Belagavi Murder: ಗಂಡನ ಹತ್ಯೆಯನ್ನು ವಿಡಿಯೊ ಕಾಲ್‌ನಲ್ಲಿ ನೋಡಿ ಖುಷಿಪಟ್ಟ ಹೆಂಡತಿ!
Belagavi Murder: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಬಳಿ ಏ. 2ರಂದು ವ್ಯಕ್ತಿಯೊಬ್ಬರ ಕೊಲೆ ನಡೆದಿತ್ತು. ಆದರೆ, ಪರಪುರುಷನ ಸಹವಾಸ ಬಿಡು ಎಂದು ಹೇಳಿದ್ದಕ್ಕೆ ಹೆಂಡತಿಯೇ ಸುಪಾರಿ ನೀಡಿ ಗಂಡನ ಕೊಲೆ ಮಾಡಿಸಿದ್ದಾಳೆ ಎಂಬ ವಿಚಾರ ತನಿಖೆ ವೇಳೆ ಬಹಿರಂಗವಾಗಿದೆ.


ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಬಳಿ ಏ. 2ರಂದು ನಡೆದಿದ್ದ ವ್ಯಕ್ತಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೇರೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯೇ ಸುಪಾರಿ ಕೊಟ್ಟು ಗಂಡನ ಕೊಲೆ (Belagavi Murder) ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶೈಲಾ ಎಂಬ ಮಹಿಳೆ ಪ್ರಿಯಕರ ರುದ್ರಪ್ಪ ಹೊಸೆಟ್ಟಿ ಎಂಬಾತನಿಗೆ ಸುಪಾರಿ ನೀಡಿ ಗಂಡ ಬಲೋಗಿ ಗ್ರಾಮದ ಶಿವನಗೌಡ ಪಾಟೀಲ್ನನ್ನು (43) ಕೊಲೆ ಮಾಡಿಸಿದ್ದಾಳೆ. ಅಷ್ಟೇ ಅಲ್ಲದೇ ಗಂಡನನ್ನು ಕೊಲೆ ಮಾಡುತ್ತಿರುವ ದೃಶ್ಯವನ್ನು ವಿಡಿಯೊ ಕಾಲ್‌ನಲ್ಲಿ ನೋಡಿದ್ದಾಳೆ. ಬಳಿಕ ತನಗೆ ಏನು ತಿಳಿಯದು ಎಂಬಂತೆ ಗಂಡನ ಮೃತದೇಹದ ಮೇಲೆ ಬಿದ್ದು ಗೋಳಾಡಿ ಅತ್ತು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದಳು. ಆದರೆ, ಇದೀಗ ಹೆಂಡತಿಯ ಕಳ್ಳಾಟ ಬಹಿರಂಗವಾಗಿದೆ.
ಪತ್ನಿ ಶೈಲಾ ಫೋನ್ ಪರಿಶೀಲನೆ ಮಾಡಿದಾಗ ಆಕೆ ಸಿಕ್ಕಿಬಿದ್ದಿದ್ದಾಳೆ. ಪರಪುರುಷನ ಸಹವಾಸ ಬಿಡುವಂತೆ ಹೇಳಿದ್ದಕ್ಕೆ ಗಂಡನ ಕಥೆಯನ್ನೇ ಮುಗಿಸಿದ್ದಾಳೆ ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷದಿಂದ ರುದ್ರಪ್ಪ ಹೊಸೆಟ್ಟಿ ಹಾಗೂ ಶೈಲಾ ನಡುವೆ ಅನೈತಿಕ ಸಂಬಂಧ ಇತ್ತು. ಆದರೆ ಈ ಬಗ್ಗೆ ಗಂಡ ಶಿವನಗೌಡನಿಗೆ ಗೊತ್ತಾಗಿ, ಪರಪುರುಷನ ಸಹವಾಸ ಬಿಡು ಎಂದು ತಿಳಿಸಿ ಹೇಳಿದ್ದಾನೆ. ಆದರೆ ಶೈಲಾ ತಾಳಿಕಟ್ಟಿದ ಗಂಡನನ್ನೇ ಬಿಡುತ್ತೇನೆ ಹೊರತು ರುದ್ರಪ್ಪನನ್ನು ಬಿಡಲಾಗಲ್ಲ ಎನ್ನುವ ನಿರ್ಧಾರ ಮಾಡಿ ಶಿವನಗೌಡನನ್ನೇ ಮುಗಿಸಲು ತೀರ್ಮಾನಿಸಿದ್ದಳು.
ಗಂಡನನನ್ನೇ ಕೊಲ್ಲಲು ತೀರ್ಮಾನಿಸಿದ್ದ ಶೈಲಾ, ಪ್ರಿಯಕರ ರುದ್ರಪ್ಪನಿಗೆ ವಿಚಾರ ತಿಳಿಸಿದ್ದಳು. ನಂತರ ಶೈಲಾ ತನ್ನನ್ನು ತವರು ಮನೆಗೆ ಬಿಟ್ಟು ಬರುವಂತೆ ಗಂಡನಿಗೆ ಹೇಳಿದ್ದಳು. ಅದರಂತೆ ಶಿವನಗೌಡ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಏಪ್ರಿಲ್ 2ರಂದು ಅಲ್ಲಿಂದ ವಾಪಸ್ ಆಗುತ್ತಿದ್ದಾಗ ಶಿವನಗೌಡನ ತಲೆ ಮೇಲೆ ರುದ್ರಪ್ಪ ಹೊಸೆಟ್ಟಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಈ ವೇಳೆ ಹೆಂಡತಿ ಶೈಲಾ ವಿಡಿಯೊ ಕಾಲ್‌ನಲ್ಲಿ ಗಂಡ ಸಾಯುವುದನ್ನು ಕಣ್ಣಾರೆ ನೋಡಿ ಖುಷಿಪಟ್ಟಿದ್ದಾಳೆ.
ಈ ಸುದ್ದಿಯನ್ನೂ ಓದಿ | Road Accident: ಕಲಬುರಗಿಯಲ್ಲಿ ಘೋರ ಅಪಘಾತ, ಲಾರಿಗೆ ಮ್ಯಾಕ್ಸಿಕ್ಯಾಬ್ ಡಿಕ್ಕಿಯಾಗಿ ಐವರು ಸಾವು
ಏಪ್ರಿಲ್ 2ರಂದು ಶಿವನಗೌಡ ಕೊಲೆಯಾದ ಬಳಿಕ ಶೈಲಾ ಗೋಳಾಡಿ ಕಣ್ಣೀರಿಟ್ಟಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಖಾನಾಪುರ ಠಾಣೆ ಪೊಲೀಸರು, ಶೈಲಾಳ ಫೋನ್ ತೆಗೆದುಕೊಂಡು ಕಾಲ್ ಹಿಸ್ಟರಿ ಪರಿಶೀಲನೆ ಮಾಡಿದಾಗ, ಶೈಲಾ ಹಾಗೂ ರುದ್ರಪ್ಪನ ಗುಟ್ಟು ರಟ್ಟಾಗಿದೆ. ಬಳಿಕ ಪೊಲೀಸರು ಶೈಲಾಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳೊಡಿಸಿದಾಗ ಸತ್ಯಾಂಶ ಹೊರಬಿದ್ದಿದೆ.
ನಡುಬೀದಿಯಲ್ಲೇ ಕತ್ತು ಕೊಯ್ದು ಪತ್ನಿಯ ಕೊಲೆ ಮಾಡಿದ ಪತಿ
ಬೆಂಗಳೂರು: ಬೆಂಗಳೂರಿನಲ್ಲಿ (Bengaluru crime news) ಮತ್ತೊಂದು ಬರ್ಬರ ಕೃತ್ಯ ನಡೆದಿದೆ. ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪಾತಕಿ ಗಂಡನೊಬ್ಬ (Husband) ಪತ್ನಿಯನ್ನು (wife) ನಡು ರಸ್ತೆಯಲ್ಲೇ ಕತ್ತು ಕೊಯ್ದು ಅಮಾನುಷವಾಗಿ ಹತ್ಯೆ (Murder case) ಮಾಡಿದ್ದಾನೆ. ಬೆಂಗಳೂರಿನ ದೊಡ್ಡ ತೋಗೂರು ಬಳಿಯ ಪ್ರಗತಿ ನಗರದಲ್ಲಿ ನಡುರಸ್ತೆಯಲ್ಲೇ ಪತ್ನಿಯ ಕತ್ತು ಕೊಯ್ದು ಪತಿ ಹತ್ಯೆ ಮಾಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮೂಲದ ಶಾರದಾ (35) ಹತ್ಯೆಯಾದ ಮಹಿಳೆ.
ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿ ಪತ್ನಿಗೆ ನಿತ್ಯ ಜಗಳವಾಗುತ್ತಿತ್ತು ಎನ್ನಲಾಗಿದೆ. ಶುಕ್ರವಾರ ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪತ್ನಿಯನ್ನು ಪತಿ ಹತ್ಯೆ ಮಾಡಿದ್ದಾನೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.