ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Mahashivratri 2025: ಕಲ್ಪತರು ನಾಡಿನಲ್ಲಿ ಮೊಳಗಿದ ಶಿವ ನಾಮಸ್ಮರಣೆ; ಭಕ್ತರಿಂದ ತುಂಬಿ ತುಳುಕಿದ ಶಿವಾಲಯಗಳು

Mahashivratri 2025: ತುಮಕೂರಿನ ಶೀವ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಅಭಿಷೇಕ, ವಿಶೇಷ ಪೂಜೆಗಳೊಂದಿಗೆ ಶಿವನಾಮ ಸ್ಮರಣೆ ಮೊಳಗಿದವು. ಜಿಲ್ಲೆಯಾದ್ಯಂತ ಶಿವನ ದೇವಾಲಯಗಳು ಸೇರಿ ವಿವಿಧ ದೇವಾಲಯಗಳಲ್ಲಿ ಸಾವಿರಾರು ಭಕ್ತರು ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರಿಂದ ದೇಗುಲಗಳು ಭಕ್ತರಿಂದ ತುಂಬಿ ತುಳುಕಿದವು.

ಕಲ್ಪತರು ನಾಡಿನಲ್ಲಿ ಭಕ್ತರಿಂದ ತುಂಬಿ ತುಳುಕಿದ ಶಿವಾಲಯಗಳು

Profile Prabhakara R Feb 26, 2025 11:02 PM

ತುಮಕೂರು: ಶಿವನನ್ನು ಆರಾಧಿಸುವ ಹಾಗೂ ಉಪವಾಸ ವ್ರತದ ಪವಿತ್ರ ಹಬ್ಬವಾದ ಮಹಾಶಿವರಾತ್ರಿಯನ್ನು (Mahashivratri 2025) ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಯಿಂದ ಬುಧವಾರ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಶಿವನ ದೇವಾಲಯಗಳು ಸೇರಿ ವಿವಿಧ ದೇವಾಲಯಗಳಲ್ಲಿ ಇಂದು ಮುಂಜಾನೆಯಿಂದಲೇ ಅಭಿಷೇಕ, ವಿಶೇಷ ಧಾರ್ಮಿಕ ಪೂಜೆಗಳೊಂದಿಗೆ ಶಿವನಾಮ ಸ್ಮರಣೆ ಮೊಳಗಿದವು. ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬದ ವಿಶೇಷವಾಗಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನೆರವೇರಿದವು. ಸಾವಿರಾರು ಭಕ್ತರು ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರಿಂದ ಶಿವಾಲಯಗಳು ಭಕ್ತರಿಂದ ತುಂಬಿ ತುಳುಕಿದವು.

Mahashivratri 2025 (6)

ನಗರದ ಬಿ.ಎಚ್. ರಸ್ತೆಯ ಭದ್ರಮ್ಮ ವೃತ್ತದಲ್ಲಿರುವ ಸೋಮೇಶ್ವರಸ್ವಾಮಿ ದೇವಾಲಯ, ಹೊರಪೇಟೆಯಲ್ಲಿರುವ ನೀಲಕಂಠೇಶ್ವರ ಸ್ವಾಮಿ ದೇವಾಲಯ, ಕುಣಿಗಲ್ ರಸ್ತೆಯಲ್ಲಿರುವ ಮಾರುತಿ ಬನಶಂಕರಿ ಮತ್ತು ಬಸವಣ್ಣ ದೇವಾಲಯ, ಅಮರಜ್ಯೋತಿನಗರದ ಸಾಯಿಬಾಬ ದೇವಾಲಯದ ಆವರಣದಲ್ಲಿರುವ ಶಿವಲಿಂಗ, ಟಿಜಿಎಂಸಿ ಬ್ಯಾಂಕ್ ಆವರಣದ ಲಕ್ಷ್ಮೀ ದೇವಾಲಯ, ಹೊರಪೇಟೆಯ ಕಾಶಿ ವಿಶ್ವನಾಥ ದೇವಾಲಯ, ಸಿದ್ದರಾಮೇಶ್ವರ ಬಡಾವಣೆಯ ಈಶ್ವರ ದೇವಾಲಯ, ಸರಸ್ವತಿಪುರಂ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ಇಂದು ನಸುಕಿನಿಂದಲೇ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಕುಟುಂಬ ಸಮೇತರಾಗಿ ತೆರಳಿ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ನಗರದ ಹೊರಪೇಟೆಯ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಮುಂಜಾನೆಯಿಂದ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿತು. ಬಿ.ಹೆಚ್. ರಸ್ತೆಯ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿ ಭಕ್ತರಿಗಾಗಿ ವಿಶೇಷವಾಗಿ ಶಿವನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Mahashivratri 2025 (7)

ಭದ್ರಮ್ಮ ವೃತ್ತದಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಭಕ್ತರ ದಂಡು ಕಂಡು ಬಂದಿದ್ದು, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತರು ಸರದಿಯ ಸಾಲಿನಲ್ಲಿ ನಿಂತು ಶ್ರೀಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.

ಅಮರಜ್ಯೋತಿನಗರ ಸಾಯಿಬಾಬ ದೇವಾಲಯದ ಆವರಣದಲ್ಲಿರುವ ಶಿವಲಿಂಗಕ್ಕೆ ಭಕ್ತಾದಿಗಳು ಮುಂಜಾನೆಯಿಂದಲೇ ಹಾಲಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಕ್ಯಾತ್ಸಂದ್ರದ ಹರಿಹರ ಕ್ಷೇತ್ರವೆಂದೇ ಪ್ರಸಿದ್ಧವಾದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದಲ್ಲಿ ನಾಲ್ಕು ಯಾಮದ ಪೂಜೆ, ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು.

ತಾಲೂಕಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿರುವ ಶ್ರೀ ವಿದ್ಯಾಶಂಕರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾದಿಗಳು ನೆರವೇರಿದವು. ಬೆಳಗ್ಗೆ 6.30 ರಿಂದಲೇ ವಿಶೇಷ ಪೂಜಾದಿಗಳು ನೆರವೇರಿತು.

ಶ್ರೀರಾಮನಗರದ ಅಮಾನಿಕೆರೆ ಸಮೀಪವಿರುವ ಅಖಿಲ ಉಪ್ಪಾರ ಸಂಘದ ವಿದ್ಯಾಭಿವೃದ್ಧಿ ಕಟ್ಟಡದ ಮೇಲ್ಭಾಗದಲ್ಲಿರುವ ಶಿವಲಿಂಗ ಮೂರ್ತಿಗೆ ಹಾಗೂ ಕುಣಿಗಲ್ ರಸ್ತೆಯಲ್ಲಿರುವ ಮಾರುತಿ ಬನಶಂಕರಿಯ ಮತ್ತು ಬಸವಣ್ಣ ದೇವಾಲಯದ ಮೇಲ್ಭಾಗದಲ್ಲಿರುವ ಶಿವನ ಬೃಹತ್ ಮೂರ್ತಿಗೆ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಈ ಎರಡು ಶಿವನಮೂರ್ತಿಗಳಿಗೆ ಪೂಜೆ ಸಲ್ಲಿಸಿ ಕಣ್ತುಂಬಿಕೊಂಡರು.

ಮುಂಜಾನೆಯಿಂದಲೇ ನಗರದ ಎಲ್ಲ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಕ್ತಾಧಿಗಳಿಂದ ಶಿವನಾಮ ಸ್ಮರಣೆ, ಭಜನೆಗಳು ಮೊಳಗಿದವು. ರಾತ್ರಿ ಶಿವನ ದೇವಾಲಯಗಳಲ್ಲಿ ಭಜನೆ, ಹರಿಕಥೆ, ದೇವರನಾಮಗಳು ನಡೆಯಿತು.



ಚಂದ್ರಗುತ್ತಿಯ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ

Mahashivratri 2025 (5)

ಸೊರಬ: ತಾಲೂಕಿನ ಚಂದ್ರಗುತ್ತಿಯ ಈಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೇವರಿಗೆ ರುದ್ರಾಭಿಷೇಕ ಮತ್ತು ಬಿಲ್ವಾರ್ಚನೆ ಸೇರಿ ವಿವಿಧ ಪೂಜಾ ಕೈಂಕರ್ಯಗಳು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬುಧವಾರ ವಿಜೃಂಭಣೆಯಿಂದ ಜರುಗಿದವು.

ಚಂದ್ರಗುತ್ತಿ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿ ಶ್ರೀ ಈಶ್ವರ ದೇವರ ದರ್ಶನಾಶೀರ್ವಾದ ಪಡೆದರು. ರುದ್ರಾಭಿಷೇಕ ನಂತರ ಮಹಾದೇವನಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ತೀರ್ಥಪ್ರಸಾದ ವಿತರಿಸಲಾಯಿತು.

ಗಿರೀಶ್ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜೆ ವಿಧಿ ವಿಧಾನಗಳು ನೆರವೇರಿದವು.ವಿಶೇಷವಾಗಿ ಶಿವನಿಗೆ ಬಿಲ್ವ ಪತ್ರೆ, ಕುಂಸಲ ಹೂವು, ಮುತ್ಲು ಹೂವು, ಕಣಗಾಲ ಹೂವುಗಳನ್ನು ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಶಿವನನ್ನು ಭಕ್ತರು ಪ್ರಾರ್ಥಿಸಿದರು.



ಹಬ್ಬದ ಹಿನ್ನೆಲೆ ಶಿವನ ದೇವಾಲಯಗಳಿಗೆ ಭಕ್ತ ಸಮೂಹವೇ ಹರಿದು ಬಂದಿತ್ತು. ಗ್ರಾಮದ ರಥ ಬೀದಿಯಲ್ಲಿರುವ ಶಿವನ ದೇವಸ್ಥಾನ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿನ ಶಿವಾಲಯಗಳಲ್ಲಿಯೂ ವಿಶೇಷ ಪೂಜೆ ನಡೆದವು. ಶ್ರೀ ರೇಣುಕಾಂಬ ದೇವಸ್ಥಾನದ ಆವರಣದಲ್ಲಿರುವ ಕಾಲಭೈರವ , ತ್ರಿಶೂಲದ ಭೈರಪ್ಪ, ದೇವರುಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಉಪವಾಸ ವೃತ ಆಚರಿಸಿದ ಭಕ್ತರು ಶಿವನ ದೇವಾಲಯದಲ್ಲಿ ಜಾಗರಣೆ ಮತ್ತು ಭಜನೆ ಕಾರ್ಯಕ್ರಮವನ್ನು ನಡೆಸಿ ಶಿವ ನಾಮ ಜಪಿಸುತ್ತಾ ಭಕ್ತಿಯಲ್ಲಿ ಮಿಂದೆದ್ದರು.