ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಖತರ್ನಾಕ್‌ ಪ್ಲ್ಯಾನ್‌ ಮಾಡಿ ಬರೋಬ್ಬರಿ 7ಲಕ್ಷ ಮೌಲ್ಯದ ನಾಯಿ ಮರಿಗಳನ್ನು ಕದ್ದೊಯ್ದ ಕಿಲಾಡಿ ಕಳ್ಳರು; ವಿಡಿಯೊ ನೋಡಿ

ಕೊಲೊರಾಡೊದ ಸೆಂಟಿನಿಯಲ್‍ನಲ್ಲಿರುವ ಪೆಟ್‍ ಸ್ಟೋರ್‌ನಲ್ಲಿ ನಾಯಿಮರಿಗಳನ್ನು ಕಳ್ಳತನ ಮಾಡಲು ಬಂದ ಕಳ್ಳರಿಬ್ಬರು ನಾಟಕವಾಡಿ ಬೆಲೆಬಾಳುವ ನಾಯಿಮರಿಗಳನ್ನು ಕದ್ದಿದ್ದಾರೆ. ಈ ವಿಡಿಯೊ ಸ್ಟೋರ್‌ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ.

ಬರೋಬ್ಬರಿ 7ಲಕ್ಷ ಮೌಲ್ಯದ  ನಾಯಿಮರಿಗಳನ್ನು ಕದ್ದೊಯ್ದ ಖದೀಮರು!

Profile pavithra Feb 26, 2025 4:08 PM

ಇತ್ತೀಚೆಗೆ ಮಧ್ಯರಾತ್ರಿ ವೇಳೆ ಮಹಡಿಯ ಮೇಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಾರಿವಾಳಗಳನ್ನು ಕಳ್ಳರು ಸದ್ದಿಲ್ಲದೇ ಕದ್ದೊಯ್ದ ಘಟನೆಯೊಂದು ನಡೆದಿತ್ತು. ಅದೇ ರೀತಿ ಈಗ ಕೊಲೊರಾಡೊದ ಸೆಂಟಿನಿಯಲ್‍ನಲ್ಲಿರುವ ಪೆಟ್‍ ಸ್ಟೋರ್‌ನಲ್ಲಿ ಕಳ್ಳರಿಬ್ಬರು ದುಬಾರಿ ನಾಯಿಮರಿಗಳನ್ನು ಕದ್ದಿದ್ದಾರೆ. ಕಳ್ಳರಲ್ಲಿ ಒಬ್ಬ ತಲೆಸುತ್ತು ಬಂದಂತೆ ಬಿದ್ದು ಜನರ ಗಮನ ತನ್ನತ್ತ ಸೆಳೆದಿದ್ದಾನೆ. ಆಗ ಆತನ ಜತೆ ಇದ್ದ ಇನ್ನೊಬ್ಬ ಕಳ್ಳ ನಾಯಿ ಮರಿಯನ್ನು ಇರಿಸಲಾದ ಸೆಲ್‍ ಬಳಿ ಹೋಗಿ ಅವುಗಳನ್ನು ಕದ್ದು ಹೊರಗೆ ಓಡಿದ್ದಾನೆ. ಈ ವಿಡಿಯೊ ಸ್ಟೋರ್‌ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

ವೈರಲ್ ವಿಡಿಯೊದಲ್ಲಿ ಕಪ್ಪು ಬಟ್ಟೆ ಧರಿಸಿ ಪೆಟ್ ಸ್ಟೋರ್‌ಗೆ ಬಂದ ಕಿಲಾಡಿ ಕಳ್ಳರಲ್ಲಿ ಒಬ್ಬ ತಲೆ ಸುತ್ತು ಬಂದಂತೆ ಕೆಳಗೆ ಬಿದ್ದಿದ್ದಾನೆ ಆಗ ಅಲ್ಲಿದ್ದ ಜನರೆಲ್ಲರೂ ಏನಾಯಿತು ಎಂದು ಅವನ ಬಳಿ ಓಡಿ ಬಂದಿದ್ದಾರೆ. ಆಗ ಇನ್ನೊಬ್ಬ ಕಳ್ಳ ಬುಲ್‌ಡಾಗ್‌ ನಾಯಿಮರಿಗಳನ್ನು ಇರಿಸಲಾಗಿದ್ದ ಸೆಲ್ ಬಳಿ ಬಂದು ಅದನ್ನು ತೆರೆದು, ಎರಡು ನಾಯಿಮರಿಗಳನ್ನು ಹಿಡಿದುಕೊಂಡು ಹೊರಗೆ ಓಡಿದ್ದಾನೆ. ಇದನ್ನು ನೋಡಿದ ಸ್ಟೋರ್‌ನಲ್ಲಿದ್ದ ಮೂವರು ಮಹಿಳೆಯರು ಅವನನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಆತ ಅವರ ಕೈಗೆ ಸಿಗದೇ ಸುಮಾರು ಏಳು ಲಕ್ಷ ರೂಪಾಯಿ (8,000 ಯುಎಸ್‍ಡಿ) ಮೌಲ್ಯದ ನಾಯಿಮರಿಗಳೊಂದಿಗೆ ಪರಾರಿಯಾಗಿದ್ದಾನೆ. ನಾಯಿಮರಿಗಳು ಕಳ್ಳತನವಾಗಿರುವ ಬಗ್ಗೆ ಸ್ಟೋರ್‌ನ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.

ವರದಿಯ ಪ್ರಕಾರ, ಶಂಕಿತ ತಿಮೋತಿ ಡೇವಿಸ್ (37) ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಾಗೂ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.

ಸಾಕು ಪ್ರಾಣಿ-ಪಕ್ಷಿಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಉತ್ತರ ಪ್ರದೇಶದ ಮೀರತ್‍ನಲ್ಲಿ ಮೊಹಮ್ಮದ್ ಖಯ್ಯುಮ್ ಎಂಬಾತ ಮನೆಯ ಟೆರೇಸ್‍ ಮೇಲೆ ಪಂಜರದಲ್ಲಿ ಸಾಕಿದ 400 ಪಾರಿವಾಳಗಳನ್ನು ಕಳ್ಳರು ಕದ್ದುಕೊಂಡುಹೋಗಿದ್ದರು. ಮೊಘಲ್ ಯುಗದಿಂದಲೂ ಸಾಂಪ್ರದಾಯಿಕ ಕ್ರೀಡೆಯಾದ "ಕಬೂತರ್ಬಾಜಿ" ಯಲ್ಲಿ ತೊಡಗಿದ ಮೊಹಮ್ಮದ್ ಖಯ್ಯುಮ್ ಕುಟುಂಬದವರು ಹಲವು ವರ್ಷಗಳಿಂದ ವಿಭಿನ್ನ ತಳಿಗಳ ನೂರಾರು ವರ್ಣರಂಜಿತ ಪಾರಿವಾಳಗಳನ್ನು ಮನೆಯ ಟೆರೇಸ್‍ ಮೇಲಿನ ಪಂಜರದಲ್ಲಿ ಸಾಕಿದ್ದರು. ಆದರೆ ಅವರು ಇತ್ತೀಚೆಗೆ ಅವುಗಳಿಗೆ ಆಹಾರ ನೀಡಲು ಟೆರೇಸ್‍ಗೆ ಹೋದಾಗ ಎಲ್ಲಾ ಪಂಜರಗಳು ಖಾಲಿಯಾಗಿರುವುದನ್ನು ಕಂಡು ಕಳ್ಳತನವಾಗಿರುವುದು ತಿಳಿದುಬಂದಿದೆ.