Self Harming: ಅಂಗವಿಕಲ ಮಕ್ಕಳ ಜೊತೆಗೆ ತಾಯಿ ಆತ್ಮಹತ್ಯೆ
ಪತಿ ಮನೆಯಲ್ಲಿ ಇಲ್ಲದಿದ್ದಾಗ ತಾಯಿ ಹಾಗೂ ಮಕ್ಕಳಿಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ಮಕ್ಕಳ ಅಂಗವಿಕಲರಾಗಿರುವ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅದಲಗೆರೆ ಗ್ರಾಮದಲ್ಲಿ ಈ ದುರಂತ ನಡೆದಿದೆ.

ಸಾಂದರ್ಭಿಕ ಚಿತ್ರ

ತುಮಕೂರು: ತುಮಕೂರಿನಲ್ಲಿ (Tumakuru) ಮಹಿಳೆಯೊಬ್ಬರು (Woman) ತನ್ನಿಬ್ಬರು ಮಕ್ಕಳ ಜತೆ ಆತ್ಮಹತ್ಯೆಗೆ (Self harming) ಶರಣಾಗಿದ್ದಾರೆ. ತಾಯಿ ವಿಜಯಲಕ್ಷ್ಮೀ (45), ಮಗಳು ಚೂಡಾಮಣಿ (23), ಪುತ್ರ ನರಸಿಂಹರಾಜು (14) ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅದಲಗೆರೆ ಗ್ರಾಮದಲ್ಲಿ ಈ ದುರಂತ ನಡೆದಿದೆ. ಪತಿ ಮಹದೇವಯ್ಯ ಮನೆಯಲ್ಲಿ ಇಲ್ಲದಿದ್ದಾಗ ಮೂವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ಮಕ್ಕಳ ಅಂಗವಿಕಲರಾಗಿರುವ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬರಬೇಕಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚೇಳೂರು ಠಾಣೆ ಪೊಲೀಸರ ಭೇಟಿ ತನಿಖೆ ಕೈಗೊಂಡಿದ್ದಾರೆ. ಇದೇ ರೀತಿಯ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಮೊನ್ನೆ ಕಲಬುರಗಿಯಲ್ಲಿ ಸರಕಾರಿ ಅಧಿಕಾರಿಯೊಬ್ಬ ಇದೇ ರೀತಿ ಕುಟುಂಬದವರನ್ನೆಲ್ಲ ಕೊಂದು ತಾನೂ ಪ್ರಾಣ ತೆಗೆದುಕೊಂಡಿದ್ದ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ, ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಸಂತೋಷ್ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಕ್ಯಾಬ್ ಡ್ರೈವರ್ ಒಬ್ಬಾತ ಹೆಂಡತಿ ಮೇಲಿನ ಸಿಟ್ಟಿಗೆ ಅತ್ತೆ, ನಾದಿನಿ ಮತ್ತು ಮಗಳನ್ನು ಗುಂಡು ಹಾರಿಸಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಾರದ ಹಿಂದೆ ಕೊಡಗಿನಲ್ಲಿ ಪತ್ನಿ ದೂರಾದ ಸಿಟ್ಟಿಗೆ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ ಇಡೀ ಕುಟುಂಬವನ್ನು ಬಲಿ ಪಡೆದು ಕೇರಳಕ್ಕೆ ಪರಾರಿಯಾಗಿದ್ದ.
ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ- ಮಗು ಸಾವು
ಚಿತ್ರದುರ್ಗ: ಚಿತ್ರದುರ್ಗದ ತುಮಕೂರ್ಲಹಳ್ಳಿಯ ಮನೆಯೊಂದರಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ವಿದ್ಯುತ್ ತಂತಿ ಸ್ಪರ್ಶಿಸಿದ್ದ ಕಂದನ ರಕ್ಷಣೆಗೆ ತೆರಳಿದ ತಾಯಿಯೂ ಸಹ ದುರಂತ ಸಾವು ಕಂಡಿದ್ದಾಳೆ. ತಾಯಿ ಬೋರಮ್ಮ(25), ಪುತ್ರ ಪ್ರಣೀತ್(3) ಮೃತ ದುರ್ದೈವಿಗಳು. ಮೊದಲಿಗೆ ಮಗುವಿಗೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ಅದನ್ನು ನೋಡಿ ರಕ್ಷಣೆಗೆಂದು ಹೋಗಿದ್ದಾಗ ತಾಯಿ ಬೋರಮ್ಮಳಿಗೂ ಸಹ ವಿದ್ಯುತ್ ಸ್ಪರ್ಶಿಸಿದೆ. ಇದರಿಂದ ತಾಯಿ- ಮಗ ಮೃತಪಟ್ಟಿದ್ದಾರೆ. ಈ ಬಗ್ಗೆ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇದನ್ನೂ ಓದಿ: Road Accident: ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ; ನಾಲ್ವರ ಸಾವು