ENG vs AFG: ಅಫ್ಘಾನಿಸ್ತಾನದ ಬ್ಯಾಟಿಂಗ್ ಅಬ್ಬರದ ಎದುರು ಸೋತು ಶರಣಾದ ಇಂಗ್ಲೆಂಡ್
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ 8ನೇ ಪಂದ್ಯದಲ್ಲಿ ಅಚ್ಚರಿಯ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ತಂಡವು ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕಿದೆ. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 50 ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 325 ರನ್ ಪೇರಿತು. ಈ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ 49.5 ಓವರ್‌ನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 317 ರನ್ ಪೇರಿಸಲಷ್ಟೇ ಶಕ್ತವಾಯಿತು.


ಲಾಹೋರ್: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy 2025) ಟೂರ್ನಿಯ 8ನೇ ಪಂದ್ಯದಲ್ಲಿ ಅಚ್ಚರಿಯ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ತಂಡವು ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕಿದೆ (ENG vs AFG). ಕೊನೆಯವರೆಗೂ ಕೂತೂಹಲ ಮೂಡಿಸಿದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 50 ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 325 ರನ್ ಪೇರಿತು. ಈ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ಜೋ ರೂಟ್ (Joe Root) ಅವರ ಶತಕದ ಹೊರತಾಗಿಯೂ 49.5 ಓವರ್‌ನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 317 ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ಮೂಲಕ ಸೆಮಿಫೈನಲ್ ತಲುಪಬೇಕಾದರೆ ಗೆಲ್ಲಲೇ ಬೇಕಾದ ಪಂದ್ಯವನ್ನು ಇಂಗ್ಲೆಂಡ್ ಕೈಚೆಲ್ಲಿದೆ.
ಗಮನ ಸೆಳೆದ ಇಬ್ರಾಹಿಂ ಝದ್ರಾನ್
ಅಫ್ಘಾನಿಸ್ತಾನ ತಂಡದ ಇನ್ನಿಂಗ್ಸ್‌ನಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ಇಬ್ರಾಹಿಂ ಝದ್ರಾನ್ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿ. ಅವರು 146 ಎಸೆತದಲ್ಲಿ 177 ರನ್‌ಗಳನ್ನು ಸಿಡಿಸಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಇದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಬ್ಯಾಟರ್‌ನ ಅತ್ಯಧಿಕ ವೈಯಕ್ತಿಕ ಮೊತ್ತ ಎನಿಸಿಕೊಂಡಿದೆ. ಇದು 6 ಸಿಕ್ಸರ್ ಮತ್ತು 12 ಫೋರ್ ಒಳಗೊಂಡಿತ್ತು. ಇನ್ನು ಕೊನೆಯ ಹಂತದಲ್ಲಿ ಇವರ ಜತೆ ಸೇರಿದ್ದ ಆಲ್‌ರೌಂಡರ್ ಮೊಹಮ್ಮದ್ ನಬಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸಿದರು. ಇವರು 24 ಎಸೆತ ಎದುರಿಸಿ 40 ರನ್ ಚಚ್ಚಿ ಸ್ಕೋರ್ ಅನ್ನು 300ರ ಗಡಿ ದಾಟಿಸಿ ಇಂಗ್ಲೆಂಡ್‌ಗೆ 326 ರನ್‌ಗಳ ಬೃಹತ್ ಗುರಿ ನೀಡಲು ನೆರವಾದರು.
A knock that went straight into the #ChampionsTrophy record books from Ibrahim Zadran 👏#AFGvENG ✍️: https://t.co/6IQekpiWp0 pic.twitter.com/Y4W8lJxifW
— ICC (@ICC) February 26, 2025
ಮಾರಕ ದಾಳಿ ಸಂಘಟಿಸಿದ ಜೋಫ್ರಾ ಆರ್ಚರ್
ಇನ್ನು ವಿಶ್ವದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಜೋಫ್ರಾ ಆರ್ಚರ್ ಮಾರಕ ಬೌಲಿಂಗ್ ನಡೆಸಿ 64 ರನ್ ನೀಡಿ 3 ವಿಕೆಟ್ ಕಿತ್ತರು. ಲಿವಿಂಗ್‌ಸ್ಟೋನ್ 2 ವಿಕೆಟ್ ಬೀಳಿಸಿ ಗಮನ ಸೆಳೆದರು.
ಈ ಸುದ್ದಿಯನ್ನೂ ಓದಿ: ENG vs AFG: ಜೋ ರೂಟ್‌ಗೆ 24 ರನ್, ಜೋಫ್ರಾ ಆರ್ಚರ್‌ಗೆ 20 ರನ್ ಬಾರಿಸಿದ ಆಫ್ಘನ್ ಬ್ಯಾಟರ್ಸ್!
ಜೋ ರೂಟ್ ಶತಕ
ಬೃಹತ್ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್‌ನ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. 133 ರನ್‌ಗೆ 4 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದ್ದ ಇಂಗ್ಲೆಂಡ್ ಅನ್ನು ಮೇಲೆಕ್ಕೆತ್ತಿದ್ದು ಜೋ ರೈಟ್ ಅವರ ಸ್ಫೋಟಕ ಬ್ಯಾಟಿಂಗ್. ಅದಾಗ್ಯೂ ಅವರಿಗೆ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. 111 ಬಾಲ್ ಎದುರಿಸಿ 120 ರನ್ ಗಳಿಸಿದ ಅವರು ಅಜ್ಮತುಲ್ಲಾ ಒಮರ್ಜೈ ಎಸೆತದಲ್ಲಿ ಗುರ್ಬಾಜ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸುವುದರೊಂದಿಗೆ ಇಂಗ್ಲೆಂಡ್ ಬಳಿ ಇದ್ದ ಮ್ಯಾಚ್ ಅನ್ನು ಅಫ್ಘಾನಿಸ್ತಾನ ತನ್ನದಾಗಿಸಿಕೊಂಡಿತು. ಇನ್ನು ನಾಯಕ ಜೋಸ್ ಬಟ್ಲರ್ 38 ರನ್ ಗಳಿಸಿ ಹೋರಾಟದ ಸೂಚನೆ ನೀಡಿದರಾದರೂ ಅಷ್ಟರಲ್ಲಿ ರನ್ ಔಟ್‌ಗೆ ಬಲಿಯಾದರು. ಅಂತಿಮವಾಗಿ ಇಂಗ್ಲೆಂಡ್ 50 ಓವರ್‌ನಲ್ಲಿ ರನ್ ಗಳಿಸಿ ಸೋಲಿಗೆ ಶರಣಾಯಿತು. ಅಫ್ಘಾನಿಸ್ತಾನ ಪರ ಅಜ್ಮತುಲ್ಲಾ ಒಮರ್ಜೈ 5 ಮತ್ತು ಮೋಹಮ್ಮದ್ ನಬಿ 2 ಉರುಳಿಸಿದರು.