Viral Video: ಮಹಿಳೆಯ ಕೈಯಲ್ಲಿದ್ದ ಶ್ವಾನ ಕಸಿದು ಎಸ್ಕೇಪ್ ಆದ ಕಿರಾತಕರು! ಶಾಕಿಂಗ್ ವಿಡಿಯೊ ವೈರಲ್
ಬೆಂಗಳೂರಿನ ಜಯನಗರದಲ್ಲಿ ಮಹಿಳೆಯೊಬ್ಬಳು ನಿರ್ಜನ ಪ್ರದೇಶದಲ್ಲಿ ಸಾಕುನಾಯಿಯೊಂದಿಗೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ನಾಯಿಯನ್ನು ಅವಳಿಂದ ಕಿತ್ತುಕೊಂಡು ಹೋದ ಘಟನೆ ನಡೆದಿದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಬೆಂಗಳೂರು: ಕಳ್ಳರು ಚಿನ್ನ, ಹಣದಂತಹ ಅಮೂಲ್ಯವಾದ ವಸ್ತುಗಳನ್ನು ಕಳ್ಳತನ ಮಾಡುವುದನ್ನು ನಾವು ಕೇಳಿರುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕಳ್ಳರು ನಾಯಿ, ಪಾರಿವಾಳದಂತಹ ಪ್ರಾಣಿಪಕ್ಷಿಗಳನ್ನು ಕಳ್ಳತನ ಮಾಡಿದ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಿವೆ. ಇತ್ತೀಚೆಗೆ ಮಹಿಳೆಯೊಬ್ಬಳು ಸಾಕುನಾಯಿಯೊಂದಿಗೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ನಾಯಿಯನ್ನು ಅವಳಿಂದ ಕಿತ್ತುಕೊಂಡು ಹೋದ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಈ ದೃಶ್ಯಗಳು ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊ ದೃಶ್ಯಾವಳಿಗಳಲ್ಲಿ ಮುಖಕ್ಕೆ ಹೆಲ್ಮೆಟ್ ಧರಿಸಿದ ದುಷ್ಕರ್ಮಿಗಳಿಬ್ಬರು ಬೈಕಿನಲ್ಲಿ ಬಂದು ಮಹಿಳೆಯ ಕೈಯಲ್ಲಿದ್ದ ನಾಯಿಯ ಹಗ್ಗವನ್ನು ಹಿಡಿದು ಎಳೆಯುವುದು ಸೆರೆಯಾಗಿದೆ. ಅವರು ನಾಯಿಯನ್ನು ಅದರ ಹಗ್ಗದ ಜೊತೆಗೆ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ನಂತರ ಅದನ್ನು ಎತ್ತಿಕೊಂಡು ಹೋಗಿದ್ದಾರೆ. ಮಹಿಳೆ ಕೂಡ ಅವರ ಹಿಂದೆ ಓಡಿದ್ದಾಳೆ. ಈ ದೃಶ್ಯ ಹತ್ತಿರದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವರದಿಗಳ ಪ್ರಕಾರ, ಫೆಬ್ರವರಿ 12 ರಂದು ಮಧುರಾ ಎಂಬ ನಿವಾಸಿ ತನ್ನ ನಾಯಿ 'ರಿಚಿ'ಯನ್ನು ಕರೆದುಕೊಂಡು ನಡೆದು ನಿರ್ಜನ ಪ್ರದೇಶದಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ, ಹೆಲ್ಮೆಟ್ ಧರಿಸಿದ ಇಬ್ಬರು ಬೈಕ್‍ನಲ್ಲಿ ಬಂದು ಅವಳ ಪಕ್ಕದಲ್ಲಿ ಹಾದುಹೋಗುವಾಗ ನಾಯಿಯ ಹಗ್ಗವನ್ನು ಕಸಿದುಕೊಂಡು ವೇಗವಾಗಿ ಹೋಗಿದ್ದಾರೆ. ಮಹಿಳೆ ಅವರನ್ನು ಹಿಡಿಯಲು ಹಿಂದೆ ಓಡಿದ್ದಾಳೆ. ಆದರೆ ಅವರು ತಪ್ಪಿಸಿಕೊಂಡು ಓಡಿದ್ದಾರಂತೆ.
ಮಧುರಾ ನಾಯಿಯನ್ನು ಮರಳಿ ಪಡೆಯಲು ಸಹಾಯಕ್ಕಾಗಿ ಹತ್ತಿರದ ಪೊಲೀಸ್ ಠಾಣೆಗೆ ಹೋಗಿದ್ದಾಳೆ. ತಿಲಕ್‍ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾಳೆ. ಮತ್ತು ಆಕೆಯ ನಾಯಿ 10,000 ರೂ. ಮೌಲ್ಯದು ಎಂಬುದಾಗಿ ತಿಳಿಸಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರಂತೆ. ಸಾಕು ನಾಯಿಗಳನ್ನು ಕಳ್ಳತನ ಮಾಡುವ ಪ್ರಕರಣ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಕೊಲೊರಾಡೊದ ಸೆಂಟಿನಿಯಲ್‍ನಲ್ಲಿರುವ ಪೆಟ್ ಅನಿಮಲ್ ಶಾಪ್‍ನಲ್ಲಿ ಕಳ್ಳರು ಬೆಲೆಬಾಳುವ ನಾಯಿಮರಿಗಳನ್ನು ಕದಿಯಲು ಬಂದು ಅಲ್ಲಿ ನಾಟಕೀಯವಾಗಿ ವರ್ತಿಸಿದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಅಜ್ಜಿಯ ಹಲ್ಲಿನ ಸೆಟ್ ಹುಡುಕಿ ಕೊಟ್ಟ ಶ್ವಾನವನ್ನು ನೋಡಿ ಜನರು ನಕ್ಕಿದ್ದೇಕೆ? ಈ ವಿಡಿಯೊ ನೋಡಿದ್ರೆ ನೀವು ಕೂಡ ನಗ್ತೀರಿ!
ವಿಡಿಯೊದಲ್ಲಿ ಕಳ್ಳತನ ಮಾಡಲು ಬಂದ ಇಬ್ಬರು ಕಳ್ಳರಲ್ಲಿ ಒಬ್ಬ ತನಗೆ ತಲೆಸುತ್ತು ಬಂದಂತೆ ಕೆಳಕ್ಕೆ ಬಿದ್ದು ಅಲ್ಲಿದ್ದ ಗ್ರಾಹಕರು ಮತ್ತು ಮಾಲೀಕರನ್ನು ತನ್ನತ್ತ ಸೆಳೆಯುವ ತಂತ್ರ ಮಾಡಿದ. ಆತನ ನಾಟಕ ಶುರುವಾಗುತ್ತಿದ್ದಂತೆ ಇತ್ತ ಇನ್ನೊಬ್ಬ ಕಳ್ಳ ಬುಲ್‌ಡಾಗ್ ನಾಯಿಮರಿಗಳನ್ನು ಇರಿಸಲಾಗಿದ್ದ ಸೆಲ್ ಬಳಿ ಬಂದು ಎರಡು ನಾಯಿಮರಿಗಳನ್ನು ತೆಗೆದುಕೊಂಡು ಹೊರಗೆ ಓಡಲು ಪ್ರಯತ್ನಿಸಿದ್ದಾನೆ. ಆಗ ಅಲ್ಲಿದ್ದ ಮಹಿಳೆಯೊಬ್ಬಳು ಆತನನ್ನು ತಡೆದಿದ್ದಾಳೆ. ಆದರೂ ಆತ ಅವುಗಳನ್ನು ತೆಗೆದುಕೊಂಡು ಓಡಿಹೋಗಿದ್ದಾನೆ. ಪೆಟ್ಸ್ ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾ ಕಳ್ಳತನವನ್ನು ದಾಖಲಾಗಿದ್ದು, ಆ ಮೂಲಕ ಪೊಲೀಸರು ಕಳ್ಳರನ್ನು ಪತ್ತೆಮಾಡಿ ಬಂಧಿಸಿದ್ದಾರೆ.