Fire Accident: 'ಛಾವಾʼ ಚಿತ್ರ ಪ್ರದರ್ಶನದ ವೇಳೆ ಅವಘಡ; ಥಿಯೇಟರ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸದ್ಯ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿರುವ ಬಾಲಿವುಡ್ ಚಿತ್ರ ʼಛಾವಾʼದ ಪ್ರದರ್ಶನದ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಚಿತ್ರ ಪ್ರದರ್ಶಗೊಳ್ಳುತ್ತಿದ್ದ ದಿಲ್ಲಿಯ ಸೆಲೆಕ್ಟ್ ಸಿಟಿ ಮಾಲ್‌ನ ಪಿವಿಆರ್ ಸಿನಿಮಾಸ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರೇಕ್ಷಕರೆಲ್ಲ ಹೊರಗೋಡಿ ಬಂದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.


ಹೊಸದಿಲ್ಲಿ: ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal)-ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಹಿಂದಿ ಚಿತ್ರ 'ಛಾವಾ' (Chhaava) ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈಗಾಗಲೇ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 350 ಕೋಟಿ ರೂ.ಗಿಂತಲೂ ಹೆಚ್ಚು ಗಳಿಸಿ ಮುನ್ನುಗ್ಗುತ್ತಿದೆ. ರಿಲೀಸ್ ಆಗಿ 12 ದಿನ ಕಳೆದಿದ್ದರೂ ಚಿತ್ರದ ಅಬ್ಬರ ಕಡಿಮೆಯಾಗಿಲ್ಲ. ಈ ಮಧ್ಯೆ ʼಛಾವಾʼ ಸಿನಿಮಾ ಪ್ರದರ್ಶನವಾಗುತ್ತಿದ್ದ ಥಿಯೇಟರ್‌ನಲ್ಲಿ ಬುಧವಾರ (ಫೆ. 26) ಬೆಂಕಿ ಕಾಣಿಸಿಕೊಂಡಿದೆ (Fire Accident). ಘಟನೆಯಲ್ಲಿ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಬೆಂಕಿ ಹೇಗೆ ಕಾಣಿಸಿಕೊಂಡಿತ್ತು ಎನ್ನುವುದು ತಿಳಿದುಬಂದಿಲ್ಲ.
ಹೊಸದಿಲ್ಲಿಯ ಸೆಲೆಕ್ಟ್ ಸಿಟಿ ಮಾಲ್‌ನ ಪಿವಿಆರ್ ಸಿನಿಮಾಸ್‌ನಲ್ಲಿ ಈ ಘಟನೆ ನಡೆದಿದೆ. ಸಂಜೆ 4:15ರ ಶೋ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಭಯಭೀತರಾದ ಪ್ರೇಕ್ಷಕರು ಕೂಡಲೇ ಹೊರಗೋಡಿ ಬಂದಿದ್ದಾರೆ. ಕರೆ ಬಂದ ತಕ್ಷಣ ಮಾಲ್‌ಗೆ ಧಾವಿಸಿದ್ದೇವೆ ಎಂದು ಅಗ್ನಿ ಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಸಿನಿಮಾ ಹಾಲ್‌ನಲ್ಲಿ ಎಚ್ಚರಿಕೆಯ ಕರೆಗಂಟೆ ಕೇಳಿಸುತ್ತಿದ್ದಂತೆ ಎಲ್ಲರೂ ಹೊರಗೋಡಿ ಬಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಬಳಿಕ ಇಡೀ ಸಿನಿಮಾ ಹಾಲ್ ಅನ್ನು ಖಾಲಿ ಮಾಡಲಾಯಿತು.
दिल्ली के साकेत में PVR सिलेक्ट सिटी वॉक में चर्चित फिल्म 'छावा' शो के दौरान पर्दे के निकट लगी आग.
— Vishal Anand Sharma (@vishalnbt) February 26, 2025
गनीमत है आग मामूली थी.
लेकिन इस घटना ने उपहार सिनेमा कांड की यादें ताजा कर दीं. pic.twitter.com/4PGzCqlrmv
ಯಾರಿಗೂ ಗಾಯವಾಗಿಲ್ಲ
ದಿಲ್ಲಿ ಅಗ್ನಿ ಶಾಮಕ ದಳದ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿ, ʼʼಸಂಜೆ 5: 42ರ ಹೊತ್ತಿಗೆ ನಮಗೆ ಕರೆ ಬಂತು. ಕೂಡಲೇ 6 ಮಂದಿ ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಕಡಿಮೆ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾರಿಗೂ ಗಾಯವಾಗಿಲ್ಲ. 5: 55ರ ವೇಳೆಗೆ ಬೆಂಕಿ ನಿಯಂತ್ರಣಕ್ಕೆ ಬಂತುʼʼ ಎಂದು ತಿಳಿಸಿದ್ದಾರೆ.
ಚಿತ್ರದ ದೃಶ್ಯ ಎಂದುಕೊಂಡೆವು
ಈ ಮಧ್ಯೆ ಪ್ರೇಕ್ಷಕರೊಬ್ಬರು ಅನುಭವ ಹಂಚಿಕೊಂಡು ಮೊದಲಿಗೆ ಬೆಂಕಿಯು ಚಿತ್ರದಲ್ಲಿನ ದೃಶ್ಯ ಎಂದುಕೊಂಡಿದ್ದಾಗಿ ತಿಳಿಸಿದ್ದಾರೆ. ಸುದ್ದಿಸಂಸ್ಥೆ ಪಿಟಿಐ ಜತೆ ಮಾತನಾಡಿದ ಅವರು, ʼʼಇದ್ದಕ್ಕಿದ್ದಂತೆ ಥಿಯೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮೊದಲಿಗೆ ನಾವು ಇದು ಚಿತ್ರದಲ್ಲಿನ ದೃಶ್ಯ ಎಂದುಕೊಂಡಿದ್ದೆವು. ಬಳಿಕ ಎಚ್ಚರಿಕೆಯ ಕರೆಗಂಟೆ ಮೊಳಗಿ ಎಲ್ಲರೂ ಹೊರಗೆ ಧಾವಿಸಿದಾಗಲೇ ವಾಸ್ತವಾಂಶ ಅರಿವಿಗೆ ಬಂತುʼʼ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Chhaava Collection: ಮತ್ತೊಂದು ದಾಖಲೆ ಬರೆದ ರಶ್ಮಿಕಾ; ವಿಕ್ಕಿ ಕೌಶಲ್ ಜತೆಗಿನ ʼಛಾವಾʼಕ್ಕೆ ಭರ್ಜರಿ ಓಪನಿಂಗ್
ಬಾಲಿವುಡ್‌ನ ಪ್ರತಿಭಾನ್ವಿತ ನಿರ್ದೇಶಕ ಲಕ್ಷ್ಮಣ ಉಟೇಕರ್ ಆ್ಯಕ್ಷನ್ ಕಟ್ ಹೇಳಿರುವ ʼಛಾವಾʼ ಚಿತ್ರ ಸದ್ಯ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ದೇಶಕಂಡ ಅಪ್ರತಿಮ ಪರಾಕ್ರಮಿ ಛತ್ರಪತಿ ಶಿವಾಜಿ ಮಹಾರಾಜ ಅವರ ಪುತ್ರ ಸಂಭಾಜಿ ಮಹಾರಾಜರ ಜೀವನದ ಮೇಲೆ ಬೆಳಕು ಚೆಲ್ಲುವ ಚಿತ್ರ ಇದಾಗಿದ್ದು, ಪ್ರೇಕ್ಷಕರು ಜೈ ಎಂದಿದ್ದಾರೆ. ವಿಕ್ಕಿ ಕೌಶಲ್ ಸಂಭಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಂಡರೆ ಅವರ ಪತ್ನಿ ಯೇಸುಬಾಯಿಯಾಗಿ ರಶ್ಮಿಕಾ ಮಂದಣ್ಣ ಮೋಡಿ ಮಾಡಿದ್ದಾರೆ. ಎ.ಆರ್.ರೆಹಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದು, ಡಯಾನಾ ಪೆಂಟಿ, ಅಕ್ಷಯ್ ಖನ್ನಾ, ದಿವ್ಯಾ ದತ್ತ, ಬಾಲಾಜಿ ಮನೋಹರ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.