Basanagouda Patil Yatnal: ಬಿಎಸ್‌ವೈ ಕುಟುಂಬದಿಂದ ಬಿಜೆಪಿ ಮುಕ್ತವಾದರೆ ಮತ್ತೆ ಪಕ್ಷ ಸೇರುವೆ: ಶಾಸಕ ಯತ್ನಾಳ್
Basanagouda Patil Yatnal: ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರಗೆ ದಮ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆರಿಸಿ ಬರಲಿ. ನಾನೂ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲು ಸಿದ್ಧ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.


ಹುಬ್ಬಳ್ಳಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಹೀಗಾಗಿ ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಸುಳಿವು ನೀಡಿದ್ದ ಯತ್ನಾಳ್ ಇದೀಗ ಬಿಜೆಪಿಗೆ ವಾಪಸ್ ಆಗುವ ಸುಳಿವು ನೀಡಿದ್ದಾರೆ. ಎಲ್ಲಿಯವರೆಗೆ ಒಂದು ಕುಟುಂಬದಿಂದ ಬಿಜೆಪಿ ಮುಕ್ತ ಆಗುವುದಿಲ್ಲವೋ ಅಲ್ಲಿಯವರೆಗೆ ನಾನು ಪಕ್ಷ ಸೇರ್ಪಡೆ ಆಗುವುದಿಲ್ಲ. ಯಡಿಯೂರಪ್ಪ ಕುಟುಂಬದಿಂದ ಮುಕ್ತವಾದ ಮೇಲೆ ನಾನು ಬಿಜೆಪಿಗೆ ಹೋಗುತ್ತೀನಿ. ಒಂದು ದಿನ ಎಲ್ಲರೂ ಹೋಗಲೇಬೇಕು. ಯಾವುದು ಶಾಶ್ವತವಲ್ಲ. ನಾನು ಒಳ್ಳೆಯವನು, ದುಷ್ಟರಿಗೆ ನಾನು ದುಷ್ಟ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮೂರು ಸಾವಿರ ಮಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿರುವ ಅವರು, ಬಿ.ವೈ. ವಿಜಯೇಂದ್ರ ಇನ್ನೊಬ್ಬರ ಭಿಕ್ಷೆ ಮೇಲೆ ಆರಿಸಿ ಬಂದವ. ಆತನಿಗೆ ದಮ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆರಿಸಿ ಬರಲಿ. ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲು ಸಿದ್ಧ. ಕೇವಲ ಭಗವಾಧ್ವಜ ಮೇಲೆ ಆಯ್ಕೆಯಾಗುತ್ತೇನೆ. ನನಗೆ ಮುಸ್ಲಿಮರ ಮತ ಬೇಡ. ವಿಜಯೇದ್ರಗೆ ರಾಜೀನಾಮೆ ಕೊಟ್ಟು ಆರಿಸಿ ಬರುವ ತಾಕತ್ ಇದೆಯಾ ಎಂದು ಸವಾಲು ಹಾಕಿದ್ದಾರೆ.
ವಿಜಯೇಂದ್ರಗೆ ದಮ್ ಇದ್ದರೆ ನನಗೆ ನೇರವಾಗಿ ಮಾತನಾಡಲಿ. ಹಂದಿಗಳ ಕಡೆ ಮಾತನಾಡಿಸಬೇಡ. ಹಂದಿಗಳು ಹೊರಗೆ ಇರಬೇಕು. ಮನೆಯೊಳಗೆ ಕರೆದುಕೊಳ್ಳಬಾರದು. ಸ್ವಾಮಿಯಾಗಿ ಎಸ್‌ಸಿ ಸರ್ಟಿಫಿಕೇಟ್ ತಗೊಂಡಿದ್ದಾನೆ. ನಾಚಿಕೆ ಆಗಲ್ವಾ ಎಂದು ಪರೋಕ್ಷವಾಗಿ ರೇಣುಕಾಚಾರ್ಯಗೆ ತಿವಿದರು.
ನಾನೇನೂ ಬಿಜೆಪಿ ಬಿಟ್ಟಿಲ್ಲ. ಪೂಜ್ಯ ತಂದೆ, ಅವರ ಕಿರಿಯ ಮಗ ಸೇರಿ ಆರು ವರ್ಷ ಪಕ್ಷದಿಂದ ಹೊರಗೆ ಹಾಕಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಇವರೆಲ್ಲ ನನ್ನ ಮನೆಗೆ ಆಶೀರ್ವಾದ ಮಾಡಿ ಎಂದು ಬರುತ್ತಾರೆ ಎಂದರು.
ತಂದೆ ಮತ್ತು ಹಿರಿಯ ಮಗ ಸೇರಿ ಸಂತೋಷ ಲಾಡ್ ಸಿಎಂ ಮಾಡಲು ಹೊರಟಿದ್ದಾರೆ. ಇವರಿಗೇನಾದರೂ ಬುದ್ದಿ ಇದೆಯಾ? ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ತರಬಾರದೆಂದು ಬಯಸಿದ್ದಾರಾ ಎಂದು ಹರಿಹಾಯ್ದ ಅವರು, ಹಿಂದುಗಳು ನನ್ನೊಂದಿಗೆ ಎಲ್ಲಿಯವರೆಗೆ ಬೆನ್ನಿಗೆ ಇರುತ್ತಾರೋ ಅಲ್ಲಿಯವರೆಗೆ ನನಗೆ ಯಾರೂ ಏನು ಮಾಡಲು ಆಗಲ್ಲ. ನನ್ನ ರಾಜಕಾರಣ ಮುಗಿಸಲು ಆಗಲ್ಲ ಎಂದರು.
ಪಂಚಮಸಾಲಿ ಟ್ರಸ್ಟ್‌ನ ಸ್ವಯಂ ಘೋಷಿತ ಅಧ್ಯಕ್ಷ ನನ್ನ ಬಗ್ಗೆ, ಸಮಾಜದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ. ಕೂಡಲ ಸಂಗಮದಲ್ಲಿ ಕಬಳಿಸಿರುವ ಮಠ, ದೇವಸ್ಥಾನ, ಸಮಾಜದ ಆಸ್ತಿ ಬಿಟ್ಟು ಕೊಡಲು ಹೇಳಿ ಆತನಿಗೆ ಎಂದು ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳ ಹೆಸರಲ್ಲಿ ಅಂದಾಜು 16 ಕೋಟಿ ರೂ. ವೆಚ್ಚದಲ್ಲಿ ಆಶ್ರಮ, ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಅದಕ್ಕೆ ಮೂರುಸಾವಿರ ಮಠದ ಶ್ರೀಗಳನ್ನು ಆಹ್ವಾನಿಸಲು ಆಗಮಿಸಿರುವೆ ಎಂದು ಯತ್ನಾಳ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Laxmi Hebbalkar: ಯತ್ನಾಳ್ ಅವರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ಇದಕ್ಕೂ ಮೊದಲು ಯತ್ನಾಳ್ ಅವರು, ಮೂರು ಸಾವಿರ ಮಠದ ಕರ್ತೃ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಶಿವಯೋಗಿಗಳ ಗದ್ದುಗೆಯ ದರ್ಶನ ಪಡೆದರು. ನಂತರ ಶ್ರೀಮಠದ ಪೀಠಾಧಿಪತಿ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆರ್ಶೀವಾದ ಪಡೆದರು.