 13ರಂದು ಜನಿಸಿದರು. ಅವರ ತಂದೆ ಕೃಷಿಕರಾಗಿದ್ದ ರಾಮನಗೌಡ ಬಾ. ಪಾಟೀಲ್. ಬಿಕಾಂ ಪದವಿ ಪಡೆದಿರುವ ಯತ್ನಾಳ್ ಅವರದ್ದೂ ಮೂಲ ಉದ್ಯೋಗ ವ್ಯವಸಾಯ. ಅವರು ಪಂಚಮಸಾಲಿ ಸಮುದಾಯಕ್ಕೆ ಸೇರಿದವರು.
ರಾಜಕೀಯ ಜೀವನಕ್ಕೆ ಪ್ರವೇಶ
ಯತ್ನಾಳ್ ಅವರು ತಮ್ಮ 31ನೇ ವಯಸ್ಸಿನಲ್ಲಿ ಅಂದರೆ 1994ರಲ್ಲೇ ರಾಜಕೀಯಕ್ಕೆ ಕಾಲಿಟ್ಟರು.
ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಬಿಜಾಪುರ ಕ್ಷೇತ್ರದಿಂದ ಆಯ್ಕೆಯಾದರು. 1999ರ ಲೋಕಸಭಾ ಚುನಾವಣೆಯಲ್ಲಿ ಬಿಜಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. 2004ರಲ್ಲಿ ಲೋಕಸಭೆಗೆ ಮರು ಆಯ್ಕೆಯಾದರು. 2002ರ ಜು. 1ರಿಂದ 2003ರ ಸೆ. 8ರ ತನಕ ಕೇಂದ್ರ ಜವಳಿ ಸಚಿವಾಲಯದ ರಾಜ್ಯ ಸಚಿವರಾದರು. 2003ರ ಸೆ. 8ರಿಂದ 2004ರ ಮೇ 16ರವರೆಗೆ ಕೇಂದ್ರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು.
ಜೆಡಿಎಸ್‌ಗೆ ತೆರಳಿದ್ದ ಬಿಜೆಪಿ ಫೈರ್ ಬ್ರ್ಯಾಂಡ್
ಬಿಜೆಪಿಯ ಫೈರ್ ಬ್ರ್ಯಾಂಡ್ ಎನಿಸಿಕೊಂಡಿದ್ದ ಯತ್ನಾಳ್ ಪಕ್ಷದ ವಿರುದ್ಧ ಅಸಮಾಧಾನಗೊಂಡು 2010ರಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡರು. 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ವಿಜಯಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು. ಅದೇ ವರ್ಷದಲ್ಲಿ ಜೆಡಿಎಸ್ ತೊರೆದು ಮತ್ತೆ ಬಿಜೆಪಿಗೆ ಸೇರ್ಪಡೆಯಾದರು.
ಅಮಾನತು
ಪಕ್ಷದಿಂದ ಉಚ್ಚಾಟನೆಗೊಳ್ಳುವುದು ಯತ್ನಾಳ್ ಅವರಿಗೆ ಹೊಸದೇನೂ ಅಲ್ಲ. 2015ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಿಜಯಪುರ ಸ್ಥಳೀಯ ಪ್ರಾಧಿಕಾರಗಳ ಅವಳಿ ಕ್ಷೇತ್ರಗಳಿಗೆ ಯತ್ನಾಳ್ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದು ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಹೊರ ಹಾಕಲಾಗಿತ್ತು. 2018ರಲ್ಲಿ ಅವರು ಮತ್ತೆ ಬಿಜೆಪಿಗೆ ಸೇರ್ಪಡೆಯಾದರು. ಅದೇ ವರ್ಷ ವಿಜಯಪುರ ಜಿಲ್ಲೆಯಿಂದ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದ ಅವರು ಈ ಬಾರಿಯೂ ಶಾಸಕರಾಗಿ ಮುಂದುವರಿದಿದ್ದಾರೆ.
ವಕ್ಫ್ ವಿರುದ್ಧ ಹೋರಾಟ
ಕಳೆದ ವರ್ಷ ವಕ್ಫ್ ವಿರುದ್ದ ಹೋರಾಟ ಭುಗಿಲೆದ್ದಾಗ ಯತ್ನಾಳ್ ಇದರಲ್ಲಿ ಮುಂಚೂಣಿ ನಾಯಕರಾಗಿ ಕಾಣಿಸಿಕೊಂಡರು. ವಕ್ಫ್ ವಿರುದ್ಧ ಬೀದರ್‌ನಿಂದ ಪಾದಯಾತ್ರೆ ಸಂಘಟಿಸಿ ಗಮನ ಸೆಳೆದಿದ್ದರು. ಅವರು ಸಿದ್ದಪಡಿಸಿದ ವರದಿಗೆ ಬಿಜೆಪಿ ನಾಯಕರು ಮೆಚ್ಚುಗೆ ಸೂಚಿಸಿದ್ದರು.
ಬಸನಗೌಡ ಪಾಟೀಲ್ ಯತ್ನಾಳ್ ಹಲವು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ವಿಜಯಪುರದ ಶ್ರೀ ಸಿದ್ದೇಶ್ವರ ಸಂಸ್ಥೆ, ಶ್ರೀ ಸಿದ್ದೇಶ್ವರ ಸುಪರ್ ಬರ್ಮೂರ್ ಸಂಸ್ಥೆ, ಸಿದ್ದಸಿರಿ, ಸೌಹಾರ್ದ ಸಹಕಾರಿ ಸಂಘ, ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆ, ಗೋ ರಕ್ಷಾ ಕೇಂದ್ರ ಹಾಗೂ ಶಿವಕುಮಾರ ಸ್ವಾಮೀಜಿ ಶುಗರ್ಸ್‌ನ ಸಂಸ್ಥಾಪಕ ಅಧ್ಯಕ್ಷರಾಗಿಯೂ ಗುರುತಿಸಿಕೊಂಡಿದ್ದಾರೆ.
ವಿವಾದಾತ್ಮಕ ಹೇಳಿಕೆ
2023ರಲ್ಲಿ ಯತ್ನಾಳ್ ರಾಜ್ಯದ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ತಪ್ಪಿಯೂ ಮುಸ್ಲಿಮರಿಗೆ ಮತ ಹಾಕಬೇಡಿ ಎಂದು ಅವರು ಆಗ್ರಹಿಸಿದ್ದರು. ಇದು ತೀವ್ರ ಚರ್ಚೆ ಹುಟ್ಟು ಹಾಕಿತ್ತು.